ಇಂದು ರಾಮಾನುಜಾಚಾರ್ಯರ ಜನ್ಮ ಸಹಸ್ರಾಬ್ದಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಿರುವ ಗೃಹ ಸಚಿವ ಅಮಿತ್​ ಶಾ; ಸಂಜೆ ಹೈದರಾಬಾದ್​ಗೆ ಭೇಟಿ | Union Home Minister Amit Shah will visit Hyderabad today to attend Ramanuja Sahasrabdi Samaroh


ಇಂದು ರಾಮಾನುಜಾಚಾರ್ಯರ ಜನ್ಮ ಸಹಸ್ರಾಬ್ದಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಿರುವ ಗೃಹ ಸಚಿವ ಅಮಿತ್​ ಶಾ; ಸಂಜೆ ಹೈದರಾಬಾದ್​ಗೆ ಭೇಟಿ

ಅಮಿತ್ ಶಾ

ಹೈದರಾಬಾದ್​ನ ಹೊರವಲಯ ಮುಚ್ಚಿಂತಲ್​​ನಲ್ಲಿರುವ ಶ್ರೀರಾಮಾನುಜಾಚಾರ್ಯರ ಆಶ್ರಮದಲ್ಲಿ ರಾಮಾನುಜಾಚಾರ್ಯರ ಜನ್ಮಸಹಸ್ರಾಬ್ದಿ ಕಾರ್ಯಕ್ರಮ ನಡೆಯುತ್ತಿದ್ದು, ಇಂದು ಇಲ್ಲಿಗೆ ಗೃಹ ಸಚಿವ ಅಮಿತ್​ ಶಾ (Home Minister Amit Shah) ಭೇಟಿ ಕೊಡಲಿದ್ದಾರೆ. ಫೆ.5ರಂದು ಪ್ರಧಾನಿ ನರೇಂದ್ರ ಮೋದಿ ಇಲ್ಲಿಗೆ ಆಗಮಿಸಿ, ರಾಮಾನುಜಾಚಾರ್ಯರ 216 ಅಡಿ ಎತ್ತರದ, ಪಂಚಲೋಹದ ಪ್ರತಿಮೆಯನ್ನು (ಸಮಾನತೆ ಮೂರ್ತಿ-Sri Ramanujacharya statue) ಅನಾವರಣಗೊಳಿಸಿದ್ದಾರೆ. ಅಲ್ಲದೆ, ಹಲವು ವೈದಿಕ ಕಾರ್ಯಕ್ರಮಗಳಲ್ಲಿ ಕೂಡ ಪಾಲ್ಗೊಂಡಿದ್ದಾರೆ. ಇಂದಿನಿಂದ 108 ದಿವ್ಯ ದೇಶಮ್​ (ದೈವ ವಾಸಸ್ಥಾನ-ವಿಷ್ಣುವಿನ ದೇಗುಲಗಳು)ನಲ್ಲಿ ದೈವ ಪ್ರತಿಷ್ಠಾಪನೆ ಕಾರ್ಯಕ್ರಮ ಪ್ರಾರಂಭವಾಗಿದೆ. ಹಾಗೇ, ಧರ್ಮಾಚಾರ್ಯ ಸಭೆ ಕೂಡ ನಡೆಯಲಿದ್ದು, ಗೃಹ ಸಚಿವ ಅಮಿತ್​ ಶಾ ಪಾಲ್ಗೊಳ್ಳುವರು.

ಗೃಹ ಸಚಿವ ಅಮಿತ್ ಶಾ, ಇಂದು ಸಂಜೆ 4.40ರ ಹೊತ್ತಿಗೆ ಹೈದರಾಬಾದ್​ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಲುಪುವರು. ಅಲ್ಲಿಂದ ರಸ್ತೆ ಮಾರ್ಗದ ಮೂಲಕ ಹೊರಟು 5.15ರ ಹೊತ್ತಿಗೆ ಮುಚ್ಚಿಂತಲ್​ ಬಳಿ ಗೆಸ್ಟ್​ಹೌಸ್​ಗೆ ಹೋಗಲಿದ್ದಾರೆ. ನಂತರ ರಾಮಾನುಜಾಚಾರ್ಯರ ಸಮಾನತೆ ಮೂರ್ತಿಯನ್ನು ದರ್ಶನ ಮಾಡಲಿದ್ದಾರೆ. ಬಳಿಕ ಭಾಷಣ ಮಾಡಿ, ಅಲ್ಲಿಂದ ರಾತ್ರಿ 8.45ಕ್ಕೆ ವಾಪಸ್​ ದೆಹಲಿಗೆ ತೆರಳಿದ್ದಾರೆ ಎಂದು ಹೇಳಲಾಗಿದೆ. ಅಂದಹಾಗೇ, ನಾಳೆ ನಡೆಯಲಿರುವ ಕಾರ್ಯಕ್ರಮ, ಧರ್ಮಾಚಾರ್ಯ ಸಭೆಯಲ್ಲಿ ಆರ್​ಎಸ್​ಎಸ್​ ಮುಖ್ಯಸ್ಥ ಮೋಹನ್​ ಭಾಗ್ವತ್​ ಉಪಸ್ಥಿತರಿರುವರು. ಫೆ.10ಕ್ಕೆ ರಾಜನಾಥ್​ ಸಿಂಗ್​ ಮತ್ತು ಫೆ.13ರಂದು ರಾಷ್ಟ್ರಪತಿ ರಾಮನಾಥ್​ ಕೋವಿಂದ್​ ಕೂಡ ಇಲ್ಲಿಗೆ ಆಗಮಿಸಲಿದ್ದಾರೆ.

