ಆಸ್ಟ್ರಿಯಾದಲ್ಲಿ ಮತ್ತೆ ಲಾಕ್​ಡೌನ್ -ಟಾಪ್ 10 ಸುದ್ದಿಗಳ ಕ್ವಿಕ್​ರೌಂಡಪ್


ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ
ಡಿಸೆಂಬರ್​ 10ರಂದು ನಡೆಯಲಿರುವ ವಿಧಾನಪರಿಷತ್​ ಚುನಾವಣೆಗೆ ಬಿಜೆಪಿ 20 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನ ಬಿಡುಗಡೆ ಮಾಡಿದೆ. ಅಭ್ಯರ್ಥಿಗಳ ಪಟ್ಟಿಯಲ್ಲಿ ಕೋಟಾ ಶ್ರೀನಿವಾಸಪೂಜಾರಿ, ಎಂ.ಕೆ. ಪ್ರಾಣೇಶ್, ಡಿ.ಎಸ್.ಅರುಣ್, ಪ್ರದೀಪ್ ಶೆಟ್ಟರ್, ಮಹಾಂತೇಶ್ ಕವಟಗಿಮಠ್ ಸೇರಿದಂತೆ 20 ಜನರ ಹೆಸರನ್ನ ಬಿಡುಗಡೆ ಮಾಡಿದೆ. ಸದ್ಯ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಸಂದೇಶ್​ ನಾಗರಾಜ್​ಗೆ ಪಕ್ಷ ಶಾಕ್​ ನೀಡಿದ್ದು, ಇವರ ಬದಲಿಗೆ ರಘು ಕೌಟಿಲ್ಯಗೆ ಟಿಕೆಟ್ ಘೋಷಿಸಿದೆ.

ಪರಿಷತ್ ಚುನಾವಣೆ, ಕೋವಿಡ್​​ ಗೈಡ್‌ಲೈನ್ಸ್ ಜಾರಿ
ರಾಜ್ಯದಲ್ಲಿ ನಡೆಯಲಿರುವ ವಿಧಾನ ಪರಿಷತ್ ಚುನಾವಣೆ ಹಿನ್ನೆಲೆ ಆರೋಗ್ಯ ಇಲಾಖೆ ಕೋವಿಡ್​​ ಗೈಡ್‌ಲೈನ್ಸ್ ಹೊರಡಿಸಿದೆ. ಚುನಾವಣಾ ಪ್ರಕ್ರಿಯೆಯಲ್ಲಿ ಭಾಗಿಯಾಗುವ ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ನಾಮಪತ್ರ ಸಲ್ಲಿಕೆಗೆ ಕೇವಲ ನಾಲ್ಕು ಜನರಿಗೆ ಮಾತ್ರ ಅವಕಾಶ. ನಾಮಪತ್ರ ಸಲ್ಲಿಕೆಗೆ ಕೇವಲ ಮೂರು ವಾಹನಗಳನ್ನು ಮಾತ್ರ ಬಳಸಬೇಕು. ಚುನಾವಣಾಧಿಕಾರಿಗಳು ಅಭ್ಯರ್ಥಿಗಳಿಗೆ ನಾಮಪತ್ರ ಸಲ್ಲಿಕೆಗೆ ನಿಗದಿತ ಸಮಯ ನೀಡಬೇಕು. ಚುನಾವಣಾ ಪ್ರಚಾರದ ವೇಳೆ 500 ಮಂದಿ ಮಾತ್ರ ಹಾಜರಿರಲು ಅವಕಾಶ ನೀಡಲಾಗಿದೆ.

ಮಳೆ ಭವಿಷ್ಯ ನುಡಿದ ಕೋಡಿಮಠದ ಶ್ರೀಗಳು
ಕಾರ್ತಿಕ ಮುಗಿಯುವವರೆಗೂ ಮಳೆ ನಿಲ್ಲೋದಿಲ್ಲ ಅಂತ ಕೋಡಿಮಠದ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ. ಇನ್ನು ಮಳೆ ಹೆಚ್ಚಾಗುವ ಲಕ್ಷಣ ಇದೆ. ಕಾರ್ತಿಕ ಕಳೆಯುವವರೆಗೂ ಮಳೆ ಇರುತ್ತದೆ. ಸದ್ಯ ಪ್ರಕೃತಿ ವಿಕೋಪ ಆಗಿದೆ. ಏನೂ ಮಾಡಲು ಆಗುವುದಿಲ್ಲ. ಇನ್ನೂ ಅನಾಹುತಗಳು ಹೆಚ್ಚಾಗುವ ಸಾಧ್ಯತೆ ಇದೆ ಅಂತ ಎಚ್ಚರಿಕೆ ನೀಡಿದ್ದಾರೆ. ಅಲ್ಲದೆ ಸಂಕ್ರಾಂತಿವರೆಗೂ ಮಳೆ ಇರುತ್ತೆ ಎಂದು ಭವಿಷ್ಯ ನುಡಿದಿದ್ದಾರೆ.

