ಚಿನ್ನ ಅನ್ನೊದು ಎಲ್ಲರ ಅಚ್ಚು ಮೆಚ್ಚಿನ ಮೆಟೆಲ್. ಮದುವೆ ಶುಭ ಸಮಾರಂಭಗಳು ಅಂದರೆ ಚಿನ್ನ ಮಸ್ಟ್ ಆ್ಯಂಡ್ ಶುಡ್ಡ್. ಎಷ್ಟೋ ವರ್ಷಗಳಿಂದ ಈ ಮೆಟೆಲ್ ಗೆ ಡಿಮ್ಯಾಂಡ್ ಕಡಿಮೆ ಆಗೇ ಇಲ್ಲ. ಆದ್ರೆ ಜ್ಯುವೆಲ್ಲರಿ ಮಾರಾಟದಲ್ಲಿ ಮಾತ್ರ ಮೋಸ ಅನ್ನೋದು ಇದ್ದೆ ಇತ್ತು. ಆದ್ರೆ ಇನ್ಮುಂದೆ ಚಿನ್ನದ ಅಂಗಡಿಯಿಂದ ಖರೀದಿಸುವ ಜ್ಯೂವೆಲ್ಲರಿಯ ಮೇಲೆ ಅನುಮಾನಬೇಡ. ಅದು ಯಾಕೆ ಅನ್ನೋದಕ್ಕೆ ಇಲ್ಲಿದೆ ಉತ್ತರ.

ಬಂಗಾರದ ಆಭರಣವನ್ನು ಖರೀದಿಸುವಾಗ ಮೊದಲು ನೋಡೋದು ಆ ಆಭರಣದ ಡಿಸೈನ್​. ಅದು ನೋಡಲು ಆಕರ್ಶಕವಾಗಿದ್ಯಾ? ಕೈಗೆ ಮೈಗೆ ತೊಟ್ಟರೆ ಎಲ್ಲರ ನಡುವೆ ಎದ್ದು ಕಾಣುತ್ತಾ ? ಅನ್ನೋದು. ಚಿನ್ನಕ್ಕೆ ಇರುವ ಮಹತ್ವವೇ ಅಂತದ್ದು. ಅದು ಕೈ ಬೆರಳಲ್ಲಾಗಲಿ, ಕೊರಳಲ್ಲಾಗಲಿ ತೊಟ್ಟರೆ ಸೌಂದರ್ಯವನ್ನು ವೃದ್ದಿ ಮಾಡುತ್ತದೆ. ಆದ್ರೆ ಇನ್ಮುಂದೆ ಆಭರಣ ಖರೀದಿಸುವ ಮುನ್ನ ಅದು ಆಕರ್ಶವಾಗಿದ್ಯಾ ಅನ್ನೊದು ನೋಡುವುದರ ಜೊತೆಗೆ, ಅದು ಅಸಲಿ ಚಿನ್ನಾನಾ ಅನ್ನೊದನ್ನು ಕಾತರಿ ಮಾಡ್ಕೊಬೇಕು. ಅದಕ್ಕಾಗಿ ಇವತ್ತಿನಿಂದ ಜುವೆಲ್ಲರಿಯಲ್ಲಿ ಸಿಗುವ ಚಿನ್ನದ ಮೇಲಿನ ಹಾಲ್ ಮಾರ್ಕ್ ಕಡ್ಡಾಯ ಮಾಡಲಾಗಿದೆ.

ಇನ್ಮುಂದೆ ಚಿನ್ನಾಭರಣದ ಮೇಲೆ ಹಾಲ್ ಮಾರ್ಕ್ ಕಡ್ಡಾಯ
ಹಾಲ್ ಮಾರ್ಕ್ ಪರೀಶೀಲಿಸದೆ ಚಿನ್ನ ಖರೀದಿ ಮಾಡಬೇಡಿ

