ಇದು ಕೇವಲ ಇಲಿಯಲ್ಲ.. ದೊಡ್ಡ ಹೀರೋ ಆಗಿದ್ದು ಹೇಗೆ? ಇದರ ಸಾವಿಗೆ ಜನ ಕಣ್ಣೀರಾಗಿದ್ಯಾಕೆ ಗೊತ್ತಾ..?!


ಇಲಿಯಂದ್ರೆ ಸಾಕು ಮೊದ್ಲಿಗೆ ನೆನಪಿಗೆ ಬರೋದೆ ಡೆಡ್ಲಿ ವೈರಸ್ ಪ್ಲೇಗ್. ಇಲಿ ಕೂಡ ಹಲವು ರೋಗಗಳ ಹುಟ್ಟಿಗೆ ಕಾರಣವಾಗಿ ಲಕ್ಷಾಂತರ ಮಂದಿಯನ್ನ ಬಲಿ ಪಡೆದುಕೊಂಡಿದೆ. ಆದ್ರೆ ಅಲ್ಲೊಬ್ಬ ಇಲಿರಾಯ ಅದೆಷ್ಟೋ ಜೀವಗಳನ್ನ ಕಾಪಾಡಿದ ರಕ್ಷಕನಾಗಿದ್ದ. 5 ವರ್ಷಗಳಲ್ಲಿ ಅವನು ಕಾಪಾಡಿದ್ದು ಸಾವಿರಾರು ಪ್ರಾಣ. ಮಾಡಿದ್ದು ನೂರಾರು ಕಾರ್ಯಾಚರಣೆ.. ಕಾಂಬೋಡಿಯಾದ ಜನರ ಪಾಲಿನ ಆಪತ್ಪಾಂಧವನಾಗಿದ್ದವನು ಕೊನೆಗೂ ಅಗಲಿದ್ದಾನೆ. ಆತ ಬದುಕಿದ್ದಾಗ ಅವನ ಹವಾ ಹೇಗಿತ್ತು ಗೊತ್ತಾ?

ಮೂರ್ತಿ ಚಿಕ್ಕದಾದ್ರೂ ಕೀರ್ತಿ ದೊಡ್ಡದು ಅನ್ನೋ ಮಾತು ಅಕ್ಷರಶಃ ಸತ್ಯ.. ಯಾಕಂದ್ರೆ, ದೈಹಿಕವಾಗಿ ಎಷ್ಟೇ ದುರ್ಬಲವಾಗಿದ್ರೂ, ದೇಹದಾರ್ಢ್ಯ ಇಲ್ಲದಿದ್ರೂ ಚಾಣಾಕ್ಷ್ಯತನ, ಬುದ್ಧಿವಂತಿಕೆಯ ಮುಂದೆ ಎಂತದ್ದೇ ಪರ್ವತ ಬಂದು ನಿಂತರೂ ಅದು ನಗಣ್ಯ.. ಈ ಮಾತುಗಳಿಗೆ ಪ್ರತ್ಯಕ್ಷ ಸಾಕ್ಷಿ ಎಂಬುವಂತೆ ಬದುಕಿದ್ದವನೆ ಈ ಮಗಾವಾ.. ಶರೀರದ ವಿಚಾರದಲ್ಲಿ ಪುಟ್ಟಗಾತ್ರ ಹೊಂದಿದ್ದ ಇವನು, ಕಾಂಬೋಡಿಯ ಜನರ ರಕ್ಷಣೆ ವಿಚಾರದಲ್ಲಿ ಮದಗಜನಾಗಿದ್ದ ಅಂದ್ರೆ ತಪ್ಪಾಗೋದಿಲ್ಲ. ಭೂಮಿಯೊಳಗಿದ್ದ ಭಯಾನಕ ಸ್ಫೋಟಕ ಸಾಧನಗಳ ರಹಸ್ಯ ಭೇದಿಸಿದ್ದ ರಣಬೇಟೆಗಾರ . ಅದೆಷ್ಟೋ ಜನರ ಜೀವವನ್ನ ಕಾಪಾಡಿದ ಸುಲ್ತಾನ.

