ಇಂದು ಪುನೀತ ನಮನ ಕಾರ್ಯಕ್ರಮ; ಭಾಗವಹಿಸುವ ಗಣ್ಯರು, ಸಮಯ, ನೇರ ಪ್ರಸಾರದ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ | Puneeth Namana a special program from Karnataka Film Chamber is today November 16th how to watch here is details


ಇಂದು ಪುನೀತ ನಮನ ಕಾರ್ಯಕ್ರಮ; ಭಾಗವಹಿಸುವ ಗಣ್ಯರು, ಸಮಯ, ನೇರ ಪ್ರಸಾರದ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ

ಪುನೀತ್ ರಾಜ್​ಕುಮಾರ್

ನಟ ಪುನೀತ್ ರಾಜ್​ಕುಮಾರ್ (Puneeth Rajkumar) ಅವರಿಗೆ ಚಿತ್ರರಂಗದ ಪರವಾಗಿ ನಮನ ಸಲ್ಲಿಸುವ ಉದ್ದೇಶದಿಂದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಇಂದು (ನವೆಂಬರ್ 16) ‘ಪುನೀತ ನಮನ’ (Puneeth Namana) ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಕನ್ನಡ ಚಿತ್ರರಂಗದ ಎಲ್ಲಾ ಗಣ್ಯರು ಭಾಗವಹಿಸಬೇಕು ಎಂಬ ಉದ್ದೇಶದಿಂದ ಇಂದು, ಚಿತ್ರ ಪ್ರದರ್ಶನ ಹೊರತುಪಡಿಸಿ, ಚಿತ್ರೋದ್ಯಮದ ಮತ್ತೆಲ್ಲಾ ಕೆಲಸಗಳಿಗೆ ರಜೆ ಘೋಷಿಸಲಾಗಿದೆ. ಮಧ್ಯಾಹ್ನ 3 ಗಂಟೆಗೆ ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿ (Gayathri Vihar) ಕಾರ್ಯಕ್ರಮ ಆರಂಭವಾಗಲಿದ್ದು, ಸಕಲ ಸಿದ್ಧತೆ ಮಾಡಲಾಗಿದೆ. ದಕ್ಷಿಣ ಭಾರತದ ಖ್ಯಾತ ಕಲಾವಿದರು, ರಾಜಕೀಯ ನಾಯಕರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಡಾ.ರಾಜ್​ಕುಮಾರ್ ಕುಟುಂಬ ಭಾಗಿಯಾಗಲಿದ್ದು, ಶಿವರಾಜ್​ ಕುಮಾರ್​ (Shiva Rajkumar), ರಾಘವೇಂದ್ರ ರಾಜ್​ಕುಮಾರ್ (Raghavendra Rajkumar)​ ಹಾಗೂ ಅವರ ಕುಟುಂಬದವರು ‘ಪುನೀತ ನಮನ’ದಲ್ಲಿ ಉಪಸ್ಥಿತರಿರಲಿದ್ದಾರೆ. ಪಾಸ್ ಇದ್ದವರಿಗೆ ಮಾತ್ರ ಪ್ರವೇಶ ನೀಡಲಾಗುತ್ತಿದ್ದು, 2000 ಜನ ಭಾಗವಹಿಸುವ ನಿರೀಕ್ಷೆ ಇದೆ.