ಚಿನ್ನದ ಮೇಲೆ ಹಾಲ್ ಮಾರ್ಕ್ ಇಂದಿನಿಂದ ಕಡ್ಡಾಯವಾಗಿ ಇರಲೇಬೇಕು ಎಂದು ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಆಭರಣಗಳನ್ನು ಖರೀದಿಸುವಾಗ ಹಾಲ್ ಮಾರ್ಕ್ ಇದ್ದರೆ ಅದರ ಮೇಲೆ ನಂಬಿಕೆ ಜಾಸ್ತಿ, ಚಿನ್ನದ ಮೇಲೆ ಆಸೆ ಜೊತೆ ವಿಶ್ವಾಸವೂ ಹೆಚ್ಚಾಗುತ್ತದೆ. ಹಾಲ್ ಮಾರ್ಕ್ ಇರುವ ಚಿನ್ನ ಶುದ್ಧವಾಗಿದ್ದು ಭಾರತದ ಎಲ್ಲಿಯಾದರೂ ನೀವು ಖರೀದಿಸಬಹುದು ಅಲ್ಲದೆ ಧೈರ್ಯವಾಗಿ ಮಾರಟವನ್ನು ಸಹ ಮಾಡಬಹುದು. ಇದೀಗ ಕೇಂದ್ರ ಸರ್ಕಾರ ಚಿನ್ನದ ಆಭರಣಗಳು ಮತ್ತು ಇತರ ಚಿನ್ನದ ವಸ್ತುಗಳ ಮೇಲೆ ಹಾಲ್ ಮಾರ್ಕ್ ನ್ನು ಕಡ್ಡಾಯಗೊಳಿಸಿ ಖರೀದಿದಾರರು, ಖರೀದೀಗೂ ಮುನ್ನ ಹಾಲ್ ಮಾರ್ಕ್ ಪರೀಶಿಲಿನೆ ಮಾಡಲೇ ಬೇಕು ಎಂದು ಸೂಚಿಸಿದೆ.

ದೇಶದ 256 ಜಿಲ್ಲೆಗಳಲ್ಲಿ ಹಾಲ್ ಮಾರ್ಕಿಂಗ್ ಕೆಲಸ ಆರಂಭ
ಕೇಂದ್ರ ಸರ್ಕಾರ ಇದಕ್ಕೂ ಮುಂಚೆ ಹಾಲ್ ಮಾರ್ಕ್ ಕಡ್ಡಾಯ ಮಾಡಿ ಎನ್ನುವ ಮಾಹಿತಿಯನ್ನು ಹೇಳಿತ್ತು. ಆದರೆ ಕೋವಿಡ್ ನಿಂದಾಗಿ, ಈ ಆದೇಶ ಚಾಲ್ತಿಯಲ್ಲಿರಲಿಲ್ಲ. ಇದೀಗ ಕೋವಿಡ್ ಎರಡನೇ ಅಲೆ ನಿಧಾನವಾಗಿ ತಣ್ಣಗಾಗುತ್ತಿರುವ ಬೆನ್ನಲ್ಲೆ, ದೇಶದಲ್ಲಿ ಇರುವ ಎಲ್ಲ ಆಭರಣದ ಮೇಲೆ ಹಾಲ್ ಮಾರ್ಕಿಂಗ್ ಕಡ್ಡಾಯವಾಗಿ ಮಾಡಿಸಲೇ ಬೇಕು ಎನ್ನುವ ಆದೇಶವನ್ನು ಹೊರಡಿಸಿದೆ. ಈ ಕಾರಣದಿಂದ ದೇಶದ 256 ವಿವಿದ ಜಿಲ್ಲೆಗಳಲ್ಲಿ ಹಾಲ್ ಮಾರ್ಕಿಂಗ್ ಕೆಲಸ ಆರಂಭಗೊಂಡಿದೆ. ಆನ್ ಲೈನ್ ಪೋರ್ಟಲ್ ನಲ್ಲಿ ಚಿನ್ನದ ರಿಜಿಸ್ಟ್ರೇಷನ್ ಮಾಡಿಸಿ ಮಳಿಗೆ ದಾರರು, ಹಾಲ್ ಮಾರ್ಕ್ ಗಾಗಿ ಕಾಯ ಬೇಕಿದೆ, ಕಾರಣ ದೇಶದಲ್ಲಿ ಕೇವಲ 1000 ಹಾಲ್ ಮಾರ್ಕಿಂಗ್ ಸೆಂಟರ್ ಗಳಿದ್ದು, ಕರ್ನಾಟಕದಲ್ಲಿ 56 ಸೆಂಟರ್ ಗಳಿವೆ. ಇದರಿಂದ ಹಾಲ್ ಮಾರ್ಕಿಂಗ್ ಪ್ರಕ್ರಿಯೆಗೆ ಸ್ವಲ್ಪ ಸಮಯ ಹಿಡಿಯುವುದರಿಂದ ಹಾಲ್ ಮಾರ್ಕ್ ಇಲ್ಲದಿರುವ ಜ್ಯುವೆಲ್ಲರಿಗಳನ್ನು ಮಾರಾಟ ಮಾಡಲು ಸರ್ಕಾರ ನಮಗೆ ಹೆಚ್ಚು ಸಮಯ ಕೊಡಬೇಕು ಹಾಗೂ ಸೆಂಟರ್ ಗಳನ್ನು ಹೆಚ್ಚಿಸಿ ಎಂದು ಮಳಿಗೆದಾರರು ಮನವಿ ಮಾಡಿಕೊಳ್ಳುತ್ತಿದ್ದಾರೆ.