ಇಲಿಗಳೆಂದ್ರೆ ಸಾಕು ಜನರು ಹೌಹಾರಿ ಬಿಡ್ತಾರೆ. ಯಾಕಂದ್ರೆ ಜಗತ್ತಿಗೆ ಡೆಡ್ಲಿ ವೈರಸ್ ಪ್ಲೇಗ್ ಹರಡಲು ಇಲಿಯೇ ಕಾರಣವಾಯ್ತು ಅನ್ನೋ ವಿಷ್ಯಾ ಗೊತ್ತಾದ್ಮೇಲೆ ಇಲಿ ಎಲ್ಲಾದ್ರು ಕಂಡ್ರೆ ಅದಕ್ಕೆ ಕಂಡಲ್ಲಿ ಗುಂಡೇ. ಒಂದಾ ವಿಷ ಹಾಕಿ ಕೊಲ್ತಾರೆ.. ಇಲ್ಲಾ ಅದ್ರ ಮೇಲೆ ಹಲ್ಲೆ ಮಾಡ್ತಾರೆ. ಅದೂ ಇಲ್ಲ ಅಂದ್ರೆ, ಒಂದು ಬೋನ್​ ಇಟ್ಟು ಹಿಡಿದು ಹಾಕಿ ಎಲ್ಲೋ ದೂರದಲ್ಲಿ ಬಿಟ್ಟುಬಿಡ್ತಾರೆ. ಆದ್ರೆ, ಹೀಗೆ ಉದ್ದುದ್ದ ಮೀಸೆ ಬಿಟ್ಕೊಂಡು ಅತ್ತಿಂದಿತ್ತ ಇತ್ತಿಂದತ್ತ ಓಡಾಡ್ತಿರೋ ಇವನು ಮಾತ್ರ ಸಖತ್​ ಸ್ಪೆಷಲ್.. ಅಂದಹಾಗೇ, ಈ ಮೂಷಿಕ ಅಂದ್ರೆ ಕಾಂಬೋಡಿಯಾದ ಜನರಿಗೆ ಅದೇನೋ ಗೌರವ, ಅದೇನ್ ಅಭಿಮಾನ. ಅಲ್ಲಿಯ ಜನರು ಇವನನ್ನ ಬರೀ ಇಲಿಯಾಗಿ ನೋಡಿಲ್ಲ. ಅದೆಷ್ಟೋ ಜನ ತಮ್ಮ ರಕ್ಷಣೆಗೆ ನಿಂತಿರೋ ಸಾಕ್ಷಾತ್​ ಗಣೇಶನ ವಾಹನ ಅಂತಲೇ ಭಾವಿಸಿದ್ರು.

ಈ ಮಗಾವಾನ ಹಿಸ್ಟ್ರಿ ತಿಳಿದುಕೊಳ್ಳುವ ಮೊದ್ಲು ನೀವೆಲ್ಲಾ ಕಾಂಬೋಡಿಯಾದ ಬಗ್ಗೆ ತಿಳಿದುಕೊಳ್ಳಲೇಬೇಕು. ಕಾಂಬೋಡಿಯಾ ಭಾರತದಿಂದ ಸುಮಾರು ಐದು ಸಾವಿರ ಕಿಲೋಮೀಟರ್ ದೂರದಲ್ಲಿರುವ ದೇಶ. ಇಲ್ಲಿಯ ಹೆಚ್ಚಿನ ಜನರಿಗೆ ಕೃಷಿಯೇ ತಮ್ಮ ಜೀವನದ ಮೂಲ ಅಂದ್ರೆ ತಪ್ಪಾಗಲ್ಲ. ಪ್ರಪಂಚದಲ್ಲಿ ಅತ್ಯಂತ ಹೆಚ್ಚು ಗಣಿಗಾರಿಕೆಗಳು ನಡೆಯೋ ದೇಶಗಳ ಪೈಕಿ ಈ ಕಾಂಬೋಡಿಯಾ ಕೂಡ ಒಂದು.

