ಇಂಧನದ ಬೆಲೆಗೆ ಟಾಂಗ್​​ ಕೊಟ್ಟ ಟೊಮ್ಯಾಟೋ -ಈ ಹೊತ್ತಿನ ಟಾಪ್ 10 ಸುದ್ದಿಗಳ ಕ್ವಿಕ್ ರೌಂಡಪ್

1. ಮಳೆ ಹಾನಿ ಪರಿಹಾರಕ್ಕೆ ₹418.72 ಕೋಟಿ ಬಿಡುಗಡೆ

ನೆರೆ ಸಂತ್ರಸ್ಥರಿಗೆ ಹಾಗೂ ಮನೆ, ಬೆಳೆ ಹಾನಿಯಾದವರ ನೆರವಿಗೆ ರಾಜ್ಯ ಸರ್ಕಾರ ಬಂದಿದ್ದು, ಮಳೆ ಹಾನಿ ಪರಿಹಾರವಾಗಿ 418 ಕೋಟಿ 72 ಲಕ್ಷದ 91 ಸಾವಿರ ರೂಪಾಯಿ ಘೋಷಿಸಿ ಸಿಎಂ ಆದೇಶ ಹೊರಡಿಸಿದ್ದಾರೆ. ತುರ್ತು ಪರಿಹಾರದ ಬಳಕೆಗಾಗಿ ಎಸ್​ಡಿಆರ್​ಎಫ್​ ಹಾಗೂ ಎನ್​ಡಿಆರ್​​ಎಫ್​​​ ನಿಧಿಯಿಂದ ಈ ಪರಿಹಾರ ಬಿಡುಗಡೆ ಮಾಡಲಾಗಿದ್ದು, ಜಿಲ್ಲಾಧಿಕಾರಿಗಳಿಗೆ ಹಣ ವರ್ಗಾವಣೆ ಮಾಡಲಾಗಿದೆ. ನೆರೆ ಸಂತ್ರಸ್ಥರಿಗೆ ಮತ್ತು ಮನೆ ಹಾನಿಗಳಿಗೆ ತುರ್ತು ಪರಿಹಾರ ನೀಡುವಂತೆ ಆದೇಶ ಹೊರಡಿಸಿದ್ದಾರೆ.

2. ನಾಳೆ ಸಂಜೆ ರಾಜ್ಯ ಸಚಿವ ಸಂಪುಟ ಸಭೆ

ನಾಳೆ ಮುಖ್ಯಮಂತ್ರಿ ಬಸವರಾಜ್​ ಬೊಮ್ಮಾಯಿ ನೇತೃತ್ವದಲ್ಲಿ ಸಚಿವ ಸಂಪುಟ ಸಭೆ ನಡೆಯಲಿದ್ದು, ಅಕಾಲಿಕ ಮಳೆಯಿಂದಾಗಿ ಉಂಟಾದ ಹಾನಿ ಕುರಿತು ಚರ್ಚೆ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ನಾಳೆ ಸಂಜೆ 4 ಗಂಟೆಗೆ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಅಕಾಲಿಕ ಮಳೆಯ ಜೊತೆಗೆ ಬೆಳಗಾವಿಯಲ್ಲಿ ನಡೆಯಲಿರುವ ಅಧಿವೇಶನದಲ್ಲಿ ವಿಪಕ್ಷಗಳ ತಂತ್ರಕ್ಕೆ ಪ್ರತಿತಂತ್ರ ರೂಪಿಸುವ ಬಗ್ಗೆಯೂ ಚರ್ಚೆ ನಡೆಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

3. ಡಿಸೆಂಬರ್ ಮೊದಲ ವಾರದಲ್ಲಿ ರಾಜ್ಯಕ್ಕೆ ಮೋದಿ

ಡಿಸೆಂಬರ್​ ಮೊದಲ ವಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ರಾಜ್ಯಕ್ಕೆ ಆಗಮಿಸಲಿದ್ದು, ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ. ಬೆಂಗಳೂರಿನ ಗೋವಿಂದ ರಾಜನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಕೆಲ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗಿಯಾಗಲಿರುವ ಮೋದಿ, ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಇನ್ನು ಮೋದಿ ಭೇಟಿ ಭೇಟಿ ಹಿನ್ನೆಲೆಯಲ್ಲಿ ಇಂದು ಗೋವಿಂದರಾಜ ನಗರ ವಿಧಾನಸಭಾ ಕ್ಷೇತ್ರಕ್ಕೆ ಭೇಟಿ ನೀಡಲಿರುವ ಸಚಿವ ವಿ ಸೋಮಣ್ಣ, ಕಾರ್ಯಕ್ರಮದ ಪೂರ್ವಸಿದ್ಧತೆ ಬಗ್ಗೆ ಪರಿಶೀಲನೆ ನಡೆಸಲಿದ್ದಾರೆ.

