ಆಸ್ಪತ್ರೆಯಲ್ಲೂ ಭುವಿ ಕೊಲ್ಲಲು ನಡೆಯಿತು ಪ್ರಯತ್ನ; ಹರ್ಷನ ಸಂತಸಕ್ಕೆ ಬ್ರೇಕ್? | In Kannadathi Supari killer try to kill Bhuvi Ranjani Raghavan In hospital


ಆಸ್ಪತ್ರೆಯಲ್ಲೂ ಭುವಿ ಕೊಲ್ಲಲು ನಡೆಯಿತು ಪ್ರಯತ್ನ; ಹರ್ಷನ ಸಂತಸಕ್ಕೆ ಬ್ರೇಕ್?

ಕನ್ನಡತಿ ಧಾರಾವಾಹಿ

‘ಕನ್ನಡತಿ’ ಧಾರಾವಾಹಿಯಲ್ಲಿ (Kannadathi Serial) ಭುವನೇಶ್ವರಿ ತನ್ನ ಹುಟ್ಟೂರಾದ ಹಸಿರುಪೇಟೆಯಲ್ಲಿ ಸಾವಿನ ಕದ ತಟ್ಟಿ ಬಂದಿದ್ದಾಳೆ. ಬೆಟ್ಟದಿಂದ ಅವಳನ್ನು ತಳ್ಳಲಾಯಿತು. ಅವಳು ಅದೃಷ್ಟವಶಾತ್ ಬದುಕಿದ್ದಾಳೆ. ಬೆಂಗಳೂರಿನ (Bangalore) ಆಸ್ಪತ್ರೆಗೆ ಭುವಿಯನ್ನು ಅಡ್ಮಿಟ್ ಮಾಡಲಾಗಿದೆ. ಆಕೆಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆಕೆ ಸಾವು-ಬದುಕಿನ ಮಧ್ಯೆ ಹೋರಾಟ ಮಾಡುತ್ತಿರುವಾಗಲೇ ಪ್ರಜ್ಞೆ ಬಂದಿದೆ. ಈ ವಿಚಾರ ತಿಳಿದು ಹರ್ಷ ಕುಣಿದು ಕುಪ್ಪಳಿಸಿದ್ದಾನೆ. ಭುವಿ ಗುಣಮುಖಳಾಗಲಿ ಎಂದು ದೇವರಲ್ಲಿ ಕೋರಿಕೊಂಡಿದ್ದು ಈಡೇರಿತು ಎನ್ನುವ ಖುಷಿಯಲ್ಲಿ ಇದ್ದಾನೆ ಹರ್ಷ. ಹಾಗಿರುವಾಗಲೇ ಭುವಿಗೆ ಮತ್ತೆ ಸಂಕಷ್ಟ ಎದುರಾಗಿದೆ.

ಭುವಿಯನ್ನು ಹತ್ಯೆ ಮಾಡಲು ಸುಪಾರಿ ಕೊಟ್ಟಿದ್ದು ಸಾನಿಯಾ. ಸುಪಾರಿ ಕಿಲ್ಲರ್​ಗೆ 5 ಲಕ್ಷ ರೂಪಾಯಿ ನೀಡಿದ್ದಳು. ಕೆಲಸ ಪೂರ್ಣಗೊಳಿಸದೆ ಹಣ ಮುಟ್ಟುವುದಿಲ್ಲ ಎನ್ನುವ ಶಪಥ ಮಾಡಿದ್ದಾನೆ ಆತ. ಈ ಕಾರಣಕ್ಕೆ ಭುವಿಯನ್ನು ಹತ್ಯೆ ಮಾಡಲು ಅವಳು ಇರುವ ವಾರ್ಡ್​ಗೆ ಬಂದಿದ್ದಾನೆ. ಭುವಿಗೆ ಹಾಕಿರುವ ಆಕ್ಸಿಜನ್ ಮಾಸ್ಕ್​ಅನ್ನು ತೆಗೆದು ಹಾಕಿದ್ದಾನೆ. ಅಷ್ಟೇ ಅಲ್ಲ, ಅಲ್ಲಿ ಒಂದು ಹೂಗುಚ್ಚ ಇಟ್ಟಿದ್ದಾನೆ. ‘ಉಸಿರಾಟದ ತೊಂದರೆ ಇರುವವರಿಗೆ ಹೂವಿನ ಪರಿಮಳ ಮೂಗಿಗೆ ಬಿದ್ದರೆ ಮತ್ತಷ್ಟು ಉಸಿರಾಟದ ತೊಂದರೆ ಉಂಟಾಗುತ್ತದೆ. ಆಗ ಅವಳು ಸಾಯುತ್ತಾಳೆ’ ಎಂಬುದು ಕಿಲ್ಲರ್ ವಾದ.

