‘ಇದು ತುಂಬ ಒಳ್ಳೆಯ ಸಿನಿಮಾ’: ‘100’ ಚಿತ್ರವನ್ನು ಹೊಗಳಿದ ಇನ್ಫೋಸಿಸ್​ ಸುಧಾ ಮೂರ್ತಿಗೆ ಇಷ್ಟ ಆಗಿದ್ದೇನು? | Infosys Sudha Murthy praised Ramesh Aravind Rachita Ram starrer 100 Kannada movie


‘ಇದು ತುಂಬ ಒಳ್ಳೆಯ ಸಿನಿಮಾ’: ‘100’ ಚಿತ್ರವನ್ನು ಹೊಗಳಿದ ಇನ್ಫೋಸಿಸ್​ ಸುಧಾ ಮೂರ್ತಿಗೆ ಇಷ್ಟ ಆಗಿದ್ದೇನು?

ಸುಧಾ ಮೂರ್ತಿ, ರಮೇಶ್​ ಅರವಿಂದ್​

ರಮೇಶ್​ ಅವರಿಂದ್​ (Ramesh Aravind) ನಿರ್ದೇಶನ ಮತ್ತು ನಟನೆಯ ‘100’ ಸಿನಿಮಾ (100 Kannada Movie) ಎಲ್ಲರಿಂದ ಮೆಚ್ಚುಗೆ ಪಡೆದುಕೊಳ್ಳುತ್ತಿದೆ. ರಿಲೀಸ್​ ಆಗುವುದಕ್ಕೂ ಮುನ್ನವೇ ಗೃಹ ಸಚಿವ ಆರಗ ಜ್ಞಾನೇಂದ್ರ, ಐಎಎಸ್​ ಅಧಿಕಾರಿ ಶಾಲಿನಿ ರಜನೀಶ್​ ಮುಂತಾದವರು ಈ ಚಿತ್ರವನ್ನು ನೋಡಿ ಮೆಚ್ಚಿಕೊಂಡಿದ್ದರು. ನ.19ರಂದು ರಾಜ್ಯಾದ್ಯಂತ ಬಿಡುಗಡೆ ಆಗಿ ಯಶಸ್ವಿ ಪ್ರದರ್ಶನ ಕಾಣುತ್ತಿರುವ ‘100’ ಸಿನಿಮಾವನ್ನು ಇನ್ಫೋಸಿಸ್​ ಸುಧಾ ಮೂರ್ತಿ (Infosys Sudha Murthy) ಅವರು ಕೂಡ ವೀಕ್ಷಣೆ ಮಾಡಿದ್ದು, ಮನಸಾರೆ ಹೊಗಳಿದ್ದಾರೆ. ಈ ಚಿತ್ರ ಅವರಿಗೆ ಬಹಳ ಇಷ್ಟ ಆಗಿದೆ. ಇದು ಇಡೀ ಫ್ಯಾಮಿಲಿ ಕುಳಿತು ನೋಡಬೇಕಾದ ಚಿತ್ರ ಎಂದು ಸುಧಾ ಮೂರ್ತಿ (Sudha Murthy) ಹೇಳಿದ್ದಾರೆ. ‘100’ ಚಿತ್ರದಲ್ಲಿ ರಮೇಶ್​ ಅರವಿಂದ್​ ಜೊತೆ ರಚಿತಾ ರಾಮ್ (Rachita Ram)​, ಪೂರ್ಣಾ, ವಿಶ್ವಕರ್ಣ ಮುಂತಾದವರು ಅಭಿನಯಿಸಿದ್ದಾರೆ. ಎಂ. ರಮೇಶ್​ ರೆಡ್ಡಿ ಅವರು ನಿರ್ಮಾಣ ಮಾಡಿದ್ದಾರೆ. ಪ್ರೇಕ್ಷಕರಿಂದಲೂ ಈ ಸಿನಿಮಾಗೆ ಉತ್ತಮ ರೆಸ್ಪಾನ್ಸ್​ ಸಿಗುತ್ತಿದೆ. 

