ಇಂದಿನಿಂದ 7 ದಿನ ಮಂತ್ರಾಲಯದಲ್ಲಿ ರಾಘವೇಂದ್ರ ಸ್ವಾಮಿಗಳ 351ನೇ ಆರಾಧನಾ ಮಹೋತ್ಸವ: ಲಕ್ಷಾಂತರ ಭಕ್ತರ ಆಗಮನ ನಿರೀಕ್ಷೆ | Sri raghavendra swamiji 351 aradhana mahotsava from august 10th to August 16th


ಕಳೆದ ಎರಡು ವರ್ಷ ಕೊರೊನಾ ಹಿನ್ನೆಲೆ ರಾಯರ ಆರಾಧನಾ ಮಹೋತ್ಸವ ಕಣ್ತುಂಬಿಕೊಳ್ಳಲು ಭಕ್ತರಿಗೆ ಅವಕಾಶ ಇರಲಿಲ್ಲ. ಹೀಗಾಗಿ ಈ ಬಾರಿ ದೇಶಾದ್ಯಂತ ಲಕ್ಷಾಂತರ ಭಕ್ತರು ಆಗಮಿಸುವ ನಿರೀಕ್ಷೆಯಿದೆ.

ಇಂದಿನಿಂದ 7 ದಿನ ಮಂತ್ರಾಲಯದಲ್ಲಿ ರಾಘವೇಂದ್ರ ಸ್ವಾಮಿಗಳ 351ನೇ ಆರಾಧನಾ ಮಹೋತ್ಸವ: ಲಕ್ಷಾಂತರ ಭಕ್ತರ ಆಗಮನ ನಿರೀಕ್ಷೆ

ಮಂತ್ರಾಲಯದಲ್ಲಿ ನಡೆದಿರುವ ಸಿದ್ಧತೆ

ರಾಯಚೂರು: ದೇಶದಲ್ಲಿರುವ ಪ್ರಮುಖ ಧಾರ್ಮಿಕ ಕೇಂದ್ರಗಳಲ್ಲಿ ಒಂದಾದ ಮಂತ್ರಾಲಯದಲ್ಲಿ(Mantralayam) ಇಂದಿನಿಂದ ಒಟ್ಟು ಏಳು ದಿನಗಳ ಕಾಲ ಶ್ರೀ ರಾಘವೇಂದ್ರ ಸ್ವಾಮಿಗಳ(Sri Raghavendra Swamiji) 351ನೇ ಆರಾಧನಾ ಮಹೋತ್ಸವ ನಡೆಯಲಿದೆ. ಇಂದಿನಿಂದ ಆಗಸ್ಟ್ 16 ವರೆಗೆ ಆರಾಧನಾ ಮಹೋತ್ಸವದ ಸಪ್ತರಾತ್ರೋತ್ಸವ ನಡೆಯಲಿದೆ.

ಕಳೆದ ಎರಡು ವರ್ಷಗಳಿಂದ ಕೊರೊನಾ ಹಿನ್ನೆಲೆ ಆರಾಧನಾ ಮಹೋತ್ಸವ ಕಾರ್ಯಕ್ರಮಕ್ಕೆ ಸಾರ್ವಜನಿಕರಿಗೆ ಅವಕಾಶವಿರಲಿಲ್ಲ. ಹೀಗಾಗಿ ಮಠದ ಪದ್ದತಿಯಂತೆ ಸಾಂಕೇತಿಕವಾಗಿ ರಾಯರ ಆರಾಧನಾ ಮಹೋತ್ಸವ ನೆರವೇರಿಸಲಾಗಿತ್ತು. ಆದ್ರೆ ಈ ಬಾರಿ ಕೊರೊನಾ ಭೀತಿ ಇಲ್ಲದ ಹಿನ್ನೆಲೆ ಬಹಳ ಅದ್ಧೂರಿಯಾಗಿ ರಾಯರ ಆರಾಧನಾ ಮಹೋತ್ಸವ ನಡೆಸಲಾಗುತ್ತಿದೆ.