ಪ್ರವಾಹಕ್ಕೆ ಆಂಧ್ರ ತತ್ತರ, 17 ಮಂದಿ ಸಾವು
ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪರಿಣಾಮ ಆಂಧ್ರಪ್ರದೇಶ, ಕರ್ನಾಟಕ, ತಮಿಳುನಾಡಿನಲ್ಲಿ ಭಾರಿ ಮಳೆಯಾಗುತ್ತಿದೆ. ಆಂಧ್ರದಲ್ಲಂತೂ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಇಲ್ಲಿಯವರೆಗೆ ಮಳೆ ಸಂಬಂಧಿತ ಅವಘಡಗಳಿಗೆ 17 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಪ್ರವಾಹ, ಭೂಕುಸಿತ ಸೇರಿದಂತೆ ವರುಣನ ಅವಾಂತರದಲ್ಲಿ ಬಲಿಯಾದವರ ಕುಟುಂಬಕ್ಕೆ 5 ಲಕ್ಷ ರೂಪಾಯಿ ಪರಿಹಾರವನ್ನು ಸಿಎಂ ಜಗನ್​ ಮೋಹನ್​ ರೆಡ್ಡಿ ಘೋಷಿಸಿದ್ದಾರೆ.

‘ಪಂಜಾಬ್​​ನಲ್ಲಿ ಬಿಜೆಪಿಯೊಂದಿಗೆ ಮೈತ್ರಿಯಿಲ್ಲ’
ಮೂರು ವಿವಾದಾತ್ಮಕ ಕೃಷಿ ಕಾಯ್ದೆಗಳನ್ನು ರದ್ದು ಮಾಡಲಾಗುವುದು ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಘೋಷಣೆ ಮಾಡಿದ್ದಾರೆ. ಈ ಬೆನ್ನಲ್ಲೇ ಪಂಜಾಬ್‌ನಲ್ಲಿ ಶಿರೋಮಣಿ ಅಕಾಲಿದಳ ಮತ್ತೆ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳಲಿದೆಯೇ ಎಂಬ ಅನುಮಾಗಳು ಉಂಟಾಗಿದೆ. ಆದರೆ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಶಿರೋಮಣಿ ಅಕಾಲಿದಳ ಪಂಜಾಬ್‌ನಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳಲ್ಲ ಅಂತ ಸ್ಪಷ್ಟಪಡಿಸಿದೆ.

‘ಭಾರತ-ಚೀನಾ ಸಂಬಂಧ ಹದಗೆಟ್ಟಿದೆ’
ಒಪ್ಪಂದಗಳನ್ನು ಉಲ್ಲಂಘಿಸಿ ಬೀಜಿಂಗ್‌ ಹಲವು ಕ್ರಮಗಳನ್ನು ತೆಗೆದುಕೊಂಡಿರುವುದರಿಂದ ಭಾರತ ಮತ್ತು ಚೀನಾ ನಡುವಿನ ಸಂಬಂಧ ಕೆಟ್ಟ ಹಾದಿಯಲ್ಲಿ ಸಾಗುತ್ತಿದೆ ಅಂತ ವಿದೇಶಾಂಗ ವ್ಯವಹಾರಗಳ ಸಚಿವ ಎಸ್‌. ಜೈಶಂಕರ್‌ ಹೇಳಿದ್ದಾರೆ. ಭಾರತ ಹಾಗೂ ಚೀನಾದ ನಡುವಿರುವ ಹಲವು ಒಪ್ಪಂದಗಳನ್ನ ಚೀನಾ ಉಲ್ಲಂಘಿಸಿದೆ. ಇದಕ್ಕೆ ಸರಿಯಾದ ವಿವರಣೆಯನ್ನೂ ಡ್ರ್ಯಾಗನ್​ ರಾಷ್ಟ್ರ ನೀಡ್ತಿಲ್ಲ. ಇದ್ರಿಂದ ಆ ದೇಶದ ನಾಯಕರು ಬಯಸುತ್ತಿರೋದಾದ್ರೂ ಏನು ಎಂಬುದು ಸ್ಪಷ್ಟವಾಗ್ತಿಲ್ಲ. ಈ ವಿಷಯವಾಗಿ ಚೀನಾದ ನಾಯಕರೇ ಸ್ಪಷ್ಟನೆ ನೀಡಬೇಕು ಅಂತ ಜೈಶಂಕರ್​ ತಿಳಿಸಿದ್ರು.

