ಬಹು ಬಳಕೆದಾರರನ್ನು ಹೊಂದಿರುವ ಟ್ವಿಟರ್ ದಿನದಿಂದ ದಿನಕ್ಕೆ ಅಪ್‍ಡೇಟ್ ಆಗುತ್ತಿದೆ. ತನ್ನ ಬಳಕೆದಾರರಿಗೆ ಹೊಸತನ ನೀಡುವ ನಿಟ್ಟಿನಲ್ಲಿ ಹೊಸ ಹೊಸ ಪ್ರಯೋಗಕ್ಕೆ ಕೈ ಹಾಕುತ್ತಿದೆ. ಇದೀಗ ಬಳಕೆದಾರರ ಸ್ನೇಹಿ ಮತ್ತೊಂದು ಫೀಚರ್‍ ಪರಿಚಯಿಸಲು ಮುಂದಾಗಿದೆ.

ಇನ್ಮುಂದೆ ಟ್ವಿಟರ್‍ ನಲ್ಲಿ ಇಮೋಜಿಗಳು ಲಭ್ಯವಾಗಲಿವೆ. ಭಾವನೆಗಳನ್ನು ವ್ಯಕ್ತಪಡಿಸುವ ಇಮೋಜಿಗಳ ಗೊಂಚಲು ಟ್ವಿಟರ್‍ ನಲ್ಲಿ ಸಿಗಲಿದೆ. ನಗು ಮೊಗದ, ಅಳು ಮುಖದ, ಯೋಚನಾ ರೀತಿಯ, ಕೋಪ ಮಾಡಿಕೊಂಡ ರೀತಿಯ ಇಮೋಜಿಗಳನ್ನು ಟ್ವಿಟರ್ ಅಳವಡಿಸಿಕೊಳ್ಳಲು ಮುಂದಾಗಿದೆ. ಈಗಾಗಲೇ ಜನಪ್ರೀಯ ಸಾಮಾಜಿಕ ಜಾಲತಾಣ ಫೇಸ್‍ಬುಕ್ ಹಾಗೂ ವಾಟ್ಸಪ್‍ನಲ್ಲಿ ಇಮೋಜಿ ಫೀಚರ್ ಇದೆ. ಇದೇ ರೀತಿ ಟ್ವಿಟರ್‍ ಅಳವಡಿಸಿಕೊಳ್ಳಲು ಬಯಸಿದೆ.

ಇನ್ನು ಇಮೋಜಿಗಳ ಜತೆಗೆ ಸಮ್ಮತಿ (ಮೆಚ್ಚುಗೆ)-ಅಸಮ್ಮತಿ (ನಿರಾಕರಣೆ) ಸೂಚಿಸುವ ಸಿಂಬಾಲ್ ಪರಿಚಯಿಸುವ ಯೋಜನೆ ಹಾಕಿಕೊಂಡಿದೆ. ಸಮ್ಮತಿ ಸೂಚಿಸಲು ಹಸಿರು ಬಣ್ಣದ ಸಿಂಬಾಲ್ ಹಾಗೂ ನಿರಾಕರಣೆ ಅಥವಾ ಅಸಮ್ಮತಿ ಸೂಚಿಸಲು ಕೆಂಪು ಬಣ್ಣದ ಸಿಂಬಾಲ್ ನೀಡಲಿದೆ.

2015 ರಲ್ಲಿ ಫೇಸ್‍ಬುಕ್ ಇಮೋಜಿಗಳನ್ನು ಪರಿಚಯಿಸಿತ್ತು. ಇವು ತುಂಬಾ ಪರಿಣಾಮಕಾರಿಯಾಗಿ ಬಳಕೆಯಾಗುತ್ತಿವೆ. ಜನರು ಅಕ್ಷರ ರೂಪದಲ್ಲಿ ಹೇಳಲಾಗದ್ದನ್ನು ಇಮೋಜಿಗಳ ಮೂಲಕ ವ್ಯಕ್ತಪಡಿಸುತ್ತಾರೆ.

ಇನ್ನು ಈಗಾಗಲೇ ಪೋಸ್ಟ್​ ಮಾಡಿದ ಟ್ವೀಟ್ ಅನ್ನು ರದ್ದುಗೊಳಿಸುವ ಫೀಚರ್ ಅನ್ನು ಶೀಘ್ರದಲ್ಲೇ ಬಿಡುಗಡೆ ಮಾಡುವ ನಿಟ್ಟಿನಲ್ಲಿ ಟ್ವಿಟರ್‌ ಕಾರ್ಯನಿರತವಾಗಿದೆ. ಆದರೆ, ಈ ಫೀಚರ್ ಮೂಲಕ ಬಳಕೆದಾರರು ತಮ್ಮ ಟ್ವೀಟ್‌ಗಳನ್ನು ಸೀಮಿತ ಅವಧಿಯೊಳಗೆ ರದ್ದುಗೊಳಿಸಲು ಅನುಮತಿಸುತ್ತದೆ ಎಂದು ಹೇಳಲಾಗುತ್ತಿದೆ.

ಟ್ವೀಟ್‌ ಎಡಿಟ್‌ ಆಯ್ಕೆಗೆ ಹೆಚ್ಚು ಬೇಡಿಕೆ ಇದ್ದು, ಆದರೆ ಸದ್ಯ ಟ್ವಿಟ್ಟರ್‌ ಎಡಿಟ್‌ ಫೀಚರ್‌ ಬದಲು ರದ್ದುಗೊಳಿಸುವ (Undo Tweet) ವೈಶಿಷ್ಟ್ಯವನ್ನು ಪರಿಚಯಿಸಲು ಮುಂದಾಗಿದೆ ಎಂದು ಹೇಳಲಾಗುತ್ತಿದೆ.

ಗ್ಯಾಜೆಟ್/ಟೆಕ್ – Udayavani – ಉದಯವಾಣಿ
Read More