ಬೆಂಗಳೂರು: ರಾಜ್ಯದಲ್ಲಿ ಕೊರೊನಾ ವೈರಸ್‌ನ ಅಟ್ಟಹಾಸ ಏರುತ್ತಲೇ ಇದೆ. ಕೊರೊನಾದಿಂದ ತನ್ನ ಸಂಬಂಧಿಯೊಬ್ಬರನ್ನ ಕಳೆದುಕೊಂಡ ಮಹಿಳೆ, ಇಂದು ಕೆ.ಸಿ.ಜನರಲ್ ಆಸ್ಪತ್ರೆಯ ಮುಂದೆ ಉಪ-ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥ್‌ನಾರಾಯಣ್​ರನ್ನ ಪ್ರಶ್ನಿಸಿ ಕೂಗಾಡಿದರು.

ತನ್ನ ಸಂಬಂಧಿಯ ಆರೋಗ್ಯ ಸ್ಥಿತಿ ಏರುಪೇರಾದಾಗ 108 ಆ್ಯಂಬುಲೆನ್ಸ್​​ಗೆ ಮಹಿಳೆ ಕರೆ ಮಾಡಿದ್ದರು. ಆದ್ರೆ ಸಮಯಕ್ಕೆ ಸರಿಯಾಗಿ ಆ್ಯಂಬುಲೆನ್ಸ್​ ಬಾರದ ಕಾರಣ ಸಂಬಂಧಿ ಕೊನೆಯುಸಿರೆಳೆದಿದ್ದಾರೆ. ಮೃತದೇಹದೊಂದಿಗೆ ಖಾಸಗಿ ವಾಹನದಲ್ಲಿ ಮಹಿಳೆ ಕೆ.ಸಿ.ಜನರಲ್ ಆಸ್ಪತ್ರೆಗೆ ಬಂದಿದ್ದರು. ಆ್ಯಂಬುಲೆನ್ಸ್ ಇಲ್ಲದೇ ತಮ್ಮ ಕುಟುಂಬದವರು ಕೊನೆಯುಸಿರೆಳೆದಿದ್ದಾರೆ ಎಂದು ಆಸ್ಪತ್ರೆ ಆವರಣದಲ್ಲಿ ಚೀರಾಡುತ್ತಿದ್ದರು. ಈ ವೇಳೆ ಸ್ಥಳೀಯರು ಮಹಿಳೆಗೆ, ಉಪ-ಮುಖ್ಯಮಂತ್ರಿ ಅಲ್ಲೇ ಇದ್ದಾರೆ ಎಂಬುದನ್ನು ತಿಳಿಸಿದರು.

ಡಿಸಿಎಂ ಅಶ್ವತ್ಥ್​​ ನಾರಾಯಣ್​ರನ್ನ ಕಂಡು ನೇರವಾಗಿ ಅವರನ್ನೇ ಪ್ರಶ್ನಿಸಿದ ಮಹಿಳೆ, ನಿಮಗಾದ್ರೆ, ಹಿಂದೊಂದು ಮುಂದೊಂದು ವಾಹನ ಇರುತ್ತೆ. ನಾವು ಅಂಬ್ಯುಲೆನ್ಸ್ ಇಲ್ಲದೇ ಪರದಾಡಿದ್ದೇವೆ. ಇಂದು ನಮ್ಮ ಸಂಬಂಧಿ ಮೃತಪಟ್ಟಿದ್ದಾರೆ ಎಂದು ಚೀರಾಡಿದರು. ಆಗ ಅಶ್ವತ್ಥ್‌ನಾರಾಯಣ್ ಮಹಿಳೆಯನ್ನು ಸಮಾಧಾನಪಡಿಸಲು ಮುಂದಾದರು. ಬಳಿಕ ಮೃತದೇಹಕ್ಕೆ ಅಂಬ್ಯುಲೆನ್ಸ್ ವ್ಯವಸ್ಥೆ ಕಲ್ಪಿಸಿದರು. ಅಂಬ್ಯುಲೆನ್ಸ್ ಸಮಸ್ಯೆಯನ್ನು ನೀಗಿಸುವ ಭರವಸೆ ಕೊಟ್ಟರು.

ಇದಾದ ಬೆನ್ನಲ್ಲೇ ಮತ್ತಷ್ಟು ಮಹಿಳೆಯರು ಒಬ್ಬೊಬ್ಬರಾಗಿ ತಮ್ಮ ಸಮಸ್ಯೆಗಳನ್ನು ಡಿಸಿಎಂ ಮುಂದೆ ಹೇಳಿಕೊಂಡರು. ಒಂದೇ ಬೆಡ್ ಮೇಲೆ ಇಬ್ಬರು ಪೇಷಂಟ್​ಗಳನ್ನ ಮಲಗಿಸಿದ್ದಾರೆ ಎಂದು ಒಬ್ಬರು ಅಳಲು ತೋಡಿಕೊಂಡರೆ, ಮತ್ತೊಬ್ಬ ಮಹಿಳೆ ಡಿಸಿಎಂ ಕಾಲಿಗೆ ಬಿದ್ದು ಬೆಡ್ ಕೊಡಿಸುವಂತೆ ಮನವಿ ಮಾಡಿದರು. ಅದೇ ಆಸ್ಪತ್ರೆಯಲ್ಲಿ ಬೆಡ್ ವ್ಯವಸ್ಥೆ ಮಾಡುವುದಾಗಿ ಅಶ್ವತ್ಥ್​​​ ನಾರಾಯಣ್ ಭರವಸೆ ನೀಡಿದ್ರು.

The post ಆ್ಯಂಬುಲೆನ್ಸ್ ಸಿಗದೆ ಸಂಬಂಧಿ ಸಾವು, ಮತ್ತೊಬ್ಬರು ಬೆಡ್​ ಸಿಗದೆ ಕಂಗಾಲು: ಡಿಸಿಎಂ ಮುಂದೆ ಮಹಿಳೆಯರ ಅಳಲು appeared first on News First Kannada.

Source: News First Kannada
Read More