– ಮಹಾರಾಷ್ಟ್ರದ ಕೊಂಕಣ ವಲಯದಲ್ಲಿ 6 ಮಂದಿ ಬಲಿ
– ಮುಂಬೈಯಲ್ಲಿ ಭಾರೀ ಮಳೆ

ಮುಂಬೈ/ ಗಾಂಧಿನಗರ: ಕೊರೊನಾ ಮಧ್ಯೆ ತೌಕ್ತೆ ಚಂಡಮಾರುತದ ಅಬ್ಬರ ಜೋರಾಗಿದ್ದು, ಬಿರುಗಾಳಿ ಸಹಿತ ಜೋರು ಮಳೆಗೆ ಮುಂಬೈ ತತ್ತರಿಸಿಹೋಗಿದೆ. ಮುಂಬೈನಲ್ಲಿ ಗಂಟೆಗೆ 120 ಕಿಲೋಮೀಟರ್ ವೇಗದಲ್ಲಿ ಬಿರುಗಾಳಿ ಬೀಸ್ತಿದ್ದು, ಜನಜೀವನ ಸಂಪೂರ್ಣ ಸ್ತಂಬ್ಧಗೊಂಡಿತ್ತು.

ರೈಲು ಸೇವೆ, ವಿಮಾನ ಸೇವೆಗಳು ಸಂಪೂರ್ಣ ಬಂದ್ ಆಗಿವೆ. ಸದ್ಯ ಮುಂಬೈನಿಂದ 120 ಕಿಲೋಮೀಟರ್ ದೂರದಲ್ಲಿ ವಾಯುವ್ಯ ದಿಕ್ಕಿನತ್ತ ಚಲಿಸುತ್ತಿರುವ  ತೌಕ್ತೆ ಚಂಡಮಾರುತ ಇಂದು ರಾತ್ರಿ 11 ಗಂಟೆ ಒಳಗೆ ಗುಜರಾತ್‍ನ ಪೋರಬಂದರ್ ಮತ್ತು ಮಹುವಾ ನಡುವೆ ತೀರಕ್ಕೆ ಅಪ್ಪಳಿಸುವ ಸಾಧ್ಯತೆಯಿದೆ. ಈ ಸಂದರ್ಭದಲ್ಲಿ ಗಾಳಿಯ ವೇಗ ಗಂಟೆಗೆ 150 ರಿಂದ 160 ಕಿಲೋಮೀಟರ್ ಇರಲಿದ್ದು, ಭಾರೀ ಮಳೆ ಆಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ಮಹಾರಾಷ್ಟ್ರದ ಕೊಂಕಣ ಪ್ರದೇಶದಲ್ಲಿ ಒಟ್ಟು 6 ಜನ ಮೃತಪಟ್ಟಿದ್ದಾರೆ. ಇಂದು ಬೆಳಗ್ಗೆ 8:30ರಿಂದ ಮಧ್ಯಾಹ್ನ 1:30ರ ನಡುವೆ ಮುಂಬೈನಲ್ಲಿ ದಾಖಲೆಯ 157 ಮಿಲಿಮೀಟರ್ ಮಳೆ ಆಗಿದೆ. ಹಲವು ಕ್ವಾರಂಟೈನ್ ಕೇಂದ್ರಗಳು, ಆಸ್ಪತ್ರೆಗಳು ಜಲಮಯವಾಗಿವೆ. ತೌಕ್ತೆ ಕಾರಣ ಇಂದು ಮುಂಬೈನಲ್ಲಿ ವ್ಯಾಕ್ಸಿನೇಷನ್ ರದ್ದು ಮಾಡಲಾಗಿತ್ತು. ಇದರ ನಡುವೆ ಭೂಕಂಪನ ಭೀತಿ ಎದುರಾಗಿದೆ. ಮಹಾರಾಷ್ಟ್ರದ ಸೌರಾಷ್ಟ್ರದಲ್ಲಿ ಮುಂಜಾನೆ 4.5ರಷ್ಟು ತೀವ್ರತೆಯ ಭೂಕಂಪ ಸಂಭವಿಸಿದೆ. ಅದೃಷ್ಟವಶಾತ್ ಯಾವುದೇ ಹಾನಿ ಉಂಟಾಗಿಲ್ಲ.

ಈಗಾಗಲೇ ಗುಜರಾತ್ ತೀರದಲ್ಲಿ ವಾಸವಾಗಿದ್ದ ಒಟ್ಟು 1.5 ಲಕ್ಷಕ್ಕೂ ಹೆಚ್ಚು ಮಂದಿಯನ್ನು ಸ್ಥಳಾಂತರ ಮಾಡಲಾಗಿದೆ. ಎನ್‌ಡಿಆರ್‌ಎಫ್ ಮತ್ತು  ಎಸ್‌ಡಿಆರ್‌ಎಫ್ ಸೇರಿ ಒಟ್ಟು 54 ತಂಡಗಳನ್ನು ನಿಯೋಜಿಸಲಾಗಿದೆ.

ಕೇಂದ್ರ ಸರ್ಕಾರ ಸೇನೆ, ವಾಯು ಸೇನೆ, ನೌಕಾ ಪಡೆಗಳಿಗೆ ಸನ್ನದ್ಧವಾಗಿರುವಂತೆ ಸೂಚಿಸಿದೆ. ಈಗಾಗಲೇ ಭಾರತೀಯ ಸೇನೆಯ 180 ತುಕಡಿಗಳು ಗುಜರಾತ್ ತೀರಕ್ಕೆ ಲ್ಯಾಂಡ್ ಆಗಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾಣಿ ಅವರಿಗೆ ದೂರವಾಣಿ ಕರೆ ಮಾಡಿ ಮಾತನಾಡಿದ್ದಾರೆ.

ಮಧ್ಯಪ್ರದೇಶದಲ್ಲೂ ತೌಕ್ತೆಯಿಂದಾಗಿ ಭಾರೀ ಮಳೆಯಾಗುವ ಸಾಧ್ಯತೆಯಿದ್ದು, 13 ಜಿಲ್ಲೆಗಳಲ್ಲಿ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಜಾರಿ ಮಾಡಿದೆ.

ಅರಬ್ಬೀ ಸಮುದ್ರದಲ್ಲಿ ಎದ್ದಿರುವ ಈ ಚಂಡಮಾರುತ ಭಾರೀ ಪ್ರಮಾಣದಲ್ಲಿ ಹಾನಿ ಮಾಡುವ ಸಾಧ್ಯತೆ ಇರುವ ಕಾರಣ ಗುಜರಾತ್ ಸರ್ಕಾರ ತೀರದಲ್ಲಿ ನೆಲೆಸಿರುವ ಜನರನ್ನು ಸ್ಥಳಾಂತರ ಮಾಡಿದೆ.

The post ಇಂದು ರಾತ್ರಿ ಗುಜರಾತ್ ತೀರಕ್ಕೆ ಅಪ್ಪಳಿಸಲಿದೆ ತೌಕ್ತೆ – 1.5 ಲಕ್ಷ ಮಂದಿ ಸ್ಥಳಾಂತರ appeared first on Public TV.

Source: publictv.in

Source link