ಭಾರತದಲ್ಲಿ ಮೊದಲನೇ ಅಲೆ ಸಂಪೂರ್ಣ ನಿಯಂತ್ರಣಕ್ಕೆ ಬರುತ್ತಿದ್ದ ಸಮಯ. ಬಹುತೇಕ ಎಲ್ಲಾ ರಾಜ್ಯದಲ್ಲಿಯೂ ಕೇಸ್‌ ಡೌನ್‌ ಆಗಿತ್ತು. ಇನ್ನೇನು ನಿಯಂತ್ರಣಕ್ಕೆ ಬಂತಲ್ಲಾ ಅನ್ನೋ ಆತ್ಮವಿಶ್ವಾಸದಲ್ಲಿತ್ತು ಭಾರತ. ಎರಡನೇ ಅಲೆಗೆ ಸಿದ್ಧತೆಯನ್ನೂ ಸರಿಯಾಗಿ ಮಾಡಿಕೊಂಡಿರಲಿಲ್ಲ. ಹೇಗಿದ್ರೂ ನಿಯಂತ್ರಿಸುತ್ತೇವೆ ಅಂತ ತಿಳಿದುಕೊಂಡಿತ್ತು. ಆದ್ರೆ, ಮಾರ್ಚ್‌ನಲ್ಲಿ ನಿಧಾನಕ್ಕೆ ಕೇಸ್‌ ಏರಿಕೆ ಆರಂಭವಾಯ್ತು.

ಏಪ್ರಿಲ್‌, ಮೇ ತಿಂಗಳಿನಲ್ಲಿ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿ ಬಿಡ್ತು. ಆಕ್ಸಿಜನ್‌ ಸಿಗದೇ ಎಷ್ಟೋ ಜೀವ ಹಾರಿಹೋದವು. ವೆಂಟಿಲೇಟರ್‌ ಸಿಗದೇ ಎಷ್ಟೋ ಜನ ಪ್ರಾಣ ಬಿಟ್ಟರು. ಪ್ರತಿ ದಿನ ಸ್ಮಶಾನದಲ್ಲಿ ಆ್ಯಂಬುಲೆನ್ಸ್‌ಗಳ ಸರದಿ ಸಾಲು ನಿಂತಿರುತ್ತಿತ್ತು. ಅಷ್ಟೊಂದು ಭೀಕರವಾಗಿ ಎರಡನೇ ಅಲೆ ಅಪ್ಪಳಿಸುತ್ತೆ ಅನ್ನೋದನ್ನು ಸರ್ಕಾರ ಆಗಿರಲಿ, ತಜ್ಞರಾಗಿರಲಿ ಅಂದಾಜಿಸಿರಲಿಲ್ಲ. ಇದಕ್ಕೆಲ್ಲ ಕಾರಣವಾಗಿದ್ದು ಕೊರೊನಾ ರೂಪಾಂತರಿ ತಳಿ ಡೆಲ್ಟಾ. ಹೌದು, ಇದೇ ತಳಿ ಇಂದು ಇಡೀ ವಿಶ್ವಕ್ಕೆ ಮತ್ತೆ ತಲೆ ನೋವಾಗಿದೆ.

