ಭುವನೇಶ್ವರ: ಚಾರ್ಟರ್ಡ್ ಅಕೌಂಟೆಂಟ್ ಆಗಬೇಕೆಂಬ ಕನಸು ಹೊಂದಿದ್ದ ವ್ಯಕ್ತಿಯೋರ್ವ ಕೋವಿಡ್-19 ವಾರ್ಡ್‍ನ ಆಸ್ಪತ್ರೆಯ ಬೆಡ್ ಮೇಲೆ ಸಿಎ ಪರೀಕ್ಷೆಗೆ ಓದುಕೊಳ್ಳುತ್ತಿದ್ದ ಫೋಟೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಕೋವಿಡ್ ಸೋಂಕಿದ್ದರೂ, ಅನಾರೋಗ್ಯವು ವ್ಯಕ್ತಿಯ ಓದಿಗೆ ಯಾವುದೇ ಅಡ್ಡಿಯನ್ನುಂಟು ಮಾಡಿಲ್ಲ. ಪರೀಕ್ಷೆಯಲ್ಲಿ ಹೇಗಾದರೂ ಉತ್ತೀರ್ಣರಾಗಬೇಕೆಂದು ಓದಿನ ಬಗ್ಗೆ ವ್ಯಕ್ತಿ ತೋರಿಸುತ್ತಿರುವ ಶ್ರದ್ಧೆಗೆ ಇದೀಗ ಪ್ರಶಂಸೆಗಳು ಸುರುಮಳೆ ಹರಿದು ಬರುತ್ತಿದೆ. ಅಲ್ಲದೇ ನೆಟ್ಟಿಗರು ಕೂಡ ವ್ಯಕ್ತಿಯ ವೃತ್ತಿ ಜೀವನಕ್ಕೆ ಯಶಸ್ಸು ಸಿಗಲಿ ಎಂದು ವಿಶ್ ಮಾಡುತ್ತಿದ್ದಾರೆ.

ವೈರಲ್ ಆಗುತ್ತಿರುವ ಈ ಫೋಟೋವನ್ನು ಐಎಎಸ್ ಅಧಿಕಾರಿ ವಿಜಯ್ ಕುಲಾಂಗೆ ಎಂಬವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವಿಜಯ್ ಕುಲಾಂಗೆಯವರು ಪ್ರಸ್ತುತ ಒಡಿಶಾದ ಗಂಜಾಂನ ಸಂಗ್ರಾಹಕ ಮತ್ತು ಜಿಲ್ಲಾಧಿಕಾರಿಯಾಗಿದ್ದಾರೆ. ಕುಲಾಂರವರು ಕೋವಿಡ್-19 ಆಸ್ಪತ್ರೆಗೆ ಭೇಟಿ ನೀಡಿದಾಗ ವ್ಯಕ್ತಿ ಓದುತ್ತಿರುವುದನ್ನು ಗಮನಿಸಿದ್ದಾರೆ. ನಂತರ ಇಂತಹ ಸಮಯದಲ್ಲಿಯೂ ವ್ಯಕ್ತಿ ಓದಿನ ಬಗ್ಗೆ ಶ್ರದ್ಧೆ ಹೊಂದಿರುವುದನ್ನು ಕಂಡು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಫೋಟೋವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಯಶಸ್ಸು ಕಾಕತಾಳೀಯವಲ್ಲ. ನಿಮಗೆ ಶ್ರದ್ಧೆ ಇರಬೇಕು. ನಾನು ಕೋವಿಡ್ ಆಸ್ಪತ್ರೆಗೆ ಭೇಟಿ ನೀಡಿದ್ದೆ ಮತ್ತು ಈ ವ್ಯಕ್ತಿ ಸಿಎ ಪರೀಕ್ಷೆಗೆ ಓದುತ್ತಿರುವುದನ್ನು ನೋಡಿದೆ. ನಿಮ್ಮ ಶ್ರದ್ಧೆ ನಿಮ್ಮ ಎಲ್ಲ ನೋವನ್ನು ಮರೆಸುತ್ತದೆ. ಯಶಸ್ಸಿನ ನಂತರ ಉಪಚಾರಿಕತೆ ಮಾತ್ರ ಇರುತ್ತದೆ ಎಂದು ಕ್ಯಾಪ್ಷನ್ ಹಾಕಿಕೊಂಡಿದ್ದಾರೆ.

ಶೇರ್ ಮಾಡಿರುವ ಫೋಟೋದಲ್ಲಿ ವ್ಯಕ್ತಿ ಬಾಕ್ಸರ್‍ಗಳ ಚಿತ್ರವಿರುವ ಟಿ-ಶರ್ಟ್‍ನನ್ನು ಧರಿಸಿದ್ದು, ಪುಸ್ತಕಗಳು, ಕ್ಯಾಲ್ಕುಲೇಟರ್‍ನನ್ನು ಬೆಡ್ ಮೇಲೆ ಹರಡಿಕೊಂಡು ಕುಳಿತುಕೊಂಡಿರುತ್ತಾನೆ. ಜೊತೆಗೆ ಪಿಪಿಇ ಕಿಟ್ ಧರಿಸಿರುವ ಮೂರು ವ್ಯಕ್ತಿಗಳೊಂದಿಗೆ ಮಾತನಾಡುತ್ತಿರುದನ್ನು ಕಾಣಬಹುದಾಗಿದೆ. ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆಯೇ 6.5 ಸಾವಿರ ರೀ ಟ್ವೀಟ್ ಹಾಗೂ 46 ಸಾವಿರ ಲೈಕ್ಸ್, ಅನೇಕ ಕಾಮೆಂಟ್‍ಗಳು ಹರಿದುಬಂದಿದೆ.

The post ಆಸ್ಪತ್ರೆಯಲ್ಲಿಯೇ ಸಿಎ ಪರೀಕ್ಷೆಗೆ ತಯಾರಿ – ಕೋವಿಡ್ ಸೋಂಕಿತನ ಫೋಟೋ ವೈರಲ್ appeared first on Public TV.

Source: publictv.in

Source link