ಇಂದು ರಾಜ್ಯಸಭೆಗೆ ಚುನಾವಣೆ: ಕಣದಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸೇರಿ ನಾಲ್ವರು ಅಭ್ಯರ್ಥಿಗಳು | Rajya Sabha Election Nirmala Sitharaman Jaggesh Kupendra Reddy Jairam Ramesh Candidates from Karnataka


ಇಂದು ರಾಜ್ಯಸಭೆಗೆ ಚುನಾವಣೆ: ಕಣದಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸೇರಿ ನಾಲ್ವರು ಅಭ್ಯರ್ಥಿಗಳು

ನಿರ್ಮಲಾ ಸೀತಾರಾಮನ್, ಜಗ್ಗೇಶ್ ಮತ್ತು ಜೈರಾಂ ರಮೇಶ್

ಬಿಜೆಪಿಯಿಂದ ನಿರ್ಮಲಾ ಸೀತಾರಾಮನ್, ಜಗ್ಗೇಶ್​, ಲೆಹರ್ ಸಿಂಗ್, ಜೆಡಿಎಸ್​ನಿಂದ ಕುಪೇಂದ್ರ ರೆಡ್ಡಿ, ಕಾಂಗ್ರೆಸ್​ನಿಂದ ಜೈರಾಮ್ ರಮೇಶ್​, ಮನ್ಸೂನ್ ಅಲಿ ಖಾನ್​ ಕಣದಲ್ಲಿದ್ದಾರೆ.

ಬೆಂಗಳೂರು: ರಾಜ್ಯಸಭೆಯ 4 ಸ್ಥಾನಗಳಿಗೆ ಇಂದು (ಜೂನ್ 10) ಚುನಾವಣೆ ನಡೆಯಲಿದೆ. ಬೆಳಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಮತದಾನಕ್ಕೆ ಅವಕಾಶವಿದ್ದು, ಸಂಜೆ 6 ಗಂಟೆಯವರೆಗೆ ಮತ ಎಣಿಕೆ ಪ್ರಕ್ರಿಯೆ ನಡೆಯಲಿದ್ದು, ನಂತರ ಫಲಿತಾಂಶ ಪ್ರಕಟವಾಗಲಿದೆ. ವಿಧಾನಸೌಧದ ಕೊಠಡಿ ಸಂಖ್ಯೆ 106ರಲ್ಲಿ ಮತದಾನಕ್ಕೆ ಅಗತ್ಯ ಸಿದ್ಧತೆ ಮಾಡಲಾಗಿದ್ದು, 224 ಸದಸ್ಯರು ಮತಚಲಾಯಿಸಲಿದ್ದಾರೆ. ಬಿಜೆಪಿಯಿಂದ ನಿರ್ಮಲಾ ಸೀತಾರಾಮನ್, ಜಗ್ಗೇಶ್​, ಲೆಹರ್ ಸಿಂಗ್, ಜೆಡಿಎಸ್​ನಿಂದ ಕುಪೇಂದ್ರ ರೆಡ್ಡಿ, ಕಾಂಗ್ರೆಸ್​ನಿಂದ ಜೈರಾಮ್ ರಮೇಶ್​, ಮನ್ಸೂನ್ ಅಲಿ ಖಾನ್​ ಕಣದಲ್ಲಿದ್ದಾರೆ. ರಾಜ್ಯಸಭೆಗೆ ಆಯ್ಕೆಯಾಗಲು ಪ್ರತಿ ಅಭ್ಯರ್ಥಿಗೆ 45 ಮತ ಬೇಕು. ಬಿಜೆಪಿ 122, ಕಾಂಗ್ರೆಸ್ 71, ಜೆಡಿಎಸ್​ ಬಳಿ 32 ಮತಗಳನ್ನು ಹೊಂದಿವೆ.