ಅದು 1980ರ ಆಸುಪಾಸು.. ಕಾಂಬೋಡಿಯ ಆಂತರಿಕ ಯುದ್ಧದಲ್ಲಿ ಮುಳುಗಿದ್ದ ಸಮಯ. ಈ ಸಂದರ್ಭದಲ್ಲಿ ಸಾವಿರಾರು ಭೂ ಸ್ಫೋಟಕ ವಸ್ತುಗಳನ್ನ ಭೂಮಿಯ ಅಡಿಯಲ್ಲಿ ಹೂತು ಹಾಕಲಾಗಿತ್ತು. ಗಣಿಗಾರಿಕೆ ಕೂಡ ಹೆಚ್ಚಿನ ಸಂಖ್ಯೆಯಲ್ಲಿ ನಡೆಯುತ್ತಿದ್ದ ಕಾರಣ ಗಣಿ ಸ್ಫೋಟಕ್ಕೆ ಅಥವಾ ಭೂ ಸ್ಫೋಟಕ ವಸ್ತುಗಳನ್ನ ಜನರು ಸಿಕ್ಕ ಸಿಕ್ಕ ಕಡೆ ಅಂದ್ರೆ ಭೂಗರ್ಭದ ಒಡಲಲ್ಲಿ ಬಚ್ಚಿಟ್ಟುಕೊಂಡಿದ್ರು. ಕೃಷಿಯನ್ನೇ ಪ್ರಮುಖ ಕಸುಬನ್ನಾಗಿ ಮಾಡ್ಕೊಂಡಿರುವ ಇಲ್ಲಿಯ ಜನರು ತಮ್ಮನ್ನು ತಾವು ವ್ಯವಸಾಯದಲ್ಲಿ ತೊಡಗಿಸಿಕೊಳ್ಳುತ್ತಿದ್ದ ಹೊತ್ತಲೇ ಭೂಮಿಯಲ್ಲಿ ಅಡಗಿದ್ದ ಅಪಾಯಕಾರಿ ವಸ್ತುಗಳು ಸ್ಫೋಟವಾಗ್ತಿದ್ದವು

ವರದಿಗಳ ಪ್ರಕಾರ ಕಾಂಬೋಡಿಯಾದಲ್ಲಿ 1979ರಿಂದ ಇಲ್ಲಿರವರೆಗೂ ಈ ರೀತಿಯ ಸ್ಫೋಟಕ್ಕೆ ತುತ್ತಾಗಿ ಸಾವನ್ನಪ್ಪಿದವರು ಬರೋಬ್ಬರಿ 19,684 ಮಂದಿ. 50 ಸಾವಿರಕ್ಕೂ ಅಧಿಕ ಜನರು ಈ ರೀತಿಯ ಡೆಡ್ಲಿ ಸ್ಫೋಟಕ್ಕೆ ತುತ್ತಾಗಿ ಕೈ ಕಾಲುಗಳನ್ನ ಕಳೆದುಕೊಂಡಿದ್ದಾರೆ. ಪರಿಣಾಮ ಕಾಂಬೋಡಿಯಾದ ಜನರಲ್ಲಿ ಹೆಜ್ಜೆ ಹೆಜ್ಜೆಗೂ ಭಯ ಆವರಿಸಿತ್ತು.ಎಲ್ಲಿ ಯಾವಾಗ ಸ್ಫೋಟವಾಗುತ್ತೋ ಅನ್ನೋದು ಗೊತ್ತಾಗದೆ ಜನರು ಆತಂಕದಲ್ಲೇ ಕಾಲ ಕಳೆಯುತ್ತಿದ್ದರು. ತಮ್ಮ ಜಮೀನುಗಳಿಗೆ ಕಾಲಿಡಲು ನೂರು ಬಾರಿ ಯೋಚ್ನೆ ಮಾಡುವಂತ ಸ್ಥಿತಿ ನಿರ್ಮಾಣವಾಗಿತ್ತು. ಲ್ಯಾಂಡ್‌ಮೈನ್‌ಗಳು ಮತ್ತು ಯುದ್ಧದ ಸ್ಫೋಟಕ ಅವಶೇಷಗಳು ಕಾಂಬೋಡಿಯನ್ನರ ಮೇಲೆ ತೀವ್ರ ಪರಿಣಾಮ ಬೀರಿತ್ತು. ಇಂತಹ ಸಮಯದಲ್ಲಿ ಕಾಂಬೋಡಿಯಾಗೆ ಈ ರಣಬೇಟೆಗಾರನ ಎಂಟ್ರಿಯಾಗಿತ್ತು. ಕಾಂಬೋಡಿಯಾದಲ್ಲಿ ಭಯದ ವಾತಾವರಣ ಕವಿದ ಸಂದರ್ಭದಲ್ಲಿ ಜನರು ರಕ್ಷಣೆಗೆ ನಿಂತಿದ್ದೆ ಈ ಮಗಾವಾ.

