ಬೆಂಗಳೂರು: ಮಾಜಿ ಕಾರ್ಪೊರೇಟರ್​ ರೇಖಾ ಕದಿರೇಶ್​​ ಕೊಲೆ ಪ್ರಕರಣದಲ್ಲಿ ಬಿಜೆಪಿ ವಕ್ತಾರ ಎನ್​​.ಆರ್​.ರಮೇಶ್​ ಅವರು ಚಾಮರಾಜ ಪೇಟೆ ಶಾಸಕ ಜಮೀರ್ ಅಹ್ಮದ್ ಮೇಲೆ ಆರೋಪ ಮಾಡಿದ್ದು, ಜಮೀರ್ ಆಪ್ತ ಕೊಲೆಯಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿದ್ದರು. ಆದರೆ ಬಿಜೆಪಿ ನಾಯಕರ ಆರೋಪವನ್ನು ನಿರಾಕರಿಸಿರುವ ಜಮೀರ್ ಅವರು, ವಿನಾಕಾರಣ ಆರೋಪ ಮಾಡ್ತಿರೋದು ಸರಿಯಲ್ಲ ಎಂದು ಕಿಡಿಕಾರಿದ್ದಾರೆ.

ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕ ಜಮೀರ್​, ರೇಖಾ ಅವರ ಕೊಲೆ ವಿಚಾರ ಕೇಳಿ ನನಗೂ ಶಾಕ್ ಆಗಿದೆ. ರೇಖಾ ನನ್ನ ತಂಗಿಯಂತೆ ಇದ್ರು. ನನ್ನ ಕ್ಷೇತ್ರದಲ್ಲಿ ಯಾವುದೇ ಕೆಲಸ ಆದರೂ ಅವರನ್ನು ನಾನೇ ಕರೆಯುತ್ತಿದೆ. 2018ರಲ್ಲಿ ಗಂಡನನ್ನು ಕಳೆದುಕೊಂಡಿದ್ದರು. ಅಂದು ಅವರ ಕೊಲೆ, ಇಂದು ಇವರ ಕೊಲೆಯಾಗಿದೆ. ಜನಪ್ರತಿನಿಧಿಗಳಿಗೆ ರಕ್ಷಣೆ ಇಲ್ಲದಂತಾಗಿದೆ. ತಪ್ಪಿತಸ್ಥರನ್ನ ಕೂಡಲೇ ಹಿಡಿಯುವ ಕೆಲಸ ಆಗಬೇಕಿದ್ದು, ತಪ್ಪಿತಸ್ಥರನ್ನ ಗಲ್ಲಿಗೇರಿಸೋ ಕೆಲಸ ಆಗ್ಬೇಕಿದೆ ಎಂದರು.

ಜೂನ್ 22 ರಂದು ರಂದು ರೇಖಾ ಅವರೊಂದಿಗೆ ಮಾತನಾಡಿದ್ದೆ. ವ್ಯಾಕ್ಸಿನ್ ಹಾಕುವ ವಿಚಾರದಲ್ಲಿ ಚರ್ಚೆ ಮಾಡಿ ಅವರ ಸಲಹೆಯಂತೆಯೇ ಇಲ್ಲಿ ಎರಡು ಕೇಂದ್ರಗಳನ್ನು ಆರಂಭ ಮಾಡಿದ್ದೆ. ಯಾವುದೇ ಅಭಿವೃದ್ಧಿ ವೇಳೆ ಅವರ ಜತೆ ಚರ್ಚಿಸಿಯೇ ಮುಂದೆ ಹೋಗುತ್ತಿದೆ. ಆದರೆ ರಮೇಶ್ ಏನ್ ಮಾಡ್ತಾ ಇದ್ದಾರೆ ಅನ್ನೋದು ಗೊತ್ತಿದೆ. ಎಲ್ಲೆಲ್ಲಿ ರೋಲ್ ಕಾಲ್ ಮಾಡ್ತಿದ್ದಾರೆ ಅನ್ನೋದೂ ಗೊತ್ತಿದೆ. ಈಗ ಅದರ ಬಗ್ಗೆ ಚರ್ಚೆ ಮಾಡೋದು ಬೇಡ. ಬಿಜೆಪಿ ನಾಯಕರು ನಿಂತು ಮಾಡಬೇಕಾದ ಕೆಲಸವನ್ನು ನಾನು ಮಾಡುತ್ತಿದ್ದು, ಕೊಲೆಯಾದಾಗ ನಾನು ಆಸ್ಪತ್ರೆಗೆ ಬಂದು ರೇಖಾ ಅವರ ಮೃತದೇಹವನ್ನು ಅವರ ಕುಟುಂಬಸ್ಥರೊಂದಿಗೆ ಪಡೆದುಕೊಳ್ಳುತ್ತಿದ್ದೇನೆ ಎಂದರೇ ಅರ್ಥ ಮಾಡ್ಕೊಳ್ಳಿ ಎಂದರು.

ಇದನ್ನೂ ಓದಿ: ಮಾಜಿ ಕರ್ಪೊರೇಟರ್​​ ರೇಖಾ ಕದಿರೇಶ್​ ಕೊಲೆ -ಜಮೀರ್ ಆಪ್ತನತ್ತ ಬೆಟ್ಟು ಮಾಡಿದ ಎನ್​​​​​.ಆರ್​.ರಮೇಶ್

The post ಇಂದಿನ ಕೊಲೆ ಆರೋಪದಲ್ಲಿ ಜಮೀರ್ ಹೆಸರು ಬಂದಿದ್ಯಾಕೆ? ಈ ಬಗ್ಗೆ ಜಮೀರ್ ಹೇಳಿದ್ದೇನು ಗೊತ್ತಾ? appeared first on News First Kannada.

Source: newsfirstlive.com

Source link