ಇಂದು ದುರ್ಗಾಷ್ಟಮಿ, ನಾಳೆ ಆಯುಧಪೂಜೆ, ನಾಡಿದ್ದು ವಿಜಯದಶಮಿ: ಮಾರುಕಟ್ಟೆಗಳಲ್ಲಿ ಜನಜಂಗುಳಿ, ಹೂ-ಬೂದುಗುಂಬಳ ದುಬಾರಿ | Festive Spirit in Karnataka Market Rate Hike Irks Consumers Flower Vegetable Fruit on demand


ಬಹುತೇಕ ಸರ್ಕಾರಿ ಕಚೇರಿಗಳು, ಖಾಸಗಿ ಕಾರ್ಖಾನೆಗಳು, ಕಾಲೇಜುಗಳು, ವ್ಯಾಪಾರಿ ಮಳಿಗೆ, ಗೋದಾಮು, ಫ್ಯಾಕ್ಟರಿಗಳಲ್ಲಿ ಸೋಮವಾರವೇ ಆಯುಧ ಪೂಜೆ ಹಮ್ಮಿಕೊಳ್ಳಲಾಗಿದೆ.

ಇಂದು ದುರ್ಗಾಷ್ಟಮಿ, ನಾಳೆ ಆಯುಧಪೂಜೆ, ನಾಡಿದ್ದು ವಿಜಯದಶಮಿ: ಮಾರುಕಟ್ಟೆಗಳಲ್ಲಿ ಜನಜಂಗುಳಿ, ಹೂ-ಬೂದುಗುಂಬಳ ದುಬಾರಿ

ಬೆಂಗಳೂರಿನ ಕೆ.ಆರ್.ಮಾರುಕಟ್ಟೆಯಲ್ಲಿ ಖರೀದಿ ಭರಾಟೆ (ಸಂಗ್ರಹ ಚಿತ್ರ)

ಬೆಂಗಳೂರು: ಆಯುಧಪೂಜೆ ಸಂಭ್ರಮದಲ್ಲಿರುವ ಕರ್ನಾಟಕದಲ್ಲಿ ಜನರು ಖರೀದಿ ಭರಾಟೆಗೆ ಮುಂದಾಗಿದ್ದಾರೆ. ಬೆಂಗಳೂರು, ಹುಬ್ಬಳ್ಳಿ, ಮಂಗಳೂರು ಸೇರಿದಂತೆ ಬಹುತೇಕ ಎಲ್ಲ ನಗರಗಳಲ್ಲಿ ಜನರು ಮಾರುಕಟ್ಟೆಗಳಿಗೆ ದಾಂಗುಡಿಯಿಟ್ಟಿದ್ದಾರೆ. ಬೆಂಗಳೂರಿನ ಕೆ.ಆರ್‌.ಮಾರುಕಟ್ಟೆ, ಯಶವಂತಪುರ, ಮಲ್ಲೇಶ್ವರ, ಗಾಂಧಿಬಜಾರ್‌, ಮಡಿವಾಳ, ಚಿಕ್ಕಪೇಟೆ, ಜಯನಗರ, ಶಿವಾಜಿ ನಗರ ಮಾರುಕಟ್ಟೆಯಲ್ಲಿ ಖರೀದಿ ಭರ್ಜರಿಯಾಗಿ ನಡೆಯುತ್ತಿದೆ. ಹಳ್ಳಿಗಳಿಂದ ನಗರಗಳತ್ತ ಹಣ್ಣು, ತರಕಾರಿ, ಹೂ ದೊಡ್ಡಮಟ್ಟದಲ್ಲಿ ಸಾಗಣೆಯಾಗುತ್ತಿದೆ. ಬೆಂಗಳೂರಿನ ಕೆ.ಆರ್.ಮಾರುಕಟ್ಟೆಯಲ್ಲಿ ಸೋಮವಾರ ನಸುಕಿನಲ್ಲಿಯೇ ರಾಜಧಾನಿಯ ಮೂಲೆಮೂಲೆಗಳಿಂದ ಸಾವಿರಾರು ಜನರು ಮಾರುಕಟ್ಟೆಗೆ ಧಾವಿಸಿದ್ದು, ಹೂ ಖರೀದಿಯಲ್ಲಿ ನಿರತರಾಗಿದ್ದಾರೆ.