ಕಾರ್ಯಕ್ರಮದ ರೂಪುರೇಷೆಯನ್ನು ವಾಣಿಜ್ಯ ಮಂಡಳಿ ಸಿದ್ಧಪಡಿಸಿದ್ದು, ಕಾರ್ಯಕ್ರಮದ ಪ್ರಾರಂಭದಲ್ಲಿ ಹಾಡಿನ ಮೂಲಕ ಅಪ್ಪುಗೆ ಗೀತ ನಮನ ಸಲ್ಲಿಸಲಾಗುತ್ತದೆ. ಅಪ್ಪು ಸಿನಿಮಾ ಜರ್ನಿ ಮತ್ತು ಸಾಮಾಜಿಕ ಎರಡೂ ವಿಚಾರಗಳನ್ನ ಸೇರಿಸಿ 5 ನಿಮಿಷದ ಹಾಡನ್ನು ತಯಾರಿಸಲಾಗಿದೆ. ಹಲವು ಗಾಯಕ, ಗಾಯಕಿಯರು ವೇದಿಕೆ ಮೇಲೆ ಅಪ್ಪು ಹಾಡುಗಳ ಹಾಡುವ ಮೂಲಕ ನಮನ ಸಲ್ಲಿಸಲಿದ್ದಾರೆ. ವೇದಿಕೆ ಮೇಲೆ ಯಾವುದೇ ಕುರ್ಚಿಗಳು ಇರುವುದಿಲ್ಲ ಬದಲಾಗಿ, ಕೇವಲ ಎಲ್ ಇ ಡಿ ವಾಲ್ ಇರಲಿದೆ. 10 ನಿಮಿಷಗಳ ಕಾಲ ಅಪ್ಪು ಜರ್ನಿಯ ಬಗ್ಗೆ ಎವಿ ಮಾಡಲಾಗಿದೆ. ಅಪ್ಪು ಬಗ್ಗೆ ಸ್ಟಾರ್ ನಟರು ತಮ್ಮ ಒಡನಾಟವನ್ನು ಹಂಚಿಕೊಳ್ಳಲಿದ್ದಾರೆ.  ಎಲ್ಲರೂ ಒಂದೆರಡು ನಿಮಿಷ ಪುನೀತ್ ಜೊತೆಗಿನ ನೆನಪುಗಳನ್ನು ಹಂಚಿಕೊಳ್ಳಲಿದ್ದಾರೆ ಎಂದು ಸಂಗೀತ ನಿರ್ದೇಶಕ ಗುರುಕಿರಣ್ ಮಾಹಿತಿ ನೀಡಿದ್ದಾರೆ.

ಸ್ಯಾಂಡಲ್​​ವುಡ್​​ನ (Sandalwood) 142 ಕಲಾವಿದರಿಗೆ ಆಹ್ವಾನ ನೀಡಲಾಗಿದ್ದು, ಪರಭಾಷೆಯ 40 ಕ್ಕೂ ಹೆಚ್ಚು ಕಲಾವಿದರು ಪುನೀತ ನಮನಕ್ಕೆ ಬರಲಿದ್ದಾರೆ. ಪುನೀತ್ ಎಲ್ಲಾ ನಟರ ಜೊತೆ ಅನ್ಯೋನ್ಯವಾಗಿದ್ದರು. ಆದ್ದರಿಂದಲೇ ಕನ್ನಡದ ಎಲ್ಲಾ ನಟರು ಆಗಮಿಸುವ ನಿರೀಕ್ಷೆ ಇದೆ. ಸುದೀಪ್, ಯಶ್, ಗಣೇಶ್, ಉಪೇಂದ್ರ, ರವಿಚಂದ್ರನ್, ಶ್ರೀಮುರಳಿ, ರಕ್ಷಿತ್ ಶೆಟ್ಟಿ, ರಿಷಬ್ ಶೆಟ್ಟಿ, ಧ್ರುವ ಸರ್ಜಾ ಸೇರಿದಂತೆ‌ ಕನ್ನಡದ ಎಲ್ಲಾ ಕಲಾವಿದರು ಭಾಗಿ ಆಗಲಿದ್ದು, ಪುನೀತ್ ಜೊತೆ ನಟಿಸಿದ ಎಲ್ಲಾ ನಾಯಕಿಯರು, ಹಿರಿಯ ಕಲಾವಿದರು ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ. ರಾಜಕೀಯ ರಂಗದಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಇಡೀ ಸಚಿವ ಸಂಪುಟ ಭಾಗವಹಿಸಲಿದೆ. ಮೈಸೂರಿನ‌ ಮಹಾರಾಜ ಯದುವೀರ್ ಕೂಡ ಬರಲಿದ್ದಾರೆ.

ದಕ್ಷಿಣ ಭಾರತ ಚಿತ್ರರಂಗದ ಸ್ಟಾರ್​ಗಳಾದ ನಟ ವಿಶಾಲ್, ರಜನಿಕಾಂತ್, ದಳಪತಿ ವಿಜಯ್, ಅಜಿತ್, ವಿಜಯ್ ಸೇತುಪತಿ, ಚಿರಂಜೀವಿ, ಅಲ್ಲು ಅರ್ಜುನ್, ಜ್ಯೂ. ಎನ್​ಟಿಆರ್, ಪ್ರಭಾಸ್, ರಾಮ್ ಚರಣ್, ಮೋಹನ್ ಲಾಲ್ ಸೇರಿದಂತೆ ಪ್ರಮುಖ ಕಲಾವಿದರು ಭಾಗವಹಿಸುವ ಸಾಧ್ಯತೆ ಇದೆ. ಬಾಲಿವುಡ್ ದಿಗ್ಗಜ ಅಮಿತಾಭ್ ಬಚ್ಚನ್ ಕೂಡ ಬರಲಿದ್ದಾರೆ ಎಂಬ ನಿರೀಕ್ಷೆ ಇದೆ.