‘ಮಹಿಳೆಯಿಂದ ಜಗತ್ತಿಗೆ ಕೊರೊನಾ ಸೋಂಕು ಹರಡಿದೆ’
ಕೊರೊನಾದ ಮೂಲ ಚೀನಾದ ವುಹಾನ್​ ಅಂತ ಈಗಲೂ ಹಲವಾರು ದೇಶದ ನಾಯಕರು ಪ್ರತಿಪಾದಿಸಿದ್ದಾರೆ. ಈ ನಡುವೆ ಜಗತ್ತಿಗೆ ಕಂಟಕ ತಂದೊಡ್ಡಿದ ಕೊರೊನಾ ವೈರಸ್​ನ ಮೊದಲ ರೋಗಿ ವುಹಾನ್​ನ ಮಾರುಕಟ್ಟೆಯಲ್ಲಿ ವ್ಯಾಪಾರಿಯಾಗಿದ್ದರು ಅಂತ ವೊರೊಬೆ ವಿಜ್ಞಾನ ಪತ್ರಿಕೆ ವರದಿ ಮಾಡಿದೆ. ಉನ್ನತ ವೈರಾಲಜಿಸ್ಟ್​ಗಳು ನಡೆಸಿದ ಸಂಶೋಧನೆಯ ಪ್ರಕಾರ, ವುಹಾನ್​ನ ಮೀನು ಮಾರುಕಟ್ಟೆಯ ಮಹಿಳಾ ವ್ಯಾಪಾರಿಗೆ ಸೋಂಕು ತಗುಲಿದ್ದು, ಸೋಂಕು ತಗುಲಿ 8 ದಿನಗಳ ಬಳಿಕ ಆಕೆಗೆ ರೋಗಲಕ್ಷಣಗಳು ಕಾಣಿಸಿಕೊಂಡಿವೆ ಅಂತ ಮಾಹಿತಿ ಬಹಿರಂಗಪಡಿಸಿದ್ದಾರೆ.

ಕೃಷ್ಣನ ಕೈ ತುಂಡಾಗಿದೆ ಎಂದು ವಿಗ್ರಹ ಆಸ್ಪತ್ರೆಗೆ ತಂದ ಅರ್ಚಕ
ಅರ್ಚಕನೊಬ್ಬ ಕೃಷ್ಣನ ವಿಗ್ರಹವನ್ನ ಆಸ್ಪತ್ರೆಗೆ ತಂದು, ಕೃಷ್ಣನ ಕೈಗೆ ಬ್ಯಾಂಡೇಜ್​ ಹಾಕಿ ಅಂತ ವೈದ್ಯರ ಬಳಿ ಕೇಳಿಕೊಂಡು ವಿಚಿತ್ರ ಘಟನೆ ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದಿದೆ, ದೇವಸ್ಥಾನದ ಅರ್ಚಕ ಲೇಖ್​ ಸಿಂಗ್​, ಬೆಳಗ್ಗೆ ದೇವರ ವಿಗ್ರಹವನ್ನ ಶುಚಿ ಮಾಡುವಾಗ ಆಕಸ್ಮಿಕ​ ಕೈ ಮುರಿದು ಹೋಗಿದೆ. ಈ ಕೈಯನ್ನ ಜೋಡಿಸಿ ಅಂತ ವೈದ್ಯರ ಬಳಿ ಗೋಳಾಡಿದ್ದಾನೆ. ಈ ವ್ಯಕ್ತಿಯ ವಿಚಿತ್ರ ವರ್ತನೆಗೆ ಅಚ್ಚರಿಗೊಂಡ ವೈದ್ಯರ ಶ್ರೀ ಕೃಷ್ಣ ಎಂಬ ಹೆಸರಲ್ಲಿ ನೋಂದಣಿ ಮಾಡಿಕೊಂಡು, ಬಾಲ ಕೃಷ್ಣನ ವಿಗ್ರಹಕ್ಕೆ ಬ್ಯಾಂಡೇಜ್​ ಸುತ್ತಿದ್ದಾರೆ. ಸದ್ಯ ಈ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ಸಖತ್​ ವೈರಲ್​ ಆಗಿದೆ.

