ಇಂದು ಪಂಚ ರಾಜ್ಯಗಳಲ್ಲಿನ ವಿಧಾನಸಭಾ ಚುನಾವಣೆಯ ತೀರ್ಪು ಹೊರಬೀಳಲಿದೆ.. ತಮಿಳುನಾಡಿನಲ್ಲಿ ಅಮ್ಮ-ಅಣ್ಣ ಇಲ್ಲದೇ ಚುನಾವಣೆ ನಡೆದಿದ್ರೆ, ಕೇರಳದಲ್ಲಿನ ಫಲಿತಾಂಶ ಏನೇ ಬಂದ್ರೂ ಇತಿಹಾಸ ಸೃಷ್ಠಿ ಆಗಲಿದೆ. ಅಸ್ಸಾಂ, ಪುದುಚೇರಿ ಬಗ್ಗೆ ಸಮೀಕ್ಷೆಗಳು ನುಡಿದ ಭವಿಷ್ಯ ನಿಜ ಆಗಬಹುದೇನೋ? ಆದ್ರೆ, ಬಂಗಾಳ ದಂಗಲ್​​ ಮಾತ್ರ ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ. ಇಂದು 8 ಗಂಟೆ ಗೊತ್ತಿಗೆ ಮತಎಣಿಕೆ ಶುರುವಾಗಲಿದೆ.

ಪ್ರಧಾನಿ ಮೋದಿಯ ಬೃಹತ್​ ಱಲಿಗಳು.. ಅಮಿತ್​ಶಾ ಬಿಡುವಿಲ್ಲದ ಪ್ರಚಾರ.. ಮಮತಾ ಮೇಲೆ ಹಲ್ಲೆ.. ನಾನು ಹಿಂದೂ ವಿರೋಧಿಯಲ್ಲ ಎಂಬ ಸ್ಟಾಲಿನ್​ ಹೇಳಿಕೆ.. ಸಾವಿರಾರು ಕೋಟಿ ಹಣ ವಶ.. ಒಂದಲ್ಲ ಎರಡಲ್ಲಾ ಹತ್ತಾರು ಹೇಳಿಕೆಗಳು ಹಾಗೂ ವಿಶೇಷ ಸಂಗತಿಗಳಿಗೆ ಸಾಕ್ಷಿಯಾದ ಐದು ರಾಜ್ಯಗಳ ಚುನಾವಣಾ ಪ್ರಕ್ರಿಯೆ ಕ್ಲೈಮಾಕ್ಸ್​ಗೆ ಬಂದಿದೆ. ಮತದಾರರು ತೀರ್ಪು ಬರೆದಾಗಿದೆ. ಅದು ಬಹಿರಂಗ ಆಗೋಕೆ ಕೆಲವೇ ಗಂಟೆಗಳಷ್ಟೇ ಬಾಕಿಯಿದೆ.