ಕಾರ್ಯಕ್ರಮದಲ್ಲಿ ನಾಗೇಂದ್ರ ಪ್ರಸಾದ್ ಬರೆದಿರುವ ಹಾಡಿನ ಮೂಲಕ ಪುನೀತ್​ಗೆ ನಮನ ಸಲ್ಲಿಸಲಾಗುತ್ತದೆ. ಗುರುಕಿರಣ್ ಹಾಡಿಗೆ ಸಂಗೀತ ಸಂಯೋಜನೆ ಮಾಡಿದ್ದು, ಈ ಗೀತೆಯ ಮೂಲಕ ಕಾರ್ಯಕ್ರಮ ಆರಂಭ ಆಗಲಿದೆ. ವಿಜಯ್ ಪ್ರಕಾಶ್, ಗುರುಕಿರಣ್ ಹಾಗೂ ರಾಜೇಶ್ ಕೃಷ್ಣನ್ ಅವರಿಂದ ಗೀತ ನಮನ ನಡೆಯಲಿದೆ. ಮಧ್ಯಾಹ್ಯ 3 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಕಾರ್ಯಕ್ರಮ ನಡೆಯಲಿದೆ.

ನೇರಪ್ರಸಾರವನ್ನು ಎಲ್ಲಿ ವೀಕ್ಷಿಸಬಹುದು?
ಇಂದು ನಡೆಯುತ್ತಿರುವ ಪುನೀತ ನಮನ ಕಾರ್ಯಕ್ರಮದಲ್ಲಿ ಕೇವಲ ಚಿತ್ರೋದ್ಯಮದ ಮಂದಿಗೆ ಮಾತ್ರ ಆಹ್ವಾನ ನೀಡಲಾಗಿದ್ದು, ಸಾರ್ವಜನಿಕರಿಗೆ ಆಹ್ವಾನವಿಲ್ಲ. ಅಭಿಮಾನಿಗಳಿಗೆಂದೇ ಪ್ರತ್ಯೇಕ ಕಾರ್ಯಕ್ರಮವೊಂದನ್ನು ಆಯೋಜಿಸುವ ಯೋಚನೆ ವಾಣಿಜ್ಯ ಮಂಡಳಿಗಿದೆ ಎಂದು ಮೂಲಗಳು ತಿಳಿಸಿವೆ. ಇಂದು ನಡೆಯುವ ಕಾರ್ಯಕ್ರಮದ ಸಂಪೂರ್ಣ ನೇರ ಪ್ರಸಾರವನ್ನು ಟಿವಿ9 ಯುಟ್ಯೂಬ್​ ಚಾನಲ್​ ಮೂಲಕ ವೀಕ್ಷಿಸಬಹುದಾಗಿದೆ.

ಇಂದು ನಡೆಯುವ ಕಾರ್ಯಕ್ರಮಕ್ಕೆ ವರುಣನ ಆತಂಕ ಎದುರಾಗಿದೆ. ಬೆಂಗಳೂರಿನಲ್ಲಿ ಮಳೆಯ ವಾತಾವರಣವಿದ್ದು, ಕಾರ್ಯಕ್ರಮಕ್ಕೆ ಅಡ್ಡಿಪಡಿಸಲಿದೆಯೇ ಎಂಬ ಭೀತಿ ಎದುರಾಗಿದೆ. ಮಳೆಯ ಸಮಸ್ಯೆಯಿಲ್ಲದೇ ಕಾರ್ಯಕ್ರಮ ಸಾಂಗವಾಗಿ ನಡೆಯಲಿ ಎಂದು ಎಲ್ಲರೂ ಆಶಿಸುತ್ತಿದ್ದಾರೆ.


ಇದನ್ನೂ ಓದಿ:

‘ಪುನೀತ ನಮನ’ ಕಾರ್ಯಕ್ರಮದ ಸಿದ್ಧತೆ ಹೇಗಿದೆ, ಯಾರೆಲ್ಲ ಬರ್ತಾರೆ? ಇಲ್ಲಿದೆ ಸಂಪೂರ್ಣ ವಿವರ  

‘ಪುನೀತ್​ ನಮನ’ ಕಾರ್ಯಕ್ರಮಕ್ಕೆ ಪಾಸ್​ ಇಲ್ಲದವರಿಗೆ ನೋ ಎಂಟ್ರಿ; ಪೊಲೀಸರು ಕೊಟ್ಟ​ ವಾರ್ನಿಂಗ್​ ಏನು?

TV9 Kannada


Leave a Reply

Your email address will not be published. Required fields are marked *