ಆಸ್ಪತ್ರೆಯಲ್ಲಿ ಶವಗಳು ಕೊಳೆತ ಪ್ರಕರಣ: ಇಎಸ್​ಐ ಡೀನ್ ತಲೆದಂಡ | Dean of ESI Hospital Removed Over Negligence about Cremation of Bodies


ಆಸ್ಪತ್ರೆಯಲ್ಲಿ ಶವಗಳು ಕೊಳೆತ ಪ್ರಕರಣ: ಇಎಸ್​ಐ ಡೀನ್ ತಲೆದಂಡ

ಸಾಂಕೇತಿಕ ಚಿತ್ರ

ಬೆಂಗಳೂರು: ಸಕಾಲಕ್ಕೆ ಸಂಸ್ಕಾರ ನೆರವೇರದೆ ಆಸ್ಪತ್ರೆಯಲ್ಲಿ ಶವಗಳು ಕೊಳೆತ ಪ್ರಕರಣಕ್ಕೆ ಸಂಬಂಧಿಸಿದಂತೆ ಇಎಸ್​ಐ ಆಸ್ಪತ್ರೆಯ ಡೀನ್ ಜಿತೇಂದ್ರ ಕುಮಾರ್ ಅವರ ವಿರುದ್ಧ ಸರ್ಕಾರ ಶಿಸ್ತುಕ್ರಮ ಜರುಗಿಸಿದೆ. ರಾಜಾಜಿನಗರ ಇಎಸ್​ಐ ಆಸ್ಪತ್ರೆಯ ಡೀನ್ ಜಿತೇಂದ್ರ ಕುಮಾರ್ ಜಾಗಕ್ಕೆ ಡಾ.ರೇಣುಕಾ ರಾಮಯ್ಯ ಅವರನ್ನು ನೇಮಿಸಲಾಗಿದೆ. ಹೊಸ ಡೀನ್ ನೇಮಿಸಿ ಕೇಂದ್ರ ಕಾರ್ಮಿಕ ಇಲಾಖೆ ಆದೇಶ ಹೊರಡಿಸಿದೆ. ಆಸ್ಪತ್ರೆಯಲ್ಲಿ ಇಬ್ಬರು 15 ತಿಂಗಳ ಮೃತಪಟ್ಟಿದ್ದರೂ ಶವಗಳ ಅಂತ್ಯಕ್ರಿಯೆ ನಡೆದಿರಲಿಲ್ಲ. ಶವ ಪತ್ತೆಯಾದ ಬಗ್ಗೆ ಟಿವಿ9 ಕನ್ನಡ ವಾಹಿನಿ ನಿರಂತರವಾಗಿ ಸುದ್ದಿ ಪ್ರಸಾರ ಮಾಡಿತ್ತು.

15 ತಿಂಗಳ ಬಳಿಕ ಶವಗಳನ್ನು ಹೊರ ತೆಗೆದ ಆಸ್ಪತ್ರೆ ಸಿಬ್ಬಂದಿ
ಕೊರೊನಾ ಪಿಡುಗು ರಾಜ್ಯದಲ್ಲಿ ವ್ಯಾಪಿಸಿದ್ದ ಸಮಯದಲ್ಲಿ ಹಲವು ಶವಗಳನ್ನು ಆಸ್ಪತ್ರೆ ಸಿಬ್ಬಂದಿಯೇ ದಫನ್ ಮಾಡಿದ್ದರು. ಆದರೆ ಕೋವಿಡ್​ನಿಂದ ಮೃತಪಟ್ಟವರ ಇಬ್ಬರ ಶವಗಳಿಗೆ 15 ತಿಂಗಳಾದರೂ ಅಂತ್ಯಸಂಸ್ಕಾರ ನಡೆಸದ ಘಟನೆ ಬೆಂಗಳೂರು ರಾಜಾಜಿನಗರ ಇಎಸ್​ಐ ಆಸ್ಪತ್ರೆಯಲ್ಲಿ ನಡೆದಿತ್ತು. ಜುಲೈ 2020ರಲ್ಲಿ ಆಸ್ಪತ್ರೆ ಶವಾಗಾರದಲ್ಲಿ ಕೊರೊನಾ ಸೋಂಕಿನಿಂದ ಮೃತಪಟ್ಟವರ ಶವಗಳನ್ನು ಇರಿಸಿದ್ದ ಸಿಬ್ಬಂದಿ ಮರೆತುಬಿಟ್ಟಿದ್ದರು. ಚಾಮರಾಜಪೇಟೆಯ ದುರ್ಗಾ (40) ಮತ್ತು ಕೆ.ಪಿ.ಅಗ್ರಹಾರದ ಮುನಿರಾಜು (35) ಮೃತರು. ಮರಣೋತ್ತರ ಪರೀಕ್ಷೆಗಾಗಿ ಎರಡು ಮೃತದೇಹಗಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ.