ಕೊರೊನಾ ಸೋಂಕು ದಿನಕಳೆದಂತೆ ರೂಪಾಂತರ ಪಡೆಯುತ್ತಲೆ ಸಾಗುತ್ತಿದೆ. ಡೆಲ್ಟಾ, ಡೆಲ್ಟಾ ಪ್ಲಸ್‌ ಸೇರಿದಂತೆ ಅನೇಕ ರೀತಿಯ ರೂಪಾಂತರ ಪಡೆಯುತ್ತಿದೆ. ಆದ್ರೆ, ಅದರಲ್ಲಿ ಹೆಚ್ಚು ಅಪಾಯಕಾರಿಯಾಗಿ ಕಾಣಿಸಿಕೊಳ್ಳುತ್ತಿರುವುದು ಡೆಲ್ಟಾ ತಳಿ. ಭಾರತದಲ್ಲಿ ಎರಡನೇ ಅಲೆಯ ಸಂದರ್ಭದಲ್ಲಿ ಕಾಣಿಸಿಕೊಂಡಿದ್ದು ಇದೆ ತಳಿ ವೈರಸ್‌. ಇದು ತುಂಬಾ ವೇಗವಾಗಿ ಹಬ್ಬುತ್ತೆ. ರೋಗಿಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತೆ. ಅಂದ್ರೆ, ರೋಗ ನಿರೋಧಕ ಶಕ್ತಿಯನ್ನು ಬೇಗ ಕುಂದಿಸಿ ಬಿಡುತ್ತೆ. ಉಸಿರಾಟದ ಸಮಸ್ಯೆ ಉಂಟು ಮಾಡಿ ಬಿಡುತ್ತೆ. ವೆಂಟಿಲೇಟರ್‌ ಅಗತ್ಯತೆ ಉಂಟು ಮಾಡುತ್ತೆ. ಹೆಚ್ಚಿನ ಸಾವು ನೋವು ತರುತ್ತೆ. ಹೀಗಾಗಿ ಇದು ಎಲ್ಲಾ ರೂಪಾಂತರಿ ತಳಿಗಿಂತ ಹೆಚ್ಚು ಅಪಾಯಕಾರಿಯಾಗಿ ಬಿಟ್ಟಿದೆ.

ಲಸಿಕೆ ಪಡೆದವರ ಮೇಲೂ ಡೆಲ್ಟಾ ದಾಳಿ

ತಾನು ಲಸಿಕೆ ಪಡೆದಿದ್ದೇನೆ ಅಂತ ವ್ಯಕ್ತಿ ಮೈಮರೆಯುವಂತಿಲ್ಲ. ದೇಶದಲ್ಲಿ ಬಹುತೇಕ ಲಸಿಕೆ ವಿತರಣೆ ಮುಗಿದಿದೆ ಅಂತ ಸರ್ಕಾರ ಕೂಡ ಕೈಕಟ್ಟಿ ಕೂರುವಂತಿಲ್ಲ. ಯಾಕೆಂದ್ರೆ ಲಸಿಕೆ ಪಡೆದವರ ಮೇಲೆಯೂ ಇದು ದಾಳಿ ಮಾಡುತ್ತೆ. ರೋಗನಿರೋಧಕ ಶಕ್ತಿಯನ್ನು ಸಡನ್‌ ಆಗಿ ಡೌನ್‌ ಮಾಡಿ ಬಿಡುತ್ತೆ. ನೋಡು ನೋಡುತ್ತಿರುವಂತೆಯೇ ವ್ಯಕ್ತಿಯನ್ನು ಸಂಪೂರ್ಣವಾಗಿ ಜರ್ಜರಿತ ಮಾಡಿ ಬಿಡುತ್ತೆ. ಹೀಗಾಗಿಯೇ ಡೆಲ್ಟಾ ಅಂದ್ರೆ ಇಡೀ ವಿಶ್ವವೇ ಭಯ ಬೀಳುತ್ತೆ.