ವಿಶಿಷ್ಟ ಸಾಂಪ್ರದಾಯಕ ಕಾರ್ಯಕ್ರಮಗಳು

ರಾಯರ ಆರಾಧನಾ ಮಹೋತ್ಸವ ಅಂಗವಾಗಿ ಇಂದು ಸಂಜೆ ಧ್ವಜಾರೋಹಣ ನೆರವೇರಿಸುವ ಮೂಲಕ ಸಪ್ತರಾತ್ರೋತ್ಸವಕ್ಕೆ ಚಾಲನೆ ನೀಡಲಾಗುತ್ತದೆ. ನಂತರ ಪ್ರಾರ್ಥನೋತ್ಸವ, ಪ್ರಭೋತ್ಸವ, ಧಾನ್ಯೋತ್ಸವ ನೆರವೇರಿಸಲಾಗುವುದು. ಆಗಸ್ಟ್ 11 ರಂದು ಶಾಕೋತ್ಸವ, ರಜತ ಮಂಟಪೋತ್ಸವ ನಡೆಯಲಿದೆ. ಆಗಸ್ಟ್ 12 ರಂದು ಪೂರ್ವಾರಾಧನೆ, ಆಗಸ್ಟ್ 13ಕ್ಕೆ ಮಧ್ಯರಾಧನೆ ಹಾಗೂ ಆಗಸ್ಟ್ 14 ಕ್ಕೆ ಉತ್ತರಾಧನೆ ನಡೆಯಲಿದೆ.

ಆಗಸ್ಟ್ 12 ರಂದು ಶ್ರೀ ರಾಘವೇಂದ್ರ ಸ್ವಾಮಿಗಳ ಆರಾಧನೆಯ ಮೊದಲ ದಿನ. ಅದು ಪೂರ್ವಾರಾಧನೆ. ಅಂದು ರಾಯರ ಉತ್ಸವ ಮೂರ್ತಿಯ ರಜತ ಸಿಂಹ ವಾಹನೋತ್ಸವ ಜರುಗಲಿದೆ. ಆಗಸ್ಟ್ 13 ಮಧ್ಯರಾಧನೆಯಂದು ತಿರುಪತಿಯ ವೆಂಕಟೇಶ ದೇವರ ಶೇಷವಸ್ತ್ರ ಸಮರ್ಪಣೆ ನಡೆಯಲಿದೆ. ನಂತರ ರಾಯರ ಮೂಲ ಬೃಂದಾವನಕ್ಕೆ ಮಹಾಪಂಚಾಮೃತ ಅಭಿಷೇಕ, ಪ್ರಾಕಾರದಲ್ಲಿ ಸ್ವರ್ಣ ರಥೋತ್ಸವ ನಡೆಯಲಿದೆ. ಆಗಸ್ಟ್ 14 ಉತ್ತರಾಧನೆ ದಿನದಂದು ರಾಯರ ವಸಂತೋತ್ಸವ ಹಾಗೂ ಮಹಾ ರಥೋತ್ಸವ ಜರುಗಲಿದೆ. ವಸಂತೋತ್ಸವದ ದಿನ ಮೊದಲು ರಾಯರ ಬೃಂದಾವನಕ್ಕೆ ಬಣ್ಣಗಳನ್ನ ಅರ್ಪಿಸುತ್ತಾರೆ. ಬಳಿಕ ಸ್ವಾಮಿಗಳು ಒಬ್ಬರಿಗೊಬ್ಬರ ಬಣ್ಣಗಳನ್ನ ಎರಚಿ ಸಂಭ್ರಮಿಸುತ್ತಾರೆ. ನಂತರ ಭಕ್ತರಿಗೂ ಆ ಬಣ್ಣಗಳನ್ನ ಎರಚಿ ತಮ್ಮ ಧಾರ್ಮಿಕ ವಿಧಿವಿಧಾನಗಳಂತೆ ಆಚರಣೆ ನಡೆಸಲಾಗುತ್ತೆ. ಅದೇ ದಿನ ಮಂತ್ರಾಲಯದ ಪೀಠಾಧಿಪತಿ ಶ್ರೀ ಸುಬುದೇಂದ್ರ ತೀರ್ಥರು ಹೇಲಿಕಾಪ್ಟರ್ನಲ್ಲಿ ತೆರಳಿ ಅದರ ಮೂಲಕ ಮೇಲಿನಿಂದ ರಥೋತ್ಸವಕ್ಕೆ ಪುಷ್ಪ ನಮನ ಸಲ್ಲಿಸುತ್ತಾರೆ.

