ಅಭಿಮಾನಿ ದೇವರುಗಳಿಗಾಗಿ ಅಪ್ಪು ಪುಣ್ಯಸ್ಮರಣೆ
ನೆಚ್ಚಿನ ನಟನನ್ನು ಕಳೆದುಕೊಂಡು ಅಪ್ಪು ಅಭಿಮಾನಿಗಳು ಶೋಕಸಾಗರದಲ್ಲಿ ಮುಳುಗಿದ್ದಾರೆ. ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ನಮ್ಮನ್ನಗಲಿ 9 ದಿನ ಕಳೆದರೂ ಸಮಾಧಿ ನೋಡಲು ಈಗಲೂ ಸಾಗರೋಪಾದಿಯಲ್ಲಿ ಅಭಿಮಾನಿಗಳು ಬರುತ್ತಿದ್ದಾರೆ. ಈ ನಡುವೆ ದುಖದಲ್ಲಿ ಮುಳುಗಿರುವ ಅಭಿಮಾನಿಗಳಿಗಾಗಿಯೇ ದೊಡ್ಮನೆ ಕುಟುಂಬ ನವೆಂಬರ್ 9 ಅಂದ್ರೆ ನಾಳೆ ಬೆಂಗಳೂರು ಅರಮನೆ ಮೈದಾನದ ತ್ರಿಪುರ ವಾಸಿನಿಯಲ್ಲಿ ಪುನೀತ್ ಪುಣ್ಯಸ್ಮರಣೆ ಕಾರ್ಯಕ್ರಮ ಆಯೋಜಿಸಿದೆ. ಇನ್ನು ಇದೇ ನವೆಂಬರ್ 16ರಂದು ಪುನೀತ ನಮನ ಕಾರ್ಯಕ್ರಮ ಕೂಡ ನಡೆಯಲಿದೆ.
ತಮಿಳುನಾಡಿನ ಗೋರೆ ಹಬ್ಬದಲ್ಲಿ ಅಪ್ಪುಗೆ ಶ್ರದ್ಧಾಂಜಲಿ
ಅಪ್ಪು ಅಗಲಿಕೆಗೆ ತಮಿಳುನಾಡಿನಲ್ಲಿರುವ ಕನ್ನಡಿಗರು ಗೋರೆ ಹಬ್ಬದಾಚರಣೆ ವೇಳೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಗುಮಟಾಪುರದಲ್ಲಿ ನೆಲೆಸಿರುವ ಕನ್ನಡಿಗರು, ಸ್ವರ್ಗದಲ್ಲಿ ಅಣ್ಣಾವ್ರು ಕುಳಿತಂತೆ ಹಿಂಬದಿಯಿಂದ ಅಪ್ಪು ತಂದೆ ಕಣ್ಣುಮುಚ್ಚಿ ನಾನು ಸ್ವರ್ಗಕ್ಕೆ ಬಂದಿದ್ದೇನೆ ಎಂದು ಸಂದೇಶ ಸಾರುವ ಫೋಟೋಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಈ ವೇಳೆ ಅಭಿಮಾನಿಗಳು ನಟ ಪುನೀತ್ಗೆ ಜೈಕಾರ ಹಾಕಿ, ಕಣ್ಣೀರಿಟ್ಟಿದ್ದಾರೆ.
ಬೆಳ್ಳಂಬೆಳಗ್ಗೆ ರೌಡಿ ಶೀಟರ್ಗಳ ಚಳಿ ಬಿಡಿಸಿದ ಪೊಲೀಸರು
ಬೆಳ್ಳಂಬೆಳಗ್ಗೆ ಮನೆಯಲ್ಲಿ ಬೆಚ್ಚಗೆ ಮಲಗಿದ್ದ ಪಶ್ಚಿಮ ವಿಭಾಗದ ರೌಡಿಶೀಟರ್ಗಳಿಗೆ ಪೊಲೀಸರು ಚಳಿ ಬಿಡಿಸಿದ್ದಾರೆ. 6 ಪೊಲೀಸ್ ಠಾಣಾ ವ್ಯಾಪ್ತಿಯ 180 ರೌಡಿಶೀಟರ್ಗಳ ಮನೆಗಳ ಮೇಲೆ ಪಶ್ಚಿಮ ವಿಭಾಗ ಪೊಲೀಸರು ದಾಳಿ ಮಾಡಿ ಪರಿಶೀಲನೆ ನಡೆಸಿದ್ದಾರೆ. ಮಾಗಡಿ ರೋಡ್, ಕೆಪಿ ಅಗ್ರಹಾರ, ಬ್ಯಾಟರಾಯನಪುರ, ಜೆಜೆ ನಗರ, ಕಾಟನ್ ಪೇಟೆ, ಚಾಮರಾಜ ಪೇಟೆ ಠಾಣಾ ವ್ಯಾಪ್ತಿಯ ರೌಡಿಶೀಟರ್ಮತ್ತು ಗಾಂಜಾ ಪೆಡ್ಲರ್ಗಳ ಮನೆ ಮೇಲೆ ದಾಳಿ ನಡೆಸಿದ್ದಾರೆ.