4. ಒಂದು ಮೀನು ₹1.81 ಲಕ್ಷಕ್ಕೆ ಮಾರಾಟ!

ಉಡುಪಿಯ ಮಲ್ಪೆ ಬಂದರಿನಿಂದ ಹೊರಟ ಮೀನುಗಾರರ ತಂಡಕ್ಕೆ ಅಪರೂಪದ ಮೀನು ಬಲೆಗೆ ಬಿದ್ದಿದೆ. ಮೀನುಗಾರರು ಬೀಸಿದ ಬಲೆಗೆ 18 ಕೆಜಿ ತೂಕದ ಅಪರೂಪದ ಮೀನು ಲಭ್ಯವಾಗಿದ್ದು, ಈ ಮೀನು ಬರೋಬ್ಬರಿ ಒಂದು ಲಕ್ಷದ ಎಂಭತ್ತೊಂದು ಸಾವಿರದ ಇನ್ನೂರು ರೂಪಾಯಿಗೆ ಮಾರಟವಾಗಿದೆ. ಮಲ್ಪೆ ಮೀನುಗಾರಿಕಾ ಬಂದರಿನಲ್ಲಿ ಈ ಮೀನು ಹರಾಜು ಪ್ರಕ್ರಿಯೆ ನಡೆದಿದ್ದು, ನೂರಾರು ಮಂದಿಯ ಕುತೂಹಲಕ್ಕೆ ಸಾಕ್ಷಿಯಾಗಿದೆ. ಅಪರೂಪದ ಮೀನನ್ನು ನೋಡಲು ಮಲ್ಪೆ ಬಂದರಿನಿಂದ ಸಾವಿರಾರು ಮಂದಿ ಸೇರಿದ್ದರು.

5. ಒಂದು ಕೆಜಿ ಟೊಮ್ಯಾಟೋಗೆ 120 ರೂಪಾಯಿ

ಚಳಿಗಾಲದ ಸಮಯದಲ್ಲಿ ಕೆಜಿಗೆ 20 ರೂಪಾಯಿಯಂತೆ ಮಾರಾಟವಾಗುತ್ತಿದ್ದ ಟೊಮ್ಯಾಟೋಗೆ ಈಗ ಬಂಗಾರದ ಬೆಲೆ ಬಂದಿದೆ. ಸದ್ಯ ನಮ್ಮ ರಾಜ್ಯ ಸೇರಿದಂತೆ ತಮಿಳುನಾಡು, ಆಂಧ್ರ ಪ್ರದೇಶದಲ್ಲಿ ಟೊಮೆಟೊ ಬೆಲೆ ಗಗನಕ್ಕೆ ಏರಿದೆ. ಪೆಟ್ರೋಲ್​ ಬಳಿಕ ಜನರಿಗೆ ಈಗ ಟೊಮೆಟೊ ಬೆಲೆ ಶಾಕ್​ ನೀಡಿದೆ. ದಕ್ಷಿಣ ಭಾರತದಲ್ಲಿ ಸುರಿಯುತ್ತಿರುವ ಅಕಾಲಿಕ ಮಳೆಯಿಂದ ಟೊಮೆಟೊ ಬೆಲೆ ಹೆಚ್ಚಳವಾಗಿದೆ. ಸದ್ಯ ಬೆಂಗಳೂರಿನಲ್ಲಿ ಟೊಮೆಟೊ ಕೆಜಿಗೆ 120ರೂಪಾಯಿ ನಂತೆ ಮಾರಾಟವಾಗುತ್ತಿದ್ದರೆ, ಚೆನ್ನೈನಲ್ಲಿ ಕಿಲೋಗೆ 140 ರೂಪಾಯಿಗೆ ಮಾರಾಟವಾಗುತ್ತಿದೆ.

