– ಕದ್ದಿದ್ದು ಮೇ 29, 2020, ಅರೆಸ್ಟ್ ಆಗಿದ್ದು ಮೇ 29, 2021

ಬೆಂಗಳೂರು: ಚಾಮರಾಜಪೇಟೆ ಬಿಬಿಎಂಪಿ ಹೆರಿಗೆ ಆಸ್ಪತ್ರೆಯಿಂದ ಮಗು ಕಳ್ಳತನ ಮಾಡಿಕೊಂಡು ಎಸ್ಕೇಪ್ ಆಗಿದ್ದ ಮನೋವೈದ್ಯೆ ಬರೋಬ್ಬರಿ ಒಂದು ವರ್ಷದ ಬಳಿಕ ಪೊಲೀಸರ ಬಲೆಗೆ ಬಿದ್ದಿದ್ದಾಳೆ.

ಕಾಕತಾಳೀಯ ಎಂಬಂತೆ ಕಳೆದ ವರ್ಷ ಮೇ 29, 2020ರಲ್ಲಿ ಮಗು ಕಳ್ಳತನ ಮಾಡಿಕೊಂಡು ಎಸ್ಕೇಪ್ ಆಗಿದ್ದ ವೈದ್ಯೆ 2021 ಮೇ 29 ರಂದು ಪೊಲೀಸರ ಬಲೆಗೆ ಬಿದ್ದಿರೋದು ವಿಶೇಷ. ಘಟನೆ ಬಳಿಕ ಆರೋಪಿಯನ್ನ ಎಲ್ಲಿ ಹುಡುಕಿದರೂ ಮಾಹಿತಿ ಸಿಗುತ್ತಿರಲಿಲ್ಲ. ಪೊಲೀಸರು ಆರು ತಿಂಗಳ ಬಳಿಕ ಆರೋಪಿಯ ರೇಖಾ ಚಿತ್ರವನ್ನ ಬಿಡುಗಡೆ ಮಾಡಿ ಹುಡುಕಿದರೂ ಪತ್ತೆಯಾಗಿರಲಿಲ್ಲ.

ಕಳೆದ ಮೂರ್ನಾಲ್ಕು ದಿನದಿಂದ ಆರೋಪಿ ಟವರ್ ಲೊಕೇಷನ್ ಬಗ್ಗೆ ಪೊಲೀಸರಿಗೆ ಖಚಿತ ಮಾಹಿತಿ ಸಿಕ್ಕಿದೆ. ಟವರ್ ಲೊಕೇಷನ್ ಆಧಾರದ ಮೇಲೆ ಆರೋಪಿ ರೇಷ್ಮಾಳನ್ನ ತಲಘಟ್ಟಪುರ ಪಿಎಸ್ ಐ ಶ್ರೀನಿವಾಸ್ ಅಂಡ್ ಟೀಂ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿ ರೇಷ್ಮಾ ದಂಪತಿಗೆ ಮಗು ಮಾಡಿಕೊಡೊದಾಗಿ 15 ಲಕ್ಷ ರೂಪಾಯಿ ಹಣ ಪಡೆದಿದ್ದಳು. ದಂಪತಿಯ ಮೊದಲ ಮಗು ಬುದ್ದಿ ಮಾಂದ್ಯತೆಯಿಂದ ಕೂಡಿರುತ್ತೆ. ಆ ಮಗುವಿಗೆ ಆರೋಪಿ ಡಾಕ್ಟರ್ ರೇಷ್ಮಾ ಚಿಕಿತ್ಸೆ ನೀಡುತ್ತಿರುತ್ತಾರೆ. ಆಗ ನಿಮ್ಮದೇ ಮಗು ಮಾಡಿಕೊಡೊದಾಗಿ ಪತಿ, ಪತ್ನಿಯ ವೀರ್ಯಾಣು ಮತ್ತು ಅಂಡಾಣು ತೆಗೆದುಕೊಂಡಿದ್ದಳು.

ಅಂಡಾಣು ಮತ್ತು ವೀರ್ಯಾಣು ಬೇರೆ ಮಹಿಳೆಗೆ ಇಂಜೆಕ್ಟ್ ಮಾಡಿದ್ದೇನೆ. ಮಗು ಬೆಳೆಯುತ್ತಿದೆ ಎಂದು ಹೇಳುತ್ತಲೇ ಬರ್ತಿದ್ದ ವೈದ್ಯೆ, ದಂಪತಿಯ ಒತ್ತಡ ಹೆಚ್ಚಾದಾಗ ಮಗು ಕಳ್ಳತನ ಮಾಡಿಕೊಂಡು ಹೋಗಿ ದಂಪತಿ ಮಡಿಲಿಗೆ ಸೇರಿಸಿದ್ದಳು ಎನ್ನಲಾಗಿದೆ. ಕಳ್ಳತನ ಮಾಡಿಕೊಂಡು ಮಗು ದಂಪತಿಗೆ ಕೊಟ್ಟ ಬಳಿಕ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದಾಗ ಬಂಧಿಸಲಾಗಿದೆ.

ಸದ್ಯ ಕಳ್ಳತನ ಮಾಡಿಕೊಂಡು ಹೋಗಿದ್ದ ಮಗುವನ್ನ ಮಗುವಿನ ತಂದೆ ತಾಯಿಗೆ ತಲುಪಿಸಲಾಗಿದೆ. ಸದ್ಯ ಪೊಲೀಸರ ವಶದಲ್ಲಿರೋ ಆರೋಪಿಗೆ ಪೊಲೀಸರು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ. ಆರೋಪಿಯ ಸಂಪೂರ್ಣ ತನಿಖೆಯ ಬಳಿಕ ಮತ್ತಷ್ಟು ಮಾಹಿತಿ ಬಹಿರಂಗ ಆಗುವ ಸಾಧ್ಯತೆಗಳಿವೆ.

The post ಆಸ್ಪತ್ರೆಯಲ್ಲಿ ಮಗು ಕದ್ದಿದ್ದ ವೈದ್ಯೆ ಬರೋಬ್ಬರಿ ವರ್ಷದ ಬಳಿಕ ಖಾಕಿ ಬಲೆಗೆ appeared first on Public TV.

Source: publictv.in

Source link

Leave a comment