ಬೆಂಗಳೂರು: ಆರ್.ಆರ್.ನಗರ ಕ್ಷೇತ್ರದ ಶಾಸಕ ಮುನಿರತ್ನ ಜನಪ್ರತಿನಿಧಿಗಳಿಗೆ ಮಾದರಿಯಾಗುವ ಕೆಲಸ ಮಾಡಿದ್ದಾರೆ. ಆರ್.ಆರ್.ನಗರ ಕ್ಷೇತ್ರ ವ್ಯಾಪ್ತಿಯಲ್ಲಿ ಆಕ್ಸಿಜನ್, ಐಸಿಯು ಹಾಗೂ ವೆಂಟಿಲೇಟರ್ ಸಹಿತ 400 ಬೆಡ್‍ಗಳ ಕೋವಿಡ್ ಚಿಕಿತ್ಸಾ ಕೇಂದ್ರವನ್ನು ಸದ್ಯದಲ್ಲೇ ಆರಂಭಿಸುತ್ತಿದ್ದಾರೆ.

ಆರ್.ಆರ್.ನಗರದಲ್ಲಿ ಕೋವಿಡ್ ಕೇರ್ ಸೆಂಟರ್ ಸ್ಥಾಪಿಸಲಾಗುತ್ತಿದ್ದು, ಕೆಲವೇ ದಿನಗಳಲ್ಲಿ ಉದ್ಘಾಟನೆಯಾಗಲಿದೆ. ಗಂಭೀರ ಸ್ವರೂಪದ ಸೋಂಕಿತರಿಗೆ ಇದರಿಂದ ಸಹಾಯವಾಗಲಿದ್ದು, ಐಸಿಯು ಬೆಡ್ ಸಮಸ್ಯೆ ನೀಗಲಿದೆ. ಮುನಿರತ್ನ ಅವರ ಕಾರ್ಯವೈಖರಿಗೆ ವಾರ್ ರೂಂ ಮುಖ್ಯಸ್ಥರೂ ಆಗಿರುವ ಸಚಿವ ಅರವಿಂದ ಲಿಂಬಾವಳಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದೇ ರೀತಿ ಎಲ್ಲ ಜನಪ್ರತಿನಿಧಿಗಳು ಕೈ ಜೋಡಿಸಿ ಕೊರೊನಾ ತೊಲಗಿಸಬೇಕಿದೆ. ಕೊರೊನಾ ಯುದ್ಧದಲ್ಲಿ ಮುನಿರತ್ನ ಕೈಜೋಡಿಸಿರುವುದು ಖುಷಿ ತಂದಿದೆ. ಆಕ್ಸಿಜನ್, ಐಸಿಯು, ವೆಂಟಿಲೇಟರ್ ಸೌಲಭ್ಯ ಹೊಂದಿರುವ ಚಿಕಿತ್ಸಾ ಕೇಂದ್ರವನ್ನು ಆರಂಭಿಸುವ ಮೂಲಕ ಮಾದರಿಯಾಗಿದ್ದಾರೆ ಎಂದಿದ್ದಾರೆ.

ಶಾಸಕ ಮುನಿರತ್ನ ಮಾತನಾಡಿ, ಕೊರೊನಾ ಮೊದಲ ಅಲೆ ಮಾರ್ಚ್‍ನಲ್ಲಿ ಆರಂಭವಾಗಿ, ಸೆಪ್ಟೆಂಬರ್, ಅಕ್ಟೋಬರ್ ನಲ್ಲಿ ಇಳಿಕೆಯಾಗಿತ್ತು. ಈ ವರ್ಷ ಸಹ ಮಾರ್ಚ್‍ನಲ್ಲಿ 2ನೇ ಅಲೆ ಆರಂಭವಾಗಿದೆ. ಅತೀ ಹೆಚ್ಚು ಸಾವು ಸಂಭವಿಸುತ್ತಿರುವುದು ಮಾರ್ಚ್, ಏಪ್ರಿಲ್‍ನಲ್ಲಿ. ನಮ್ಮ ಸರ್ಕಾರ ಈಗಾಗಲೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. ನಾಯಕರು, ಉಸ್ತುವಾರಿ ಸಚಿವರು ಶ್ರಮ ವಹಿಸಿ ಕೆಲಸ ಮಾಡುತ್ತಿದ್ದಾರೆ. ಯಾವುದೇ ಸಾವು ಸಂಭವಿಸಬಾರದು ಎಂಬುದು ನಮ್ಮ ಸರ್ಕಾರದ ಉದ್ದೇಶ ಎಂದರು.

ಈ ಬಾರಿ ಅತೀ ಹೆಚ್ಚು ಸಾವು ಸಂಭವಿಸಿರುವುದು ನೋವು ತಂದಿದೆ. 5 ಲಕ್ಷ ಮತದಾರರಿರುವ ನಮ್ಮ ಆರ್.ಆರ್ ನಗರ ಕ್ಷೇತ್ರದಲ್ಲಿ ಸಹ ಹೆಚ್ಚು ಸಾವು ಸಂಭವಿಸಿವೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ, ದೂರ ದೃಷ್ಟಿಯಿಂದ ಸುಮಾರು 400 ಹಾಸಿಗೆಗಳ ಆಸ್ಪತ್ರೆ ನಿರ್ಮಾಣ ನಡೆಯುತ್ತಿದೆ. ಕೇವಲ 40 ದಿನಗಳಲ್ಲಿ 400 ಹಾಸಿಗೆಗಳ ಆಸ್ಪತ್ರೆ ನಿರ್ಮಾಣವಾಗುತ್ತಿದೆ. ಇದು ಕೋವಿಡ್ ಕೇರ್ ಸೆಂಟರ್ ಅಲ್ಲ, 200 ಬೆಡ್ ಸಾಮರ್ಥ್ಯದ ಕೋವಿಡ್ ಕೇರ್ ಸೆಂಟರ್ ಪ್ರತ್ಯೇಕವಾಗಿ ಮಾಡುತ್ತಿದ್ದೇವೆ ಎಂದು ಮಾಹಿತಿ ನೀಡಿದರು.

ಒಟ್ಟು 400 ಹಾಸಿಗೆಗಳ ಆಸ್ಪತ್ರೆ ಐಸಿಯು ಬೆಡ್ 75, 300 ಆಕ್ಸಿಜನ್ ಬೆಡ್, 25-30 ಹೈ ಫ್ಲೋ ಆಕ್ಸಿಜನ್ ಬೆಡ್ ಒಳಗೊಂಡಿದೆ. ಅಲ್ಲದೆ ನಮ್ಮ ಕ್ಷೇತ್ರದಲ್ಲಿ 10 ಸಾವಿರ ಲೀಟರ್ ಆಕ್ಸಿಜನ್ ಸ್ಟೋರ್ ಮಾಡಿಕೊಳ್ಳುವ ಟ್ಯಾಂಕ್ ನಿರ್ಮಿಸಲಾಗುತ್ತಿದೆ ಎಂದು ಮುನಿರತ್ನ ಅವರು ವಿವರಿಸಿದರು.

The post ಆರ್‌ಆರ್‌ ನಗರದಲ್ಲಿ 400 ಹಾಸಿಗೆಗಳ ಸುಸಜ್ಜಿತ ಕೋವಿಡ್ ಕೇರ್ ಸೆಂಟರ್ ನಿರ್ಮಾಣ: ಶಾಸಕ ಮುನಿರತ್ನ appeared first on Public TV.

Source: publictv.in

Source link