ಕೋವಿಡ್ ಕಾರಣದಿಂದ ಹಾಲ್ ಮಾರ್ಕಿಂಗ್ ಮುಂದೂಡಿದ್ದರು
ಚಿನ್ನ ಖರೀದಿದಾದರು ಮೋಸ ಹೋಗಬಾರದೆಂಬ ಗುರಿ

2021ರ ಜನವರಿ 15ರಿಂದ ದೇಶಾದ್ಯಂತ ಚಿನ್ನದ ಆಭರಣಗಳು ಮತ್ತು ಕಲಾಕೃತಿಗಳ ಹಾಲ್​ ಮಾರ್ಕಿಂಗ್​ ಕಡ್ಡಾಯಗೊಳಿಸಲಾಗುವುದು ಎಂದು 2019ರ ನವೆಂಬರ್‌ನಲ್ಲಿ ಸರ್ಕಾರ ಘೋಷಿಸಿತ್ತು. ಆದರೆ, ಸಾಂಕ್ರಾಮಿಕ ರೋಗದ ದೃಷ್ಟಿಯಿಂದ ಆಭರಣ ಮಾರಾಟಗಾರರು ಹೆಚ್ಚಿನ ಸಮಯ ಕೋರಿದ ನಂತರ ಜೂನ್ 1ರವರೆಗೆ ನಾಲ್ಕು ತಿಂಗಳು ಗಡುವು ನೀಡಿತ್ತು. ಇದೀಗ ಜೂನ್​ 15 ರಿಂದ ಚಿನ್ನಾಭರಣಗಳ ಮೇಲೆ ಹಾಲ್​ಮಾರ್ಕ್​ ಇರಬೇಕು ಎಂದು ಸೂಚಿಸಿದೆ. ಸರ್ಕಾರದ ಉಪಕ್ರಮವು ಚಿನ್ನ ಖರೀದಿದಾರರನ್ನು ಮಾರಾಟಗಾರರಿಂದ ಮೋಸಗೊಳಿಸದಂತೆ ರಕ್ಷಿಸುವ ಈ ಹಾಲ್ ಮಾರ್ಕಿಂಗ್ ಗುರಿಯನ್ನು ಹೊಂದಿದೆ ಎನ್ನುತ್ತಾರೆ ಬ್ಯೂರೋ ಆಫ್ ಇಂಡಿಯನ್ ಸ್ಟಾಂಡರ್ಸ್ ಮುಖ್ಯಸ್ಥ ಪ್ರಮೋದ್ ಕುಮಾರ್ ತಿವಾರಿ.

ಹಾಲ್ ಮಾರ್ಕ್ ಇಲ್ಲದಿರುವ ಆಭರಣಗಳನ್ನು ಜ್ಯುವೆಲ್ಲರಿ ಅಂಗಡಿಗಳು ಮತ್ತು ಮಳಿಗೆಗಳಲ್ಲಿ ಮಾರಾಟ ಮಾಡಲು ಇನ್ನೂ ಅವಕಾಶ ಇದ್ದು, ಖರೀದಿಸಿದವರು ಅದಕ್ಕೆ ಹಾಲ್ ಮಾರ್ಕ್ ಹಾಕಿ ಹೊಸ ಜ್ಯುವೆಲ್ಲರಿಯಾಗಿ ಮಾಡಿ ಗುಣಮಟ್ಟ ಕಾಪಾಡಿಕೊಳ್ಳಬೇಕಾಗುತ್ತದೆ