‘ನಾನು 100 ಸಿನಿಮಾ ನೋಡಿದೆ. ಈ ಚಿತ್ರ ಬಹಳ ಚೆನ್ನಾಗಿದೆ. ಇತ್ತೀಚೆಗೆ ಮೊಬೈಲ್​, ಕಂಪ್ಯೂಟರ್​, ಇಂಟರ್​ನೆಟ್​ಗೆ ಅಡಿಕ್ಟ್​ ಆದವರು ಅಪರಿಚಿತರ ಜೊತೆ ಗೆಳೆತನ ಬೆಳೆಸುತ್ತಾರೆ. ಗೆಳೆತನ ಮಾಡುವುದು ತಪ್ಪಲ್ಲ. ಆದರೆ ಗೊತ್ತಿಲ್ಲದ ಜನರ ಜೊತೆ ನಮ್ಮ ವೈಯಕ್ತಿಕ ವಿಚಾರಗಳನ್ನು ಹಂಚಿಕೊಳ್ಳುವುದು ತಪ್ಪು. ಅದರಿಂದ ಇಡೀ ಕುಟುಂಬಕ್ಕೆ ಏನೆಲ್ಲ ತೊಂದರೆ ಆಗಬಹುದು ಎಂಬುದನ್ನು ಈ ಚಿತ್ರ ವಿವರಿಸಿದೆ. ಇತ್ತೀಚಿನ ದಿನಗಳಲ್ಲಿ ಇಂಥ ಒಳ್ಳೆಯ ಸಿನಿಮಾ ಬಂದಿರುವುದು ತುಂಬ ಕಡಿಮೆ. ಈ ಚಿತ್ರವನ್ನು ನಾನು ಬಹಳ ಎಂಜಾಯ್​ ಮಾಡಿದೆ’ ಎಂದು ಸುಧಾ ಮೂರ್ತಿ ಹೇಳಿದ್ದಾರೆ.

‘ಇಡೀ ಕುಟುಂಬ ಒಟ್ಟಾಗಿ ಕುಳಿತು ನೋಡಿ ಎಂಜಾಯ್​ ಮಾಡುವಂತಹ ಸಿನಿಮಾ ಇದು. ಸಮಾಜಕ್ಕೆ ಇದರಲ್ಲಿ ಕಲಿಕೆ ಇದೆ. ಸೈಬರ್​ ಕ್ರೈಮ್​ ಬಗ್ಗೆ ನಾವು ಎಷ್ಟು ಜೋಪಾನ ಆಗಿರಬೇಕು? ಯಾರನ್ನು ಎಷ್ಟು ನಂಬಬೇಕು? ನಮ್ಮ ಅಂತರಂಗವನ್ನು ಎಷ್ಟು ತೆರೆಯಬೇಕು ಮತ್ತು ಎಷ್ಟು ತೆರೆಯಬಾರದು ಎಂಬುದನ್ನು ತಿಳಿಸುವಂತಹ ಸಂವೇದನಾಶೀಲ ಸಿನಿಮಾ ಇದಾಗಿದೆ. ರಮೇಶ್​ ಅರವಿಂದ್​ ಮತ್ತು ಎಂ. ರಮೇಶ್​ ರೆಡ್ಡಿ ಅವರನ್ನು ನಾನು ಅಭಿನಂದಿಸುತ್ತೇನೆ’ ಎಂದಿದ್ದಾರೆ ಸುಧಾ ಮೂರ್ತಿ.

‘ಇದು ಎಲ್ಲರೂ ನೋಡಲೇಬೇಕಾದ ಕನ್ನಡದ ಅತಿ ಉತ್ತಮ ಸಿನಿಮಾ. ಇದರಿಂದ ಪಾಠ ಕಲಿಯಿರಿ. ಇದರಲ್ಲಿ ಹೇಳಿದ ವಿಚಾರಗಳ ಬಗ್ಗೆ ಕುಟುಂಬದವರ ಜೊತೆ ವಿಚಾರ ವಿನಿಮಯ ಮಾಡಿಕೊಳ್ಳಿ’ ಎಂದು ಅವರು ಹೇಳಿದ್ದಾರೆ. ಎಲ್ಲ ಕಲಾವಿದರ ನಟನೆಗೆ ಅವರು ಮೆಚ್ಚುಗೆ ಸೂಚಿಸಿದ್ದಾರೆ.

ಇದನ್ನೂ ಓದಿ:

ಅಧಿಕಾರಿಗಳ ಜತೆ ‘100’ ಸಿನಿಮಾ ನೋಡಿದ ಗೃಹ ಸಚಿವ ಆರಗ ಜ್ಞಾನೇಂದ್ರ; ಈ ಚಿತ್ರದಲ್ಲಿ ಏನಿದೆ ವಿಶೇಷ?

100 Movie Review: ಮೆಸೇಜ್​ ಮಾಡಿ ಮೈ ಮರೆಯುವ ಎಲ್ಲರಿಗೂ ‘100’ ಚಿತ್ರವೇ ಒಂದು ಮೆಸೇಜ್​

TV9 Kannada


Leave a Reply

Your email address will not be published. Required fields are marked *