ಫೆ.8 ಮತ್ತು 9ರಂದು ನಡೆಯಲಿರುವ ಧರ್ಮಾಚಾರ್ಯ ಸಭೆಯಲ್ಲಿ ಹಲವು ವಿಧ್ವಾಂಸರು ಪಾಲ್ಗೊಂಡು ಮಾತನಾಡಲಿದ್ದಾರೆ. ದೇಶಾದ್ಯಂತ ಇರುವ ವಿವಿಧ ಸಿದ್ಧಾಂತಗಳು, ನಂಬಿಕೆಗಳ ಬಗ್ಗೆ ದೇಶದ  ಜನರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಅದರಲ್ಲಿ ಮುಖ್ಯವಾಗಿ, ಇಂದಿನ ದಿನಗಳಲ್ಲಿ ಶ್ರೀರಾಮಾನುಜಾಚಾರ್ಯರ ಸಮಾನತೆ ಸಿದ್ಧಾಂತಗಳ  ಪ್ರಸ್ತುತತೆ, ನಮ್ಮ ಧಾರ್ಮಿಕ ಪದ್ಧತಿಯನ್ನು ಅನುಸರಿಸುವ ಜತೆ  ಎಲ್ಲ ಧರ್ಮದ ಆಚರಣೆಯನ್ನೂ ಗೌರವಿಸುವುದು(ಪ್ರಾಯೋಗಿಕ ವಿಧಾನ), ಆರೋಗ್ಯಯುತ ಸಮಾಜಕ್ಕಾಗಿ ಸ್ಥಳೀಯ ಕೃಷಿಯ ಪ್ರಸ್ತುತತೆ,  ದೇಶಭಕ್ತಿ ಉತ್ತೇಜಿಸಲು ಮತ್ತು ಸಮಗ್ರ ಅಭಿವೃದ್ಧಿಗಾಗಿ ಮೌಲ್ಯಾಧಾರಿತ ಕುಟುಂಬ ವ್ಯವಸ್ಥೆಯ ಅಗತ್ಯತೆ ಎಂಬ ವಿಚಾರಗಳ ಕುರಿತು ಗಣ್ಯರು ತಮ್ಮ ದೃಷ್ಟಿಕೋನ ಪ್ರಸ್ತುತಪಡಿಸಲಿದ್ದಾರೆ.

ಮುಚ್ಚಿಂತಲ್​​ನಲ್ಲಿ ನಿರ್ಮಿಸಲಾಗಿರುವ 108 ದಿವ್ಯ ದೇಶಮ್​​ನಲ್ಲಿ ಇಂದು ವಿವಿಧ ಪೂಜೆಗಳು ನಡೆಯಲಿವೆ. ವಿಷ್ಣುವಿನ 108 ದೇಗುಲಗಳಿಗೆ ಒಟ್ಟಾಗಿ ದಿವ್ಯ ದೇಶಮ್​ ಎನ್ನಲಾಗುತ್ತದೆ. ಈ ದಿವ್ಯ ದೇಶಮ್​​ ಪ್ರಧಾನ ದೇವಾಲಯಗಳಲ್ಲಿರುವ ದೇವರ ಮೂಲ ಮೂರ್ತಿಯ ಸ್ವರೂಪದಲ್ಲಿಯೇ ದೇವರ ಪ್ರತಿಮೆಗಳನ್ನು ನಿರ್ಮಿಸಿ, ಇಲ್ಲಿನ 108 ಮಂದಿರಗಳಲ್ಲಿ ಸ್ಥಾಪಿಸಲಾಗಿದೆ. ಶ್ರೀರಾಮಾನುಜಾಚಾರ್ಯರ ಜನ್ಮ ಸಹಸ್ರಾಬ್ದಿ ಕಾರ್ಯಕ್ರಮ ನಡೆಯುತ್ತಿರುವ ಮುಚ್ಚಿಂತಲ್​ಗೆ ನಿನ್ನೆ ಆಂಧ್ರಪ್ರದೇಶ ಮುಖ್ಯಮಂತ್ರಿ ವೈಎಸ್​ಆರ್​ ಜಗನ್​ ರೆಡ್ಡಿ ಭೇಟಿ ನೀಡಿದ್ದರು.

TV9 Kannada


Leave a Reply

Your email address will not be published.