-ಪ್ರಮೋದ್ ಕುಮಾರ್ ತಿವಾರಿ, ಬ್ಯೂರೋ ಆಫ್ ಇಂಡಿಯನ್ ಸ್ಟಾಂಡರ್ಸ್

ಬಿಐಎಸ್ ಹಾಲ್ ಮಾರ್ಕಿಂಗ್ ಎಂದರೆ ಏನು ?
ಹಾಲ್ ಮಾರ್ಕ್ ಸರ್ಟಿಫಿಕೇಟ್ ಗ್ರಾಹಕರಿಗೆ ಹೊಸ ನಂಬಿಕೆನಾ ?
ಹಾಲ್ ಮಾರ್ಕ್ ಕಡ್ಡಾಯದಿಂದ ಆಗುವ ಬದಲಾವಣೆಗಳೇನು ?

ಚಿನ್ನಾಭರಣದ ಮೇಲೆ ನೀವು ಗಮನಿಸಿದರೆ, ಕೆಲವು ಗುರುತುಗಳನ್ನು ಪ್ರಿಂಟ್ ಮಾಡಲಾಗಿರುತ್ತದೆ. ಲೋಹದ ಶುದ್ಧತೆಯನ್ನು 14ಕ್ಯಾರೆಟ್ 18 ಕ್ಯಾರೆಟ್, ಮತ್ತು 22 ಕ್ಯಾರೆಟ್ ಎಂದು ವಿಂಗಡಿಸಿ ಆ ಚಿನ್ನದ ಗುಣಮಟ್ಟದ ಬಗ್ಗೆ ಸರ್ಟಿಫೀಕೇಟ್ ನೀಡಲಾಗುತ್ತದೆ. ಈ ಚಿಹ್ನೆಗಳಲ್ಲಿ ಬ್ಯೂರೋ ಆಫ್ ಇಂಡಿಯನ್ ಸ್ಟಾಂಡರ್ಸ್ ನ ಲೋಗೋ, ಚಿನ್ನದ ಶುದ್ಧತೆಯನ್ನ ಸೂಚಿಸುವ ಮಾರ್ಕ್, ಆಭರಣದ ಅಂಗಡಿಯ ಗುರುತಿನ ಲೋಗೊ ಇನ್ನಿತರ ವಿಷಯಗಳು ಸೂಚಿಸಲಾಗುತ್ತದೆ. ಇದನ್ನು ಬಿ ಐ ಎಸ್ ಅಂದ್ರೆ ಬ್ಯೂರೋ ಆಫ್ ಇಂಡಿಯನ್ ಸ್ಟಾಂಡರ್ಡ್ಸ್ ಪರಿಶೀಲಿಸಿ ಅದಕ್ಕೆ ಲೇಸರ್ ಕಿರಣಗಳಿಂದ ಆಭರಣದ ಮೇಲೆ ಸೀಲ್ ಹಾಕಲಾಗುತ್ತದೆ. ಹೀಗೆ ಪ್ರಮಾಣೀಕರಿಸುವ ವಿಧಾನಕ್ಕೆ ಗೋಲ್ಡ್ ಹಾಲ್ಮಾರ್ಕಿಂಗ್ ಎನ್ನುತ್ತಾರೆ. ಈ ಸರ್ಟಿಫಿಕೇಷನ್, ಚಿನ್ನ ಖರೀದಿದಾರರಿಗೆ ಚಿನ್ನದ ಕ್ವಾಲಿಟಿಯ ಬಗ್ಗೆ ನಂಬಿಕೆ ಹುಟ್ಟಿಸುತ್ತದೆ. ಈ ರೀತಿ ಹಾಲ್ ಮಾರ್ಕಿಂಗ್ ಮಾಡುವುದರಿಂದ ಸಣ್ಣ ಚಿನ್ನದ ಅಂಗಡಿಯಿಂದ ಹಿಡಿದು ಗ್ಲೋಬಲ್ ಮಟ್ಟದಲ್ಲೂ ಹಲವು ಬದಲಾವಣೆಗಳು ಆಗಬಹುದು.