ಕರ್ನಾಟಕದ ವಿವಿಧ ಜಿಲ್ಲೆಗಳೂ ಸೇರಿದಂತೆ ನೆರೆಯ ತಮಿಳುನಾಡು ಮತ್ತು ಆಂಧ್ರ ಪ್ರದೇಶಗಳಿಂದಲೂ ರೈತರು ಹೂಗಳನ್ನು ವ್ಯಾಪಾರಕ್ಕಾಗಿ ತಂದಿದ್ದಾರೆ. ಕೆ.ಆರ್.ಮಾರ್ಕೆಟ್​ನಲ್ಲಿ ನಡೆಯುವ ಹೂ ವ್ಯಾಪಾರವು ವಿಶ್ವಪ್ರಸಿದ್ಧ. ಇಲ್ಲಿ ಬಗೆಬಗೆಯ ಹೂಗಳು ಹೂಲ್​ಸೇಲ್ ದರದಲ್ಲಿ ಸಿಗುತ್ತದೆ. ಕಳೆದ ಎರಡು ವರ್ಷಗಳಿಂದ ರಾಜ್ಯದಲ್ಲಿ ಕೊರೊನಾ ಪಿಡುಗಿನ ಆತಂಕದ ಹಿನ್ನೆಲೆಯಲ್ಲಿ ಲಾಕ್​ಡೌನ್ ಇದ್ದ ಕಾರಣ ದಸರಾ ಸಂಭ್ರಮ ಕಳೆಗಟ್ಟಿರಲಿಲ್ಲ. ಈ ಬಾರಿ ಭರ್ಜರಿಯಾಗಿ ಆಚರಣೆ ನಡೆಸಲು ಸಿದ್ಧತೆ ನಡೆದಿದೆ.

ರಾಜ್ಯದಲ್ಲಿ ಹವಾಮಾನವೂ ಏಕಾಏಕಿ ಬದಲಾಗಿದ್ದು ಚಳಿ ಆವರಿಸಿಕೊಳ್ಳುತ್ತಿದೆ. ನಿನ್ನೆ (ಭಾನುವಾರ) ಬೆಂಗಳೂರು ನಗರ ಸೇರಿದಂತೆ ರಾಜ್ಯದ ವಿವಿಧೆಡೆ ಜಿಟಿಜಿಟಿ ಮಳೆಯಾಯಿತು. ಸುರಿಯುವ ಮಳೆ ಮತ್ತು ಚಳಿಯನ್ನೂ ಲೆಕ್ಕಸದೇ ಜನರು ಅಗತ್ಯ ವಸ್ತುಗಳನ್ನು ಖರೀದಿಸಿದರು. ಬಹುತೇಕ ಬಟ್ಟೆ, ಎಲೆಕ್ಟ್ರಾನಿಕ್ಸ್​ ಮತ್ತು ಚಿನ್ನಾಭರಣ ಅಂಗಡಿಗಳಲ್ಲಿ ಹಬ್ಬದ ರಿಯಾಯ್ತಿ ಘೋಷಿಸಲಾಗಿದೆ. ಈ ವರ್ಷ ಹೂವಿನ ಬೆಲೆ ಏರಿಕೆ ಕಂಡಿದ್ದರೆ, ಉತ್ತಮ ಮಳೆಯ ಕಾರಣ ಹಣ್ಣು ಮತ್ತು ತರಕಾರಿ ಇಳುವರಿ ಚೆನ್ನಾಗಿ ಬಂದಿರುವುದರಿಂದ ಅವುಗಳ ಬೆಲೆ ಹಿಂದಿನ ವರ್ಷಗಳಿಗೆ ಹೋಲಿಸಿದರೆ ದುಬಾರಿ ಎನಿಸುವುದಿಲ್ಲ.