ನೂರಕ್ಕೂ ಅಧಿಕ ಗಣಿ ಸ್ಫೋಟಕಗಳನ್ನ ಪತ್ತೆಮಾಡಿದ್ದ ಸುಲ್ತಾನ !

ಎಸ್. ಅದ್ಯಾವಾಗ ಕಾಂಬೋಡಿಯಾದ ನೆಲಕ್ಕೆ ಇವನ ಎಂಟ್ರಿಯಾಯೋ. ಅಲ್ಲಿಯ ಭಯಭೀತ ಚಿತ್ರಣವೇ ಬದಲಾಗಿ ಹೋಯ್ತು. ಜನರಲ್ಲಿ ಭಯ ದೂರ ಸರಿಯಲು ಶುರುವಾಯ್ತು. ಯಾಕಂದ್ರೆ, ಈ ಮಗಾವಾ ಅತಳ. ವಿತಳ, ಪಾತಳ ತಳಾತಳದಲ್ಲಿ ಅಡಗಿಸಲಾಗಿದ್ದ ಗಣಿ ಸ್ಫೋಟಕ ವಸ್ತುಗಳನ್ನ ಕೇವಲ ವಾಸನೆ ಮೂಲಕವೇ ಪತ್ತೆ ಹಚ್ಚಿ ಅಧಿಕಾರಿಗಳಿಗೆ ಮಾಹಿತಿ ಕೊಡ್ತಿದ್ದ. ಈ ಮಗವಾನಿಂದ ಸೂಚನೆ ಸಿಗ್ತಿದ್ದಂಗೆ ಕಾರ್ಯ ಪ್ರವೃತರಾಗುತ್ತಿದ್ದ ಅಧಿಕಾರಿಗಳು ಕೂಡಲೇ ಕಾರ್ಯಾಚರಣೇ ನಡೆಸಿ ಸ್ಫೋಟಕಗಳನ್ನ ನಾಶ ಪಡಿಸುತ್ತಿದ್ರು. ಇದರಿಂದ ಕಾಂಬೋಡಿಯಾದ ಸಾವಿರಾರು ಜನರ ಪ್ರಾಣ ಉಳಿಸುವಲ್ಲಿ ಕೂಡ ಇದು ಯಶಸ್ವಿಯಾಯ್ತು. ಜನರ ಎದೆಯಲ್ಲಿದ್ದ ಭಯವನ್ನು ಸಂಪೂರ್ಣವಾಗಿ ಹೋಗಲಾಡಿಸಿದ್ದ, ಮಗಾವಾ, ಕೇವಲ ವಾಸನೆಯನ್ನ ಗ್ರಹಿಸಿ ಆಗಬಹುದಾಗಿದ್ದ ಬಹುದೊಡ್ಡ ಅನಾಹುತಗಳನ್ನು ತಪ್ಪಿಸುತ್ತಿದ್ದ. ಪ್ರತಿಯೊಂದು ಗಣಿ ಸ್ಫೋಟಕ ವಸ್ತುಗಳನ್ನು ಹೆಕ್ಕಿ ತೆಗೆಯುತ್ತಿದ್ದ. ಪರಿಣಾಮ ಸಾವಿರಾರು ಜನರ ಜೀವ ಉಳಿಯಿತು. ಹೀಗೆ, ಕಾಂಬೋಡಿಯಾದಲ್ಲಿ ಹೊಸ ಬೆಳಕು ಮೂಡಿಸಿದ್ದ ಇವನು ಹುಟ್ಟಿದ್ದು ಆ ದೇಶದಲ್ಲಂತೂ ಅಲ್ವೇ ಅಲ್ಲ