ಹಾಲ್ ಮಾರ್ಕಿಂಗ್ ನಿಂದ ಗ್ಲೋಬಲ್ ಮಾರ್ಕೆಟ್ ಬೂಸ್ಟ್
ಹಾಲ್ ಮಾರ್ಕ್ ಬಗ್ಗೆ ಸಚಿವ ಪಿಯೂಷ್ ಗೋಯಲ್ ಟ್ವೀಟ್

ಹಾಲ್ ಮಾರ್ಕ್ ಕಡ್ಡಾಯ ಮಾಡುವದರಿಂದ ದೇಶದಲ್ಲಿನ ಬಂಗಾರದ ತಯಾರಿಕೆ ಕ್ವಾಲಿಟಿ ಹಾಗೂ ಬೇಡಿಕೆ ಹೆಚ್ಚಾಗುತ್ತದೆ, ಭಾರತ ಪ್ರಪಂಚದಲ್ಲಿಯೇ ಅತ್ಯುತ್ತಮ ಚಿನ್ನದ ತಯಾರಕನಾಗಿ ಹೊರಹೊಮ್ಮಲು ಈ ಕ್ರಮ ನೆರವಾಗುತ್ತದೆ ಎಂದು ಕೇಂದ್ರ ಸಚಿವ ಪಿಯೂಷ್ ಗೋಯಲ್ ಟ್ವೀಟ್ ಮೂಲಕ ಹೇಳಿದ್ದಾರೆ. ಚಿನ್ನವನ್ನು ಆಭರಣವಾಗಿ ಇಲ್ಲವೆ ಹೂಡಿಕೆಯ ಗೋಲ್ಡ್ ಬಿಸ್ಕೆಟ್ ಗಳಾಗಿ ಯಾವುದೆ ಅನುಮಾನವಿಲ್ಲದೆ ಕೊಳ್ಳುವವರ ಪ್ರಮಾಣ ಹೆಚ್ಚಳವಾಗುತ್ತದೆ. ಅಲ್ಲದೆ ಈ ಸರ್ಟಿಫಿಕೇಟ್ ನಿಂದ ದೇಶದಲ್ಲಿ ಎಷ್ಟು ಚಿನ್ನ ಇದೆ ಎನ್ನುವುದು ಲೆಕ್ಕಕ್ಕೆ ಸಿಗುತ್ತದೆ. ಇದರಿಂದ ಕಾಳಸಂತೆಯಲ್ಲಿ ನಡೆಯುತ್ತಿದೆ ಚಿನ್ನದ ವ್ಯಾಪಾರವನ್ನು ತಡೆಗಟ್ಟಬಹುದು. ಭಾರತದಲ್ಲಿ ಸರ್ಟಿಫೈಡ್ ಚಿನ್ನವನ್ನು ಖರೀದಿಸಲು ಗ್ಲೋಬಲ್ ಮಟ್ಟದಲ್ಲಿ ಬೆಳವಣೆಗೆ ಕಾಣಿಸುತ್ತದೆ ಮತ್ತು ಗ್ರಾಹಕರ ಹಿತ ಕಾಪಾಡುವುದು, ಸುರಕ್ಷತೆ ಮತ್ತು ತೃಪ್ತಿಗೆ ಇದು ನೆರವಾಗುವುದರಲ್ಲಿ ಅನುಮಾನವೇ ಇಲ್ಲ.

2 ಗ್ರಾಂ ಚಿನ್ನಕ್ಕಿಂತ ಕಡಿಮೆ ಇದ್ದರೆ ವಿನಾಯಿತಿ
ಕೆಲವು ಜ್ಯುವಲರಿಗಳಿಗೆ ಹಾಲ್ ಮಾರ್ಕ್ ಅಗತ್ಯವಿಲ್ಲ

