‘ಇಂಥ ಕೆಲಸ ಮಾಡ್ಬೇಡಿ’: ಎಲ್ಲರ ಎದುರು ಕರಣ್​ ಜೋಹರ್​ಗೆ ಅನಿಲ್​ ಕಪೂರ್ ವಾರ್ನಿಂಗ್​; ವಿಡಿಯೋ ವೈರಲ್​​ | Anil Kapoor asks Karan Johar don’t touch his feet in JugJugg Jeeyo trailer launch event


‘ಇಂಥ ಕೆಲಸ ಮಾಡ್ಬೇಡಿ’: ಎಲ್ಲರ ಎದುರು ಕರಣ್​ ಜೋಹರ್​ಗೆ ಅನಿಲ್​ ಕಪೂರ್ ವಾರ್ನಿಂಗ್​; ವಿಡಿಯೋ ವೈರಲ್​​

ಅನಿಲ್ ಕಪೂರ್, ಕರಣ್ ಜೋಹರ್

JugJugg Jeeyo Trailer: ಕರಣ್​ ಜೋಹರ್​ಗೆ ಅನಿಲ್​ ಕಪೂರ್​ ಅವರು ವಾರ್ನಿಂಗ್​ ನೀಡಿದ ವಿಡಿಯೋ ವೈರಲ್​ ಆಗಿದೆ. ಅದಕ್ಕೆ ನೆಟ್ಟಿಗರು ಬಗೆಬಗೆಯಲ್ಲಿ ಕಮೆಂಟ್​ ಮಾಡುತ್ತಿದ್ದಾರೆ.

ಕರಣ್​ ಜೋಹರ್ (Karan Johar) ಅವರು ಒಂದಿಲ್ಲೊಂದು ಕಾರಣಕ್ಕೆ ಸುದ್ದಿ ಆಗುತ್ತಲೇ ಇರುತ್ತಾರೆ. ನಿರ್ದೇಶಕನಾಗಿ ಹಲವು ಸೂಪರ್​ ಹಿಟ್​ ಸಿನಿಮಾಗಳನ್ನು ಅವರು ನೀಡಿದ್ದಾರೆ. ನಿರ್ಮಾಪಕನಾಗಿ ಅನೇಕರಿಗೆ ಅವಕಾಶ ನೀಡಿದ್ದಾರೆ. ಕಿರುತೆರೆ ಕಾರ್ಯಕ್ರಮಗಳ ನಿರೂಪಣೆಯಲ್ಲಿ ಅವರು ತಮ್ಮದೇ ಛಾಪು ಮೂಡಿಸಿದ್ದಾರೆ. ಅವರು ಮಾಡುವ ಎಲ್ಲ ಕೆಲಸಗಳು ಸುದ್ದಿ ಆಗುತ್ತವೆ. ಬಾಲಿವುಡ್​ ಸೆಲೆಬ್ರಿಟಿಗಳ ವಲಯದಲ್ಲಿ ಬಹುಮುಖ ಪ್ರತಿಭೆಯಾಗಿ ಗುರುತಿಸಿಕೊಂಡಿರುವ ಕರಣ್​ ಜೋಹರ್​ ಅವರು ಸಿನಿಮಾ ಕಾರ್ಯಕ್ರಮಗಳ ನಿರೂಪಣೆಯನ್ನೂ ಮಾಡುತ್ತಾರೆ. ಭಾನುವಾರ (ಮೇ 22) ಅವರು ‘ಜುಗ್​ ಜುಗ್​ ಜೀಯೋ’ (JugJugg Jeeyo) ಸಿನಿಮಾದ ಟ್ರೇಲರ್​ ಲಾಂಚ್​ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಈ ವೇಳೆ ಒಂದು ವಿಲಕ್ಷಣ ಘಟನೆ ನಡೆದಿದೆ. ವೇದಿಕೆ ಮೇಲೆ ಕರಣ್​ ಜೋಹರ್​ ನಡೆದುಕೊಂಡ ರೀತಿಯನ್ನು ನಟ ಅನಿಲ್​ ಕಪೂರ್​ (Anil Kapoor) ಖಂಡಿಸಿದ್ದಾರೆ. ಅಲ್ಲದೇ ಇನ್ಮುಂದೆ ಈ ರೀತಿ ಮಾಡಬಾರದು ಎಂದು ಕೂಡ ಅವರು ವಾರ್ನಿಂಗ್​ ನೀಡಿದ್ದಾರೆ. ಎಲ್ಲರ ಎದುರು ನಡೆದ ಈ ಘಟನೆಯ ವಿಡಿಯೋ ಕೂಡ ವೈರಲ್​ ಆಗಿದೆ. ಹಾಗಾದರೆ ಕರಣ್​ ಜೋಹರ್​​ ಮಾಡಿದ ತಪ್ಪೇನು? ಇಲ್ಲಿದೆ ಸಂಪೂರ್ಣ ವಿವರ.

‘ಜುಗ್​ ಜುಗ್​ ಜೀಯೋ’ ಸಿನಿಮಾದಲ್ಲಿ ಹಲವು ಕಲಾವಿದರು ನಟಿಸಿದ್ದಾರೆ. ವರುಣ್​ ಧವನ್​, ನೀತು ಕಪೂರ್​, ಕಿಯಾರಾ ಅಡ್ವಾಣಿ, ಅನಿಲ್​ ಕಪೂರ್​ ಮುಂತಾದವರು ಬಣ್ಣ ಹಚ್ಚಿದ್ದಾರೆ. ಟ್ರೇಲರ್​ ಬಿಡುಗಡೆ ಸಮಾರಂಭದಲ್ಲಿ ಒಬ್ಬೊಬ್ಬರನ್ನೇ ವೇದಿಕೆಗೆ ಕರೆದು ಮಾತನಾಡಿಸಲಾಯಿತು. ಅನಿಲ್​ ಕಪೂರ್​ ಅವರು ವೇದಿಕೆ ಹತ್ತುತ್ತಿರುವಾಗ ಅವರ ಕಾಲಿಗೆ ನಮಸ್ಕಾರ ಮಾಡಲು ಕರಣ್​ ಜೋಹರ್​ ಮುಂದಾದರು. ಅದು ಅನಿಲ್​ ಕಪೂರ್​ಗೆ ಹಿಡಿಸಲಿಲ್ಲ!

