1. ಇಂದು ಕಾಂಗ್ರೆಸ್​ನಿಂದ ರಾಜಭವನಕ್ಕೆ ಮುತ್ತಿಗೆ

ಕಾಂಗ್ರೆಸ್ ನಾಯಕರ ದೂರವಾಣಿ ಕದ್ದಾಲಿಕೆ ಪ್ರಕರಣಕ್ಕೆ ಸಂಬಂಧಿಸಿ ರಾಜಕೀಯ ಬೆಳವಣಿಗೆಗಳು ಚುರುಕುಗೊಂಡಿದೆ. ಕದ್ದಾಲಿಕೆ ವಿರೋಧಿಸಿ ಇಂದು ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್​ನಿಂದ ರಾಜಭವನಕ್ಕೆ ಮುತ್ತಿಗೆ ಹಾಕೋದಕ್ಕೆ ತಯಾರಿ ನಡೆಸಲಾಗ್ತಿದೆ. ಬೆಳಗ್ಗೆ 10 ಗಂಟೆಯಿಂದ ಕೆಪಿಸಿಸಿ ಕಚೇರಿಯಿಂದ ಱಲಿ ನಡೆಯಲಿದ್ದು, ಮೆರವಣಿಗೆ ಮೂಲಕ ಹೊರಡಲಿರುವ ಕಾಂಗ್ರೆಸ್ ಶಾಸಕರು ರಾಜಭವನಕ್ಕೆ ತೆರಳಲಿದ್ದಾರೆ. ಪ್ರತಿಭಟನಾ ಱಲಿಯಲ್ಲಿ ಶಾಸಕರು, ಸಂಸದರು, ಎಂಎಲ್‌ಸಿಗಳು ಸೇರಿದಂತೆ ಕಾಂಗ್ರೆಸ್‌ನ ಕಾರ್ಯಕರ್ತರು ಭಾಗಿಯಾಗುವಂತೆ ಸಿದ್ದರಾಮಯ್ಯ ಕರೆ ನೀಡಿದ್ದಾರೆ.

2. ಜಂತರ್​ ಮಂತರ್​​ನಲ್ಲಿ ಬಿಗಿ ಭದ್ರತೆ

ಜಂತರ್​ ಮಂತರ್​​ನಲ್ಲಿ ಪ್ರತಿಭಟನೆ ನಡೆಸೋಕೆ ದೆಹಲಿ ಸರ್ಕಾರ ಅನುಮತಿ ನೀಡಿದೆ. ಪ್ರತಿದಿನ 200 ಮಂದಿ ಪ್ರತಿಭಟನೆಯಲ್ಲಿ ಭಾಗಿಯಾಗಲು ಅವಕಾಶ ನೀಡಲಾಗಿದೆ. ಈ ಬೆನ್ನಲ್ಲೇ ಜಂತರ್ ಮಂತರ್​ನಲ್ಲಿ ದೆಹಲಿ ಪೊಲೀಸರು ಭದ್ರತೆ ಹೆಚ್ಚಿಸಿದ್ದಾರೆ. ಪ್ರತಿಭಟನಾ ನಿರತ ರೈತರು ಸಿಂಗು ಗಡಿಯಿಂದ ಪೊಲೀಸ್ ಬೆಂಗಾವಲಿನಲ್ಲಿಯೇ ಪ್ರಯಾಣಿಸಬೇಕು ಎಂಬ ಷರತ್ತಿನೊಂದಿಗೆ ದೆಹಲಿ ಸರ್ಕಾರ ಜಂತರ್ ಮಂತರ್ ನಲ್ಲಿ ಪ್ರತಿಭಟನೆಗೆ ಅನುಮತಿ ನೀಡಿದೆ. ಅಧಿವೇಶನ ಆಗಸ್ಟ್​ 13 ರಂದು ಮುಕ್ತಾಯಗೊಳ್ಳಲಿದ್ದು ರೈತರಿಗೆ ಆಗಸ್ಟ್​ 9ರವರೆಗೆ ಪ್ರತಿಭಟನೆ ನಡೆಸಲು ಅನುಮತಿ ದೊರೆತಿದೆ.

