ವಾಷಿಂಗ್ಟನ್: 93ನೇ ಆಸ್ತರ್ ಪ್ರಶಸ್ತಿಗಳು ಘೋಷಣೆಯಾಗಿದ್ದು, ನೋಮದ್ ಲ್ಯಾಂಡ್ ಚಿತ್ರಕ್ಕಾಗಿ ಕ್ಲೋಯ್ ಝಾವೋ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದು, ಅತ್ಯುತ್ತಮ ಚಿತ್ರಕಥೆ ವಿಭಾಗದಲ್ಲಿ ಕ್ರಿಸ್ಟೋಫರ್ ಹ್ಯಾಂಪ್ಟನ್ ಮತ್ತು ಫ್ಲೋರಿಯನ್ ಝೆಲ್ಲರ್ ಪ್ರಶಸ್ತಿ ಪಡೆದಿದ್ದಾರೆ.

ಈ ಹಿಂದೆ ಇದೇ ಫ್ಲೋರಿಯನ್ ಝೆಲ್ಲರ್ ನಿರ್ದೇಶನದ ಚಿತ್ರ 2014ರಲ್ಲಿ ಆರು ವಿಭಾಗಗಳಲ್ಲಿ ಆಸ್ಕರ್ ಪ್ರಶಸ್ತಿಗೆ ನಾಮನಿರ್ದೇಶನವಾಗಿತ್ತು. ಇನ್ನು ಕಾಮಿಡಿ ಥ್ರಿಲ್ಲರ್ ಚಿತ್ರ 'ಪ್ರಾಮಿಸಿಂಗ್ ಯಂಗ್ ವುಮನ್' ಚಿತ್ರಕ್ಕಾಗಿ ಮೂಲ ಚಿತ್ರಕಥೆ ವಿಭಾಗದಲ್ಲಿ ಎಮರಾಲ್ಡ್ ಫಿನ್ನೆಲ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. 

ಉಳಿದಂತೆ 'ದಿ ಫಾದರ್', 'ಜುದಾಸ್ ಮತ್ತು ಬ್ಲ್ಯಾಕ್ ಮೆಸ್ಸಿಹ್', 'ಮಿನಾರಿ', 'ನೋಮಾಡ್ಲ್ಯಾಂಡ್', 'ಸೌಂಡ್ ಆಫ್ ಮೆಟಲ್' ಮತ್ತು 'ದಿ ಟ್ರಯಲ್ ಆಫ್ ಚಿಕಾಗೊ 7' ಚಿತ್ರಗಳು ಆರು ವಿಭಾಗಗಳಲ್ಲಿ ನಾಮನಿರ್ದೇಶನಗೊಂಡಿವೆ.

ಗೋಲ್ಡನ್ ಗ್ಲೋಬ್ ಬಳಿಕ ಆಸ್ಕರ್ ಗೆ ಮುತ್ತಿಟ್ಟ ಡೇನಿಯಲ್ ಕಲುಯುಯಾ 
ಇನ್ನು ಈ ಹಿಂದೆ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಪಡೆದು ಸುದ್ದಿಯಾಗಿದ್ದ ಬ್ರಿಟೀಷ್ ನಟ ಡೇನಿಯಲ್ ಕಲುಯುಯಾ ಇದೀಗ 'ಜುದಾಸ್ ಮತ್ತು ಬ್ಲಾಕ್ ಮೆಸ್ಸಿಹ್' ಚಿತ್ರದ ಸಹಾಯಕ ಪಾತ್ರಕ್ಕಾಗಿ ಪ್ರಶಸ್ತಿ ಪಡೆದಿದ್ದಾರೆ. ಅಂತೆಯೇ ಡೆನ್ಮಾರ್ಕ್‌ನ 'ಅನದರ್ ರೌಂಡ್' ಚಿತ್ರ ಅತ್ಯುತ್ತಮ ಅಂತಾರಾಷ್ಟ್ರೀಯ ಚಲನಚಿತ್ರ ವಿಭಾಗದಲ್ಲಿ  ಆಸ್ಕರ್ ಪ್ರಶಸ್ತಿಯನ್ನು ಗೆದ್ದುಕೊಂಡಿತು. 

ಕೊರೋನಾ ಹಿನ್ನಲೆಯಲ್ಲಿ ಮುಂದೂಡಿಕೆಯಾಗಿದ್ದ ಆಸ್ಕರ್ ಕಾರ್ಯಕ್ರಮ
93 ನೇ ಆಸ್ಕರ್ ಅಕಾಡೆಮಿ ಪ್ರಶಸ್ತಿಗಳಿಗೆ ನಾಮನಿರ್ದೇಶನಗಳನ್ನು ಈ ವರ್ಷ ಮಾರ್ಚ್ 15 ರಂದು ಘೋಷಿಸಲಾಗಿತ್ತು. ಈ ಆಸ್ಕರ್ ಪ್ರಶಸ್ತಿ ಪ್ರಧಾನ ಕಾರ್ಯಕ್ರಮವನ್ನು ಡಾಲ್ಬಿ ಥಿಯೇಟರ್ ಮತ್ತು ಯೂನಿಯನ್ ಸ್ಟೇಷನ್ ನಲ್ಲಿ ನಡೆಸಲಾಗುತ್ತಿದೆ. ಈ ಹಿಂದೆ ಕೋವಿಡ್-19 ಸಾಂಕ್ರಾಮಿಕದ ಹಿನ್ನಲೆಯಲ್ಲಿ  ಕಾರ್ಯಕ್ರಮವನ್ನು ಈ ಹಿಂದಿನ ವೇಳಾಪಟ್ಟಿಗಿಂತ 2 ತಿಂಗಳು ಮುಂದೂಡಲಾಗಿತ್ತು. ಅಕಾಡೆಮಿ ಪ್ರಶಸ್ತಿಗಳ ಪ್ರಧಾನ ಕಾರ್ಯಕ್ರಮ ಮುಂದೂಡಿಕೆಯಾಗಿರುವುದು ಇತಿಹಾಸದಲ್ಲೇ ಇದು ನಾಲ್ಕನೇ ಬಾರಿಯಾಗಿದೆ ಎಂದು ಹೇಳಲಾಗಿದೆ.
 

Source: Kannadaprabha – ಸಿನಿಮಾ ಸುದ್ದಿ – https://www.kannadaprabha.com/cinema/news/
Read More