ಆಸ್ಟ್ರೀಯಾದಲ್ಲಿ ನ.22ರಿಂದ ಲಾಕ್​ಡೌನ್​
ಪಶ್ಚಿಮ ಐರೋಪ್ಯ ದೇಶ ಆಸ್ಟ್ರೀಯಾದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದ್ದು, ಮತ್ತೆ ಲಾಕ್​ಡೌನ್ ಘೋಷಣೆ ಮಾಡಲಾಗಿದೆ. ಅಲ್ಲಿನ ಸರ್ಕಾರ ಉನ್ನತ ಮಟ್ಟದ ಅಧಿಕಾರಿಗಳ ಜೊತೆ ಈಗಾಗಲೇ ಸುದೀರ್ಘ ಚರ್ಚೆ ನಡೆಸಿದ್ದು, ಕೊರೊನಾ ಹೊಸ ತಳಿಗಳ ಅಬ್ಬರ ದಿನದಿಂದ ದಿನಕ್ಕೆ ದುಪ್ಪಟ್ಟಾಗುತ್ತಿದ್ದು, ಸೋಂಕನ್ನ ನಿಯಂತ್ರಿಸಲು ಮತ್ತೆ ಲಾಕ್​ಡೌನ್​ ಮಾಡುವುದು ಅವಶ್ಯವಾಗಿದೆ ಅಂತ ತಿಳಿಸಿದೆ. ಮತ್ತು ಇಡೀ ದೇಶದ ನಾಗರೀಕರು 2022ರ ಫೆಬ್ರವರಿ ಒಳಗೆ ಕಡ್ಡಾಯವಾಗಿ ಕೊರೊನಾ ಲಸಿಕೆ ಪಡೆದಿರಬೇಕು ಅಂತ ಸೂಚಿಸಿದೆ. ​

ರೋಹಿತ್​, ರಾಹುಲ್​​ ಆಟಕ್ಕೆ ಬೆಚ್ಚಿದ ಕಿವೀಸ್
ಜಾರ್ಖಂಡ್‌ ರಾಂಚಿಯಲ್ಲಿ ನಡೆದ ನ್ಯೂಜಿಲೆಂಡ್‌ ವಿರುದ್ಧದ 2ನೇ ಟಿ-20 ಕ್ರೀಕೆಟ್​​ ಪಂದ್ಯದಲ್ಲಿ ಟೀಂ ಇಂಡಿಯಾ 7 ವಿಕೆಟ್‌ಗಳ ಭರ್ಜರಿ ಗೆಲುವು ತನ್ನದಾಗಿಸಿಕೊಂಡಿದೆ. ರೋಹಿತ್​​ ಶರ್ಮಾ-ಕೆ.ಎಲ್​.ರಾಹುಲ್​​ರ ಶತಕದ ಜೊತೆಯಾಟದಿಂದ ನ್ಯೂಜಿಲೆಂಡ್​​​ 2ನೇ ಟಿ20 ಪಂದ್ಯದಲ್ಲೂ ಸೋತಿದೆ. ಈ ಮೂಲಕ ಟೀಂ ಇಂಡಿಯಾ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಒಂದು ಪಂದ್ಯ ಬಾಕಿ ಇರುವಂತೆಯೇ 2-0 ಅಂತರದಲ್ಲಿ ಸರಣಿ ಗೆದ್ದುಕೊಂಡಿದೆ.

The post ಆಸ್ಟ್ರಿಯಾದಲ್ಲಿ ಮತ್ತೆ ಲಾಕ್​ಡೌನ್ -ಟಾಪ್ 10 ಸುದ್ದಿಗಳ ಕ್ವಿಕ್​ರೌಂಡಪ್ appeared first on News First Kannada.

News First Live Kannada


Leave a Reply

Your email address will not be published. Required fields are marked *