ಶರವೇಗಿ ‘ಮಗಾವಾ’
2014ರಲ್ಲಿ ತಾಂಜೇನಿಯಾದಲ್ಲಿ ಹುಟ್ಟಿದ್ದ ಮಗವಾ

2014 ನವೆಂಬರ್​​ 5 ರಂದು ತಾಂಜೇನಿಯಾದಲ್ಲಿ ಹುಟ್ಟಿದ್ದ ಮಗವಾ, ಮುಂದೆ ಬೆಲ್ಜಿಯಂ ಮೂಲದ APOPO ಸಂಸ್ಥೆಯಿಂದ ಭೂಮಿ ಅಡಿಯಲ್ಲಿರುವ ಗಣಿ ಸ್ಫೋಟಕ ವಸ್ತುಗಳನ್ನ ಪತ್ತೆ ಹಚ್ಚುವ ಕುರಿತು ಒಂದು ವರ್ಷ ಟ್ರೇನಿಂಗ್ ಪಡೆದುಕೊಳ್ತಾನೆ. ಹೀಗೆ ಟ್ರೇನಿಂಗ್ ಬಳಿಕ 2016ರಲ್ಲಿ ಕಾಂಬೋಡಿಯ ಕಡೆಗೆ ಇಲಿ ಪ್ರಯಾಣ ಬೆಳೆಸುತ್ತೆ. ಮುಂದೆ ಈತ ಕಾಂಬೋಡಿಯಾಲದ್ಲಿ ಹೊಸ ಚರಿತ್ರೆಯನ್ನೇ ಸೃಷ್ಟಿಸಿ ಬಿಟ್ಟಿದ್ದಾನೆ. ಕಾಂಬೋಡಿಯಾಲ್ಲಿ 5 ವರ್ಷಗಳ ಜನರ ರಕ್ಷಣೆ ನಿಲ್ಲುವ ಮೂಲಕ ಅಲ್ಲಿಯ ಜನರ ಸೇವೆ ಮಾಡಿದ ಈತ 2021ರ ಜೂನ್​ನಲ್ಲಿ ನಿವೃತ್ತಿಯಾಗಿದ್ದ. ಹೀಗೆ ಕಳೆದ ವರ್ಷ ನಿವೃತ್ತಿಯಾಗಿದ್ದ ಈ ಹೀರೋ ಇದೀಗ ಸಾವನಪ್ಪಿದ್ದಾನೆ.