ಬಂಗಾರದ ಪೆನ್, ಚಿನ್ನದ ವಾಚ್ ಗಳಂತಹ ಚಿನ್ನಗಳಿಗೆ 22 ಕ್ಯಾರೆಟ್ ಗಿಂತ ಹೆಚ್ಚಿನ ಚಿನ್ನ ಬೇಕಾಗುತ್ತದೆ. ಆದರೆ ಬಿ ಐ ಎಸ್ ನಿಂದ ಹಾಲ್ ಮಾರ್ಕ್ ಪರಿಶೀಲನೆ ಮಾಡೋದು ಕೇವಲ 14ಕ್ಯಾರೆಟ್ 18 ಕ್ಯಾರೆಟ್, ಮತ್ತು 22 ಕ್ಯಾರೆಟ್ ಚಿನ್ನಕ್ಕೆ ಮಾತ್ರ. ಹಾಗಾಗಿ ಈ ರೀತಿಯ ಚಿನ್ನದ ವಸ್ತುಗಳಿಗೆ ಹಾಲ್ ಮಾರ್ಕ್ ನಿಂದ ವಿನಾಯಿತಿ ನೀಡಲಾಗಿದೆ. ಹಾಗೂ ಮೂಗುತ್ತಿ ಹಾಗೂ ಕಿವಿ ಓಲೆಗಳಂತಹ 2 ಗ್ರಾಂ ಗಳಿಗಿಂತ ಕಡಿಮೆ ಇರುವ ಚಿನ್ನಕ್ಕೆ ಹಾಲ್ ಮಾರ್ಕ್ ಮಾಡಲು ಸಾಧ್ಯವಿಲ್ಲದ ಕಾರಣ, ಈ ಆಭರಣಗಳಿಗೂ ವಿನಾಯಿತಿ ನೀಡಲಾಗಿದೆ.

ಮನೆಯಲ್ಲಿ ಇರುವ ಹಾಲ್ ಮಾರ್ಕ್ ಚಿನ್ನದ ಗತಿ ಏನು ?
ಹಾಲ್ ಮಾರ್ಕ್ ಇಲ್ಲದ ಚಿನ್ನದ ವ್ಯಾಲ್ಯೂ ಇಳಿಕೆ ಆಗುತ್ತಾ ?

ಈಗಾಗಲೇ ಮನೆಗಳಲ್ಲಿ ಚಿನ್ನ ಇದೆ, ಇದರಲ್ಲಿ ಯಾವುದೆ ಹಾಲ್ ಮಾರ್ಕ್ ಇಲ್ಲ. ಹಾಗಾದರೆ ಈ ಚಿನ್ನ ಎಲ್ಲಿಯೂ ಮಾರಾಟವಾಗುವುದಿಲ್ಲವ, ಹಾಗಾದರೆ ಇದೀಗ ಹಾಲ್ ಮಾರ್ಕ್ ಇಲ್ಲದ ಜನರ ಬಳಿ ಇರುವ ಹಳೆಯ ಚಿನ್ನದ ಕತೆ ಏನು? ಎನ್ನುವ ಅನುಮಾನಗಳು ಸಹಜ. ಆದರೆ ಈ ಹಾಲ್ ಮಾರ್ಕಿಂಗ್ ಅನ್ನೊದು ಸದ್ಯದ ಮಟ್ಟಿಗೆ ಮಾರಾಟಗಾರರಿಗೆ ಮಾತ್ರ ಕಡ್ಡಾಯ ಎಂದು ಸರ್ಕಾರ ಸ್ಪಷ್ಟ ಪಡಿಸಿದೆ. ಸ್ವಂತದ್ದಾಗಿ ಇಟ್ಟುಕೊಂಡವರಿಗೆ ಸದ್ಯದ ಮಟ್ಟಿಗೆ ಯಾವ ತೊಂದರೆ ಇಲ್ಲ. ಅಲ್ಲದೆ ಹಾಲ್‌ಮಾರ್ಕ್ ಇಲ್ಲದಿದ್ದರೂ ಮಾರಾಟ ಮಾಡಲು ಸಾಧ್ಯವಿದೆ. ಚಿನ್ನವನ್ನು ಅಡವಿಡುವಾಗಲೂ ಸಹ ಹಾಲ್‌ಮಾರ್ಕ್‌ ಕಡ್ಡಾಯವಿಲ್ಲ.