3. ನವಜೋತ್ ಸಿಂಗ್ ಸಿಧು ಶಕ್ತಿ ಪ್ರದರ್ಶನ

ಪಂಜಾಬ್ ಸಿಎಂ ಜೊತೆಗಿನ ಭಿನ್ನಾಭಿಪ್ರಾಯಗಳ ನಡುವೆಯೂ ಪಂಜಾಬ್ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾಗಿರುವ ನವಜೋತ್ ಸಿಂಗ್ ಸಿಧು ನಾಳೆ ಅಧಿಕಾರ ವಹಿಸಿಕೊಳ್ಳಿದ್ದಾರೆ. ಇನ್ನು, ಈ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರನ್ನು ಆಹ್ವಾನಿಸಲು ನಿರ್ಧರಿಸಿದ್ದಾರೆ. ಈ ನಡುವೆ ಪಂಜಾಬ್ ವಿಧಾನಸಭೆಯಲ್ಲಿ ಕಾಂಗ್ರೆಸ್ 80 ಶಾಸಕರನ್ನು ಹೊಂದಿದ್ದು, 60ಕ್ಕೂ ಹೆಚ್ಚು ಶಾಸಕರು ನವಜೋತ್ ಸಿಂಗ್ ಸಿಧು ಭೇಟಿಯಾಗಿ ಶುಭ ಕೋರಿರುವುದು ಶಕ್ತಿ ಪ್ರದರ್ಶನದ ಭಾಗ ಅಂತಲೂ ಹೇಳಲಾಗ್ತಿದೆ.

4. ಮೊಬೈಲ್​ಗೆ ಟೇಪ್ ಸುತ್ತಿದ ಮಮತಾ

ಪೆಗಾಸಸ್​ ಸ್ಪೈವೇರ್​ ದಾಳಿ ಮಾಡಬಾರದು ಅಂತಾ ಮಮತಾ ಬ್ಯಾನರ್ಜಿ ತಮ್ಮ ಮೊಬೈಲ್​ ಕ್ಯಾಮೆರಾಕ್ಕೆ ಟೇಪ್​ ಸುತ್ತಿದ್ದಾರೆ. ಈ ಬಗ್ಗೆ ಅವರೇ ಹೇಳಿಕೊಂಡಿದ್ದು, ಇದಕ್ಕೆಲ್ಲಾ ಬಿಜೆಪಿ ಕಾರಣ ಅಂತಾ ಆರೋಪಿಸಿದ್ದಾರೆ. ವೀಡಿಯೊ ಅಥವಾ ಆಡಿಯೊ ಆಗಿರಬಹುದು. ಎಲ್ಲವನ್ನೂ ಕದ್ದಾಲಿಸುತ್ತಾರೆ ಹೀಗಾಗಿ ಬೇಹುಗಾರಿಕೆ ತಪ್ಪಿಸಲು ನನ್ನ ಫೋನ್‌ನ ಕ್ಯಾಮೆರಾವನ್ನು ಟೇಪ್​ನಿಂದ ಸುತ್ತಿದ್ದೇನೆ ಅಂತಾ ಸಿಎಂ ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಹೀಗೆ ಮಾತನಾಡುವ ವೇಳೆ ತಮ್ಮ ಫೋನ್ ಕ್ಯಾಮರಾ ಟೇಪ್​ನಿಂದ ಸುತ್ತಿರುವುದುನ್ನ ಕೂಡ ಮಮತಾ ಬ್ಯಾನರ್ಜಿ ಪ್ರದರ್ಶಿಸಿದ್ದಾರೆ.