ಕಾಂಬೋಡಿಯಾದ ಜನರ ರಕ್ಷಕನಿಗೆ ಸಿಕ್ಕಿತ್ತು ಗೋಲ್ಡ್​​ ಮೆಡಲ್
46 ಫುಟ್‌ಬಾಲ್ ಸ್ಟೇಡಿಯಂನಷ್ಟು ಸ್ಥಳದಲ್ಲಿ ಕಾರ್ಯಾಚರಣೆ

ಚಾರಿಟಿ ಸಂಸ್ಥೆಯಲ್ಲಿ ತರಬೇತಿ ಪಡೆದಿದ್ದ ಇಲಿರಾಯ ಸಖತ್ ಆ್ಯಕ್ಟೀವ್ ಆಗಿದ್ದ. 1,41,000 ಸ್ಕ್ವೇರ್ ಮೀಟರ್ ವಿಶಾಲ ಜಾಗವನ್ನ ಕೇವಲ 30 ನಿಮಿಷದಲ್ಲಿ ಜಾಲಾಡಿ, ಅಲ್ಲಿರುವ ಸ್ಫೋಟಕ ವಸ್ತುವನ್ನ ಪತ್ತೆ ಮಾಡಿದ್ದ. ಇದೇ ಕೆಲಸವನ್ನು ಮನುಷ್ಯರು ಮಾಡಿದ್ದರೆ ಕನಿಷ್ಠ ಅಂದ್ರೂ ಅವರಿಗೆ ಒಂದು ವಾರ ಬೇಕಾಗ್ತಿತ್ತು. ಆದ್ರೆ ಈ ಮಗಾವಾ ತನ್ನ ಅಸಾಧಾರಣ ಕಲೆಯಿಂದ ಆ ಬೃಹತ್ ಜಾವಗವನ್ನ ಭೇದಿಸಿದ್ದ. ಹೀಗೆ, ಸಾಧನೆಯ ಶಿಖರ ಕಟ್ಟಿದ್ದ ಈ ಶರವೇಗದ ಶೋಧಕನಿಗೆ 2021ರಲ್ಲಿ ಗೋಲ್ಡ್​ ಮೆಡಲ್ ಕೂಡ ಸಿಕ್ಕಿತ್ತು. ಪಿಡಿಎಸ್‌ಎಎ ಇತಿಹಾಸದಲ್ಲಿಯೇ ಚಿನ್ನದ ಪದಕ ಪಡೆದ ಮೊದಲ ಇಲಿ ಅನ್ನೋ ಹಿರಿಮೆಗೂ ಪಾತ್ರವಾಗಿದ್ದ.

ಮಗಾವಾ ಹೆಸರಿನ ಈ ಇಲಿ ಈವರೆಗೂ ಲ್ಯಾಂಡ್ ಮೈನ್ಸ್ ಹೊರತೆಗೆಯಲು ಹುಡುಕಿರುವುದು ಸುಮಾರು 46 ಫುಟ್‌ಬಾಲ್ ಸ್ಟೇಡಿಯಂ ವಿಸ್ತಿರ್ಣದಷ್ಟು ಪ್ರದೇಶವನ್ನ. 5 ವರ್ಷಗಳಲ್ಲಿ ಕಾಂಬೋಡಿಯಾದಲ್ಲಿ ಯಾವ ಮೂಲೆಯಲ್ಲಿ ಸ್ಫೋಟಕ ಸಾಧನಗಳು ಇವೆ ಅನ್ನೋದು ಈತನ ಅರಿವಿಗೆ ಬಂದ್ರೆ ಸಾಕು, ಕ್ಷಣಾರ್ಧದಲ್ಲಿ ಅಲ್ಲಿಗೆ ಎಂಟ್ರಿ ಕೊಟ್ಟು ಆ ಸಾಧನವನ್ನ ಪತ್ತೆ ಹಚ್ಚಿ ಜನರ ರಕ್ಷಣೆ ಮಾಡ್ತಿದ್ದ ಈ ಇಲಿರಾಯನಿಗೆ ಟ್ರೈನಿಂಗ್ ಕೊಟ್ಟು ಹೀರೋ ಆಗಲು ಕಾರಣವಾಗಿದ್ದ APOPO ಸಂಸ್ಥೆ ಇವನು ನಿವೃತ್ತಿಯಾದಾಗ ರಿಟೈರ್​ಮೆಂಟ್​ ಪಾರ್ಟಿ ಕೂಡ ಕೊಟ್ಟಿತ್ತು. ಹೀಗೆ ಸಖತ್ ಆ್ಯಕ್ವೀವ್ ಆಗಿದ್ದ ಮಗಾವಾ ಕಳೆದ ಕೆಲ ದಿನಗಳಿಂದ ತುಂಬಾ ಬಳಲಿದಂತೆ ಕಾಣ್ತಿತ್ತು. ಅಲ್ಲದೇ ಸರಿಯಾಗಿ ಆಹಾರವನ್ನೂ ಸೇವಿಸುತ್ತಿರ್ಲಿಲ್ಲ. ಇದೀಗ ಕೊನೆಯುಸಿರೆಳೆದಿದ್ದಾನೆ. ಈ ಮಗಾವಾಗೆ ಟ್ರೇನಿಂಗ್ ಕೊಟ್ಟು ಆತನನ್ನ ಇಷ್ಟು ಚಾಣಾಕ್ಷ್ಯನನ್ನಾಗಿ ಮಾಡಿದ್ದ APOPO ಕೂಡ ಮಗಾವಾನ ಸಾವಿಗೆ ಬೇಸರ ವ್ಯಕ್ತಪಡಿಸಿದೆ.

