1. ಭಾರತದಲ್ಲಿ 3ನೇ ಅಲೆ ಸೃಷ್ಟಿಸುತ್ತಾ ಒಮಿಕ್ರಾನ್?
35ಕ್ಕೂ ಹೆಚ್ಚು ದೇಶಗಳಲ್ಲಿ ರಣಕೇಕೆ ಹಾಕುತ್ತಿರೋ ಕೊರೊನಾ ಹೊಸ ತಳಿ ಭಾರತದಲ್ಲೂ ಭೀತಿ ಹುಟ್ಟಿಸಿದೆ. ಈಗ ಪತ್ತೆಯಾಗ್ತಿರೋ ಒಮಿಕ್ರಾನ್ ತಳಿ ಭಾರತದಲ್ಲಿ ಕೊರೊನಾ 3ನೇ ಅಲೆ ಸೃಷ್ಟಿಸಬಹುದು ಅಂತ ತಜ್ಞರು ಆತಂಕ ಹೊರಹಾಕಿದ್ದಾರೆ. ಜಿನೋಮ್ ಸೀಕ್ವೆಂನ್ಸಿಂಗ್ ತಜ್ಞರು ಈ ಆತಂಕಕಾರಿ ಮಾಹಿತಿ ನೀಡಿದ್ದಾರೆ. ವಿದೇಶದಲ್ಲಿ ಹಾವಳಿ ಹುಟ್ಟಿಸಿರೋ ಒಮಿಕ್ರಾನ್ ಭಾರತದಲ್ಲೂ 3ನೇ ಅಲೆ ಸೃಷ್ಟಿಸುತ್ತದೆ. ಕೊರೊನಾ ನಿಯಮ ಪಾಲಿಸಿದ್ರೆ ಮಾತ್ರ ಒಮಿಕ್ರಾನ್ ಅಟ್ಟಹಾಸವನ್ನ ಮಟ್ಟಹಾಕಬಹುದು ಅಂತ ತಜ್ಞರು ಮಾಹಿತಿ ನೀಡಿದ್ದಾರೆ.
2. ವಿದೇಶದಿಂದ ಬರುವ ಪ್ರಯಾಣಿಕರಿಗೆ ಇನ್ನಷ್ಟು ಟಫ್ ರೂಲ್ಸ್
ಭಾರತದಲ್ಲಿ ಒಮಿಕ್ರಾನ್ ಪತ್ತೆಯಾಗ್ತಿದ್ದಂತೆ ಕೇಂದ್ರ ಸರ್ಕಾರ ಪ್ರಯಾಣಿಕರಿಗೆ ಗೈಡ್ಲೈನ್ಸ್ ಇನ್ನಷ್ಟು ಟಫ್ ಮಾಡಿದೆ. ವಿದೇಶದಿಂದ ಭಾರತಕ್ಕೆ ಬರುವ ಪ್ರತಿಯೊಬ್ಬ ಪ್ರಯಾಣಿಕರು ಕೂಡ ಪ್ರಯಾಣದ ಈ ಹಂತಗಳಲ್ಲಿ ಗೈಡ್ಲೈನ್ ಪಾಲಿಸಬೇಕಾಗಿದೆ. ಅಂದ್ರೆ ವಿದೇಶದಿಂದ ವಿಮಾನ ಹತ್ತುವ ಮುನ್ನದ ಕೋವಿಡ್ ರೂಲ್ಸ್, ವಿಮಾನ ಹತ್ತಿದ ಮೇಲೆ ಹಾಗೂ ವಿಮಾನದಿಂದ ಇಳಿದ ಮೇಲೆ ಪ್ರಯಾಣದ ಮಾರ್ಗಸೂಚಿ ಕಡ್ಡಾಯವಾಗಿ ಫಾಲೋ ಮಾಡಲೇಬೇಕು, ಜೊತೆಗೆ ಐಸೋಲೇಷನ್, ಕ್ವಾರೆಂಟೀನ್ ರೂಲ್ಸ್ ಹಾಗೂ ಲಸಿಕೆ ರಿಪೋರ್ಟ್ ಹೊಂದಿರಬೇಕು ಎಂದು ಕೇಂದ್ರ ಸರ್ಕಾರದ ಹೊಸ ಮಾರ್ಗಸೂಚಿಯಲ್ಲಿ ಹೇಳಿದೆ.
