ಆಹೋರಾತ್ರಿ ಧರಣಿಗೆ ಸರ್ಕಾರದ ಊಟ ಬೇಡ ಎಂದ ಕಾಂಗ್ರೆಸ್: ಅಶೋಕ್ ಟೀಕೆಗೆ ಕಾಂಗ್ರೆಸ್ ಸೆಡ್ಡು | Congress Decides to Pay for Meals Supplied from Govt KPCC to Give Food for Agitating Legislators


ಆಹೋರಾತ್ರಿ ಧರಣಿಗೆ ಸರ್ಕಾರದ ಊಟ ಬೇಡ ಎಂದ ಕಾಂಗ್ರೆಸ್: ಅಶೋಕ್ ಟೀಕೆಗೆ ಕಾಂಗ್ರೆಸ್ ಸೆಡ್ಡು

ಸದನದಲ್ಲೇ ರಾತ್ರಿ ಕಳೆದ ಕಾಂಗ್ರೆಸ್ ನಾಯಕರು

ಬೆಂಗಳೂರು: ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ನೀಡಿರುವ ಹೇಳಿಕೆ ವಿರೋಧಿಸಿ ವಿಧಾನಸೌಧದಲ್ಲಿ ಅಹೋರಾತ್ರಿ ಧರಣಿ ನಡೆಸುತ್ತಿರುವ ಕಾಂಗ್ರೆಸ್ ಪ್ರತಿಭಟನೆ ವೇಳೆ ಸರ್ಕಾರದ ವತಿಯಿಂದ ಪೂರೈಸುತ್ತಿರುವ ಊಟವನ್ನು ನಿರಾಕರಿಸಿ, ಪಕ್ಷದ ವತಿಯಿಂದಲೇ ಶಾಸಕರಿಗೆ ಊಟ ಕೊಡಲು ಕಾಂಗ್ರೆಸ್ ನಿರ್ಧರಿಸಿದೆ. ಧರಣಿ ಕುರಿತು ಕಂದಾಯ ಇಲಾಖೆ ಸಚಿವ ಆರ್.ಅಶೋಕ್ ನೀಡಿದ್ದ ಹೇಳಿಕೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಈ ನಿರ್ಧಾರ ತೆಗೆದುಕೊಂಡಿದೆ. ಸಚಿವಾಲಯದ ಹಣವನ್ನು ಬಳಸಿ ಪ್ರತಿಭಟನಾನಿರತರಿಗೆ ಊಟ ನೀಡಲಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಧರಣಿ ನಿರತರಿಗೆ ಕಂದಾಯ ಸಚಿವ ಆರ್.ಅಶೋಕ್ ಟಾಂಗ್ ನೀಡಿದ್ದರು. ‘ಸರ್ಕಾರದ ಹಣದಿಂದ ಊಟದ ವ್ಯವಸ್ಥೆ ಮಾಡಲಾಗಿದೆ. ಊಟ ಮಾಡ್ಕೊಂಡು ಮಲ್ಕೊಂಡಿದ್ದಾರೆ’ ಎಂದು ಅಶೋಕ್ ವ್ಯಂಗ್ಯವಾಡಿದ್ದ ಹಿನ್ನೆಲೆಯಲ್ಲಿ ನಿನ್ನೆ ಮತ್ತು ಇವತ್ತು ಕೆಪಿಸಿಸಿ ವತಿಯಿಂದಲೇ ಊಟದ ವ್ಯವಸ್ಥೆ ಮಾಡಲಾಗಿತ್ತು. ಮೊದಲೆರೆಡು ದಿನ ಸರ್ಕಾರ ವ್ಯವಸ್ಥೆ ಮಾಡಿದ್ದ ಊಟದ ಹಣವನ್ನೂ ಮರುಪಾವತಿಸಲು ಕೆಪಿಸಿಸಿ ನಿರ್ಧರಿಸಿದೆ.