ತಡರಾತ್ರಿಯವರೆಗೆ ಶ್ರೀಕಿ ವಿಚಾರಣೆ
ರಾಜ್ಯದಲ್ಲಿ ಬಿಟ್ ಕಾಯಿನ್ ವಿಚಾರ ಚರ್ಚೆಯಲ್ಲಿರುವಾಗಲೆ ಹಲ್ಲೆ ವಿಚಾರಕ್ಕೆ ಸಂಬಂಧಿಸಿದಂತೆ ಶ್ರೀಕಿಯನ್ನು ಪೊಲೀಸರು ಬಂಧಿಸಿದ್ದು, ತಡ ರಾತ್ರಿಯವರೆಗೂ ವಿಚಾರಣೆ ನಡೆದಿದೆ. ಪ್ರಾಥಮಿಕ ತನಿಖೆಯಲ್ಲಿ ವಿಷ್ಣು ಭಟ್ ಹಲ್ಲೆ ಮಾಡಿರೋದು ಸಾಭೀತಾಗಿದೆ. ಆದರೆ ಹಲ್ಲೆ ವೇಳೆ ವಿಷ್ಣು ಭಟ್ ಜೊತೆಗೆ ಇದ್ದ ಶ್ರೀಕಿ ಹಲ್ಲೆ ಮಾಡಿಲ್ಲ ಅಂತ ತನಿಖೆ ವೇಳೆ ತಿಳಿದು ಬಂದಿದೆ. ಇನ್ನು ಶ್ರೀಕಿ ಬಂಧನದ ವೇಳೆ ಆತನ ಮೊಬೈಲ್, ಲ್ಯಾಪ್ಟಾಪ್, ಸಿಗರೇಟ್ ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ತೀವ್ರಗೊಳಿಸಿದ್ದಾರೆ.
‘ಬಿಜೆಪಿ ಸೋಲಿಸಿ, ಭಾರತ ಉಳಿಸಿ’
ಭಾರತದ ಗಡಿಯೊಳಗೆ ಚೀನಾ ಪೂರ್ತಿ ಹಳ್ಳಿಯನ್ನೇ ನಿರ್ಮಿಸಿದ್ರೂ ಪ್ರಧಾನಿ ನರೇಂದ್ರ ಮೋದಿ ಮೌನವಹಿಸಿದ್ದಾರೆ ಅಂತ ಕಾಂಗ್ರೆಸ್ ಕಿಡಿಕಾರಿದೆ. ಬಿಜೆಪಿ ಸೋಲಿಸಿ, ಭಾರತವನ್ನು ಉಳಿಸಿ ಎಂಬ ಟ್ವಿಟರ್ ಅಭಿಯಾನ ನಡೆಸುತ್ತಿರುವ ಕಾಂಗ್ರೆಸ್, ಪೋಸ್ಟರ್ ಒಂದನ್ನು ಟ್ವೀಟ್ ಮಾಡಿದ್ದು, ಅಂಕೆಯಿಲ್ಲದ ಭಾಷಣಗಳಲ್ಲಿ ಚೀನಾ ಅತಿಕ್ರಮಣವನ್ನು ಉಲ್ಲೇಖಿಸಲು ಪ್ರಧಾನಿ ಮೋದಿ ವಿಫಲರಾಗಿದ್ದಾರೆ ಅಂತ ಟೀಕಿಸಿದೆ. ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನಾ ನೆಲೆಯಂತೆ ಹಳ್ಳಿಯೊಂದನ್ನು ನಿರ್ಮಿಸಿದೆ. ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಚೀನಾ ನಿರ್ಮಿಸಿಕೊಂಡಿರುವ ಅಂತಹ ಹಳ್ಳಿಗಳ ಪೈಕಿ ಇದೊಂದು. ಇದು ಕಳವಳಕ್ಕೆ ಕಾರಣವಾಗಿದೆ ಅಂತ ಕಾಂಗ್ರೆಸ್ ಹೇಳಿದೆ.