ವಾರ್ಡ್​ಗೆ ನುಗ್ಗಿ ಭುವಿಯನ್ನು ಹತ್ಯೆ ಮಾಡಲು ಕಿಲ್ಲರ್ ಮುಂದಾಗಿರುವ ವಿಚಾರ ಸಾನಿಯಾ ಆತಂಕಕ್ಕೆ ಕಾರಣವಾಗಿದೆ. ಕಿಲ್ಲರ್​ನನ್ನು ಹುಡುಕಿಯೇ ತೀರುತ್ತೇನೆ ಎನ್ನುವ ಹಠಕ್ಕೆ ವರುಧಿನಿ ಬಿದ್ದಿದ್ದಾಳೆ. ಆತ ಯಾರೇ ಆಗಿದ್ದರೂ ಹರ್ಷನ ಮುಂದೆ ನಿಲ್ಲಿಸುತ್ತೇನೆ ಎನ್ನುವ ಶಪಥ ಮಾಡಿದ್ದಾಳೆ. ಇದು ಸಾನಿಯಾ ಆತಂಕಕ್ಕೆ ಕಾರಣವಾಗಿದೆ.

ವರುಧಿನಿಗೆ ಹರ್ಷನ ಮೇಲೆ ತುಂಬಾನೇ ಪ್ರೀತಿ ಇದೆ. ಆತನನ್ನು ಪಡೆಯಲೇಬೇಕು ಎನ್ನುವ ಹಠ ಅವಳದ್ದು. ಆದರೆ, ಭುವಿ ಕೋಮಾಗೆ ಹೋಗಲು ವರುಧಿನಿಯೇ ಕಾರಣ ಎನ್ನುವ ನಂಬಿಕೆ ಹರ್ಷನದ್ದು. ಹೀಗಾಗಿ, ವರುಧಿನಿಗೆ ಒಂದೇ ಸಮನೇ ಬಯ್ಯುತ್ತಿದ್ದಾನೆ ಹರ್ಷ. ಇದರಿಂದ ವರು ಸಿಟ್ಟಾಗಿದ್ದಾಳೆ. ತನ್ನದೇನು ತಪ್ಪಿಲ್ಲ ಎಂದು ತೋರಿಸಲು ಆಕೆ ಮುಂದಾಗಿದ್ದಾಳೆ. ತನ್ನ ತಪ್ಪಿಲ್ಲ ಎಂಬುದನ್ನು ತೋರಿಸಬೇಕು ಎಂದರೆ ಆಕೆಗೆ ಕಿಲ್ಲರ್ ಬೇಕೆಬೇಕು. ಹೀಗಾಗಿ, ಆತನನ್ನು ಹುಡುಕುವ ಹಠಕ್ಕೆ ಬಿದ್ದಿದ್ದಾಳೆ. ಒಮ್ಮೆ ಆತ ಸಿಕ್ಕಿ ಬಿದ್ದರೆ ಸಾನಿಯಾಳ ಅಸಲಿ ಮುಖ ಬಯಲಾಗಲಿದೆ.

TV9 Kannada


Leave a Reply

Your email address will not be published.