ಸ್ವತಂತ್ರ ಪೂರ್ವದಲ್ಲಿ ಭಾರತ ಬ್ರಿಟಿಷರ ಕಾಲಡಿಯಲ್ಲಿ ಸಿಲುಕಿ ನಲುಗಿ ಹೋಗಿತ್ತು. ಬ್ರಿಟಿಷರ ವಿರುದ್ಧ ಸಾಲು ಸಾಲು ಪ್ರತಿಭಟನೆಗಳು ನಡೆದವು. ಬ್ರಿಟಿಷರ ತಮ್ಮ ವಿರುದ್ಧ ತಿರುಗಿಬಿದ್ದವರನ್ನ ಹಿಂಸಿಸಿದರು, ಜೈಲಿಗೆ ತಳ್ಳಿದರು ಬಂದೂಕಿನ ಕೊಳವೆಯನ್ನ ಎದೆಗಿಟ್ಟು ಗುಂಡು ಹಾರಿಸಿದ್ರು. ಇವು ಸ್ವತಂತ್ರ ಪೂರ್ವದ ಚಿತ್ರಣಗಳಾದರೆ ಸ್ವಾತಂತ್ರ್ಯಾನಂತರವೂ ಭಾರತ ತನ್ನ ವಿರುದ್ಧ ತಾನೇ ಹೋರಾಡಿ ಗೆಲ್ಲಬೇಕಾದ ಅನಿವಾರ್ಯ ಸೃಷ್ಟಿಯಾಗಿತ್ತು. ಅದೇ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಘೋಷಿಸಿದ ತುರ್ತು ಪರಿಸ್ಥಿತಿ.

ಇಂದಿಗೆ ಸರಿಯಾಗಿ 46 ವರ್ಷಗಳ ಹಿಂದೆ ಭಾರತದಲ್ಲಿ ತುರ್ತು ಪರಿಸ್ಥಿತಿ ಘೋಷಣೆಯಾಗಿತ್ತು. 21 ತಿಂಗಳ ಕಾಲ ಜಾರಿಯಲ್ಲಿದ್ದ ಈ ತುರ್ತು ಪರಿಸ್ಥಿತಿಯನ್ನ ಭಾರತ ಕಂಡ ಅತ್ಯಂತ ಕರಾಳ ದಿನಗಳು ಅಂತಲೇ ಹೇಳಲಾಗುತ್ತೆ. ಇಂಥ ಕರಾಳ ಅಧ್ಯಾಯದ ಬಗ್ಗೆ ಈಗ ಒಂದು ಮೆಲುಕು ಹಾಕೋಣ..

ತುರ್ತು ಪರಿಸ್ಥಿತಿ ಘೋಷಣೆಗೂ ಮುನ್ನ ನಡೆದಿದ್ದೇನು..?
1971 ರಲ್ಲಿ ಇಂದಿರಾ ಗಾಂಧಿ ಎದುರು ಸ್ಪರ್ಧಿಸಿ ಸೋಲನ್ನಪ್ಪಿದ್ದ ರಾಜ್ ನರೇಯ್ನ್ ಪ್ರಧಾನಿಯಾಗಿದ್ದ ಇಂದಿರಾ ಗಾಂಧಿ ವಿರುದ್ಧ ಚುನಾವಣೆಯಲ್ಲಿ ಮೋಸ ನಡೆಸಿರುವ ಹಾಗೂ ಚುನಾವಣೆಯ ಪ್ರಚಾರಕ್ಕಾಗಿ ಆಡಳಿತವನ್ನ ದುರುಪಯೋಗ ಪಡಿಸಿಕೊಂಡಿರುವ ಆರೋಪದಡಿ ಅಲಹಾಬಾದ್ ಕೋರ್ಟ್​ ಮೆಟ್ಟಿಲೇರಿದ್ದರು. ಶಾಂತಿ ಭೂಷಣ್ ಎಂಬುವವರು ನರೇಯ್ನ್ ಅವರ ಪರ ವಾದಿಸಿದ್ರು. ಈ ಪ್ರಕರಣದಲ್ಲಿ ಇಂದಿರಾ ಗಾಂಧಿಯವರನ್ನ ಕೋರ್ಟ್ ವಿಚಾರಣೆಗೊಳಪಡಿಸಿತ್ತು.

