ಇನ್ನುಮುಂದೆ ಬೈಕ್​ನಲ್ಲಿ ಮಕ್ಕಳಿಗೂ ಹೆಲ್ಮೆಟ್ ಕಡ್ಡಾಯ; ನಿಯಮ ಉಲ್ಲಂಘಿಸಿದರೆ 1,000 ರೂ. ದಂಡ! | Helmet Mandatory for children on bikes speed of up to 40 kmph Check Government new road safety rules


ಇನ್ನುಮುಂದೆ ಬೈಕ್​ನಲ್ಲಿ ಮಕ್ಕಳಿಗೂ ಹೆಲ್ಮೆಟ್ ಕಡ್ಡಾಯ; ನಿಯಮ ಉಲ್ಲಂಘಿಸಿದರೆ 1,000 ರೂ. ದಂಡ!

ಸಾಂದರ್ಭಿಕ ಚಿತ್ರ

ನವದೆಹಲಿ: ದ್ವಿಚಕ್ರ ವಾಹನದಲ್ಲಿ ಸಂಚರಿಸುವಾಗ ಹೆಲ್ಮೆಟ್ (Helmet) ಧರಿಸುವುದನ್ನು ಕಡ್ಡಾಯಗೊಳಿಸಿದ್ದರೂ ಅನೇಕರು ಆ ನಿಯಮವನ್ನು ಉಲ್ಲಂಘಿಸುತ್ತಿದ್ದಾರೆ. ಅದರಲ್ಲೂ ಹೆಲ್ಮೆಟ್ ಧರಿಸದ ಕಾರಣಕ್ಕೆ ಅನೇಕ ಮಕ್ಕಳು ಅಪಘಾತದಲ್ಲಿ ಸಾವನ್ನಪ್ಪಿರುವ ಘಟನೆಗಳು ಕೂಡ ವರದಿಯಾಗಿವೆ. ಈ ಹಿನ್ನೆಲೆಯಲ್ಲಿ ದ್ವಿಚಕ್ರ ವಾಹನಗಳಲ್ಲಿ ಪ್ರಯಾಣಿಸುವ ಮಕ್ಕಳಿಗೆ ಕೂಡ ಹೆಲ್ಮೆಟ್ ಕಡ್ಡಾಯಗೊಳಿಸಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯವು ಇಂದು ಆದೇಶ ಹೊರಡಿಸಿದೆ. 4 ವರ್ಷದೊಳಗಿನ ಮಕ್ಕಳನ್ನು ದ್ವಿಚಕ್ರ ವಾಹನಗಳಲ್ಲಿ ಕರೆದೊಯ್ಯಲು ಹೊಸ ಸುರಕ್ಷತಾ ನಿಯಮಗಳನ್ನು ಸೂಚಿಸಲಾಗಿದೆ. ಹೊಸ ಸಂಚಾರ ನಿಯಮದ ಪ್ರಕಾರ ಮಕ್ಕಳಿಗೆ ಹೆಲ್ಮೆಟ್ ಹಾಕುವುದು ಕಡ್ಡಾಯವಾಗಿದೆ. ಈ ಹಿನ್ನೆಲೆಯಲ್ಲಿ ಮಕ್ಕಳಿಗೆ ಹೊಂದುವ ಹೆಲ್ಮೆಟ್​ಗಳನ್ನು ಉತ್ಪಾದಿಸುವಂತೆ ಹೆಲ್ಮೆಟ್ ಉತ್ಪಾದನಾ ಕಂಪನಿಗಳಿಗೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ. ಹೊಸ ನಿಯಮದ ಅನುಸಾರ ಮಕ್ಕಳು ಹೆಲ್ಮೆಟ್ ಧರಿಸದಿದ್ದರೆ ಆ ದ್ವಿಚಕ್ರ ವಾಹನದ ಚಾಲಕರಿಗೆ 1,000 ರೂ. ದಂಡ ವಿಧಿಸಲಾಗುತ್ತದೆ ಹಾಗೂ 3 ತಿಂಗಳ ಕಾಲ ಲೈಸೆನ್ಸ್​ ರದ್ದುಪಡಿಸಲಾಗುತ್ತದೆ.

