ಟೀಮ್ ಇಂಡಿಯಾ ವಿಶ್ವಕಪ್ ಅಧ್ಯಾಯ ಮುಗಿದ ವಿಷ್ಯ. ಇದೀಗ ಮೆನ್ ಇನ್ ಬ್ಲ್ಯೂ, ನ್ಯೂಜಿಲೆಂಡ್ ಸರಣಿಯೊಂದಿಗೆ ಹೊಸ ಇನ್ನಿಂಗ್ಸ್ ಶುರುಮಾಡಲು ಸನ್ನದ್ಧವಾಗಿದೆ. ಆದ್ರೆ, ಈ ನಡುವೆ ಟೀಮ್ ಇಂಡಿಯಾ ಆಟಗಾರರಿಗಿದ್ದ ಆತಂಕ ದೂರ ಮಾಡುವಂತ ಶುಭಸುದ್ದಿಯೂ ಸಿಕ್ಕಿದೆ.
ಟೀಮ್ ಇಂಡಿಯಾದಲ್ಲಿ ಹೊಸ ಯುಗಾರಂಭವಾಗಿದೆ. ನೂತ ಕೋಚ್ ರಾಹುಲ್ ದ್ರಾವಿಡ್, ಕ್ಯಾಪ್ಟನ್ ರೋಹಿತ್ ಶರ್ಮಾ ನೇಮಕದೊಂದಿಗೆ, ಹೊಸ ಅಧ್ಯಾಯ ಶುರುವಾಗಲಿದೆ. ಹೌದು..! ದ್ರಾವಿಡ್-ರೋಹಿತ್ ಇನ್ನಿಂಗ್ಸ್ ಆರಂಭಕ್ಕೂ ಮುನ್ನವೇ, ಬೆಟ್ಟದಷ್ಟು ನಿರೀಕ್ಷೆಗಳೂ ಹುಟ್ಟಿಕೊಂಡಿವೆ. ಅದ್ರಲ್ಲೂ ಟೀಮ್ ಇಂಡಿಯಾದಲ್ಲಿ ಕೇಳಿ ಬರುತ್ತಿದ್ದ ಆ ಒಂದು ಸಮಸ್ಯೆಗೆ, ಬ್ರೇಕ್ ಬೀಳೋ ಸಾಧ್ಯತೆ ಹೆಚ್ಚಿದೆ.
ಟಿ20 ವಿಶ್ವಕಪ್ನಲ್ಲಿ ಹಿನ್ನಡೆ ಬೆನ್ನಲ್ಲೇ, ಬಯೋ ಬಬಲ್ ಟ್ರಬಲ್ ಬಗ್ಗೆ ಭಾರೀ ಚರ್ಚೆಗಳೇ ನಡೀತಿವೆ. ಸ್ವತಃ ನಿರ್ಗಮಿತ ಕೋಚ್ಗಳೇ ದಣಿವಿಲ್ಲದ ಕ್ರಿಕೆಟ್ ಆಟದಿಂದಲೇ ಆಟಗಾರರ ಆಟದ ಮೇಲೆ ಪರಿಣಾಮ ಬೀರಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಅಷ್ಟೇ ಅಲ್ಲ.. ಸ್ವತಃ ಆಟಗಾರರರೂ, ವಿಶ್ರಾಂತಿ ಬಗ್ಗೆ ಮಾತನಾಡಿದ್ದಾರೆ. ಆದ್ರೆ ಈ ಬಗ್ಗೆ ನೂತನ ಕೋಚ್ ರಾಹುಲ್ ದ್ರಾವಿಡ್, ಕ್ರಿಕೆಟ್ ಸಲಹಾ ಸಮಿತಿ ಮುಂದೆ ವರ್ಕ್ಲೋಡ್ ಮ್ಯಾನೇಜ್ಮೆಂಟ್ ವಿಚಾರವನ್ನ ಮಂಡಿಸಿದ್ದಾರೆ ಎನ್ನಲಾಗಿದೆ.
ವರ್ಕ್ ಲೋಡ್ ಮ್ಯಾನೇಜ್ಗೆ ಮುಂದಾದ ಬಿಸಿಸಿಐ..!
ಕಳೆದಾರು ತಿಂಗಳಿಂದ ಬಯೋ ಬಬಲ್, ಬಿಡುವಿಲ್ಲದ ಕ್ರಿಕೆಟ್ನಿಂದಾಗಿ ಕೆಲ ಆಟಗಾರರು ದಣಿದಿದ್ದಾರೆ. ಇದು ಟಿ20 ವಿಶ್ವಕಪ್ ಪ್ರದರ್ಶನದ ಮೇಲೂ ಭಾರೀ ಪರಿಣಾಮ ಬೀರಿದೆ. ಇದನ್ನೆಲ್ಲಾ ಅರಿತಿರುವ ಬಿಸಿಸಿಐ, ಈಗ ಆಟಗಾರರ ರೋಟೆಷನ್ಗೆ ಮುಂದಾಗಿದೆ. ಆಟಗಾರನ ವರ್ಕ್ ಲೋಡ್ ಆಧಾರದ ಮೇಲೆ, ವಿಶ್ರಾಂತಿ ನೀಡುವಂತ ಪ್ರಕ್ರಿಯೆಯನ್ನ ಜಾರಿ ಮಾಡಲಿದೆ. ಅಷ್ಟೇ ಅಲ್ಲ.. ಇನ್ಮುಂದೆ ತಂಡದ ಆಯ್ಕೆ ಮುಂದೆ ಆಟಗಾರರ ವರ್ಕ್ಲೋಡ್ ಗಮನಿಸಿಯೇ ತಂಡವನ್ನೂ, ಆಯ್ಕೆ ಮಾಡಲಾಗುತ್ತೆ.
