ಸಿಡ್ನಿ: ಆಸ್ಟೇಲಿಯಾದಲ್ಲಿ ಇಲಿಗಳ ಸೇನೆ ದಾಂಗುಡಿ ಇಟ್ಟಿದ್ದು, ಬರೋಬ್ಬರಿ 5 ಸಾವಿರ ಕೋಟಿ ರೂಪಾಯಿ ಮೌಲ್ಯದ ಬೆಳೆಯನ್ನ ನಾಶಮಾಡಿವೆ.

ಆಸ್ಟ್ರೇಲಿಯಾ ಪೂರ್ವದ 3 ರಾಜ್ಯಗಳ ಮೇಲೆ ಲಕ್ಷಾಂತರ ಸಂಖ್ಯೆಯಲ್ಲಿ ಇಲಿಗಳು ದಾಳಿ ಮಾಡುತ್ತಿದ್ದು, ಸಾವಿರಾರು ಕೋಟಿ ಮೌಲ್ಯದ ಕೃಷಿ ಉತ್ಪನ್ನಗಳನ್ನ ಇಲಿಗಳು ತಿಂದುಹಾಕಿವೆ. ರಾತ್ರಿ ವೇಳೆ ಜನವಸತಿ ಪ್ರದೇಶಗಳಿಗೂ ದಾಳಿ ನಡೆಸುತ್ತಿರುವ ಇಲಿಗಳು ಮನೆಯಲ್ಲಿನ ವಸ್ತುಗಳನ್ನು ಕೂಡ ನಾಶ ಮಾಡುತ್ತಿವೆ. ಇಲಿ ದಾಳಿಯಿಂದ ಈವರೆಗೆ ಬರೋಬ್ಬರಿ 1 ಬಿಲಿಯನ್ ಆಸ್ಟ್ರೇಲಿಯನ್ ಡಾಲರ್​​​(ಅಂದಾಜು ₹5000 ಕೋಟಿ) ಮೊತ್ತದ ಬೆಳೆ ನಾಶವಾಗಿರಬಹುದು ಎಂದು ​ ನ್ಯೂ ಸೌತ್​​ ವೇಲ್ಸ್​ ರಾಜ್ಯ ಉನ್ನತ ಕೃಷಿ ಸಂಘ, NSW ಫಾರ್ಮರ್ಸ್ ತಿಳಿಸಿದೆ.

ನ್ಯೂ ಸೌತ್ ವೇಲ್ಸ್​​ನಲ್ಲಿ ಇಲಿ ಹಾವಳಿ ವ್ಯಾಪಕವಾಗಿದ್ದು, ಈ ಹಿಂದೆ ಯಾವತ್ತೂ ಈ ಮಟ್ಟಿಗೆ ಇಲಿ ದಾಳಿಯಾಗಿರಲಿಲ್ಲ ಅಂತ ಅಲ್ಲಿನ ರಾಜ್ಯ ಸರ್ಕಾರ ಹೇಳಿದೆ. ರಾಜ್ಯಾದ್ಯಂತ ಕೃಷಿ ಪ್ರದೇಶಗಳಲ್ಲಿ ಎಷ್ಟು ಲಕ್ಷ ಇಲಿಗಳು ಮುತ್ತಿಕೊಂಡಿವೆ ಎಂಬುದನ್ನ ಕೇವಲ ಗೆಸ್​ ಮಾಡಬಹುದಷ್ಟೇ. ಅವುಗಳ ಲೆಕ್ಕ ಕೂಡ ಸಿಗುತ್ತಿಲ್ಲ ಎನ್ನಲಾಗ್ತಿದೆ. ಇನ್ನು ಕೆಲವು ಮನೆಗಳಲ್ಲಿ ಇಲಿಗಳು ಎಲೆಕ್ಟ್ರಿಕ್​​ ವೈರ್​​ಗಳನ್ನ ಕಡಿದುಹಾಕಿರೋ ಪರಿಣಾಮ ಬೆಂಕಿ ಅವಘಡಗಳು ಸಂಭವಿಸಿವೆ ಎಂದು ದೂರಲಾಗಿದೆ.

ನಾವು ಈಗ ನಿರ್ಣಾಯಕ ಹಂತದಲ್ಲಿದ್ದೇವೆ. ವಸಂತಕಾಲದ ವೇಳೆಗೆ ಇಲಿಗಳ ಸಂಖ್ಯೆಯನ್ನು ಗಣನೀಯವಾಗಿ ಕಡಿಮೆ ಮಾಡದಿದ್ದರೆ, ನ್ಯೂ ಸೌತ್ ವೇಲ್ಸ್‌ನಲ್ಲಿ ನಾವು ಸಂಪೂರ್ಣ ಆರ್ಥಿಕ ಮತ್ತು ಸಾಮಾಜಿಕ ಬಿಕ್ಕಟ್ಟನ್ನು ಎದುರಿಸಲಿದ್ದೇವೆ ಎಂದು ಅಲ್ಲಿನ ಕೃಷಿ ಸಚಿವ ಆಡಮ್ ಮಾರ್ಷಲ್ ಹೇಳಿದ್ದಾರೆಂದು ವರದಿಯಾಗಿದೆ.

ಇಲಿ ಪಾಷಾಣಕ್ಕಾಗಿ ಭಾರತಕ್ಕೆ ಆರ್ಡರ್​
ಅಂದ್ಹಾಗೆ ಈ ಇಲಿ ಹಾವಳಿಗೆ ಕಡಿವಾಣ ಹಾಕಲು ನ್ಯೂ ಸೌತ್ ವೇಲ್ಸ್​ ಸರ್ಕಾರ ನಿಷೇಧಿತ ವಿಷ ಬ್ರೋಮಾಡಿಯೋಲೋನ್(Bromadiolone)​ನ 5,000 ಲೀಟರ್ ಅನ್ನು  ಭಾರತದಿಂದ ತರಿಸಿಕೊಳ್ಳಲು ಆರ್ಡರ್​ ನೀಡಿದೆ. ಕೃಷಿ ಭೂಮಿಯಲ್ಲಿ ವಿಷವನ್ನು ಬಳಸಲು ಅಲ್ಲಿನ ಫೆಡರಲ್ ಸರ್ಕಾರದ ನಿಯಂತ್ರಕ ಇನ್ನೂ ತುರ್ತು ಬಳಕೆ ಅರ್ಜಿಗಳನ್ನು ಅನುಮೋದಿಸಿಲ್ಲ. ಈ ವಿಷ ಇಲಿಗಳನ್ನು ಮಾತ್ರವಲ್ಲದೆ ಅವುಗಳನ್ನು ತಿನ್ನುವ ಪ್ರಾಣಿಗಳನ್ನೂ ಕೊಲ್ಲುತ್ತದೆ ಎಂದು ವಿಮರ್ಶಕರು ಭಯಪಡುತ್ತಿದ್ದಾರೆ.

The post ಆಸ್ಪ್ರೇಲಿಯಾದಲ್ಲಿ ‘ಇಲಿ’ ಹಾವಳಿಗೆ ₹5000 ಕೋಟಿ ಬೆಳೆ ನಾಶ, ಪಾಷಾಣಕ್ಕಾಗಿ ಭಾರತಕ್ಕೆ ಆರ್ಡರ್​ appeared first on News First Kannada.

Source: newsfirstlive.com

Source link