ವಿಧಾನಸಭೆಯಲ್ಲಿ ಕಾಂಗ್ರೆಸ್ ತಂತ್ರ: ಅಶೋಕ್ ಟೀಕೆ

ಉಡುಪಿಯಲ್ಲಿ ಕಾಂಗ್ರೆಸ್ ನಾಯಕರ ವರ್ತನೆಯನ್ನು ಟೀಕಿಸಿದ್ದ ಕಂದಾಯ ಸಚಿವ ಆರ್.ಅಶೋಕ್, ಕಾಂಗ್ರೆಸ್ ನಾಯಕರಾದ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರ ಒಡಕು ಬೀದಿಯಲ್ಲಿದೆ. ಹಿಜಾಬ್ ವಿವಾದ ಚರ್ಚೆಗೆ ಬರದಂತೆ ಮಾಡಲು ವಿಧಾನಸಭೆಯಲ್ಲಿ ತಂತ್ರ ಮಾಡುತ್ತಿದ್ದಾರೆ. ಹಿಜಾಬ್ ವಿವಾದದ ಹಿಂದೆ ಐಸಿಸ್ ಸಂಘಟನೆ ಕೆಲಸ ಮಾಡುತ್ತಿದೆ. ಒಂದು ಸಂಸ್ಥೆಯ ಹಿಜಾಬ್ ವಿಚಾರ ಪ್ರಪಂಚಕ್ಕೆ ಹಬ್ಬಿದ್ದು ಹೇಗೆ? ಆರು ವಿದ್ಯಾರ್ಥಿಗಳೇ ಇಷ್ಟೆಲ್ಲಾ ಮಾಡುವುದಕ್ಕೆ ಸಾಧ್ಯವೇ? ಕೆಲವರು ಟಿಸಿ ಕೇಳ್ತಿದ್ದಾರೆ, ಕೆಲವರು ಶಾಲೆಗೆ ಬರಲ್ಲ ಅಂತಿದ್ದಾರೆ. ವಿದ್ಯೆ ಮುಖ್ಯ, ಧರ್ಮ ಮುಖ್ಯ ಅಲ್ಲ ಎಂದು ವಿನಂತಿಸುವೆ. ವಿದ್ಯೆ ಇದ್ದರೆ ಧರ್ಮ ಎಲ್ಲವೂ ನಿಮ್ಮ ಹತ್ತಿರ ಓಡಿಬರುತ್ತದೆ. ದೇಶ ದೊಡ್ಡದು, ಧರ್ಮ ದೊಡ್ಡದಲ್ಲ ಅರ್ಥ ಮಾಡಿಕೊಳ್ಳಿ. ಕಾಂಗ್ರೆಸ್​ ಪಕ್ಷ ನಂಬಿಕೊಂಡು ಹೋದರೆ ದೇವರೇ ಗತಿ ಎಂದು ಹೇಳಿದ್ದರು.

ಈಶ್ವರಪ್ಪ ವಜಾಕ್ಕೆ ಪಟ್ಟು ಹಿಡಿದಿರುವ ಕಾಂಗ್ರೆಸ್​ಗೆ ತಿರುಗೇಟು ನೀಡಿದ ಅಶೋಕ್, ಕಾಂಗ್ರೆಸ್​ ಪಕ್ಷದ ಎಲ್ಲರೂ ಬಿಜೆಪಿಗೆ ಸೇರಿಬಿಡಿ. ಆಮೇಲೆ ನೀವು ಬಿಜೆಪಿಗೆ ಸಲಹೆ ಕೊಡಿ ಎಂದು ಸಿಎಂ, ಬಿಜೆಪಿಗೆ ಸ್ವಾಭಿಮಾನವಿಲ್ಲ ಎಂದಿದ್ದ ಡಿಕೆಶಿಗೆ ಟಾಂಗ್ ಕೊಟ್ಟರು.

TV9 Kannada


Leave a Reply

Your email address will not be published. Required fields are marked *