ಒಟ್ಟಿನಲ್ಲಿ ಮಗಾವಾ ಕಾಂಬೋಡಿಯಾದ ಅದೆಷ್ಟೋ ಜನರನ್ನ ಪ್ರಾಣಾಪಾಯದಿಂದ ಕಾಪಾಡಿದೆ. ನಾಗರೀಕರು ಜೀವ ಭಯವಿಲ್ಲದೆ ತಮ್ಮ ಕೃಷಿಭೂಮಿಯಲ್ಲಿ ಕೆಲಸ ಮಾಡಲು ಕಾರಣವಾಗಿದೆ. ಹೀಗೆ ಕಾಂಬೋಡಿಯಾದ ಜನರ ಪಾಲಿಗೆ ತನ್ನ ಮನೆಯ ಮಗನಂತಿದ್ದ ಈ ಮಗಾವಾ ಇದೀಗ ಸಾವನಪ್ಪಿರೋದು ಅಲ್ಲಿಯ ಜನರಲ್ಲಿ ತಮ್ಮ ಮನೆಯೇ ಮಗನೇ ಮೃತಪಟ್ಟಿದ್ದಾನೆ ಭಾವನೆ ಉಂಟು ಮಾಡಿದೆ
ಕಳೆದ ವಾರವಷ್ಟೇ ಕಾಂಬೋಡಿಯಾದಲ್ಲಿ ಗಣಿಗಾರಿಕೆ ನಡೆಸುತ್ತಿದ್ದ ವೇಳೆ ಮೂವರು ಜನರು ಸಾವನಪ್ಪಿದ್ರು. ಆ ವೇಳೆ ಅಲ್ಲಿನ ಜನರಿಗೆ ಮಗಾವಾನ ಅನುಪಸ್ಥಿತಿ ಎದ್ದು ಕಾಣುವಂತೆ ಮಾಡ್ತಿದೆ. ತನ್ನ ಅಸಾಧಾರಣ ಕಲೆಯಿಂದ ಕಾಂಬೋಡಿಯಾದ ಜನರ ರಕ್ಷಕನಾಗಿ ನಿಂತಿದ್ದ ಮಗಾವಾ ಮತ್ತೆ ಹುಟ್ಟಿ ಬರಲಿ ಅಂತಾ ಕಾಂಬೋಡಿಯಾ ಮಂದಿ ಪ್ರಾರ್ಥಿಸುತ್ತಿದ್ದಾರೆ

ವಿಶೇಷ ವರದಿ: ಅಬ್ದುಲ್ ಸತ್ತಾರ್, ಸ್ಪೆಷಲ್ ಡೆಸ್ಕ್

News First Live Kannada


Leave a Reply

Your email address will not be published. Required fields are marked *