ಬಹುತೇಕ ಸರ್ಕಾರಿ ಕಚೇರಿಗಳು, ಖಾಸಗಿ ಕಾರ್ಖಾನೆಗಳು, ಕಾಲೇಜುಗಳು, ವ್ಯಾಪಾರಿ ಮಳಿಗೆ, ಗೋದಾಮು, ಫ್ಯಾಕ್ಟರಿಗಳಲ್ಲಿ ಸೋಮವಾರವೇ ಆಯುಧ ಪೂಜೆ ಹಮ್ಮಿಕೊಳ್ಳಲಾಗಿದೆ. ಬೂದುಗುಂಬಳ ಕಾಯಿ, ಬಾಳೆ ಕಂಬ ಎಲ್ಲ ಮಾರುಕಟ್ಟೆಗಳಲ್ಲಿ ಎದ್ದು ಕಾಣುತ್ತಿದೆ. ಒಂದು ಮಾರು ಕನಕಾಂಬರ ಹೂ ₹ 500ರಿಂದ ₹ 600ರವರೆಗೆ ಮಾರಾಟವಾಗುತ್ತಿದೆ. ತಮಿಳುನಾಡಿನಿಂದ ಹೆಚ್ಚಿನ ಪ್ರಮಾಣದಲ್ಲಿ ಬರುವ ಮಲ್ಲಿಗೆ, ಮಾರಿಗೋಲ್ಡ್‌, ಸೇವಂತಿ, ಐಸ್‌ಬರ್ನ್‌ ಸೇವಂತಿಗೆ ದರವೂ ಏರಿಕೆ ಕಂಡಿದೆ. ಹಿಂದೂಪುರ, ಗೌರಿಬಿದನೂರು ಕಡೆಯಿಂದ ನಿರೀಕ್ಷಿತ ರೀತಿಯಲ್ಲಿ ಸೇವಂತಿ ಹೂ ಬರುತ್ತಿರುವುದು ಬೆಲೆಯಲ್ಲಿ ತುಸು ಸ್ಥಿರತೆ ಉಳಿಯಲು ನೆರವಾಗಿದೆ.

ಆಯುಧಪೂಜೆ ಹಿನ್ನೆಲೆಯಲ್ಲಿ ಬೂದುಗುಂಬಳದ ದರ ಈ ಬಾರಿ ಗಗನಕ್ಕೇರಿದೆ. ಹೋಲ್​ಸೇಲ್ ಆಗಿ ಖರೀದಿಸಿದರೆ ಸುಮಾರು ₹ 30ರ ಆಸುಪಾಸು, ಚಿಲ್ಲರೆಯಾಗಿ ಖರೀದಿಸಿದರೆ ₹ 40ರ ಆಸುಪಾಸಿಗೆ ಸಿಗುತ್ತಿದೆ. ಬೂದುಗುಂಬಳವನ್ನು ಇಡಿಯಾಗಿ ಖರೀದಿಸಿದರೆ ಉತ್ತಮ ಮಾಲು ₹ 200ರಿಂದ ₹ 300ರ ಆಸುಪಾಸಿಗೆ ಸಿಗುತ್ತಿದೆ ಹಬ್ಬದ ಹಿನ್ನೆಲೆಯಲ್ಲಿ ನಗರದ ಬಹುತೇಕ ಫ್ಲೈಓವರ್​ಗಳ ಕೆಳಗೆ ಹಾಗೂ ಜನಸಂಚಾರ ಇರುವ ಸ್ಥಳಗಳಲ್ಲಿ ತಾತ್ಕಾಲಿಕ ಮಾರುಕಟ್ಟೆಗಳು ತಲೆಎತ್ತಿವೆ.

ತಾಜಾ ಸುದ್ದಿ

TV9 Kannada


Leave a Reply

Your email address will not be published.