6. ಲಸಿಕೆ ಪಡೆದೋವ್ರಿಗೆ ಮದ್ಯದ ಮೇಲೆ 10% ರಿಯಾಯಿತಿ

ವ್ಯಾಕ್ಸಿನೇಶನ್​ ಅಭಿಯಾನವನ್ನ ಉತ್ತೇಜಿಸುವ ಸಲುವಾಗಿ ಮಧ್ಯಪ್ರದೇಶದ ಮಂಡಸೌರ ಜಿಲ್ಲೆಯ ಅಬಕಾರಿ ಇಲಾಖೆಯು ಕೊರೊನಾ ಲಸಿಕೆಯ ಎರಡೂ ಡೋಸ್​ ಪಡೆದವರಿಗೆ ಮದ್ಯದ ಮೇಲೆ ಶೇಕಡ 10 ರಷ್ಟು ರಿಯಾಯಿತಿ ನೀಡಲು ಆದೇಶ ಹೊರಡಿಸಿದೆ. ಮಂಡಸೌರ ಜಿಲ್ಲಾ ಅಬಕಾರಿ ಅಧಿಕಾರಿ ಅನಿಲ್​​ ಸಚನ್​​​ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ಕ್ರಮವು ಮದ್ಯ ಪ್ರಿಯರನ್ನು ವ್ಯಾಕ್ಸಿನೇಶನ್ ಕಡೆಗೆ ಆಕರ್ಷಿಸಲು ಹಾಗೂ ಪ್ರೋತ್ಸಾಹಿಸಲು ಅಂತಾ ಅಧಿಕಾರಿ ಹೇಳಿದ್ದಾರೆ.

7. ‘ಕೊರೊನಾ ಮೂರನೇ ಅಲೆ ಬರೋದು ಅಸಂಭವ’

ಕೊರೊನಾ ಮೂರನೇ ಅಲೆ ಬರುವುದು ಅಸಂಭವ ಅಂತ ಏಮ್ಸ್​​​​ ನಿರ್ದೇಶಕ ರಂದೀಪ್ ಗುಲೇರಿಯಾ ಮಾಹಿತಿ ನೀಡಿದ್ದಾರೆ. ಮೂರನೇ ಅಲೆ ಮೊದಲ ಎರಡು ಅಲೆಗಳ ರೀತಿ ತೀವ್ರತೆ ಹೊಂದಿರುವ ಸಾಧ್ಯತೆ ಕಡಿಮೆಯಿದೆ. ಏಕೆಂದರೆ ಭಾರತದಲ್ಲಿ ಕೊರೊನಾ ಲಸಿಕೆಗಳು ಪರಿಣಾಮಕಾರಿ ಎಂದು ಸೂಚಿಸುತ್ತವೆ ಎಂದು ರಂದೀಪ್ ಗುಲೇರಿಯಾ ಹೇಳಿದ್ದಾರೆ. ಮೊದಲ ಮತ್ತು ಎರಡನೇ ಅಲೆಗೆ ಹೋಲಿಸಿದ್ರೆ, 3ನೇ ಅಲೆ ಭಾರತವನ್ನು ಕಾಡುವುದು ಅಸಂಭವವಾಗಿದೆ ಅಂತಾ ಮಾಹಿತಿ ನೀಡಿದ್ದಾರೆ.

8. ಯುರೋಪ್​ನಲ್ಲಿ ಕೊರೊನಾ ಕೇಸ್​​ ಏರಿಕೆ

ಯುರೋಪ್‌ನಲ್ಲಿ ಕೊರೊನಾ ಕೇಸ್​​ನಲ್ಲಿ ಏರಿಕೆ ಕಂಡುಬಂದಿದೆ. ವೇಗವಾಗಿ ಹೆಚ್ಚಾಗುತ್ತಿರುವ ಪ್ರಕರಣಗಳು ವಿಶ್ವ ಆರೋಗ್ಯ ಸಂಸ್ಥೆಯ ತಜ್ಞರನ್ನು ಅಚ್ಚರಿಗೊಳಿಸಿದೆ. ಇದೇ ರೀತಿ ಪ್ರಕರಣಗಳು ಹೆಚ್ಚಾಗುತ್ತಾ ಹೋದರೆ, ಯುರೋಪ್‌ನಲ್ಲಿ ಕೊರೊನಾದಿಂದ 7 ಲಕ್ಷ ಸಾವು ಸಂಭವಿಸಬಹುದು ಎಂದು WHO ಎಚ್ಚರಿಕೆ ನೀಡಿದೆ. WHO ಮುನ್ಸೂಚನೆಗಳ ಪ್ರಕಾರ 53 ದೇಶಗಳಲ್ಲಿ ಕೊರೊನಾ ವೈರಸ್​​ನಿಂದ ಏಳು ಲಕ್ಷ ಜನ ಪ್ರಾಣ ಕಳೆದುಕೊಳ್ಳಬಹುದು ಎಂದು ಹೇಳಿದ್ದು, ಇದರಿಂದ ಸೋಂಕಿನಿಂದ ಸಾವನ್ನಪ್ಪಿದವರ ಒಟ್ಟು ಸಂಖ್ಯೆ ಅಲ್ಲಿ 20 ಲಕ್ಷದ ಗಡಿ ದಾಟುವ ಸಾಧ್ಯತೆ ಇದೆ ಎಂದು ಹೇಳಿದೆ.