ದ್ವಿಚಕ್ರ ವಾಹನ ಚಲಾಯಿಸುವಾಗ ಅದರಲ್ಲಿ ಪ್ರಯಾಣಿಸುವ ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಮಕ್ಕಳಿಗೂ ಹೆಲ್ಮೆಟ್ ಕಡ್ಡಾಯಗೊಳಿಸಲಾಗಿದೆ. ಈ ಹೊಸ ನಿಯಮವನ್ನು ಸೇರಿಸಲು ಕೇಂದ್ರ ಮೋಟಾರು ವಾಹನ ಕಾಯ್ದೆಗೆ ತಿದ್ದುಪಡಿ ಮಾಡಲಾಗಿದೆ. ನಾಲ್ಕು ವರ್ಷ ವಯಸ್ಸಿನ ಮಕ್ಕಳಿಗೂ ಈ ನಿಯಮ ಅನ್ವಯವಾಗುತ್ತದೆ. ಹೊಸ ನಿಯಮಗಳ ಪ್ರಕಾರ, ಮಕ್ಕಳಿಗೆ ತಯಾರಿಸಲ್ಪಡುವ ಹೆಲ್ಮೆಟ್ ಹಗುರವಾಗಿರಬೇಕು, ವಾಟರ್ ಪ್ರೂಫ್ ಆಗಿರಬೇಕು, ಮೆತ್ತಗಿರಬೇಕು ಮತ್ತು 30 ಕೆಜಿ ಭಾರ ಹೊರುವ ಸಾಮರ್ಥ್ಯವನ್ನು ಹೊಂದಿರಬೇಕು.

ಮಕ್ಕಳಿಗೆ ಸಿದ್ಧಪಡಿಸಲಾಗುವ ಹೆಲ್ಮೆಟ್‌ಗಳು ಸರ್ಕಾರ ನಿಗದಿಪಡಿಸಿದ ಮಾನದಂಡಗಳನ್ನು ಅನುಸರಿಸಬೇಕು. ಮಕ್ಕಳಿಗಾಗಿ ಹೆಲ್ಮೆಟ್‌ಗಳನ್ನು ತಯಾರಿಸಲು ಪ್ರಾರಂಭಿಸಲು ಕೇಂದ್ರವು ಹೆಲ್ಮೆಟ್ ತಯಾರಕರಿಗೆ ಈಗಾಗಲೇ ಸೂಚನೆ ನೀಡಿದೆ. ಹಾಗೇ, ನಿಯಮದ ಪ್ರಕಾರ ದ್ವಿಚಕ್ರ ವಾಹನ ಸವಾರರು ಮಕ್ಕಳೊಂದಿಗೆ ಪ್ರಯಾಣಿಸುವಾಗ ವಾಹನದ ವೇಗ ಗಂಟೆಗೆ 40 ಕಿಮೀ ಮೀರದಂತೆ ನೋಡಿಕೊಳ್ಳುವುದು ಕಡ್ಡಾಯವಾಗಿದೆ.

ಕಳೆದ ವರ್ಷ ಅಕ್ಟೋಬರ್‌ನಲ್ಲಿ ಈ ನಿಯಮದಲ್ಲಿ ಬದಲಾವಣೆಗಳನ್ನು ಪ್ರಸ್ತಾಪಿಸಿ ಸಚಿವಾಲಯವು ಕರಡು ಅಧಿಸೂಚನೆಯನ್ನು ಹೊರಡಿಸಿತ್ತು. ವಾಹನ ಸವಾರರು ಮಕ್ಕಳಿಗೆ ಸುರಕ್ಷತಾ ಸರಂಜಾಮು ಮತ್ತು ಕ್ರ್ಯಾಶ್ ಹೆಲ್ಮೆಟ್ ಬಳಸುವುದನ್ನು ಕಡ್ಡಾಯಗೊಳಿಸಲು ಅದು ಪ್ರಸ್ತಾಪಿಸಿತ್ತು. ಅಪಘಾತದಲ್ಲಿ ಮಕ್ಕಳ ಪ್ರಾಣಕ್ಕೆ ಸಂಚಕಾರ ಉಂಟಾಗಬಾರದೆಂದು 4 ವರ್ಷ ಮೇಲ್ಪಟ್ಟ ಮಕ್ಕಳಿಗೆ ಹೆಲ್ಮೆಟ್ ಕಡ್ಡಾಯಗೊಳಿಸಲಾಗಿದೆ.

TV9 Kannada


Leave a Reply

Your email address will not be published. Required fields are marked *