3. ಧಾರವಾಡದ SDM ಆಸ್ಪತ್ರೆಯಲ್ಲಿ ಒಪಿಡಿ ಸೇವೆ ಆರಂಭ
ಇಂದಿನಿಂದ ಧಾರವಾಡದ ಎಸ್ಡಿಎಂ ಆಸ್ಪತ್ರೆಯಲ್ಲಿ ಒಪಿಡಿ ಸೇವೆ ಪುನಾರಂಭವಾಗಲಿದೆ. ಕೆಲ ಷರತ್ತುಗಳೊಂದಿಗೆ ಒಪಿಡಿ ಸೇವೆಗೆ ಅವಕಾಶ ಮಾಡಿಕೊಡಲಾಗಿದೆ. ಜೊತೆಗೆ ಎಸ್ಡಿಎಂ ಸುತ್ತಮುತ್ತ ಇರುವ ವಾಣಿಜ್ಯ ಜಟುವಟಿಕೆಗೂ ಗ್ರೀನ್ ಸಿಗ್ನಲ್ ನೀಡಲಾಗಿದೆ. ಈಗಾಗಲೇ 7 ಸಾವಿರದ 800 ಜನರಿಗೆ ಕೋವಿಡ್ ಟೆಸ್ಟ್ ಮಾಡಲಾಗಿದೆ. ಅದರಲ್ಲಿ 306 ಜನರಿಗೆ ಕೊರೊನಾ ಸೋಂಕು ಪತ್ತೆಯಾಗಿದೆ. ಮುಂದಿನ 2 ತಿಂಗಳ ಅವಧಿಯಲ್ಲಿ ಯಾವುದೇ ಜನ ಸೇರುವ ಕಾರ್ಯಕ್ರಮ ಮಾಡದಂತೆ ಸೂಚನೆ ನೀಡಲಾಗಿದೆ. ಕೊರೊನಾ ಸೋಂಕು ಕಂಡು ಬಂದಿದ್ದರಿಂದ ನವೆಂಬರ್ 26 ರಿಂದ ಎಸ್ಡಿಎಂ ಆಸ್ಪತ್ರೆಯಲ್ಲಿ ಒಪಿಡಿ ಸೇವೆ ಬಂದ್ ಮಾಡಲಾಗಿತ್ತು.
4. ಕಂಗನಾ ಕಾರಿಗೆ ಮುತ್ತಿಗೆ, ರೈತರ ಕ್ಷಮೆಯಾಚಿಸಿದ ನಟಿ
ಪಂಜಾಬ್ನ ಕಿರಾತ್ಪುರದಲ್ಲಿ ತಮ್ಮ ಕಾರಿಗೆ ರೈತರು ಮುತ್ತಿಗೆ ಹಾಕಿದ್ದರು ಅಂತ ನಟಿ ಕಂಗನಾ ರಣಾವತ್ ಆರೋಪಿಸಿದ್ದಾರೆ. ಚಂಡೀಗಢ ಉನಾ ಹೆದ್ದಾರಿಯಲ್ಲಿರುವ ಶಿರಾತ್ಪುರ ಸಾಹಿಬ್ನ ಬುಂಗಾ ಸಾಹಿಬ್ನಲ್ಲಿ ಈ ಘಟನೆ ನಡೆದಿದೆ. ನಟಿಯ ಕಾರನ್ನು ರೈತರು ಸುತ್ತುವರೆದಿರುವುದನ್ನು ಕಂಡುಬಂದಿದೆ, ಅಲ್ಲದೇ ರೈತರನ್ನ ನಿಯಂತ್ರಿಸಲು ಪೊಲೀಸ್ ಸಿಬ್ಬಂದಿಯೂ ಅಲ್ಲಿ ಕಂಡುಬರಲಿಲ್ಲ ಎಂದು ವರದಿಯಾಗಿದೆ. ಬಳಿಕ ಕಂಗನಾ ರೈತರ ಬಳಿ ಕ್ಷಮೆ ಕೇಳಿ ಅವರ ಜೊತೆ ಕೆಲ ಸಮಯವನ್ನು ಕಳೆದ್ರು. ಇನ್ನು ಕಂಗನಾ ರಣಾವತ್ ಕಾರಿಗೆ ಮುತ್ತಿಗೆ ಹಾಕಿರುವ ಬಗ್ಗೆ ತನಗೆ ಯಾವುದೇ ಮಾಹಿತಿ ಇಲ್ಲ ಅಂತ ರೈತ ಮುಖಂಡ ರಾಕೇಶ್ ಟೆಕಾಯತ್ ಹೇಳಿದ್ದಾರೆ.