1975 ರ ಜೂನ್ 12 ರಂದು ಅಲಹಾಬಾದ್ ಹೈಕೋರ್ಟ್​ನ ಜಸ್ಟೀಸ್ ಜಗ್​ಮೋಹನ್ ಲಾಲ್ ಸಿನ್ಹಾ ಇಂದಿರಾಗಾಂಧಿಯವರನ್ನ ಚುನಾವಣಾ ಪ್ರಚಾರಕ್ಕೆ ಆಡಳಿತವನ್ನ ದುರುಪಯೋಗಪಡಿಸಿಕೊಂಡಿದ್ದಕ್ಕೆ ದೋಷಿ ಎಂದು ಘೋಷಿಸಿತು. ಅಲ್ಲದೇ ಕೋರ್ಟ್ ಅವರ ಚುನಾವಣೆಯ ಸ್ಪರ್ಧೆಯಿಂದ ದೂರವುಳಿಸಿ ಲೋಕಸಭಾ ಸ್ಥಾನದಿಂದಲೂ ಕೆಳಗಿಳಿಸಿತು.

ಸುಪ್ರೀಂ ಕೋರ್ಟ್​ನಲ್ಲೂ ಸೋಲು

ಹೈಕೋರ್ಟ್ ಆದೇಶವನ್ನ ಪ್ರಶ್ನಿಸಿ ಇಂದಿರಾಗಾಂಧಿ ಸುಪ್ರೀಂಕೋರ್ಟ್​ ಮೊರೆಹೋದರು. ಸುಪ್ರೀಂ ಕೋರ್ಟ್ ಜಸ್ಟೀಸ್ ವಿ. ಆರ್ ಕೃಷ್ಣಾ ಅಯ್ಯರ್ ಜೂನ್ 24, 1975 ರಂದು ಹೈಕೋರ್ಟ್ ಆದೇಶವನ್ನು ಎತ್ತಿಹಿಡಿದರು. ಅಲ್ಲದೇ ಇಂದಿರಾಗಾಂಧಿಯವರ ಸಂಸದ ಸ್ಥಾನಕ್ಕೆ ನೀಡಲಾಗಿದ್ದ ಎಲ್ಲ ಸೌಲಭ್ಯಗಳನ್ನೂ ನಿಲ್ಲಿಸಿ ಚುನಾವಣೆಯಿಂದ ನಿರ್ಬಂಧಿಸಲಾಯ್ತು. ಆದರೆ ಪ್ರಧಾನಿಯಾಗಿ ಮುಂದುವರೆಯಲು ಅವಕಾಶ ನೀಡಲಾಯ್ತು.

ಆಗ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿದ್ದ ಸಿದ್ಧಾರ್ಥ್ ಶಂಕರ್ ರೇ ಪ್ರಧಾನಿಯಾಗಿದ್ದ ಇಂದಿರಾ ಗಾಂಧಿ ಮುಂದೆ ಆಂತರಿಕ ತುರ್ತು ಪರಿಸ್ಥಿತಿ ಘೋಷಿಸುವ ಪ್ರಸ್ತಾವನೆಯನ್ನ ಮುಂದಿಟ್ಟರು. ನಂತರ ರಾಷ್ಟ್ರಪತಿಗಳಿಗೆ ಪತ್ರ ಬರೆದು ಆಂತರಿಕ ಕಲಹದಿಂದಾಗಿ ದೇಶದ ಭದ್ರತೆಗೆ ಅಪಾಯ ಎದುರಾಗಿದೆ.. ಹೀಗಾಗಿ ಆಂತರಿಕ ತುರ್ತು ಪರಿಸ್ಥಿತಿ ಘೋಷಿಸುವಂತೆ ಮನವಿ ಮಾಡಿದರು.