ಆಸ್ತಿ ತೆರಿಗೆ ಪಾವತಿಯಲ್ಲಿ ಶೇ.50ರಷ್ಟು ರಿಯಾಯಿತಿ
ಕೊರೊನಾ ಸಂಕಷ್ಟ ಹಿನ್ನೆಲೆ ಪ್ರವಾಸೋದ್ಯಮಕ್ಕೆ ಪುನಶ್ಚೇತನ ನೀಡಲು 2021-22ನೇ ಸಾಲಿನ ತೆರಿಗೆ ಪಾವತಿಗೆ ರಾಜ್ಯ ಸರ್ಕಾರ ರಿಯಾಯಿತಿ ಘೋಷಿಸಿದೆ. ಹೋಟೆಲ್, ರೆಸಾರ್ಟ್, ರೆಸ್ಟೋರೆಂಟ್, ಮನರಂಜನೆ, ಪಾರ್ಕ್ಗಳ ಆಸ್ತಿ ತೆರಿಗೆಯಲ್ಲಿ ಶೇಕಡಾ 50ರಷ್ಟು ರಿಯಾಯಿತಿ ನೀಡಿ ನಗರಾಭಿವೃದ್ಧಿ ಇಲಾಖೆಯ ಅಧೀನ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ. ಬಿಬಿಎಂಪಿ ವ್ಯಾಪ್ತಿ ಹೊರತುಪಡಿಸಿ, ಉಳಿದ ಕಡೆ ಆಸ್ತಿ ತೆರಿಗೆಗೆ ರಿಯಾಯಿತಿ ನೀಡಲಾಗಿದೆ. ಶೇಕಡಾ 50 ರಷ್ಟು ತೆರಿಗೆ ಪಾವತಿಸಿ ಉಳಿದ ಶೇ 50 ರಷ್ಟು ರಿಯಾಯಿತಿಗೆ ಹೋಟೆಲ್, ರೆಸಾರ್ಟ್, ರೆಸ್ಟೋರೆಂಟ್ ಮತ್ತು ಮನೋರಂಜನಾ ಪಾರ್ಕ್ ಮಾಲೀಕರು ಅರ್ಜಿ ಸಲ್ಲಿಸಬೇಕು. ಈ ಅರ್ಜಿಗಳನ್ನ ಕಂದಾಯ ನಿರೀಕ್ಷಕರು ಪರಿಶೀಲಿಸಿದ ಬಳಿಕ ಜಿಲ್ಲಾಮಟ್ಟದ ಸಮಿತಿ ಸಂಬಂಧಿಸದ ಇಲಾಖೆಗೆ ಸಲ್ಲಿಸಲಿದೆ.
‘ನವೆಂಬರ್ ನಂತರ ಉಚಿತ ಪಡಿತರ ಸಿಗಲ್ಲ’
ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ ಅಡಿ, ನವೆಂಬರ್ ಬಳಿಕ ಉಚಿತ ಪಡಿತರ ಸಿಗಲ್ಲ ಅಂತ ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಕಾರ್ಯದರ್ಶಿ ಸುಧಾಂಶು ಪಾಂಡೆ ಸ್ಪಷ್ಟನೆ ನೀಡಿದ್ದಾರೆ. ನವೆಂಬರ್ ನಂತರ ಈ ಯೋಜನೆಯಡಿ ಉಚಿತ ಪಡಿತರ ವಿತರಣೆಯನ್ನ ವಿಸ್ತರಿಸುವ ಯಾವುದೇ ಪ್ರಸ್ತಾಪವಿಲ್ಲ. ದೇಶದ ಆರ್ಥಿಕತೆ ತಹಬದಿಗೆ ಬರುತ್ತಿರುವುದರಿಂದ ಉಚಿತ ಪಡಿತರ ಒದಗಿಸುವ ಯೋಜನೆಯನ್ನ ಮುಂದುವರೆಸುವ ಪ್ರಸ್ತಾಪ ಸರ್ಕಾರದ ಮುಂದಿಲ್ಲ ಅಂತ ತಿಳಿಸಿದ್ದಾರೆ.
ಭೀಕರವಾಗಿದೆ 17 ನಗರಗಳ ವಾಯು ಗುಣಮಟ್ಟ
ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಭಾರತದ 138 ನಗರಗಳ ವಾಯು ಗುಣಮಟ್ಟ ಸೂಚ್ಯಂಕಗಳನ್ನು ಬಿಡುಗಡೆ ಮಾಡಿದ್ದು 17 ನಗರಗಳ ವಾಯು ಗುಣಮಟ್ಟ ತೀರಾ ಕೆಟ್ಟದ್ದಾಗಿದೆ. ಉತ್ತರ ಪ್ರದೇಶದ ಘಾಜಿಯಾಬಾದ್ ಪರಿಸ್ಥಿತಿ ಅತ್ಯಂತ ಭೀಕರವಾಗಿದ್ದು, ವಾಯು ಗುಣಮಟ್ಟ ಸೂಚ್ಯಂಕವು 466 ಇದೆ. ಇನ್ನು ಬೆಂಗಳೂರಿನ ವಾಯು ಗುಣಮಟ್ಟ ಸೂಚ್ಯಂಕವು 70 ಆಗಿದ್ದು ತೃಪ್ತಿದಾಯಕವಾಗಿದೆ. ದೀಪಾವಳಿ ಹಿನ್ನೆಲೆ ದೇಶದ ಹಲವು ನಗರಗಳ ವಾಯು ಗುಣಮಟ್ಟ ಎರಡು ದಿನಗಳಲ್ಲಿ ತೀವ್ರವಾಗಿ ಕುಸಿದಿದೆ ಅಂತ ಮಾಲಿನ್ಯ ನಿಯಂತ್ರಣ ಮಂಡಳಿ ಅಂಕಿ ಅಂಶಗಳಲ್ಲಿ ತಿಳಿದುಬಂದಿದೆ.