ಸ್ಥಾನ ಕಳೆದುಕೊಳ್ಳುವ ಬಗ್ಗೆ ಆಟಗಾರರಿಗೆ ಬೇಕಿಲ್ಲ ಆತಂಕ..!
ಎಲ್ಲಿ ವಿರಾಮ ತೆಗೆದುಕೊಂಡರೆ ತಮ್ಮ ಸ್ಥಾನಕ್ಕೆ ಕುತ್ತು ಬರುತ್ತೆಂಬ ಆತಂಕ ಆಟಗಾರರಲ್ಲಿ ಕಾಡುತ್ತಿತ್ತು. ಯಾಕಂದ್ರೆ, ಖಾಯಂ ಆಟಗಾರನ ಸ್ಥಾನದಲ್ಲಿ ಕಣಕ್ಕಿಳಿಯೋ ಆಟಗಾರ ಉತ್ತಮ ಪ್ರದರ್ಶನ ನೀಡಿದರೆ, ಸ್ಥಾನ ಕಳೆದುಕೊಳ್ಳುವ ಭೀತಿಗೆ ಸಿಲುಕುತ್ತಾರೆ.. ಇದಕ್ಕಾಗಿಯೇ ಕೆಲ ಆಟಗಾರರು ದಣಿದರೂ, ವಿಶ್ರಾಂತಿ ಮೊರೆ ಹೋಗಲು ಮುಂದಾಗ್ತಿರಲಿಲ್ಲ.. ಆದ್ರೀಗ ಇಂಥಹ ಆತಂಕಕ್ಕೆ ಬಿಸಿಸಿಐ ತೆರೆ ಎಳೆದಿದೆ. ವಿಶ್ರಾಂತಿಯಿಂದ ರಿಟರ್ನ್ ತಂಡಕ್ಕಾಗಮಿಸಿದ ಬಳಿಕ, ಆ ಆಟಗಾರನ ಸ್ಥಾನ ಆತನಿಗಾಗಿ ತೆರೆದೇ ಇರುತ್ತೆ… ಇದನ್ನ ಸ್ವತಃ ಬಿಸಿಸಿಐ ಮೂಲಗಳೇ ಸ್ಪಷ್ಟಪಡಿಸಿವೆ.
‘ಎಷ್ಟು ಕ್ರಿಕೆಟ್ ಆಡಲಾಗುತ್ತೆ ಎಂಬ ಆಧಾರದ ಮೇಲೆ ಯಾವ ಆಟಗಾರನಿಗೆ ವಿಶ್ರಾಂತಿ ನೀಡಬೇಕೆಂದು ಬಿಸಿಸಿಐ ನಿರ್ಧರಿಸುತ್ತದೆ. ಆಯಾಸದ ಸಮಸ್ಯೆ ಬಗ್ಗೆ ನಮಗೆ ತಿಳಿದಿದೆ. ಬದಲಿ ಆಟಗಾರ ಉತ್ತಮ ಪ್ರದರ್ಶನ ನೀಡಿದರೂ, ವಿಶ್ರಾಂತಿ ಪಡೆದಿರುವ ಆಟಗಾರ ಮತ್ತೆ ತಂಡದಲ್ಲಿ ಸ್ಥಾನ ಪಡೆಯುತ್ತಾನೆ.’
ಬಿಸಿಸಿಐ ಮೂಲಗಳು
ಈ ವರ್ಕ್ ಲೋಡ್ ಮ್ಯಾನೇಜ್ಮೆಂಟ್ ದಣಿದ ಆಟಗಾರರಿಗೆ ಮಾತ್ರವೇ ಲಾಭವಾಗಲ್ಲ. ಬೆಂಚ್ ಕಾಯ್ತಿದ್ದ ಆಟಗಾರರ ಅವಕಾಶಕ್ಕೂ, ಪ್ರತಿಭೆಗಳ ಅನಾವಣರಣಕ್ಕೂ ನೆರವಾಗೋದ್ರಲ್ಲಿ ಅನುಮಾನ ಇಲ್ಲ. ಒಟ್ನಲ್ಲಿ ಆಟಗಾರರ ಮಾನಸಿಕ ಆರೋಗ್ಯ ದೃಷ್ಟಿ, ತಂಡದ ಸಮತೋಲನ ಕಾಯ್ದುಕೊಳ್ಳುವ ನಿಟ್ಟಿನಲ್ಲಿ, ವರ್ಕ್ಲೋಡ್ ಮ್ಯಾನೇಜ್ ಮಾಡೋದು ಟೀಮ್ ಇಂಡಿಯಾಕ್ಕೆ ಲಾಭವೇ ಆಗಲಿದೆ.