– ಜಿಲ್ಲೆಗಳಲ್ಲಿ ಪ್ರತ್ಯೇಕ ರೂಲ್ಸ್

ಬೆಂಗಳೂರು: ಇಂದಿನಿಂದ ಮತ್ತೆ ಲಾಕ್‍ಡೌನ್ ವಿಸ್ತರಣೆ ಆಗಿದೆ. ಮೇ 10ರಂದು ಘೋಷಣೆ ಆಗಿದ್ದ ಲಾಕ್‍ಡೌನ್ ಇವತ್ತು ಅಂತ್ಯ ಆಗ್ಬೇಕಿತ್ತು. ಆದರೆ ಸೋಂಕಿನ ಪ್ರಮಾಣ ಇನ್ನೂ ಇಳಿಯದೇ ಇರುವ ಕಾರಣ ಮತ್ತೆ 14 ದಿನಗಳ ಲಾಕ್‍ಡೌನ್ ವಿಸ್ತರಿಸಿದೆ ಸರ್ಕಾರ.

ಹೀಗಾಗಿ ಇವತ್ತಿನಿಂದ ಜೂನ್7ರ ಬೆಳಗ್ಗೆ 6 ಗಂಟೆವರೆಗೆ 2ನೇ ಹಂತದ ಲಾಕ್‍ಡೌನ್ ಜಾರಿಯಲ್ಲಿರಲಿದೆ. ಲಾಕ್‍ಡೌನ್ ಸ್ವರೂಪವನ್ನು ನಿರ್ಧರಿಸುವ ಜವಾಬ್ದಾರಿಯನ್ನು ಸರ್ಕಾರ ಆಯಾಯ ಜಿಲ್ಲಾಡಳಿತಕ್ಕೆ ನೀಡಿದ್ದು, ಒಂದೊಂದು ಜಿಲ್ಲೆಯಲ್ಲಿ ಒಂದೊಂದು ರೀತಿಯಲ್ಲಿ ಲಾಕ್‍ಡೌನ್ ಇದೆ.

ವಿಮಾನ ಮತ್ತು ರೈಲುಗಳಲ್ಲಿ ಪ್ರಯಾಣಕ್ಕೆ ಅವಕಾಶ ಇದೆ. ದಿನಸಿ ಖರೀದಿಗೆ ಬೆಳಗ್ಗೆ 10 ಗಂಟೆವರೆಗೆ ಸಮಯ ನೀಡಲಾಗಿದೆಯಾದರೂ ಕೆಲವು ಜಿಲ್ಲಾಡಳಿತಗಳು ವಾರದ ನಿರ್ದಿಷ್ಟ ದಿನವಷ್ಟೇ ಅಗತ್ಯ ವಸ್ತುಗಳ ಖರೀದಿಗೆ ಅನುಮತಿ ನೀಡಿವೆ. ಧಾರವಾಡ ಜಿಲ್ಲೆಯಲ್ಲಿ ಇವತ್ತು ಮಾತ್ರ ದಿನಸಿ ಖರೀದಿಗೆ ಅನುಮತಿಯಿದ್ದು ನಾಳೆಯಿಂದ ಸಂಪೂರ್ಣ ಲಾಕ್‍ಡೌನ್ ಜಾರಿಯಲ್ಲಿರಲಿದೆ.

ಲಾಕ್‍ಡೌನ್ ಬಳಿಕ ರಾಜ್ಯದಲ್ಲಿ ಕೋವಿಡ್ ಸೋಂಕಿತರ ಪ್ರಮಾಣ ಇಳಿಕೆ ಆಗ್ತಿದೆ. ನಿನ್ನೆ ರಾಜ್ಯದಲ್ಲಿ ದಿನದ ಒಟ್ಟು ಸೋಂಕಿನ ಪ್ರಮಾಣ 25,979ಕ್ಕೆ ಇಳಿದಿದ್ದು, ಗುಣಮುಖರಾದ ಸೋಂಕಿತರು 35,573. ಅಂದರೆ ನಿನ್ನೆ ಪತ್ತೆ ಆದ ಸೋಂಕಿತರಿಗಿಂತ 10,406 ಅಧಿಕ ಮಂದಿ ಗುಣಮುಖರಾಗಿದ್ದಾರೆ. ನಿನ್ನೆ ಒಂದೇ ದಿನ ರಾಜ್ಯದಲ್ಲಿ 626 ಮಂದಿ ಸಾವನ್ನಪ್ಪಿದ್ದು ಇದು ಇದುವರೆಗಿನ ದಾಖಲೆಯ ಸಾವು. ಸೋಂಕಿನ ಪ್ರಮಾಣ ಇಳಿಕೆಯಾದರೂ ಸಾವಿನ ಪ್ರಮಾಣ ಏರಿಕೆ ಆಗ್ತಿರುವುದು ಆತಂಕ ಹೆಚ್ಚಿಸಿದೆ.

The post ಇಂದಿನಿಂದ ಜೂನ್ 7ರವರೆಗೂ ಎರಡನೇ ಹಂತದ ಲಾಕ್‍ಡೌನ್ – ಮನೆಯಲ್ಲೇ ಇರಿ, ನಿಯಮ ಪಾಲಿಸಿ appeared first on Public TV.

Source: publictv.in

Source link