ಚಿಕ್ಕೋಡಿ: ಆಸ್ಪತ್ರೆ ಸಿಬ್ಬಂದಿ ಮಾಡಿದ ಎಡವಟ್ಟಿನಿಂದ ಅಂತ್ಯಸಂಸ್ಕಾರ ಮಾಡಿದ ಮೃತದೇಹವನ್ನು ಹೊರ ತೆಗೆದಿರುವ ಘಟನೆ ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಮೋಳೆ ಗ್ರಾಮದಲ್ಲಿ ನಡೆದಿದೆ.

ಕೊರೊನಾ ಸೋಂಕಿನಿಂದ ಮೇ 1ರಂದು ವೆನಸ್ ಖಾಸಗಿ ಆಸ್ಪತ್ರೆಗೆ ಮೋಳೆ ಗ್ರಾಮದ ಪಾಯಪ್ಪ ಸತ್ಯಪ್ಪ ಹಳ್ಳೊಳ್ಳಿ (82) ಅವರು ದಾಖಲಾಗಿದ್ದರು. ಆದರೆ ಆ ಬಳಿಕ ಫೋನ್​ ಮಾಡಿ ಮಾಡಿದ್ದ ನೀಡಿದ್ದ ಆಸ್ಪತ್ರೆ ಸಿಬ್ಬಂದಿ ಪಾಯಪ್ಪ ಸತ್ಯಪ್ಪ ಹಳ್ಳೊಳ್ಳಿ ಸಾವನ್ನಪ್ಪಿದ್ದಾರೆ ಎಂದು ತಿಳಿಸಿ ಮೇ 2ರ ಬೆಳಗ್ಗೆ ಮೃತದೇಹವನ್ನು ನೀಡಿದ್ದರು. ಇತ್ತ ಕುಟುಂಬಸ್ಥರು ಕೊರೊನಾ ಕಾರಣದಿಂದ ಮೃತದೇಹದ ಅಂತಿಮ ದರ್ಶನವನ್ನು ಪಡೆಯದೆ ತಮ್ಮ ಜಮೀನಿನಲ್ಲಿ ಅಂತ್ಯಸಂಸ್ಕಾರ ನಡೆಸಿ ಮನೆಗೆ ವಾಪಸ್​ ಆಗಿದ್ದರು.

ಆದರೆ ಈ ವೇಳೆ ಮತ್ತೆ ಕರೆ ಮಾಡಿದ್ದ ಆಸ್ಪತ್ರೆ ಸಿಬ್ಬಂದಿ ಪಾಯಪ್ಪ ಸತ್ಯಪ್ಪ ಹಳ್ಳೊಳ್ಳಿ ಬದುಕಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಾಹಿತಿಯ ಗೊಂದಲದಿಂದ ನಿಮಗೆ ಬೇರೆ ಮೃತ ದೇಹ ಬಂದಿದೆ. ಆದ್ದರಿಂದ ನಾವು ನೀಡಿದ ಮೃತ ದೇಹವನ್ನು ವಾಪಸ್​ ನೀಡಿ ಎಂದು ಹೇಳಿದ್ದರು. ಆದರೆ ಮೃತ ದೇಹ ವಾಪಸ್​ ನೀಡಲು ಕುಟುಂಬಸ್ಥರು ನಿರಾಕರಿಸಿದ್ದರು.

ಅಂದಹಾಗೇ, ಬೆಳಗಾವಿ ಜಿಲ್ಲೆಯ ಗೋಕಾಕ ಪಟ್ಟಣದ ಮಾಯಪ್ಪ ಮಾವರಕರ (71) ಎಂಬವರು ಸೋಂಕಿನಿಂದ ಸಾವನ್ನಪ್ಪಿದ್ದರು. ಇವರ ಮೃತ ದೇಹ ಆಸ್ಪತ್ರೆಯ ಸಿಬ್ಬಂದಿಯ ಎಡವಟ್ಟಿನಿಂದ ಪಾಯಪ್ಪ ಸತ್ಯಪ್ಪ ಹಳ್ಳೊಳ್ಳಿ ಕುಟುಂಸ್ಥರಿಗೆ ನೀಡಲಾಗಿತ್ತು. ಇನ್ನು ತಪ್ಪು ಅರಿವಾಗುತ್ತಿದಂತೆ ಎಚ್ಚೆತ್ತ ಸಿಬ್ಬಂದಿ ಮೇ 03 ರಂದು ತಹಶೀಲ್ದಾರ್​ ಅವರ ಸಮ್ಮುಖದಲ್ಲಿ ಮೃತದೇಹವನ್ನು ಹೊರತೆಗೆದು ಮೃತರ ಕುಟುಂಬಕ್ಕೆ ನೀಡಿತ್ತು.

ಸದ್ಯ ಆಸ್ಪತ್ರೆಯ ಸಿಬ್ಬಂದಿಯ ನಿರ್ಲಕ್ಷ್ಯದ ಕುರಿತು ಮೃತ ಮಾಯಪ್ಪಾ ಕುಟುಂಬಸ್ಥರು ದೂರು ದಾಖಲಿಸಿದ್ದಾರೆ. ಈ ದೂರಿನ ಅನ್ವಯ ಪೊಲೀಸರು ಕ್ರಮಕೈಗೊಂಡು ತಹಶೀಲ್ದಾರ್​ ಅವರ ಸಮ್ಮುಖದಲ್ಲಿ ಮಾಯಪ್ಪಾ ಅವರ ಮೃತದೇಹವನ್ನು ಹೊರತೆಗೆದು ಕುಟುಂಬಸ್ಥರಿಗೆ ಹಸ್ತಾಂತರ ಮಾಡಿದ್ದಾರೆ.

The post ಇದ್ದವರು ಸತ್ತರೆಂದು ಬೇರೆ ದೇಹ ಕೊಟ್ಟ ಆಸ್ಪತ್ರೆ; ಅಂತ್ಯಸಂಸ್ಕಾರವಾಗಿದ್ದ ಶವ ಹೊರ ತೆಗೆದ ಅಧಿಕಾರಿಗಳು appeared first on News First Kannada.

Source: newsfirstlive.com

Source link