– ಸಿ.ಟಿ.ರವಿ ಕೊಟ್ಟ ಅಕ್ಕಿ ದಾನದ್ದೋ, ಸೊಸೈಟಿಯದ್ದೋ?

ಚಿಕ್ಕಮಗಳೂರು: ನಿಮಗೆ ರೇಷನ್ ಕಿಟ್ ಕೊಟ್ಟಿದ್ದೇವೆ. ಹಾಗಾಗಿ ಈಗ ಪಡಿತರ ಕೊಡುವುದಿಲ್ಲ ಎಂದ ಸೊಸೈಟಿ ವಿರುದ್ಧ ಹಳ್ಳಿಗರು ಅಲ್ಲೇ ಧರಣಿ ಕೂತು ಆಕ್ರೋಶ ವ್ಯಕ್ತಪಡಿಸಿರೋ ಘಟನೆ ತಾಲೂಕಿನ ಕಳಸಾಪುರ ಸಮೀಪದ ಕಳ್ಳಿಕೊಪ್ಪಲು ಗ್ರಾಮದಲ್ಲಿ ನಡೆದಿದೆ.

ಕಳಸಾಪುರ ಸಮೀಪದ ಕಳ್ಳಿಕೊಪ್ಪಲು ಗ್ರಾಮದಲ್ಲಿ ಸಿಳ್ಳೆಕ್ಯಾತ ಸಮುದಾಯಕ್ಕೆ ಸೇರಿದ ಕುಟುಂಬಗಳೇ ಹೆಚ್ಚಿವೆ. ಬೀದಿ-ಬೀದಿ, ಊರೂರಲ್ಲಿ ಹೇರ್‍ಪಿನ್, ಕೂದಲು ಸೇರಿದಂತೆ ವಿವಿಧ ವಸ್ತುಗಳನ್ನು ಮಾರಿ ಜೀವನ ಸಾಗಿಸುವ ಕುಟುಂಬಗಳಿವು. ಈ ಗ್ರಾಮದ 47 ಕುಟುಂಬಗಳ 75 ಜನರಿಗೆ ಕೊರೊನಾ ಪಾಸಿಟಿವ್ ಬಂದಿತ್ತು. ಆಗ ಇಡೀ ತಾಲೂಕು ಆಡಳಿತ ಸ್ಥಳಕ್ಕೆ ಹೋಗಿ ನಿಮಗೆ ಬೇಕಾದ ಸೌಲಭ್ಯ ನೀಡತ್ತೇವೆ. ಯಾರೂ ಮನೆಯಿಂದ ಹೊರಬರಬೇಡಿ ಎಂದು ಮನವಿ ಮಾಡಿ ಎಲ್ಲರಿಗೂ ತಾಲೂಕು ಆಡಳಿತದಿಂದ ರೇಷನ್ ಕಿಟ್ ಕೊಟ್ಟಿದ್ದರು. 10 ಕೆ.ಜಿ. ಅಕ್ಕಿ, ಎಣ್ಣೆ, ಬೆಳೆ, ಉಪ್ಪು ಸೇರಿದಂತೆ ವಿವಿಧ ಆಹಾರ ಸಾಮಾಗ್ರಿಗಳನ್ನು ಒಳಗೊಂಡ ಕಿಟ್ ಕೊಟ್ಟಿದ್ದರು. ಅಲ್ಲಿನ ಜನ ಮನೆಯಿಂದ ಹೊರಬರದೆ ಮನೆಯಲ್ಲೇ ಇದ್ದರು.

ಈಗ ಅಲ್ಲಿನ ಸೊಸೈಟಿ ಆ ಗ್ರಾಮದ ಜನರಿಗೆ ರೇಷನ್ ಕೊಡದೆ ಸಾತಾಯಿಸುತ್ತಿದ್ದು, ಪಡಿತರ ಕೊಡಲು ಮೀನಮೇಷ ಎಣಿಸುತ್ತಿವೆ. ನಿಮಗೆ ಅಂದೇ ಅಕ್ಕಿ ಕೊಟ್ಟಿದ್ದೇವೆ. ಈಗ ಮತ್ತೆ ಕೊಡುವುದಿಲ್ಲ ಎಂದು ಹೇಳುತ್ತಿದ್ದಾರಂತೆ. ಇದು ಹಳ್ಳಿಗರ ಆಕ್ರೋಶಕ್ಕೆ ಕಾರಣವಾಗಿದೆ. ನಮಗೆ 10 ಕೆ.ಜಿ. ಅಕ್ಕಿಯಷ್ಟೆ ಕೊಟ್ಟಿರೋದು. ಅದು ನಾವು ಕೆಲಸಕ್ಕೆ ಹೋಗದೆ ಮನೆಯಲ್ಲೇ ಇರಲು ದಾನವಾಗಿ ಕೊಟ್ಟಿದ್ದು. ನಮ್ಮ ಅಕ್ಕಿ ನಮಗೆ ಕೊಡಿ ಎಂದು ಸ್ಥಳಿಯರು ಸೊಸೈಟಿಯವರಿಗೆ ದುಂಬಾಲು ಬಿದ್ದಿದ್ದಾರೆ. ಆದರೆ ಸೊಸೈಟಿಯವರು ರೇಷನ್ ಕೊಡದ ಕಾರಣ ಸ್ಥಳಿಯರು ಅಲ್ಲೇ ಧರಣಿ ಕೂತು ಆಕ್ರೋಶ ಹೊರಹಾಕಿ ತಾಲೂಕು ಆಡಳಿತದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

ದಾನ ಕೊಡುವಂತೆ ಸಿ.ಟಿ.ರವಿಯವರೇ ಕಿಟ್ ಕೊಟ್ಟಿದ್ದು, ನಮ್ಮ ಅಕ್ಕಿಯನ್ನ ನಮಗೆ ಕೊಡಲು ದಾನದ ಹೆಸರೇಕೆ ಎಂದು ಸ್ಥಳೀಯರು ಶಾಸಕರ ವಿರುದ್ಧವೂ ಅಸಮಾಧಾನ ಹೊರಹಾಕಿದ್ದಾರೆ. ಸೊಸೈಟಿಯವರು ಏಕೆ ಪಡಿತರ ಕೊಡುವುದಿಲ್ಲ ಎಂದು ಕೇಳುತ್ತಿದ್ದಾರೆ. ತಾಲೂಕು ಆಡಳಿತ ಕಿಟ್ ಮೂಲಕ ಕೊಟ್ಟ ಅಕ್ಕಿ ದಾನಿಗಳದ್ದೋ ಅಥವಾ ಸೊಸೈಟಿಯದ್ದೋ ಅನ್ನೋದು ಸ್ಪಷ್ಟವಾಗಬೇಕಿದೆ. ಸೊಸೈಟಿಯವರೇ ಗೋಲ್ಮಾಲ್ ಮಾಡುತ್ತಿದ್ದಾರೋ ಅಥವಾ ತಾಲೂಕು ಆಡಳಿತವೇ ಸೊಸೈಟಿ ಅಕ್ಕಿ ಕೊಟ್ಟಿತ್ತೋ ಅನ್ನೋದು ತನಿಖೆಯ ಮೂಲಕ ಬೆಳಕಿಗೆ ಬರಬೇಕಿದೆ.

The post ಆಹಾರ ಕಿಟ್ ಕೊಟ್ಟಿದ್ದೇವೆ ರೇಷನ್ ಇಲ್ಲ- ಸೊಸೈಟಿ ಮುಂದೆ ಧರಣಿ ಕೂತ ಹಳ್ಳಿಗರು appeared first on Public TV.

Source: publictv.in

Source link