5. ಮತ್ತೆ 3 ರಫೆಲ್​ ಯುದ್ಧ ವಿಮಾನಗಳ ಎಂಟ್ರಿ

ಫ್ರಾನ್ಸ್‌ನಿಂದ 7,000 ಕಿ.ಮೀ ನಾನ್​ ಸ್ಟಾಪ್ ಹಾರಾಟದ ನಂತರ 3 ರಫೆಲ್ ಫೈಟರ್ ಜೆಟ್‌ಗಳು ಭಾರತಕ್ಕೆ ಆಗಮಿಸಿವೆ. ಈ ಮೂಲಕ ವಾಯುಪಡೆಯ ರಫೆಲ್ ಜೆಟ್ ಗಳ ಒಟ್ಟು ಸಂಖ್ಯೆ 24 ಕ್ಕೆ ಏರಿಕೆಯಾಗಿದ್ದು ಹೆಚ್ಚಿನ ಬಲ ಬಂದಿದೆ. ಯುನೈಟೆಡ್ ಅರಬ್ ಎಮಿರೇಟ್ಸ್​ನ ವಾಯುಪಡೆಯ ಟ್ಯಾಂಕರ್‌ಗಳು ಮಾರ್ಗ ಮಧ್ಯ ಮಿಡ್​ ಏರ್​ನಲ್ಲಿ ರಾಫೆಲ್​ ಜೆಟ್​ಗೆ ಇಂಧನ ತುಂಬಿಸಿವೆ. 36 ರಫೆಲ್​ ಯುದ್ಧ ವಿಮಾನಗಳಿಗೆ ಭಾರತ ಒಪ್ಪಂದ ಮಾಡಿಕೊಂಡಿದ್ದು, 2021ರ ಅಂತ್ಯದೊಳಗೆ ಅಷ್ಟೂ ಫೈಟರ್​ ಜೆಟ್​ಗಳು ಪೂರೈಕೆಯಾಗಲಿವೆ.

6. ‘ಚೆಕ್​ಮೇಟ್’ ಅಂತಿದೆ ರಷ್ಯಾ!​
ರಷ್ಯಾ ತನ್ನ ವಾರ್ಷಿಕ ವಾಯು ಪ್ರದರ್ಶನದಲ್ಲಿ ಹೊಸ ಸುಖೋಯ್ ಐದನೇ ತಲೆಮಾರಿನ ಫೈಟರ್ ಜೆಟ್​ನ ಮೂಲಮಾದರಿಯನ್ನು ಅನಾವರಣಗೊಳಿಸಿದೆ. ಈ ಯೋಜನೆಗೆ ಚೆಕ್​ಮೇಟ್​ ಅಂತಾ ರಷ್ಯಾ ಹೆಸರಿಟ್ಟಿದೆ. ಈ ಫೈಟರ್​ ಜೆಟ್​ ಅಮೆರಿಕಾದ ಎಫ್ -35 ಫೈಟರ್‌ಗೆ ಪ್ರತಿಸ್ಪರ್ಧಿಯಾಗಲಿದೆ ಎಂದು ರಕ್ಷಣಾ ತಜ್ಞರು ವಿಶ್ಲೇಷಣೆ ಮಾಡ್ತಿದ್ದಾರೆ. ಈ ಯುದ್ಧ ವಿಮಾನ 2023ರಲ್ಲಿ ಸಿದ್ಧವಾಗುವ ನಿರೀಕ್ಷೆಯಿದೆ. ಸತತವಾಗಿ ಈ ಫೈಟ್​ ಜೆಟ್ ತಯಾರಿ ಕಾರ್ಯ ನಡೆಯಲಿದ್ದು, ಮುಂದಿನ 15 ವರ್ಷಗಳಲ್ಲಿ 300 ವಿಮಾನಗಳನ್ನು ಉತ್ಪಾದಿಸಲು ರಷ್ಯಾ ಪ್ಲಾನ್​ ರೂಪಿಸಿದೆ.