98 ದೇಶಕ್ಕೆ ಹಬ್ಬಿದ ಡೆಲ್ಟಾ ವೈರಸ್‌

ಡೆಲ್ಟಾ ಮೊದಲ ಬಾರಿಗೆ ಕಾಣಿಸಿಕೊಂಡಿದ್ದು, ಭಾರತದಲ್ಲಿ ಎಂದು ಹೇಳಲಾಗುತ್ತಿದೆ. ಆದ್ರೆ, ಕೇಂದ್ರ ಸರ್ಕಾರ ಇದನ್ನು ಸ್ಪಷ್ಟವಾಗಿ ತಳ್ಳಿಹಾಕಿದೆ. ಇದೀಗ ಈ ರೂಪಾಂತರಿ ಅಮೆರಿಕ, ಇಂಗ್ಲೆಂಡ್‌, ಆಸ್ಟ್ರೇಲಿಯಾ, ಫ್ರಾನ್ಸ್‌, ಬಾಂಗ್ಲಾದೇಶ ಸೇರಿದಂತೆ 98 ರಾಷ್ಟ್ರಗಳಲ್ಲಿ ಕಾಣಿಸಿಕೊಂಡಿದೆ. ಅದರಲ್ಲಿಯೂ ಫ್ರಾನ್ಸ್‌ನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸಾವು ನೋವು ಕಾಣಿಸುತ್ತಿದೆ. ಬಹುತೇಕವಾಗಿ ಎಲ್ಲಾ ರಾಷ್ಟಗಳ ನಿದ್ದೆಗೆಡಿಸಿ ಬಿಟ್ಟಿದೆ. ಹೀಗಾಗಿಯೇ ಕೆಲವು ರಾಷ್ಟ್ರಗಳು ಲಾಕ್‌ಡೌನ್‌, ಕರ್ಫ್ಯೂ ಮೊರೆ ಹೋಗಿವೆ.

ವಿಶ್ವ ಆರೋಗ್ಯ ಸಂಸ್ಥೆ ನೀಡಿದ ಎಚ್ಚರಿಕೆ ಏನು?

ಡೆಲ್ಟಾ ವೈರಸ್‌ ಅಪಾಯಕಾರಿಯಾಗಿರುವ ಬಗ್ಗೆ ವಿಶ್ವ ಸಂಸ್ಥೆ ಕೂಡ ಎಚ್ಚರಿಕೆ ನೀಡಿದೆ. ಡೆಲ್ಟಾ ಮಾದರಿ ಅತ್ಯಂತ ವೇಗವಾಗಿ ಹರಡುವ ಮಾದರಿ. ಜನರು ನಿರ್ಲಕ್ಷ ಮಾಡಬಾರದು. ಯಾವ ಯಾವ ದೇಶದಲ್ಲಿ ಡೆಲ್ಟಾ ಮಾದರಿ ಕಾಣಿಸಿಕೊಂಡಿದೆಯೋ ಆಯಾ ದೇಶಗಳು ಬಿಗಿ ಕ್ರಮ ಕೈಗೊಳ್ಳಬೇಕು. ಸೋಂಕು ನಿಯಂತ್ರಣಕ್ಕೆ ಅಗತ್ಯ ಇರುವ ಕ್ರಮ ಕೈಗೊಳ್ಳಬೇಕು ಅಂತ ಎಚ್ಚರಿಸಿದ್ದಾರೆ.

ಡೆಲ್ಟಾ ವೈರಸ್‌ ಭಾರತದಲ್ಲಿ ಎಷ್ಟೊಂದು ಸಾವು ನೋವು ತಂದಿದೆ ಅನ್ನೋದನ್ನು ನೋಡಿದ್ದೇವೆ. ಇದೇ ಈಗ 98 ದೇಶಗಳಲ್ಲಿ ಕಾಣಿಸಿಕೊಂಡಿದೆ. ಈಗ ಎಲ್ಲಾ ದೇಶಗಳಿಗೂ ಇರೋ ಮಾರ್ಗ ಅಂದ್ರೆ ಒಂದು ಲಸಿಕೆ ವಿತರಣೆಯ ವೇಗ ಹೆಚ್ಚಿಸುವುದು ಮತ್ತೊಂದು ಕಠಿಣ ನಿರ್ಬಂಧ ಕೈಕೊಳ್ಳುವುದು.

The post ಇಡೀ ವಿಶ್ವಕ್ಕೆ ಮತ್ತೆ ಅಪಾಯ ತಂದ ಡೆಲ್ಟಾ – ವಿಶ್ವ ಆರೋಗ್ಯ ಸಂಸ್ಥೆ ನೀಡಿದ ಎಚ್ಚರಿಕೆ ಏನು? appeared first on News First Kannada.

Source: newsfirstlive.com

Source link