ಲಕ್ಷಾಂತರ ಭಕ್ತರ ಆಗಮಿಸುವ ಸಾಧ್ಯೆತೆ

ಕಳೆದ ಎರಡು ವರ್ಷ ಕೊರೊನಾ ಹಿನ್ನೆಲೆ ರಾಯರ ಆರಾಧನಾ ಮಹೋತ್ಸವ ಕಣ್ತುಂಬಿಕೊಳ್ಳಲು ಭಕ್ತರಿಗೆ ಅವಕಾಶ ಇರಲಿಲ್ಲ. ಹೀಗಾಗಿ ಈ ಬಾರಿ ದೇಶಾದ್ಯಂತ ಲಕ್ಷಾಂತರ ಭಕ್ತರು ಆಗಮಿಸುವ ನಿರೀಕ್ಷೆಯಿದೆ.

ಪ್ರವಾಹ ಹಿನ್ನೆಲೆ ಪುಣ್ಯ ಸ್ನಾನಕ್ಕೆ ನಿಷೇಧ

ತುಂಗಭದ್ರಾ ಡ್ಯಾಂನಿಂದ ಹೆಚ್ಚುವರಿ ನೀರನ್ನ ಬಿಡುಗಡೆ ಮಾಡಲಾಗ್ತಿರುವ ಹಿನ್ನೆಲೆ ಮಂತ್ರಾಲಯ ಮಠದ ಬಳಿ ಹರಿಯುವ ತುಂಗಭದ್ರಾ ನದಿ ಉಕ್ಕಿ ಹರಿಯುತ್ತಿದೆ. ಹೀಗಾಗಿ ಭಕ್ತರು ತುಂಗಭದ್ರಾ ನದಿಯಲ್ಲಿ ಪುಣ್ಯಸ್ನಾನವನ್ನ ಮಾಡುವುದನ್ನ ನಿಷೇಧಿಸಿ, ಮಠದ ಆಡಳಿತ ಮಂಡಳಿ ತಾತ್ಕಾಲಿಕ ಸ್ನಾನ ಘಟ್ಟಗಳನ್ನ ನಿರ್ಮಿಸಿದೆ. ಇದೇ ಕಾರಣಕ್ಕೆ ಭಕ್ತರಿಗೆ ತುಂಗಭದ್ರಾ ನದಿಯಲ್ಲಿ ಮಾಡಲಾಗುತ್ತಿದ್ದ ಪುಣ್ಯಸ್ನಾನ ಮಿಸ್ ಆಗಲಿದೆ. ಇದಷ್ಟೇ ಅಲ್ಲ ಮಂತ್ರಾಲಯದಲ್ಲಿ ಯಾವುದೇ ಪ್ರವಾಹವಿಲ್ಲ. ಭಕ್ತರು ಎಂದಿನಂತೆ ಆಗಮಿಸಿ ರಾಯರ ದರ್ಶನ ಪಡೆಯುವಂತೆ ಮಂತ್ರಾಲಯ ಮಠದ ಆಡಳಿತ ಮಂಡಳಿ ತಿಳಿಸಿದೆ. ಅಷ್ಟೇ ಅಲ್ಲ ಭಕ್ತರ ರಕ್ಷಣೆ ಹಾಗೂ ಭದ್ರತೆ ಬಗ್ಗೆ ಸ್ಥಳೀಯ ಪೊಲೀಸರು ಹಾಗೂ ಕಂದಾಯ ಇಲಾಖೆ ನೆರವಿನಿಂದ ಎಲ್ಲಾ ಸೂಕ್ತ ಮುಂಜಾಗ್ರತಾ ಕ್ರಮಗಳನ್ನ ಕೈಗೊಳ್ಳಲಾಗಿದೆ.

ವರದಿ: ಭೀಮೇಶ್ ಪೂಜಾರ್, ಟಿವಿ9 ರಾಯಚೂರು

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ತಾಜಾ ಸುದ್ದಿ

TV9 Kannada


Leave a Reply

Your email address will not be published. Required fields are marked *