ಆಲಮಟ್ಟಿ ಡ್ಯಾಂಗೆ ಹೆಚ್ಚಿದ ಒಳ ಹರಿವು.. ಆತಂಕದಲ್ಲಿ ನದಿ ಪಾತ್ರದ ಜನ

ಆಲಮಟ್ಟಿ ಡ್ಯಾಂಗೆ ಹೆಚ್ಚಿದ ಒಳ ಹರಿವು.. ಆತಂಕದಲ್ಲಿ ನದಿ ಪಾತ್ರದ ಜನ

ಮಹಾರಾಷ್ಟ್ರ: ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಭಾರಿ ಮಳೆ ಹಿನ್ನೆಲೆಯಲ್ಲಿ ವಿಜಯಪುರ ಜಿಲ್ಲೆಯ ಆಲಮಟ್ಟಿಯ ಲಾಲ್ ಬಹದ್ದೂರ್ ಶಾಸ್ತ್ರಿ ಜಲಾಶಯದ ಒಳ ಹರಿವು ಹೆಚ್ಚಾಗಿದ್ದು, ಆತಂಕ ಸೃಷ್ಟಿಯಾಗಿದೆ.

ಗುರುವಾರ ರಾತ್ರಿಯವರೆಗೆ 13,784 ಕ್ಯೂಸೆಕ್ ಒಳ ಹರಿವು ಇತ್ತು. ಇಂದು ಬೆಳಗ್ಗೆಯವರೆಗೆ 76.666 ಕ್ಯೂಸೆಕ್ ನೀರು ಒಳಹರಿವು ಹೆಚ್ಚಳವಾಗಿದೆ. ಕಳೆದ ವರ್ಷ ಈ ಸಮಯದಲ್ಲಿ 9910 ಸಾವಿರ ಕ್ಯೂಸೆಕ್ ನೀರಿನ ಒಳಹರಿವು ಇತ್ತು. ಇಂದು ಸಂಜೆ ವೇಳೆಗೆ ಒಳಹರಿವು ಪ್ರಮಾಣದಲ್ಲಿ ಮತ್ತಷ್ಟು ಏರಿಕೆ ಕಾಣುವ ಸಾಧ್ಯತೆಗಳಿವೆ.

ಆಲಮಟ್ಟಿ ಜಲಾಶಯಕ್ಕೆ ಮಹಾರಾಷ್ಟ್ರದ ಕೊಯ್ನಾ ಜಲಾಶಯದಿಂದ ನೀರು ಹೆಚ್ಚಿನ ಪ್ರಮಾಣದಲ್ಲಿ ಹರಿದು ಬರುವ ಕಾರಣ ಇಂದು ಸಂಜೆ 7 ಗಂಟೆ ವೇಳೆಗೆ 1ಲಕ್ಷ ಕ್ಯೂಸೆಕ್ ನೀರಿನ ಒಳ ಹರಿವು ಹೆಚ್ಚಾಗಬಹುದು ಎಂದು ಕೆಬಿಜೆಎನ್​ಎಲ್ ಮೂಲಗಳು ತಿಳಿಸಿವೆ. ಸದ್ಯ ಹೊರಹರಿವು ಇಲ್ಲದ ಕಾರಣ ನೀರಿನ ಸಂಗ್ರಹ ಮತ್ತಷ್ಟು ಹೆಚ್ಚಾಗಿದೆ. ಜಲಾಶಯದ ಒಟ್ಟು ಸಾಮರ್ಥ್ಯ 519.60 ಮೀಟರ ಇದ್ದು ಇಂದು ಬೆಳಗ್ಗೆ ವರೆಗೆ 509.60 ಮೀಟರ ಸಂಗ್ರಹವಾಗಿದೆ.

ಮಹಾರಾಷ್ಟ್ರದ ಕೃಷ್ಣಾ ಕೊಳ್ಳದ ಭಾಗದಲ್ಲಿ ಕೊಯ್ನಾ ಜಲಾಶಯ ವ್ಯಾಪ್ತಿಯಲ್ಲಿ ಗುರುವಾರ ರಾತ್ರಿಯವರೆಗೆ ಅತಿ ಹೆಚ್ಚು 251 ಮೀ.ಮೀ, ಮಹಾಬಲೇಶ್ವರದಲ್ಲಿ 198 ಮೀ.ಮೀ, ಕೊಲಂವಾಡಿ ಭಾಗದಲ್ಲಿ 200 ಮೀ.ಮೀ, ಪಟ್ಟೇಗಾಂವದಲ್ಲಿ 207 ಮೀಮೀನಷ್ಟು ಮಳೆಯಾದ ಕಾರಣ ಆಲಮಟ್ಟಿ ಜಲಾಶಯದ ಒಳಹರಿವು ಹೆಚ್ಚಾಗಿದೆ. ಇಂದು ಸಹ ಮಹಾರಾಷ್ಟ್ರ ಭಾಗದಲ್ಲಿ ಮಳೆ ಹೆಚ್ಚಾಗುವ ಸಾಧ್ಯತೆಗಳಿದ್ದು ನದಿ ಪಾತ್ರದ ಜನತೆಯಲ್ಲಿ ಮತ್ತೆ ಆತಂಕ ಮನೆ ಮಾಡಿದೆ.

The post ಆಲಮಟ್ಟಿ ಡ್ಯಾಂಗೆ ಹೆಚ್ಚಿದ ಒಳ ಹರಿವು.. ಆತಂಕದಲ್ಲಿ ನದಿ ಪಾತ್ರದ ಜನ appeared first on News First Kannada.

Source: newsfirstlive.com

Source link