5. ಪೂರ್ವ ಕರಾವಳಿಗೆ ಅಪ್ಪಳಿಸಲಿದೆ ಜವಾದ್ ಚಂಡಮಾರುತ!
ವರುಣನ ಅಬ್ಬರಕ್ಕೆ ತತ್ತರಿಸಿ ಹೋಗಿದ್ದ ಆಂಧ್ರ ಮತ್ತು ಒಡಿಶಾಗೆ ಮತ್ತೊಂದು ಆಘಾತ ಎದುರಾಗಿದೆ. ಇಂದು ಆಂಧ್ರ ಪ್ರದೇಶದಕ್ಕೆ ಜವಾದ್ ಚಂಡಮಾರುತ ಅಪ್ಪಳಿಸಲಿದೆ.. ನಾಳೆ ಪುರಿ ಮತ್ತು ಓಡಿಶಾಗೆ ಚಂಡಮಾರುತ ಎಫೆಕ್ಟ್ ತಟ್ಟಲಿದೆ. ಹೀಗಾಗಿ, ಈ 2 ರಾಜ್ಯ ಸರ್ಕಾರಗಳು ಈಗಾಗಲೇ ಮುನ್ನೆಚ್ಚರಿಕಾ ಕ್ರಮ ಕೈಗೊಂಡಿವೆ.. ಯಾವುದೇ ದುರ್ಘಟನೆ ನಡೆಯದಂತೆ ಸಿದ್ಧತೆ ಮಾಡಿಕೊಂಡಿವೆ. ರಕ್ಷಣಾ ಕೇಂದ್ರ ಹಾಗೂ ರಿಲೀಫ್ ಸೆಂಟರ್ಗಳನ್ನ ಈಗಾಗಲೇ ತೆರೆಯಲಾಗಿದೆ. ಬರೋಬ್ಬರಿ 54 ಸಾವಿರ ಜನರನ್ನ ಸ್ಥಳಾಂತರಿಸಲಾಗಿದೆ. ಇದರ ನಡುವೆ ಚಂಡಮಾರುತ ಅಪ್ಪಳಿಸೋ ಭೀತಿ ಬೆನ್ನಲ್ಲೇ ಒಡಿಶಾ, ಆಂಧ್ರ ಸರ್ಕಾರ ಅಧಿಕಾರಿಗಳೊಂದಿಗೆ ಮಹತ್ವದ ಸಭೆ ನಡೆಸಿದೆ.