ಪಶ್ಚಿಮ ಬಂಗಾಳ

ಸದ್ಯ ಇಡೀ ದೇಶದ ಗಮನ ಸೆಳೆದಿರೋ ರಾಜ್ಯ. ಚುನಾವಣೆ ಘೋಷಣೆಗೂ ವರ್ಷದ ಮೊದಲಿನಿಂದಲೂ ಕೇಂದ್ರ ಗೃಹಸಚಿವ ಅಮಿತ್ ​ಶಾ ಈ ರಾಜ್ಯವನ್ನ ವಶಪಡಿಸಿಕೊಳ್ಳೋಕೆ ತಂತ್ರ ಹೆಣೆದಿದ್ದಾರೆ. ಇದೇ ಮೊದಲ ಬಾರಿಗೆ 8 ಹಂತಗಳಲ್ಲಿ ಈ ರಾಜ್ಯಕ್ಕೆ ಚುನಾವಣೆ ನಡೆದಿದೆ. ಪ್ರಧಾನಿ ಮೋದಿ ಬೃಹತ್​ ಱಲಿಗಳನ್ನ ನಡೆಸಿದ್ದಾರೆ. ಅಮಿತ್ ​ಶಾ ತಿಂಗಳುಗಟ್ಟಲೆ ಬೆವರು ಹರಿಸಿದ್ದಾರೆ. ಇತ್ತ ಮಮತಾ ಬ್ಯಾನರ್ಜಿ ಕೂಡ ತಮ್ಮ ಕಾಲಿಗೆ ಊನವಾಗಿದ್ದರೂ ವೀಲ್​ ಚೇರ್​ನಲ್ಲಿಯೇ ಇಡೀ ರಾಜ್ಯ ಸುತ್ತಿದ್ದಾರೆ. ಬಿಜೆಪಿ ಹಿಂದೂ ಮತ ಬೇಟೆ ನಡೆಸಿದರೆ, ಇದೇ ಮೊದಲಬಾರಿ ನಾನು ಶಾಂಡಿಲ್ಯಗೋತ್ರ ಎಂದು ಹೇಳುವ ಮೂಲಕ ದೀದಿ ಠಕ್ಕರ್​ ಕೊಟ್ಟಿದ್ದಾರೆ.

ಒಂದೆಡೆ ಜೈ ಶ್ರೀರಾಮ್​ ಎಂಬ ರಾಮನಾಮ ಮೊಳಗಿದರೆ ಮತ್ತೊಂದೆಡೆ ಕಾಳಿ ದೇವಿ ಆರಾಧನೆಯೂ ಕೇಳಿಬಂದಿದೆ. ಇವೆಲ್ಲವೂ ಪಶ್ಚಿಮ ಬಂಗಾಳದಲ್ಲಿ ಚರ್ಚೆಗೊಳಗಾದ ಗಮನ ಸೆಳೆದ ಅಂಶಗಳು. ಎಲ್ಲವನ್ನೂ ಆಲಿಸಿದ ಮತದಾರ ತೀರ್ಪು ಬರೆದಿದ್ದು ನಾಳೆ ಅದು ಬಹಿರಂಗವಾಗಲಿದೆ. ಮೋದಿ ದೀದಿಯ ಯುದ್ಧದಲ್ಲಿ ಗೆಲ್ಲೋದು ಯಾರು ಎಂಬುದನ್ನ ತಿಳಿಯಲು ಇಡೀ ದೇಶ ಕಾತರವಾಗಿದೆ.

ತಮಿಳುನಾಡು


ಪಶ್ಚಿಮ ಬಂಗಾಳದಷ್ಟೇ ಗಮನ ಸೆಳೆದ ದಕ್ಷಿಣ ಭಾರತದ ಮತ್ತೊಂದು ರಾಜ್ಯ ತಮಿಳುನಾಡು. ಕರುಣಾನಿಧಿ, ಜಯಲಲಿತಾರಂತಹ ದಿಗ್ಗಜರು ಇಲ್ಲದೇ ನಡೆದ ಪ್ರಥಮ ಚುನಾವಣೆ ಎಂಬ ಕಾರಣಕ್ಕೆ ಇದು ಗಮನ ಸೆಳೆದಿತ್ತು. ಇದೇ ಪ್ರಥಮಬಾರಿಗೆ ಬಿಜೆಪಿ ಸಾಕಷ್ಟು ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಗಳನ್ನು ನಿಲ್ಲಿಸುವ ಜೊತೆಗೆ ಅಬ್ಬರದ ಪ್ರಚಾರವನ್ನೂ ನಡೆಸಿತ್ತು. ಇದರಿಂದ ಬೆದರಿದ ಡಿಎಂಕೆಯ ಸ್ಟಾಲಿನ್​ ನಾನು ಹಿಂದೂ ವಿರೋಧಿಯಲ್ಲ ನನ್ನ ಪತ್ನಿ ಮನೆಯಲ್ಲಿ ದೇವರ ಪೂಜೆ ಮಾಡುತ್ತಾಳೆ ಎಂಬ ಹೇಳಿಕೆಯನ್ನೂ ನೀಡಿದ್ದರು. ಇದುವರೆಗೂ ಸಾಂಪ್ರದಾಯಿಕವಾಗಿ ಡಿಎಂಕೆ ಎಐಎಡಿಎಂಕೆಗಷ್ಟೇ ಸೀಮಿತವಾಗಿದ್ದ ಈ ರಾಜ್ಯದಲ್ಲಿ ಬಿಜೆಪಿಯ ತಂತ್ರಗಳಿಗೆ ಮತದಾರರ ಮಣೆಹಾಕಿದ್ದಾನಾ ಎಂಬ ಕುತೂಹಲವಿದೆ.