7. 15 ಸಾವಿರ ವರ್ಷದ ಹಿಂದಿನ ವೈರಸ್ ಪತ್ತೆ
ಚೀನಾದ ಟಿಬೆಟಿಯನ್ ಪ್ರಸ್ಥಭೂಮಿಯಿಂದ ತೆಗೆದ ಎರಡು ಐಸ್ ಮಾದರಿಗಳಲ್ಲಿ ವಿಜ್ಞಾನಿಗಳು ಸುಮಾರು 15 ಸಾವಿರ ವರ್ಷಗಳಷ್ಟು ಹಳೆಯದಾದ ವೈರಸ್​ ಅನ್ನು ಪತ್ತೆ ಹಚ್ಚಿದ್ದಾರೆ. ಆ ವೈರಸ್‌ಗಳಲ್ಲಿ ಹೆಚ್ಚಿನವುಗಳು ಹೆಪ್ಪುಗಟ್ಟಿದ ಕಾರಣಕ್ಕೆ ಉಳಿದುಕೊಂಡಿವೆ ಅಂತಾ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಸಮುದ್ರ ಮಟ್ಟಕ್ಕಿಂತ 22, ಸಾವಿರ ಅಡಿ ಎತ್ತರದ ಪ್ರದೇಶದಲ್ಲಿ ಸಂಗ್ರಹಿಸಿದ ಮಾದರಿಗಳಲ್ಲಿ ಈ ವೈರಸ್​ ಪತ್ತೆಯಾಗಿದೆ.

8. ಕ್ವಾರಂಟೀನ್​​ನಿಂದ ಬೆಡ್​ಶೀಟ್​ ಬಳಸಿ ಪರಾರಿ
ಆಸ್ಟ್ರೇಲಿಯಾದ ಕೊರೊನಾ ಸೋಂಕಿತ ವ್ಯಕ್ತಿಯೊಬ್ಬ ಕ್ವಾರಂಟೀನ್ ಆದ ಹೋಟೆಲ್​ನಿಂದ ತಪ್ಪಿಸಿಕೊಳ್ಳಲು ಬೆಡ್​ಶೀಟ್​ಗಳನ್ನು ಹಗ್ಗದಂತೆ ಬಳಸಿದ್ದಾನೆ. 39 ವರ್ಷದ ವ್ಯಕ್ತಿಯೊಬ್ಬ ತನ್ನ ಕೊಠಡಿಯಿಂದ ಓಡಿಹೋದ ನಂತರ ಆತನನ್ನು ಪತ್ತೆಹಚ್ಚಿ ಬಂಧಿಸಲಾಗಿದೆ ಅಂತಾ ವೆಸ್ಟರ್ನ್ ಆಸ್ಟ್ರೇಲಿಯಾದ ಪೊಲೀಸರು ತಿಳಿಸಿದ್ದಾರೆ. ಹೋಟೆಲ್​ನಲ್ಲಿ ಕ್ವಾರಂಟೀನ್​ ಆಗಿದ್ದ ಆ ವ್ಯಕ್ತಿ ತನ್ನ ಕೋಣೆಯಲ್ಲಿದ್ದ ಬೆಡ್‌ಶೀಟ್‌ಗಳನ್ನು ಬಳಸಿ ಹಗ್ಗ ತಯಾರಿಸಿ ನಾಲ್ಕನೇ ಮಹಡಿಯಿಂದ ಇಳಿದು ತಪ್ಪಿಸಿಕೊಂಡಿದ್ದಾನೆ. ಸದ್ಯ ಆತನನ್ನ ತುರ್ತು ಸ್ಥಿತಿ ನಿರ್ವಹಣಾ ನಿಬಂಧನೆಗಳ ಕಾಯ್ದೆ ಅಡಿಯಲ್ಲಿ ಅಧಿಕಾರಿಗಳು ಬಂಧಿಸಿದ್ದಾರೆ.