6. ಪಠಾನ್ಕೋಟ್ನಲ್ಲಿ ಗೋಚರವಾಯ್ತು ನಿಗೂಢ ಬೆಳಕು
ಪಂಜಾಬ್ನ ಪಠಾನ್ ಕೋಟ್ನಲ್ಲಿ ನಿಗೂಢವಾದ ಬೆಳಕು ಕಂಡು ಬಂದಿದೆ. ಕಳೆದ ಸಂಜೆ 6.15ರ ಸುಮಾರಿಗೆ ಪಠಾನ್ಕೋಟ್ ನಗರದಲ್ಲಿ ಸುಮಾರು 5 ನಿಮಿಷಗಳ ಕಾಲ ನಿಗೂಢ ಬೆಳಕ್ಕೊಂದು ಗೂಚರವಾಗಿದೆ. ಈ ರೀತಿಯ ಬೆಳಕು ನೋಡಿ ಜನ ದಿಗ್ಬ್ರಮೆಗೊಂಡಿದ್ರು.. ಕಳೆದ ಜೂನ್ನಲ್ಲೂ ಗುಜರಾತ್ನ ಜುನಾದ್ಘಡ, ಉಪ್ಲಾಟ್ ಸೇರಿ ಹಲವು ಜಿಲ್ಲೆಯಲ್ಲಿ ಇದೇ ರೀತಿಯ ಬೆಳಕು ಗೋಚರವಾಗಿತ್ತು..
7. ಇಂದು 2021 ರ ಕೊನೆಯ ಸಂಪೂರ್ಣ ಸೂರ್ಯಗ್ರಹಣ
ಈ ವರ್ಷದ ಕೊನೆಯ ಸೂರ್ಯ ಗ್ರಹಣವು ಇಂದು ಸಂಭವಿಸಲಿದೆ. ಸುಮಾರು ನಾಲ್ಕು ಗಂಟೆಗಳ ಕಾಲ ಸೂರ್ಯಗ್ರಹಣವು ಇರಲಿದೆ. ಇದರಂತೆ ಭಾರತೀಯ ಕಾಲಮಾನದ ಪ್ರಕಾರ ಗ್ರಹಣ ಆರಂಭವಾಗುವ ಮೊದಲ ಸ್ಥಳದಲ್ಲಿ ಬೆಳಗ್ಗೆ 10:59 ಕ್ಕೆ ಆಂಶಿಕ ಮತ್ತು ಮಧ್ಯಾಹ್ನ 12:30 ಕ್ಕೆ ಪೂರ್ಣ ಸೂರ್ಯ ಗ್ರಹಣ ಆರಂಭವಾಗಲಿದೆ.
8. ಕಚೇರಿಗೆ ನುಗ್ಗಿ ಫೈಲ್ನೊಂದಿಗೆ ಪರಾರಿಯಾದ ಮೇಕೆ!
ಉತ್ತರ ಪ್ರದೇಶದ ಕಾನ್ಪುರದ ಚೌಬೆಪುರದ ಅಭಿವೃದ್ಧಿ ಘಟಕದ ಕಚೇರಿಯೊಂದಕ್ಕೆ ಕಪ್ಪು ಮೇಕೆಯೊಂದು ದಿಢೀರನೆ ನುಗ್ಗಿದೆ. ಆಗ ಕಚೇರಿಯಲ್ಲಿ ಯಾರೂ ಇರಲಿಲ್ಲ. ಮೇಕೆ ಹೊರಬರುವಾಗ ಬಾಯಲ್ಲೊಂದು ಫೈಲನ್ನು ಕಚ್ಚಿಕೊಂಡಿದ್ದನ್ನು ಯಾರೋ ನೋಡಿದ್ದಾರೆ. ಸಿಬ್ಬಂದಿ ಮೇಕೆಯನ್ನು ಅಟ್ಟಿಸಿಕೊಂಡು ಹೋಗಿ ಫೈಲ್ ವಾಪಸ್ ತಂದಿದ್ದಾರೆ. ಅಷ್ಟರಲ್ಲಾಗಲೇ ಎಡವಟ್ಟೂ ಆಗಿದೆ.
