ಬ್ರಿಟನ್ : ಜಗತ್ತು ಮುಂದುವರೆಯುತ್ತಾ ಹೋಗುತ್ತಿದೆ. ದಿನಕ್ಕೊಂದು ಆವಿಷ್ಕಾರಗಳು, ಹೊಸ ಹೊಸ ಅಭಿವೃದ್ಧಿಗಳು ನಡೆಯುತ್ತಲೇ ಇವೆ. ಇನ್ನು ಆರೋಗ್ಯ ಕ್ಷೇತ್ರದಲ್ಲಿಯೂ ಕೂಡ ಹೊಸ ಹೊಸ ಔಷಧಗಳನ್ನು ವಿಜ್ಞಾನಿಗಳು ಕಂಡು ಹಿಡಿಯುತ್ತಿದ್ದಾರೆ. ಮಾರಣಾಂತಿಕ ಕಾಯಿಲೆಗಳಿಗೂ ಕೂಡ ಔಷಧಗಳನ್ನು ಕಂಡು ಹಿಡಿಯಲಾಗುತ್ತಿದೆ. ಇತ್ತೀಚೆಗೆ ಬ್ರಿಟನ್ ದೇಶದಲ್ಲಿ ಒಂದು ಔಷಧ ಕಂಡು ಹಿಡಿಯಲಾಗಿದ್ದು, ಇದರ ಬೆಲೆ ಕೇಳಿದ್ರೆ ನೀವೂ ಕೂಡ ಶಾಕ್ ಆಗೋದು ಪಕ್ಕಾ..!

ನಾವು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವುದಕ್ಕೆ ಸಾವಿರ ರೂ.ಗಳಲ್ಲಿ ಹಣ ನೀಡುತ್ತೇವೆ. ಇನ್ನು ದೊಡ್ಡ ದೊಡ್ಡ ಕಾಯಿಲೆಗಳು ಎದುರಾದ್ರೆ ಲಕ್ಷಗಳಲ್ಲಿ ಹಣ ಕೊಡುತ್ತೇವೆ. ಆದ್ರೆ ಬ್ರಿಟನ್ ಸರ್ಕಾರ ಇತ್ತೀಚೆಗೆ ಔಷಧಿ ಒಂದಕ್ಕೆ ಒಪ್ಪಿಗೆ ನೀಡಿದ್ದು, ಇದರ ಒಂದು ಡೋಸ್ ಬೆಲೆ ಬರೋಬ್ಬರಿ 18 ಕೋಟಿಯಂತೆ.

ಹೌದು, ಯುಕೆ ಸರ್ಕಾರ ಈ ಔಷಧಿಗೆ ಒಪ್ಪಿಗೆ ನೀಡಿದೆ. ಅನುವಂಶಿಯ ಅಸ್ವಸ್ಥತೆಗೆ ಸಂಬಂಧಿಸಿದಂತೆ ಹಲವು ಅಪರೂಪದ ಕಾಯಿಲೆಗಳಿಗೆ ಈ ಮೆಡಿಸಿನ್ ಬಳಕೆಯಾಗುತ್ತದೆ.

ಈ ಔಷಧವನ್ನು ನೋವರ್ಟೀಸ್ ಜೆನ್ ತಯಾರು ಮಾಡಿದ್ದು, ಮೆಡಿಸಿನ್ ಗೆ ಜೊಲ್ಗೆಸ್ನ್ ಮಾ ಎಂದು ಹೆಸರಿಡಲಾಗಿದೆ. ಇಂಗ್ಲೆಂಡ್ ನ ರಾಷ್ಟ್ರೀಯ ಆರೋಗ್ಯ ಸೇವೆಯು ಮಾರಾಟಕ್ಕೆ ಒಪ್ಪಿಗೆ ನೀಡಿದ್ದು, ಇದರ ಬೆಲೆಯನ್ನು ಬರೋಬ್ಬರಿ 18 ಕೋಟಿಗೆ ನಿಗದಿ ಮಾಡಲಾಗಿದೆ.

ಈ ಔಷಧವನ್ನು ಸ್ಪೈನಲ್ ಮಸ್ಕ್ಯುಲರ್ ಅಟ್ರೋಫಿ(ಬೆನ್ನು ಮೂಳೆಗೆ ಸಂಬಂಧಿಸಿದ ಕಾಯಿಲೆ), ಪಾರ್ಶ್ವವಾಯು, ಸ್ನಾಯು ದೌರ್ಬಲ್ಯ ಸೇರಿದಂತೆ ಅತೀ ಗಂಭೀರ ಕಾಯಿಲೆಗಳಿಗೆ ಮಾತ್ರ ನೀಡಲಾಗುತ್ತಿದೆಯಂತೆ.

ಜೊಲ್ಗೆಸ್ನ್ ಮಾ ಮೆಡಿಸಿನ್ ಬಗ್ಗೆ ಹಲವಾರು ಅಧ್ಯಯನಗಳು ನಡೆದಿದ್ದು, ಮಕ್ಕಳಿಗೆ ಸಂಬಂಧಿಸಿದಂತೆ ವೆಂಟಿಲೇಟರ್ ಇಲ್ಲದೆ ಉಸಿರಾಟ ಮಾಡಲು ಈ ಔಷಧ ಕೆಲಸ ಮಾಡುತ್ತದೆಯಂತೆ. ಅಲ್ಲದೆ ಡೋಸೇಜ್ ಪಡೆದ ಮಗು ಸ್ವಲ್ಪ ಸಮಯದಲ್ಲೇ ಎದ್ದು ಓಡಾಡುವ ಶಕ್ತಿಯನ್ನು ಪಡೆಯುತ್ತದೆಯಂತೆ. ಇದ್ರಿಂದಾಗಿ ಈ ಜೊಲ್ಗೆಸ್ನ್ ಮಾ ಬಗ್ಗೆ ಧನಾತ್ಮಕ ಪ್ರತಿಕ್ರಿಯೆಗಳು ಬರುತ್ತಿವೆ.

ಇನ್ನು ಚಿಕ್ಕ ಮಕ್ಕಳಿಗೆ ಬರುವ ಬೆನ್ನು ಮೂಳೆ ಶಕ್ತಿಯನ್ನು ಕ್ಷೀಣಿಸುವ ಕಾಯಿಲೆಗೆ ಇದು ಉತ್ತಮ ಮದ್ದು ಎಂದು ಹೇಳಲಾಗಿದೆ. ಒಟ್ಟಾರೆಯಾಗಿ ಹೇಳುವುದಾದರೆ ಈ ಮೆಡಿಸಿನ್ ಚಿಕ್ಕ ಮಕ್ಕಳಿಗೆ ಮತ್ತು ಯುವಕರಿಗೆ ಹೆಚ್ಚು ಉಪಯುಕ್ತವಾಗಿದ್ದು, ಜಗತ್ತಿನ ದುಬಾರಿ ಬೆಲೆಯ ಔಷಧವಾಗಿದೆ.

ಆರೋಗ್ಯ – Udayavani – ಉದಯವಾಣಿ
Read More