ಅಡ್ಡಮತದಾನವೇ ನಿರ್ಣಾಯಕ

ಸಂಖ್ಯಾ ಬಲ ವಿಶ್ಲೇಷಿಸಿದರೆ ಬಿಜೆಪಿಯ ನಿರ್ಮಲಾ ಸೀತಾರಾಮನ್ ಮತ್ತು ಜಗ್ಗೇಶ್, ಕಾಂಗ್ರೆಸ್​ನ ಜೈರಾಮ್ ರಮೇಶ್ ಅವರ ಆಯ್ಕೆಗೆ ಹೆಚ್ಚು ಸಮಸ್ಯೆಗಳಿಲ್ಲ. ಕಾಂಗ್ರೆಸ್​ನ 2ನೇ ಅಭ್ಯರ್ಥಿ ಮನ್ಸೂರ್ ಅಲಿ ಖಾನ್, ಜೆಡಿಎಸ್​ನ ಅಭ್ಯರ್ಥಿ ಕುಪೇಂದ್ರ ರೆಡ್ಡಿ ಮತ್ತು ಬಿಜೆಪಿಯ 3ನೇ ಅಭ್ಯರ್ಥಿ ಲೆಹರ್ ಸಿಂಗ್ ನಡುವೆ ಪೈಪೋಟಿ ಇದೆ.

ಜೆಡಿಎಸ್​ನ ನಾಲ್ವರು ಶಾಸಕರು ನಾಯಕರ ವಿರುದ್ಧ ಮುನಿಸಿಕೊಂಡಿರುವುದು ಮತ್ತು ಅಡ್ಡಗೋಡೆ ದೀಪವಿಟ್ಟಂತೆ ಹೇಳಿಕೆ ನೀಡಿರುವುದು ಹಲವು ಅಚ್ಚರಿಯ ಬೆಳವಣಿಗೆಗಳ ನಿರೀಕ್ಷೆ ಮೂಡಿಸಿದೆ. ಬೆಂಗಳೂರಿನಲ್ಲಿ ನಡೆದ ಜೆಡಿಎಸ್ ಶಾಸಕಾಂಗ ಪಕ್ಷದ ಸಭೆಗೂ ತುಮಕೂರು ಜಿಲ್ಲೆ ಗುಬ್ಬಿ ಕ್ಷೇತ್ರದ ಶಾಸಕ ಎಸ್.ಆರ್.ಶ್ರೀನಿವಾಸ್, ಹಾಸನ ಜಿಲ್ಲೆ ಅರಸೀಕೆರೆ ಕ್ಷೇತ್ರದ ಶಾಸಕ ಕೆ.ಎಂ.ಶಿವಲಿಂಗೇಗೌಡ, ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಮತ್ತು ಕೋಲಾರ ಕ್ಷೇತ್ರದ ಶಾಸಕ ಶ್ರೀನಿವಾಸಗೌಡ ಗೈರು ಹಾಜರಾಗಿದ್ದರು.

ಡಿಕೆಶಿ ಎಚ್ಚರಿಕೆ

ಈ ಚುನಾವಣೆಯನ್ನು ಕಾಂಗ್ರೆಸ್ ಗಂಭೀರವಾಗಿ ಪರಿಗಣಿಸಿದೆ. ಪಕ್ಷದ ನಿಲುವನ್ನು ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಶಾಸಕರಿಗೆ ಮನವರಿಕೆ ಮಾಡಿಕೊಟ್ಟರು. ನಮ್ಮ ಶಾಸಕರಿಂದ ಅಡ್ಡ ಮತದಾನ ಆಗುವುದಿಲ್ಲವೆಂಬ ನಂಬಿಕೆಯಿದೆ. ಯಾರಾದ್ರು ಒಂದೇ ಒಂದು ಅಡ್ಡಮತದಾನ ಮಾಡಿದ್ರೆ ಹುಷಾರ್. ಅಡ್ಡ ಮತದಾನ ಮಾಡಿದರೆ ನಾನು ಬದುಕಿರುವವರೆಗೆ ಬಿ ಫಾರಂ ಸಿಗದಂತೆ ಮಾಡುತ್ತೇನೆ. ಪಕ್ಷದ ಘನತೆ ವಿಚಾರದಿಂದ ಅಡ್ಡಮತದಾನ ಮಾಡಬಾರದು. ಅಡ್ಡ ಮತದಾನ ಮಾಡುವವರ ರಾಜಕೀಯ ಭವಿಷ್ಯ ಸಂಕಷ್ಟದಲ್ಲಿರಲಿದೆ ಎಂದು ಎಚ್ಚರಿಸಿದರು.

ಕರ್ನಾಟಕದ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ. ದೇಶದ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

TV9 Kannada


Leave a Reply

Your email address will not be published. Required fields are marked *