9. ವಿಕೆಟ್ ನಷ್ಟಕ್ಕೆ 221 ರನ್ ಕಲೆ ಹಾಕಿದ ಭಾರತ
ಮಳೆ ಕಾಟದ ನಡುವೆಯೂ ನಡೆದ ಟೆಸ್ಟ್ ಪಂದ್ಯದಲ್ಲಿ ಭಾರತ ಉತ್ತಮ ಪ್ರದರ್ಶನ ನೀಡಿದೆ. ನ್ಯೂಜಿಲೆಂಡ್ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಭಾರತ ಮೊದಲ ದಿನದಾಟಕ್ಕೆ 221 ರನ್ ಕಲೆ ಹಾಕಿದೆ. ಪ್ರಮುಖ 4 ವಿಕೆಟ್ ಕಳೆದುಕೊಂಡಿದ್ರೂ ಮಯಾಂಕ್ ಅಗರ್ವಾಲ್ ಭರ್ಜರಿ ಶತಕದ ನೆರವಿನಿಂದ ಭಾರತದ 200 ರನ್ ಗಡಿ ದಾಟಿದೆ. ಮಯಾಂಕ್ಗೆ ವೃದ್ಧಿಮಾನ್ ಸಹಾ ಉತ್ತಮ ಸಾಥ್ ನೀಡಿದ್ರು. ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ್ದ ಭಾರತ ಆರಂಭದಲ್ಲಿ ಭರ್ಜರಿ ಓಪನಿಂಗ್ ಪಡೀತು. ಆದ್ರೆ ನಂತದಲ್ಲಿ ಒಂದಾದ ಮೇಲೆ ವಿಕೆಟ್ಗಳು ಉರುಳಿದ್ವು.
10. ಕೊಹ್ಲಿ ಡಕ್ ಔಟ್..! ಜಾಲತಾಣದಲ್ಲಿ ಟ್ರೋಲ್!
ನ್ಯೂಜಿಲೆಂಡ್ ವಿರುದ್ದದ 2ನೇ ಟೆಸ್ಟ್ ಪಂದ್ಯದಲ್ಲಿ ನಾಯಕ ವಿರಾಟ್ ಕೊಹ್ಲಿ ಡಕ್ ಔಟ್ ಆಗಿದ್ದಾರೆ.. ಪಂದ್ಯ ಅಂಪೈರ್ ವೀರೇಂದ್ರ ಶರ್ಮಾ ಮಾಡಿದ ತಪ್ಪು ನಿರ್ಣಯದಿಂದಾಗಿ ಕೊಹ್ಲಿ ಶೂನ್ಯಕ್ಕೆ ಪೆವಿಲಿಯನ್ ಸೇರಿದ್ರು. ಅಝಾಜ್ ಪಟೇಲ್ ಹಾಕಿದ್ದ ಮಾರಕ ಸ್ಪಿನ್ ಬಾಲ್ ಏಕಕಾಲಕ್ಕೆ ಕೊಹ್ಲಿ ಬ್ಯಾಟ್ ಹಾಗೂ ಪ್ಯಾಡ್ಗೆ ಬಡಿದಿತ್ತು. ಇದರಿಂದ ಕನ್ಫ್ಯೂಜ್ ಆದ ಅಂಪೈರ್ ಕೊಹ್ಲಿ ಔಟ್ ಎಂದು ತೀರ್ಪು ನೀಡಿದ್ರು. ಆದ್ರೆ ಅಂಪೈರ್ ತಪ್ಪು ನಿರ್ಣಯಕ್ಕೆ ಅಭಿಮಾನಿಗಳು ತೀವ್ರ ಆಕ್ರೋಶ ಹೊರಹಾಕಿದ್ರು, ಈ ನಡುವೆ ಸೋಷಿಯಲ್ ಮೀಡಿಯಾದಲ್ಲಿ ಕೊಹ್ಲಿಯನ್ನ ಸಿಕ್ಕಾಪಟ್ಟೆ ಟ್ರೋಲ್ ಮಾಡಲಾಗಿತ್ತು. ಇನ್ನು ಇದೇ ಪಂದ್ಯದಲ್ಲಿ ಚೇತೇಶ್ವರ್ ಪೂಜಾರ ಕೂಡ ಡಕ್ ಔಟ್ ಆಗಿದ್ರು.