ನವದೆಹಲಿ: ತಮಿಳುನಾಡಿನಲ್ಲಿ ಭಾರೀ ವಿವಾದಕ್ಕೀಡಾಗಿ  ಮುಚ್ಚಲ್ಪಟ್ಟಿದ್ದ ಸ್ಟರ್ಲೈಟ್ ತಾಮ್ರ ಕರಗಿಸುವ ಘಟಕದಲ್ಲಿ ಆಕ್ಸಿಜನ್ ಪ್ಲಾಂಟ್​ ಕಾರ್ಯಾರಂಭ ಮಾಡಲು ಸುಪ್ರೀಂಕೋರ್ಟ್​ ಅನುಮತಿ ನೀಡಿದೆ.

ಸ್ಟರ್ಲೈಟ್ ಘಟಕದಿರಂದ ಪರಿಸರ ಮಾಲಿನ್ಯವಾಗುತ್ತಿದೆ ಎಂದು ಸ್ಥಳೀಯರಿಂದ ಭಾರೀ ಪ್ರತಿಭಟನೆ ನಡೆದ ಹಿನ್ನೆಲೆ 2018ರಲ್ಲಿ ಘಟಕವನ್ನ ಮುಚ್ಚಲಾಗಿತ್ತು. ಗಣಿಗಾರಿಕೆ ಕಂಪನಿ ವೇದಾಂತ, ಸ್ಥಾವರವನ್ನು ಮತ್ತೆ ತೆರೆಯಲು ಅನುಮತಿ ಕೋರಿ ಸಲ್ಲಿಸಿದ್ದ ಅರ್ಜಿಯನ್ನ ಈ ಹಿಂದೆ ಮದ್ರಾಸ್ ಹೈಕೋರ್ಟ್ ತಿರಸ್ಕರಿಸಿತ್ತು. ಕಳೆದ ವರ್ಷ ಸುಪ್ರೀಂ ಕೋರ್ಟ್​​ ಕೂಡ ಸ್ಥಾವರ ಪುನರಾರಂಭಕ್ಕೆ ಅನುಮತಿ ನಿರಾಕರಿಸಿತ್ತು. ಸ್ಥಾವರವನ್ನು ಮುಚ್ಚಬೇಕೆಂದು ಹೈಕೋರ್ಟ್ ನೀಡಿದ್ದ ಆದೇಶದ ವಿರುದ್ಧ ವೇದಾಂತ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದು, ಈ ಪ್ರಕರಣ ಇನ್ನೂ ಬಾಕಿ ಇದೆ. ಇದರ ನಡುವೆ ಈಗ ದೇಶದಲ್ಲಿ ಕೊರೊನಾ ಬಿಕ್ಕಟ್ಟನ್ನು ನಿಭಾಯಿಸುವ ಸಲುವಾಗಿ ಸ್ಟರ್ಲೈಟ್​ನ ಆಮ್ಲಜನಕ ಘಟಕವನ್ನು ರನ್ ಮಾಡಲು ಸುಪ್ರೀಂ ಕೋರ್ಟ್​ ಸಮ್ಮತಿಸಿದೆ.

ಸ್ಟರ್ಲೈಟ್ ಸುಮಾರು ಹತ್ತು ದಿನಗಳಲ್ಲಿ ಆಮ್ಲಜನಕವನ್ನು ಉತ್ಪಾದಿಸಲು ಪ್ರಾರಂಭಿಸಬಹುದು ಮತ್ತು ಅದನ್ನು ಉಚಿತವಾಗಿ ಪೂರೈಸಬೇಕು. ತಜ್ಞರ ಸಮಿತಿ ಆಮ್ಲಜನಕದ ಉತ್ಪಾದನೆಯನ್ನು ನೋಡಿಕೊಳ್ಳುತ್ತದೆ. ಬಳಿಕ  ರಾಜ್ಯಗಳಿಗೆ ಹಂಚಿಕೆ ಮಾಡಲು ಕೇಂದ್ರಕ್ಕೆ ಆಮ್ಲಜನಕವನ್ನು ನೀಡಲಾಗುತ್ತದೆ. ಘಟಕದೊಳಗೆ ಎಷ್ಟು ಕಾರ್ಮಿಕರ ಪ್ರವೇಶಕ್ಕೆ ಅನುಮತಿ ನೀಡಬೇಕೆಂಬುದನ್ನ ಸಮಿತಿ ನಿರ್ಧರಿಸುತ್ತದೆ ಅಂತ ನ್ಯಾಯಾಲಯ ಹೇಳಿದೆ.

ಈ ಘಟಕದ ಮಾಲೀಕತ್ವ ಹೊಂದಿರುವ ವೇದಾಂತ ಲಿಮಿಟೆಡ್​​ಗೆ ಕೇಂದ್ರ ಬೆಂಬಲಿಸುತ್ತಿದೆ ಎಂದು ತಮಿಳುನಾಡು ಸರ್ಕಾರ ಆರೋಪ ಮಾಡಿತ್ತು. ಇದಕ್ಕೆ ಕೋರ್ಟ್​, ರಾಜಕೀಯ ಗಲಾಟೆ ಬೇಡ. ನಾವೀಗ ರಾಷ್ಟ್ರೀಯ ಬಿಕ್ಕಟ್ಟಿನ ಸಮಯದಲ್ಲಿದ್ದೇವೆ. ಜನರ ಜೀವಗಳನ್ನು ರಕ್ಷಿಸಲು ನಾವು ಇಲ್ಲಿದ್ದೇವೆ. ನಾವು  ನ್ಯಾಯಾಲಯವಾಗಿ ರಾಷ್ಟ್ರವನ್ನ ಬೆಂಬಲಿಸಬೇಕು. ಇದೊಂದು ರಾಷ್ಟ್ರೀಯ ವಿಪತ್ತು ಎಂದು ಹೇಳಿದೆ. ಈ ಆರೋಪ ತಪ್ಪು ಎಂದು ಕೇಂದ್ರ ಕೂಡ ಪ್ರತಿಕ್ರಿಯಿಸಿದೆ.

ನಿನ್ನೆ ತಮಿಳುನಾಡು ಸರ್ಕಾರ ಆಮ್ಲಜನಕವನ್ನು ಉತ್ಪಾದಿಸಲು ನಾಲ್ಕು ತಿಂಗಳ ಕಾಲ ಸ್ಟರ್ಲೈಟ್ ಸ್ಥಾವರವನ್ನು ಭಾಗಶಃ ತೆರೆಯಲು ವೇದಾಂತ ಲಿಮಿಟೆಡ್‌ಗೆ ಅನುಮತಿ ನೀಡಿತ್ತು.

The post ‘ಇದು ರಾಷ್ಟ್ರೀಯ ವಿಪತ್ತು..’ -ವಿವಾದಿತ ಸ್ಟರ್ಲೈಟ್​ನಲ್ಲಿ ಆಕ್ಸಿಜನ್ ಘಟಕ ಕಾರ್ಯಾರಂಭಕ್ಕೆ ಸುಪ್ರೀಂಕೋರ್ಟ್​ ಅಸ್ತು appeared first on News First Kannada.

Source: newsfirstlive.com

Source link