ತುರ್ತು ಪರಿಸ್ಥಿತಿ ಘೋಷಣೆ

ಆಗ ರಾಷ್ಟ್ರಪತಿಗಳಾಗಿದ್ದ ಫಕ್ರುದ್ದೀನ್ ಅಲಿ ಅಹ್ಮದ್ ಪ್ರಧಾನಿ ಇಂದಿರಾಗಾಂಧಿಯವರಿಂದ ಸಲಹೆ ಪಡೆದು ಜೂನ್ 25, 1975 ರ ಮಧ್ಯರಾತ್ರಿಯ ವೇಳೆಗೆ ತುರ್ತು ಪರಿಸ್ಥಿತಿಯನ್ನ ಘೋಷಿಸಿಯೇಬಿಟ್ಟರು. ತುರ್ತು ಪರಿಸ್ಥಿತಿ ಘೋಷಣೆಯಾಗುತ್ತಿದ್ದಂತೆ ಭಾರತೀಯ ಸಂವಿಧಾನದ ಆರ್ಟಿಕಲ್ 352 ಜಾರಿಗೆ ಬಂದಿತ್ತು. ಈ ಮೂಲಕ ನಾಗರೀಕ ಸ್ವಾತಂತ್ರ್ಯ ಮತ್ತು ರಾಜಕೀಯ ವಿರೋಧಗಳನ್ನ ಕಟ್ಟಿಹಾಕಲಾಯ್ತು.

ಘಟಾನುಘಟಿ ನಾಯಕರ ಬಂಧನ

ಇದರ ಬೆನ್ನಲ್ಲೇ ಘಟಾನುಘಟಿ ರಾಜಕೀಯ ನಾಯಕರಾಗಿದ್ದ ವಿಜಯರಾಜೇ ಸಿಂಧಿಯಾ, ಜಯಪ್ರಕಾಶ್ ನಾರಾಯಣ್, ರಾಜ್ ನರೇಯ್ನ್, ಮೊರಾರ್ಜಿ ದೇಸಾಯಿ, ಚರಣ್ ಸಿಂಗ್, ಜಿವತ್ರಮ್ ಕ್ರಿಪಲಾನಿ, ಅಟಲ್ ಬಿಹಾರಿ ವಾಜಪೇಯಿ, ಲಾಲ್ ಕೃಷ್ಣ ಅಡ್ವಾನಿ, ಅರುಣ್ ಜೇಟ್ಲೀ, ಸತ್ಯೇಂದ್ರ ನಾರಾಯಣ್ ಸಿನ್ಹಾ, ಗಾಯತ್ರಿ ದೇವಿ ಸೇರಿದಂತೆ ಪ್ರತಿಭಟನೆಗಿಳಿದಿದ್ದವರನ್ನ ತಕ್ಷಣವೇ ಬಂಧಿಸಲಾಯ್ತು.
ಇತ್ತ ರಾಷ್ಟ್ರೀಯ ಸ್ವಯಂ ಸೇವಕ್ ಸಂಘ(RSS) ಮತ್ತು ಜಮಾತ್-ಎ-ಇಸ್ಲಾಮಿಯಂಥ ಸಂಘಟನೆಗಳು ಸೇರಿದಮತೆ ಕೆಲವು ರಾಜಕೀಯ ಪಕ್ಷಗಳನ್ನೂ ಸಹ ಬ್ಯಾನ್ ಮಾಡಲಾಯ್ತು. ತುರ್ತು ಪರಿಸ್ಥಿತಿ ವೇಳೆ ಆರ್​ಎಸ್​ಎಸ್​ ಹಾಗೂ ಸಿಖ್ ಸಮುದಾಯ ಭಾರೀ ವಿರೋಧ ವ್ಯಕ್ತಪಡಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಚುನಾವಣೆಯ ಮೇಲೆ ತುರ್ತುಪರಿಸ್ಥಿತಿಯ ಎಫೆಕ್ಟ್

ಇದಾದ ಎರಡು ವರ್ಷಗಳ ನಂತರ ಮಾರ್ಚ್ 23, 1977 ರಂದು ಅಧಿಕೃತವಾಗಿ ತುರ್ತು ಪರಿಸ್ಥಿತಿ ಅಂತ್ಯಗೊಂಡಿತು. ಇದಕ್ಕೂ ಮುಂಚೆ ಅಂದ್ರೆ 1977 ರ ಜನವರಿ 18 ರಂದು ಇಂದಿರಾ ಗಾಂಧಿ ಹೊಸದಾಗಿ ಚುನಾವಣೆಗೆ ಕರೆ ಕೊಟ್ಟರು. ಅಲ್ಲದೇ ಬಂಧನಕ್ಕೊಳಗಾಗಿದ್ದ ರಾಜಕೀಯ ನಾಯಕರನ್ನು ಬಿಡುಗಡೆಗೊಳಿಸಿದ್ರು. ಚುನಾವಣೆಗೆ ಕರೆ ಕೊಟ್ಟ ಬೆನ್ನಲ್ಲೇ ವಿಪಕ್ಷಗಳು ಜನರ ಬಳಿ ಪ್ರಜಾಪ್ರಭುತ್ವ ಮತ್ತು ಸರ್ವಾಧಿಕಾರಗಳಲ್ಲಿ ಒಂದನ್ನು ನೀವು ಆಯ್ಕೆ ಮಾಡಿಕೊಳ್ಳುವ ಸಮಯ ಇದು ಎಂದರು.