ಮುಂಬೈನಲ್ಲಿ ಮೊದಲ ಡ್ರೈವ್ ಇನ್ ಚಿತ್ರಮಂದಿರ ಶುರು
ಭಾರತದ ಮೊದಲ ರೂಫ್ ಟಾಪ್ ಡ್ರೈವ್ ಇನ್ ಸಿನಿಮಾ ಥಿಯೇಟರ್ ಮಹಾರಾಷ್ಟ್ರದ ಮುಂಬೈನಲ್ಲಿ ಆರಂಭಗೊಂಡಿದೆ. ರಿಲಯನ್ಸ್ ರಿಟೇಲ್ ಸಹಭಾಗಿತ್ವದಲ್ಲಿ ಮುಂಬೈನ ಜಿಯೋ ವರ್ಲ್ಡ್ ಡ್ರೈವ್ ಮಾಲ್‌ನಲ್ಲಿ ಸುಮಾರು 290 ವಾಹನಗಳಿಗೆ ಸ್ಥಳಾವಕಾಶ ನೀಡುವ ಡ್ರೈವ್-ಇನ್ ಥಿಯೇಟರ್ ಶುರುವಾಗಿದೆ. ಬಾಲಿವುಡ್ ನಟ ಅಕ್ಷಯ್ ಕುಮಾರ್ ಮತ್ತು ಕತ್ರಿನಾ ಕೈಫ್ ಅಭಿನಯದ ಸೂರ್ಯವಂಶಿ ಚಿತ್ರ ಡ್ರೈವ್-ಇನ್ ಚಿತ್ರಮಂದಿರದಲ್ಲಿ ಪ್ರದರ್ಶನಗೊಂಡ ಮೊದಲ ಚಿತ್ರವಾಗಿದೆ.
ಟಿ-20 ವಿಶ್ವಕಪ್ಗೆ ಕ್ರಿಸ್ ಗೇಲ್ ವಿದಾಯ ಹೇಳಿದ್ರಾ?
ಐಸಿಸಿ ಟಿ20 ವಿಶ್ವಕಪ್ನಲ್ಲಿ ಆಸ್ಟ್ರೇಲಿಯಾ ವಿರುದ್ದದ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡದ ಆಟಗಾರ ಕ್ರಿಸ್ ಗೇಲ್ ಟಿ-20 ಕ್ರಿಕೆಟ್ಗೆ ವಿದಾಯ ಹೇಳಿದ್ರಾ ಅನ್ನೋ ಚರ್ಚೆ ಜೋರಾಗಿದೆ. ಪಂದ್ಯದ ವೇಳೆ ಔಟ್ ಆಗಿ ಪೆವಿಲಿಯನ್ ಕಡೆ ಹಿಂತಿರುಗುತ್ತಿದ್ದಾಗ ಗೇಲ್ ಪ್ರೇಕ್ಷಕರತ್ತ ಬ್ಯಾಟ್ ಬೀಸುತ್ತಾ ಹೆಜ್ಜೆ ಹಾಕಿದರು. ಇದಕ್ಕೆ ಪ್ರೇಕ್ಷಕರು ಕೂಡ ಎದ್ದು ನಿಂತು ಗೌರವ ಸೂಚಿಸಿದರು. ಆ ಬಳಿಕ ಡ್ವೇನ್ ಬ್ರಾವೋ ಸೇರಿದಂತೆ ಸಹ ಆಟಗಾರರು ಕೂಡ ಗೇಲ್ ಅವರನ್ನು ಆಲಿಂಗನದ ಮೂಲಕ ಬರ ಮಾಡಿಕೊಂಡರು. ಇದನ್ನೆಲ್ಲ ನೋಡಿದ ಕ್ರಿಕೆಟ್ ಜಗತ್ತು ಕ್ರಿಸ್ಗೇಲ್ ಟಿ20ಗೆ ವಿದಾಯ ಹೇಳಿದ್ರಾ ಅಂತ ಮಾತಾಡೋಕೆ ಶುರು ಮಾಡಿದೆ. ಆದಾಗ್ಯೂ ಅಧಿಕೃತವಾಗಿ ಗೇಲ್ ನಿವೃತ್ತಿ ಘೋಷಿಸಿಲ್ಲ.