ಕಾಲಿಗೆ ನಮಸ್ಕಾರ ಮಾಡಲು ಕರಣ್​ ಜೋಹರ್​ ಬಂದಾಗ ಅನಿಲ್​ ಕಪೂರ್ ಒಮ್ಮೆಲೇ ಜಿಗಿದು ಬಿಟ್ಟರು. ಎರಡು ಹೆಜ್ಜೆ ಹಿಂದಕ್ಕೆ ಸರಿದುಕೊಂಡರು. ‘ಈ ರೀತಿ ಮಾಡಬೇಡಿ’ ಎಂದು ಅವರು ನಗುನಗುತ್ತಲೇ ವಾರ್ನಿಂಗ್​ ನೀಡಿದರು. ಈ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿದೆ. ಅಭಿಮಾನಿಗಳು ಬಗೆಬಗೆಯಲ್ಲಿ ಕಮೆಂಟ್​ ಮಾಡುತ್ತಿದ್ದಾರೆ.

ಅನಿಲ್​ ಕಪೂರ್​ ಹಾಗೂ ಕರಣ್​ ಜೋಹರ್​ ನಡುವೆ 16 ವರ್ಷಗಳ ವಯಸ್ಸಿನ ಅಂತರ ಇದೆ. ಅನಿಲ್​ ಕಪೂರ್​ ಅವರಿಗೆ ಈಗ 65 ವರ್ಷ ವಯಸ್ಸು. ಕರಣ್​ ಜೋಹರ್ ಅವರಿಗೆ 49ರ ಪ್ರಾಯ. ಮೇ 25ರಂದು ಅವರು 50ನೇ ವಸಂತಕ್ಕೆ ಕಾಲಿಡಲಿದ್ದಾರೆ. ಈ ಪ್ರಯುಕ್ತ ಭರ್ಜರಿ ಪಾರ್ಟಿ ಮಾಡಲು ಅವರು ನಿರ್ಧರಿಸಿದ್ದಾರೆ ಎಂಬ ಸುದ್ದಿ ಕೇಳಿಬಂದಿದೆ.

ಕರಣ್​ ಜೋಹರ್​ ಬರ್ತ್​ಡೇ ಪಾರ್ಟಿಗೆ ಯಾರಿಗೆಲ್ಲ ಆಹ್ವಾನ?

ಕರಣ್​ ಜೋಹರ್​ ಅವರ ಹುಟ್ಟುಹಬ್ಬದ ಪಾರ್ಟಿಯಲ್ಲಿ ಭಾಗವಹಿಸಲು ಈ ಬಾರಿ ‘ರಾಕಿಂಗ್​ ಸ್ಟಾರ್​’ ಯಶ್​ ಅವರಿಗೂ ಆಹ್ವಾನ ನೀಡಲಾಗುವುದು ಎಂಬ ಸುದ್ದಿ ಹರಡಿದೆ. ಅಲ್ಲದೇ ದಕ್ಷಿಣ ಭಾರತದ ಇನ್ನೂ ಅನೇಕ ಸ್ಟಾರ್​ಗಳನ್ನು ಕರಣ್​ ಜೋಹರ್​ ಆಹ್ವಾನಿಸಲಿದ್ದಾರೆ ಎನ್ನಲಾಗಿದೆ. ಈವರೆಗೂ ಕೇವಲ ಬಾಲಿವುಡ್​ ಮೇಲೆ ಗಮನ ಹರಿಸುತ್ತಿದ್ದ ಕರಣ್​ ಜೋಹರ್​ ಅವರು ಈಗ ದಕ್ಷಿಣ ಭಾರತದ ಚಿತ್ರರಂಗದ ಮೇಲೂ ಒಂದು ಕಣ್ಣಿಟ್ಟಿದ್ದಾರೆ. ಬಾಕ್ಸ್​ ಆಫೀಸ್​ ದೃಷ್ಟಿಯಿಂದ ಈಗ ಕಾಲ ಬದಲಾಗಿದೆ. ಸೌತ್​ ಇಂಡಿಯನ್​ ಸಿನಿಮಾಗಳು ಹಿಂದಿ ಚಿತ್ರಗಳನ್ನು ಮೀರಿಸಿ ಕಲೆಕ್ಷನ್​ ಮಾಡುತ್ತಿವೆ. ಅದಕ್ಕೆ ‘ಕೆಜಿಎಫ್​ 2’, ‘ಪುಷ್ಪ’, ‘ಆರ್​ಆರ್​ಆರ್​’ ಮುಂತಾದ ಸಿನಿಮಾಗಳೇ ಸಾಕ್ಷಿ. ಹಾಗಾಗಿ ದಕ್ಷಿಣ ಭಾರತದ ಸೆಲೆಬ್ರಿಟಿಗಳ ಜೊತೆಗೆ ಕರಣ್​ ಜೋಹರ್​ ಅವರು ಸ್ನೇಹದ ಹಸ್ತ ಚಾಚಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

TV9 Kannada


Leave a Reply

Your email address will not be published. Required fields are marked *