9. ದೇಶದಲ್ಲಿ ಬ್ಯಾನ್‌ ಆಗುತ್ತಾ ಖಾಸಗಿ ಕ್ರಿಪ್ಟೋಕರೆನ್ಸಿ?

ದೇಶದಲ್ಲಿ ನಡೀತಿರೋ ಕ್ರಿಪ್ಟೋ ದಂಧೆಗೆ ಬ್ರೇಕ್ ಹಾಕಲು ಕೇಂದ್ರ ಸರ್ಕಾರ ಮಾಸ್ಟರ್ ಪ್ಲಾನ್ ರೂಪಿಸಿದೆ. ಭಾರತದಲ್ಲಿನ ಕ್ರಿಪ್ಟೋಕರೆನ್ಸಿಗಳ ನಿಷೇಧಕ್ಕೆ ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ ಎನ್ನಲಾಗಿದೆ. ಇನ್ನು ಈ ಕುರಿತಾಗಿ ಸಂಸತ್ ಚಳಿಗಾಲ ಅಧಿವೇಶನದಲ್ಲಿ ಈ ಬಗ್ಗೆ ಮಸೂದೆಯೊಂದನ್ನ ಜಾರಿಗೆ ತರಲು ಯೋಚಿಸಲಾಗಿದ್ದು, ಕ್ರಿಪ್ಟೋಕರೆನ್ಸಿ ನಿಷೇಧ ಮತ್ತು ಅಧಿಕೃತ ಡಿಜಿಟಲ್ ಕರೆನ್ಸಿ ನಿಯಂತ್ರಣ ಮಸೂದೆ 2021ನ್ನು ಮಂಡನೆ ಮಾಡೋದಾಗಿ ತಿಳಿದು ಬಂದಿದೆ. ಕ್ರಿಪ್ಟೋಕರೆನ್ಸಿಗಳನ್ನು ಬ್ಯಾನ್ ಮಾಡುವ ಮಾತು ಸದ್ದು ಮಾಡುತ್ತಿದ್ದಂತೆ. ಸದ್ಯ ಚಾಲ್ತಿಯಲ್ಲಿರೋ ಖಾಸಗಿ ಕ್ರಿಪ್ಟೋಕರೆನ್ಸಿಗಳ ಬೆಲೆಯಲ್ಲೂ ಸಾಕಷ್ಟು ಕುಸಿತ ಉಂಟಾಗಿದೆ.

10. ಬಿಸಿಸಿಐ ನಡೆಗೆ ಕ್ರಿಕೆಟ್ ಪ್ರೇಮಿಗಳ ಆಕ್ರೋಶ

ಟೀಂ ಇಂಡಿಯಾ ಆಟಗಾರರ ಆಹಾರ ಪದ್ಧತಿ ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ. ಆಟಗಾರರ ಫಿಟ್‌ನೆಸ್‌ ನೆಪದಲ್ಲಿ ಬಿಸಿಸಿಐ ತಂದಿರೋ ನಿಯಮವೊಂದು ಜನಾಕ್ರೋಶಕ್ಕೆ ಕಾರಣವಾಗಿವೆ. ಹಂದಿ ಮತ್ತು ದನದ ಮಾಂಸ ತಿನ್ನಂಗಿಲ್ಲ. ಹಲಾಲ್ ಮಾಡದ ಮಾಂಸ ಮುಟ್ಟಂಗಿಲ್ಲ ಎಂಬ ರೂಲ್ಸ್‌ ಕ್ರಿಕೆಟ್ ಪ್ರೇಮಿಗಳಿಗೆ ಸಿಟ್ಟು ತರಿಸಿದೆ. ಜಾತ್ಯಾತೀತ ತಂಡದಲ್ಲಿ ಈ ರೀತಿಯ ಬಲವಂತದ ಹೇರಿಕೆ ಬಗ್ಗೆ ಆಕ್ಷೇಪ ಎತ್ತಿದ್ದಾರೆ. ಯಾರಾದರು ಆಟಗಾರರು ಮಾಂಸಾಹಾರ ಸೇವಿಸಲು ಬಯಸಿದರೆ, ಹಲಾಲ್ ಮಾಂಸವನ್ನು ಮಾತ್ರ ಸೇವಿಸಬೇಕು. ಬೇರೆ ರೀತಿ ಮಾಂಸ ಸೇವಿಸಬಾರದು ಎಂದು ಸೂಚಿಸಲಾಗಿದೆ.

News First Live Kannada

Leave a comment

Your email address will not be published. Required fields are marked *