ಈ ಹಿಂದೆ ಬಿಬಿಎಂಪಿಯೇ ಕೋವಿಡ್ ಶವಗಳನ್ನ ಅಂತ್ಯಸಂಸ್ಕಾರ ಮಾಡುತ್ತಿದ್ದ ಕಾರಣ ಮೃತದೇಹಗಳ ಬಗ್ಗೆ ಕುಟುಂಬಸ್ಥರು ಕೂಡ ತಲೆಕೆಡಿಸಿಕೊಂಡಿಲ್ಲ. ಆದರೆ ಹೊಸ ಶವಾಗಾರ‌ ನಿರ್ಮಾಣದ ಬಳಿಕ ಹಳೆ ಶವಾಗಾರದ ಬಳಕೆ ನಿಲ್ಲಿಸಿದ್ದ ಸಿಬ್ಬಂದಿ ಹಳೆ ಕಟ್ಟಡದಲ್ಲಿ ಎರಡು ಶವಗಳನ್ನು ಇರಿಸಿರುವುದನ್ನೇ ಮರೆತಿದ್ದರು. ಕೆಲ ಸಿಬ್ಬಂದಿ ಹಳೇ ಶವಾಗಾರದ ಸ್ವಚ್ಛತೆಗೆ ಹೋದಾಗ ವಾಸನೆ ಬಂದಿದ್ದರಿಂದ ಪ್ರಕರಣ ಬೆಳಕಿಗೆ ಬಂದಿದೆ. ಶವಗಳಿಗೆ ಸಂಸ್ಕಾರ ನೆರವೇರಿಲ್ಲ ಎಂಬ ವಿಷಯ ತಿಳಿದ ಮೃತರ ಕುಟುಂಬಸ್ಥರು ಕಣ್ಣೀರು ಹಾಕಿದ್ದಾರೆ. ಅವರು ಕೋವಿಡ್​ನಿಂದ ಮೃತಪಟ್ಟಿದ್ದಾರೆ ಎಂದು ನಮಗೆ ಆಗಲೇ ಕರೆ ಬಂದಿತ್ತು. ಆದರೆ ಮುಖ ನೋಡಲು ಅವಕಾಶವಿಲ್ಲ ಎಂದಿದ್ದರು. ನೀವೇ ಅಂತ್ಯಸಂಸ್ಕಾರ ಮಾಡಿ ಎಂದು ನಾವು ಮನವಿ ಮಾಡಿದ್ದೆವು. ಬಳಿಕ ಅಂತ್ಯಸಂಸ್ಕಾರ ಮಾಡಿದ್ದೇವೆ ಎಂದು ಡೆಟ್ ಸರ್ಟಿಫಿಕೇಟ್ ಕೂಡಾ ಕೊಟ್ಟಿದ್ದರು. ಆದರೆ ಈಗ ಪೊಲೀಸರು ಶವಗಳನ್ನು ಗುರುತಿಸುವಂತೆ ಕರೆ ಮಾಡಿದ್ದಾರೆ ಎಂದು ಕುಟುಂಬಸ್ಥರು ಕಣ್ಣೀರು ಹಾಕಿದ್ದಾರೆ.

ಘಟನೆ ಸಂಬಂಧ ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್​ಗೆ ಪತ್ರ ಬರೆದಿರುವ ರಾಜಾಜಿನಗರ ಶಾಸಕ ಸುರೇಶ್ ಕುಮಾರ್, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಅರಿವಿಗೆ ಬರುವ ಮೊದಲೇ ಹರಡಿದ ಒಮಿಕ್ರಾನ್: 20 ದೇಶಗಳಲ್ಲಿ ಮತ್ತೆ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳ, ಕಾದಿದೆಯೇ ಸಂಕಷ್ಟ
ಇದನ್ನೂ ಓದಿ: ಕೊರೊನಾ ವೈರಸ್ 13ನೇ ರೂಪಾಂತರಿಗೆ ಒಮಿಕ್ರಾನ್ ಹೆಸರು ಯಾಕೆ ಬಂತು, ಅದರ ಹಿನ್ನೆಲೆ ಏನು ಅಂತ ಗೊತ್ತಾ?

TV9 Kannada


Leave a Reply

Your email address will not be published. Required fields are marked *