ಡಿಎಂಕೆ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದ ಕಾಂಗ್ರೆಸ್​ನ ರಾಷ್ಟ್ರೀಯ ನೇತಾರ ರಾಹುಲ್​ಗಾಂಧಿ ನೇರವಾಗಿ ಜನರ ಬಳಿಯೇ ತೆರಳಿ ಅವರ ಮನಗೆಲ್ಲುವ ಪ್ರಯತ್ನವನ್ನು ಮಾಡಿದ್ದರು. ಜೊತೆಗೆ ಖ್ಯಾತ ನಟ ಕಮಲ್​ಹಾಸನ್​ ಕೂಡ ರಾಜಕೀಯ ಪ್ರವೇಶ ಮಾಡಿದ್ದಲ್ಲದೇ ಚುನಾವಣಾ ಅಖಾಡಕ್ಕೂ ಧುಮುಕಿ ತಮ್ಮ ಪಕ್ಷದ ಮೂಲಕ ಮತದಾರರ ಮನಗೆಲ್ಲೋ ಪ್ರಯತ್ನ ಮಾಡಿದ್ದಾರೆ. ಎಲ್ಲ ರಾಜಕೀಯ ಪಕ್ಷಗಳೂ ತರಾವರಿ ಆಮಿಷಗಳನ್ನು ಮತದಾರನಿಗೆ ನೀಡಿವೆ. ಇವೆಲ್ಲವಕ್ಕೂ ಮತದಾರ ಯಾವ ರೀತಿ ಪ್ರತಿಕ್ರಿಯಿಸಿದ್ದಾನೆ ಅನ್ನೋದು ಮತಯಂತ್ರಗಳಲ್ಲಿ ಭದ್ರವಾಗಿದೆ. ನಾಳೆ ಅದು ಇಡೀ ದೇಶಕ್ಕೆ ತಿಳಿಯಲಿದೆ.

ಕೇರಳ

ಇನ್ನು ಕೇರಳ ರಾಜ್ಯಕ್ಕೆ ನಡೆದ ಚುನಾವಣಾ ತೀರ್ಪು ಕೂಡ ನಾಳೆಯೇ ಹೊರಬರಲಿದೆ. ಸಾಂಪ್ರದಾಯಿಕ ವಿಷಯಗಳ ಜೊತೆ ಸರ್ಕಾರದ ಪ್ರತಿನಿಧಿಗಳೇ ಗೋಲ್ಡ್​ ಸ್ಮಗ್ಲಿಂಗ್​ ಕೇಸ್​ನಲ್ಲಿ ಪ್ರತ್ಯಕ್ಷವಾಗಿ ಪರೋಕ್ಷವಾಗಿ ಚರ್ಚೆಯಾದ ವಿಷಯ. ಜೊತೆಗೆ ಬಿಜೆಪಿ ನಡೆಸಿದ ಹಿಂದೂ ಮತಬೇಟೆ. ಅಂತಿಮವಾಗಿ ಮತದಾರರನ ಚಿತ್ತ ಯಾರತ್ತ ಅನ್ನೋದು ನಾಳೆ ಬಹಿರಂಗವಾಗಲಿದೆ.