9. ಮಳೆಗಾಗಿ ಕತ್ತೆ ಮೇಲೆ ಸರಪಂಚ್​ನ ಮೆರವಣಿಗೆ
ಮಧ್ಯಪ್ರದೇಶದ ವಿದಿಷಾದಲ್ಲಿ ಮಳೆಯ ಕೊರತೆಯಿಂದಾಗಿ, ತೊಂದರೆಗೀಡಾದ ಗ್ರಾಮಸ್ಥರು ಹಳ್ಳಿಯ ಸರ​ಪಂಚ್​ನನ್ನು ಕತ್ತೆಯ ಮೇಲೆ ಕೂರಿಸಿಕೊಂಡು ಇಡೀ ಹಳ್ಳಿಯಲ್ಲಿ ಸಂಚರಿಸಿದ್ದಾರೆ. ಹೀಗೆ ಮಾಡುವುದರಿಂದ ಇಂದ್ರದೇವ ಒಲಿಯುತ್ತಾನೆ. ದೇವರು ಸಂತೋಷಗೊಂಡು ಬೇಗನೆ ಮಳೆ ಸುರಿಸುತ್ತಾನೆ ಎಂಬ ನಂಬಿಕೆ ಗ್ರಾಮಸ್ಥರಲ್ಲಿದೆ. ಹೀಗಾಗಿ ಪಂಚಾಯತ್​ನ ಸರ್ಪಂಚ್, ಸುಶೀಲ್ ವರ್ಮಾ, ಕತ್ತೆಯ ಮೇಲೆ ಕುಳಿತು ಇಡೀ ಗ್ರಾಮವನ್ನು ಸುತ್ತಾಡಿ ಗಣೇಶ ದೇವಸ್ಥಾನವನ್ನು ತಲುಪಿ ಅಲ್ಲಿ ಮಳೆಗಾಗಿ ಗಣೇಶನನ್ನು ಪ್ರಾರ್ಥಿಸಿದ್ದಾರೆ.

10. 2032ರ ಒಲಿಂಪಿಕ್ಸ್‌ಗೆ ಆಸ್ಟ್ರೇಲಿಯಾದ ಆತಿಥ್ಯ
ಬಹುನಿರೀಕ್ಷಿತ ಈ ಬಾರಿಯ ಟೋಕಿಯೋ ಒಲಿಂಪಿಕ್ಸ್‌ ಕ್ರೀಡಾಕೂಟ ಆರಂಭಕ್ಕೆ ಇನ್ನೆರಡು ದಿನ ಬಾಕಿಯಿದೆ. ಹೀಗಿರುವಾಗಲೇ 2032 ಒಲಿಂಪಿಕ್ಸ್‌ ಕ್ರೀಡಾಕೂಟ ಆಯೋಜನೆಗೆ ಆಸ್ಟ್ರೇಲಿಯಾದ ಬ್ರಿಸ್ಬೇನ್‌ ಆತಿಥ್ಯದ ಹಕ್ಕನ್ನು ಪಡೆದುಕೊಂಡಿದೆ. ಇದರೊಂದಿಗೆ ಆಸ್ಟ್ರೇಲಿಯಾ ಮೂರನೇ ಬಾರಿಗೆ ಒಲಿಂಪಿಕ್ಸ್‌ ಆಯೋಜನೆಗೆ ಆತಿಥ್ಯವನ್ನು ಪಡೆದುಕೊಂಡಂತೆ ಆಗಿದೆ. ಟೋಕಿಯೋ ಒಲಿಂಪಿಕ್ಸ್ ಮುಕ್ತಾಯದ ಬಳಿಕ 2024ರಲ್ಲಿ ಪ್ಯಾರಿಸ್‌ನಲ್ಲಿ ಒಲಿಂಪಿಕ್ಸ್‌ ಕ್ರೀಡಾಕೂಟ ನಡೆಯಲಿದೆ. ನಂತರ 2028ರಲ್ಲಿ ಲಾಸ್ ಏಂಜಲೀಸ್‌ನಲ್ಲಿ ನಡೆಯಲಿದೆ. ಇನ್ನು 2032ರ ಒಲಿಂಪಿಕ್ಸ್‌ ಕ್ರೀಡಾಕೂಟದ ಆತಿಥ್ಯದ ಹಕ್ಕು ಬ್ರಿಸ್ಬೇನ್ ಪಾಲಾಗಿದೆ ಎಂದು ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ ತಿಳಿಸಿದೆ.

The post ಇಂದು ಕಾಂಗ್ರೆಸ್​ನಿಂದ ರಾಜಭವನಕ್ಕೆ ಮುತ್ತಿಗೆ- ಈ ಹೊತ್ತಿನ ಟಾಪ್​ 10 ಸುದ್ದಿಗಳ ಕ್ವಿಕ್​ ರೌಂಡ್​​ಅಪ್ appeared first on News First Kannada.

Source: newsfirstlive.com

Source link