ತುರ್ತು ಪರಿಸ್ಥಿಯ ಪರಿಣಾಮವೆಂಬಂತೆ ಉತ್ತರ ಪ್ರದೇಶದಂಥ ರಾಜ್ಯದಲ್ಲೇ ಕಾಂಗ್ರೆಸ್ ತನ್ನ ಮತ ಬ್ಯಾಂಕ್ ಕಳೆದುಕೊಂಡಿತ್ತು. ಇಡೀ ರಾಜ್ಯದಲ್ಲಿ ಒಂದೇ ಒಂದು ಕ್ಷೇತ್ರದಲ್ಲಿ ಮಾತ್ರ ಕಾಂಗ್ರೆಸ್​ಗೆ ಗೆಲುವು ಸಿಕ್ಕಿತ್ತು. ಅಲ್ಲದೇ ಪಶ್ಚಿಮ ಬಂಗಾಳದಲ್ಲೂ ಕಾಂಗ್ರೆಸ್ ಕುಸಿದುಬಿದ್ದಿತ್ತು.

ಇನ್ನು ಎಮರ್ಜೆನ್ಸಿ ಸಮಯದಲ್ಲಿ ಕುಟುಂಬ ಯೋಜನೆಯ ಹೆಸರಿನಲ್ಲಿ ಒತ್ತಾಯಪೂರ್ವಕವಾಗಿ ಗರ್ಭನಿರೋಧಕ ಚುಚ್ಚುಮದ್ದುಗಳನ್ನ ನೀಡಲಾಗುತ್ತಿತ್ತು. ಸರ್ಕಾರಿ ಅಧಿಕಾರಿಗಳಿಗೂ ಸಹ ಗರ್ಭನಿರೋಧಕ ಚುಚ್ಚುಮದ್ದು ಪಡೆಯದಿದ್ದಲ್ಲಿ ಸಂಬಳ ನೀಡುವುದಿಲ್ಲ ಎಂದು ಬೆದರಿಸಲಾಗಿತ್ತು. ಎಮರ್ಜೆನ್ಸಿ ಸಮಯದಲ್ಲಿ ನಡೆದ ಇಂಥ ಅಮಾನವೀಯ ಕೃತ್ಯಗಳಿಂದಾಗಿಯೇ ದೇಶದಲ್ಲಿ ಇಂದಿಗೂ ಸಹ ಜನರು ವ್ಯಾಕ್ಸಿನ್ ಎಂದು ಹೆದರುತ್ತಾರೆ ಎಂಬ ಅಭಿಪ್ರಾಯಗಳೂ ಇಂದು ಜನರಲ್ಲಿ ಕೇಳಿಬರುತ್ತವೆ ಎಂದು ಕೇಂದ್ರ ರಾಜ್ಯ ಸಚಿವ ಜಿ. ಕೃಷ್ಣಾರೆಡ್ಡಿ ಅಂದಿನ ದಿನಗಳ ಕುರಿತು ತಮ್ಮ ಅಂಕಣವೊಂದರಲ್ಲಿ ಹೇಳಿಕೊಂಡಿದ್ದಾರೆ.

The post ಇಂದಿರಾ ಗಾಂಧಿ ಹೇರಿದ್ದ ತುರ್ತು ಪರಿಸ್ಥಿತಿಗೆ 46 ವರ್ಷ; ಆ ಕರಾಳ ಅಧ್ಯಾಯದ ದಿನಗಳು ಹೇಗಿದ್ದವು ಗೊತ್ತಾ..? appeared first on News First Kannada.

Source: newsfirstlive.com

Source link