ಹಾಲ್‌ಮಾರ್ಕ್‌ಗೂ ಚಿನ್ನದ ಸಾಲಕ್ಕೂ ಯಾವುದೇ ಸಂಬಂಧವಿಲ್ಲ. ಹೀಗಾಗಿ ಚಿನ್ನದ ವಿರುದ್ಧ ಸಾಲ ನೀಡುವ ಮೊದಲು ಅದರ ಗುಣಮಟ್ಟ ಮತ್ತು ಪ್ರಮಾಣವನ್ನು ಮೌಲ್ಯಮಾಪನವನ್ನು ವ್ಯಾಪಾರಿಗಳು ಮಾಡಿಕೊಳ್ಳುತ್ತಾರೆ. ಹಾಗೂ ಎಲ್ಲಾದರೂ ನಿಮ್ಮ ಚಿನ್ನದಲ್ಲಿ ಹಾಲ್‌ಮಾರ್ಕ್‌ ಇಲ್ಲ ಎಂದು ಆಭರಣ ವ್ಯಾಪಾರಿ ಚಿನ್ನ ವಿನಿಮಯ ಮಾಡಿಕೊಳ್ಳಲು ನಿರಾಕರಿಸಿದರೆ ಗ್ರಾಹಕರು ಅವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬಹುದು.

ಈಗಿರುವ ಮಾಹಿತಿ ಪ್ರಕಾರ ದೇಶದಲ್ಲಿರುವ ಶೇಕಡ 30 ರಷ್ಟು ಚಿನ್ನ ಮಾತ್ರ ಹಾಲ್ ಮಾರ್ಕ್ ಹೊಂದಿವೆ. ಚಿನ್ನದ ಸುರಕ್ಷತೆ ಕಾಪಾಡುವುದೆ ಇದರ ಉದ್ದೇಶ. ಹಾಲ್‌ಮಾರ್ಕ್‌ ಕಾಯ್ದೆಯು ಆಭರಣ ವ್ಯಾಪಾರಿಗಳು ಗ್ರಾಹಕರಿಗೆ ಮಾರಾಟ ಮಾಡುವ ಚಿನ್ನಕ್ಕೆ ಮಾತ್ರ ಅನ್ವಯಿಸುತ್ತದೆ. ಗ್ರಾಹಕರು ತಮ್ಮ ಚಿನ್ನಾಭರಣಗಳು, ನಾಣ್ಯಗಳು ಅಥವಾ ಇನ್ಯಾವುದೇ ಚಿನ್ನದ ವಸ್ತುಗಳನ್ನು ಮಾರಾಟ ಮಾಡುವ ಮೊದಲು ಹಾಲ್‌ಮಾರ್ಕ್‌ ಮಾಡಿಸುವ ಅಗತ್ಯವಿಲ್ಲ. ಹೀಗಾಗಿ ಹಾಲ್‌ಮಾರ್ಕ್ ಇಲ್ಲದ ಆಭರಣಗಳನ್ನು ಸಂಗ್ರಹಿಸುವ ಅಥವಾ ಬಳಸಿಕೊಳ್ಳುವ ವ್ಯಕ್ತಿಗಳಿಗೆ ಇದರಿಂದ ಯಾವುದೇ ಪರಿಣಾಮವಿಲ್ಲ.

ಕೆಲವರಿಗೆ ಚಿನ್ನ ಅನ್ನೊದು ಆಭರಣ, ಇನ್ನು ಕೆಲವರಿಗೆ ಅದು ಹೂಡಿಕೆ. ಆಭರಣವಾಗಿ ಆಗಲಿ, ಹೂಡಿಕೆಯಾಗಿ ಆಗಲಿ, ಚಿನ್ನದ ಶುದ್ದತೆ ಖಚಿತ ಪಡಿಸಿಕೊಳ್ಳಬೇಕು, ಅದರ ಮೌಲ್ಯಮಾಪನವೇ ಹಾಲ್ ಮಾರ್ಕ್.

The post ಇನ್ಮುಂದೆ ಚಿನ್ನಾಭರಣದ ಮೇಲೆ ಹಾಲ್ ಮಾರ್ಕ್ ಕಡ್ಡಾಯ.. ಹಾಲ್ ಮಾರ್ಕ್ ಇಲ್ಲದ ಚಿನ್ನ ಏನ್ಮಾಡ್ಬೇಕು? appeared first on News First Kannada.

Source: newsfirstlive.com

Source link