ಅಸ್ಸಾಂ

ಅದೇ ರೀತಿ ಇಡೀ ದೇಶದ ಗಮನ ಸೆಳೆದಿರೋ ಮತ್ತೆರೆಡು ರಾಜ್ಯಗಳು ಅಸ್ಸಾಂ ಮತ್ತು ಪುದುಚೇರಿ. ಅಸ್ಸಾಂನಲ್ಲೂ ಅಮಿತ್​ಶಾ ಹಾಗೂ ರಾಹುಲ್​ಗಾಂಧಿ ರೋಡ್​ಶೋ ಗಳನ್ನ ನಡೆಸಿದ್ದಾರೆ. ಗೆಲುವಿಗಾಗಿ ಬೇಕಿರೋ ಎಲ್ಲಾ ತಂತ್ರಗಳನ್ನೂ ಹೆಣೆದಿದ್ದಾರೆ. ಅಂತಿಮವಾಗಿ ಮತದಾರ ಏನು ತೀರ್ಮಾನ ಮಾಡಿದ್ದಾನೆ ಅನ್ನೋದು ಗೊತ್ತಾಗೋದು ನಾಳೆಯೇ.

ಪುದುಚೆರಿ


ಇನ್ನು ಪುದುಚೇರಿ ಕೇಂದ್ರಾಡಳಿತ ಪ್ರದೇಶ ಈ ಬಾರಿ ಚುನಾವಣೆಗೂ ಸ್ವಲ್ಪದಿನ ಮೊದಲಷ್ಟೇ ಸರ್ಕಾರ ಉರುಳಿಬಿದ್ದಿತ್ತು. ಅದಕ್ಕೆ ಕಾರಣ ಕಾಂಗ್ರೆಸ್​ನ ಶಾಸಕರು ಪಕ್ಷ ತೊರೆದು ಬಿಜೆಪಿ ಸೇರಿದ್ದು. ಹಾಗಾಗಿ ಬಿಜೆಪಿ ಈ ಬಾರಿಯ ಜಿದ್ದಾಜಿದ್ದಿಯಲ್ಲಿರೋ ಪ್ರಮುಖ ಪಕ್ಷವಾಗಿದೆ. ಒಂದು ವೇಳೆ ಬಿಜೆಪಿ ಗೆದ್ದರೆ ಕರ್ನಾಟಕ ಹೊರತುಪಡಿಸಿ ದಕ್ಷಿಣ ಭಾರತದಲ್ಲಿ ಸರ್ಕಾರ ರಚಿಸೋ ಎರಡನೇ ರಾಜ್ಯವಾಗಲಿದೆ. ಹಾಗಾಗಿ ಪುದುಚೇರಿಯ ಫಲಿತಾಂಶವೂ ಗಮನ ಸೆಳೆದಿದೆ.

ಒಟ್ಟಾರೆ ಕೊರೊನಾವನ್ನೂ ಲೆಕ್ಕಿಸದೆ ಈ ಐದು ರಾಜ್ಯಗಳಲ್ಲಿ ವಿವಿಧ ರಾಜಕೀಯ ಪಕ್ಷಗಳು ಗೆಲವಿಗಾಗಿ ಬೆವರು ಹರಿಸಿವೆ. ಆದರೆ, ಮತದಾರ ಯಾರ ಪರ ನಿಂತಿದ್ದಾನೆ ಅನ್ನೋದು ನಾಳೆ ತಿಳಿಯಲಿದೆ.

The post ಇಂದು ಪಂಚರಾಜ್ಯಗಳ ಚುನಾವಣಾ ಫಲಿತಾಂಶ.. ಮತಎಣಿಕೆಗೆ ಕ್ಷಣಗಣನೆ appeared first on News First Kannada.

Source: newsfirstlive.com

Source link