ಬೆಂಗಳೂರು: ಕಿಚ್ಚ ಸುದೀಪ್ ನಡೆಸಿಕೊಡುತ್ತಿರುವ ಕನ್ನಡ ಬಿಗ್‍ಬಾಸ್ ಸೀಸನ್ 8 ಇತಿಹಾಸ ನಿರ್ಮಿಸಿದೆ.

ಹೌದು. ಭಾರತದಲ್ಲಿ ಬಿಗ್‍ಬಾಸ್ ಶೋ ಎಂದು ಕರೆಯಿಸಿಕೊಳ್ಳುತ್ತಿರುವ ಶೋ ಮೊದಲು ಆರಂಭಗೊಂಡಿದ್ದು ನೆದರ್‌ಲ್ಯಾಂಡ್ಸ್ ನಲ್ಲಿ. ‘ಬಿಗ್‍ಬ್ರದರ್’ ಹೆಸರಿನಲ್ಲಿ 1999ರಲ್ಲಿ ಆರಂಭಗೊಂಡಿದ್ದ ಈ ಶೋ ಭಾರತಕ್ಕೆ 2006ರಲ್ಲಿ ಬಂದಿತ್ತು.

1999ರಿಂದ ಇಲ್ಲಿಯವರೆಗೆ ವಿಶ್ವದ ಹಲವು ರಾಷ್ಟ್ರಗಳಲ್ಲಿ ಈ ರೀತಿಯ ಶೋಗಳು ನಡೆದಿದೆ. ಭಾರತದಲ್ಲಿ ಹಿಂದಿ, ಕನ್ನಡ, ಬಂಗಾಳ, ತಮಿಳು, ತೆಲುಗು, ಮರಾಠಿ, ಮಲೆಯಾಳಂ ಭಾಷೆಯಲ್ಲಿ ಶೋ ನಡೆದಿದೆ.

ಬಿಗ್ ಬಾಸ್ ಶೋದ ಮುಖ್ಯ ವಿಶೇಷ ಏನೆಂದರೆ ಒಮ್ಮೆ ಸ್ಪರ್ಧಿಗಳು ಬಿಗ್‍ಬಾಸ್ ಮನೆ ತೊರೆದರೆ ಮತ್ತೆ ಮನೆಯನ್ನು ಪ್ರವೇಶಿಸುವಂತಿಲ್ಲ. ಹೊರಗಿನ ಪ್ರಪಂಚದ ಅರಿವು ಇಲ್ಲದೇ ದೊಡ್ಮನೆಯಲ್ಲೇ ಆಟ ಆಡಬೇಕು. ಆದರೆ ಕೋವಿಡ್‍ನಿಂದಾಗಿ ಅರ್ಧದಲ್ಲಿ ಸ್ಥಗಿತಗೊಂಡಿದ್ದ ಬಿಗ್ ಬಾಸ್ 42 ದಿನಗಳ ಬಳಿಕ ಮತ್ತೆ ಆರಂಭಗೊಂಡಿದೆ. ಈ ಮೂಲಕ ಅನಿವಾರ್ಯ ಕಾರಣಗಳಿಂದ ಸ್ಥಗಿತಗೊಂಡು ಮತ್ತೆ ಆರಂಭಗೊಂಡ ವಿಶ್ವದ ಮೊದಲ ಬಿಗ್ ಬಾಸ್ ಶೋ ಎಂಬ ಪಟ್ಟ ಕನ್ನಡ ಬಿಗ್ ಬಾಸ್‍ಗೆ ಬಂದಿದೆ.

ಈ ವಿಚಾರವನ್ನು ಆರಂಭದಲ್ಲಿ ಪ್ರಸ್ತಾಪ ಮಾಡಿದ ಸುದೀಪ್, ವಿಶ್ವದ ಹಲವೆಡೆ ಬಿಗ್ ಬಾಸ್ ಶೋ ನಡೆದಿದೆ. ಆದರೆ ಅರ್ಧದಲ್ಲೇ ಸ್ಥಗಿತಗೊಂಡು ಮತ್ತೆ ಶೋ ಆರಂಭವಾಗಿದ್ದು ವಿಶ್ವದಲ್ಲೇ ಇದೇ ಮೊದಲು. ಈ ಮೂಲಕ 8ನೇ ಬಿಗ್ ಬಾಸ್ ಶೋ ಇತಿಹಾಸ ನಿರ್ಮಿಸಿದೆ. ಇನ್ನು ಮುಂದೆ ಈ ರೀತಿ ಆಗುತ್ತದೋ ಇಲ್ಲವೋ ಗೊತ್ತಿಲ್ಲ ಎಂದು ಹೇಳಿ ಸ್ಪರ್ಧಿಗಳಿಗೆ ಶುಭ ಹಾರೈಸಿದ್ದರು. ಇದನ್ನೂ ಓದಿ: ದೊಡ್ಮನೆಯಿಂದ ಹೊರ ಹೋದ ಅರವಿಂದ್‍ಗೆ ಬಂದ ಪ್ರಪೋಸಲ್ಸ್ ಎಷ್ಟು ಗೊತ್ತಾ?

ಕನ್ನಡದ ಮೊದಲ ಬಿಗ್‍ಬಾಸ್ ಶೋ 2013ರಲ್ಲಿ ಆರಂಭಗೊಂಡಿತ್ತು. ಪುಣೆಯ ಲೋನಾವಾಲದಲ್ಲಿ ಮೊದಲ ಎರಡು ಶೋ ನಡೆದಿದ್ದರೆ ನಂತರದ ಶೋಗಳು ಬೆಂಗಳೂರಿನ ಬಿಡದಿಯಲ್ಲಿರುವ ಇನ್ನೋವೇಟಿವ್ ಫಿಲ್ಮ್ ಸಿಟಿಯಲ್ಲಿ ನಡೆಯುತ್ತಿದೆ. ಈಗಾಗಲೇ 12 ಸ್ಪರ್ಧಿಗಳು ಮನೆಯನ್ನು ಮತ್ತೆ ಪ್ರವೇಶಿಸಿದ್ದು, ಮೊದಲ ದಿನದಿಂದಲೇ ಸ್ಪರ್ಧೆ ಆರಂಭವಾಗಿದೆ.

The post ಇತಿಹಾಸ ಸೃಷ್ಟಿಸಿದ ಕನ್ನಡ ಬಿಗ್‍ಬಾಸ್ appeared first on Public TV.

Source: publictv.in

Source link