ಬೆಂಗಳೂರು:  ನಗರದಲ್ಲಿ ಮೂರನೇ ಅಲೆಯ ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಹೆಚ್ಚಿನ ಒತ್ತು ನೀಡಲಾಗುತ್ತಿದ್ದು, ಎಲ್ಲರಿಗೂ ಲಸಿಕೆ ನೀಡುವ ಗುರಿ ಇಟ್ಟುಕೊಳ್ಳಲಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಹೇಳಿಕೆ ನೀಡಿದ್ದಾರೆ.

ಲಸಿಕಾ ಅಭಿಯಾನದ ಕುರಿತು ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಆಯುಕ್ತರು, ನಿನ್ನೆ ಒಂದು ಲಕ್ಷ ಮಂದಿಗೆ ಲಸಿಕೆ ನೀಡಲಾಗಿದೆ. ಇನ್ನೆರಡು ದಿನಗಳಲ್ಲಿ ನಗರದ ಶೇಕಡಾ 50ರಷ್ಟು ಮಂದಿಗೆ ಲಸಿಕೆ ನೀಡುವ ಗುರಿ ಇದೆ. ಜುಲೈ ನಲ್ಲಿ ನಗರದ ಶೇಕಡಾ 70 ರಷ್ಟು ಮಂದಿಗೆ ವ್ಯಾಕ್ಸಿನ್ ನೀಡುವ ಗುರಿ ಹೊಂದಿದ್ದೇವೆ. ಕೇಂದ್ರ, ರಾಜ್ಯದಿಂದ ಅಗತ್ಯವಿರುವಷ್ಟು ಲಸಿಕೆ ಬರುತ್ತಿದ್ದು, ಕೆಲ ದಿನ ಲಸಿಕೆ ತೊಂದರೆ ಆಗಿತ್ತು ಈಗ ಸಮಸ್ಯೆ ಬಗೆಹರಿದಿದೆ.

ಇನ್ಮುಂದೆ ಪ್ರತಿ ಮನೆಗೂ ವ್ಯಾಕ್ಸಿನ್​ ತಲುಪಿಸುವ ಪ್ರಯತ್ನ ಮಾಡುತ್ತೇವೆ. ಬಿಬಿಎಂಪಿಯಿಂದ ವಿನೂತನ ಪ್ರಯತ್ನ ಆರಂಭ ಮಾಡಲಾಗುತ್ತಿದ್ದು, ಹೆಚ್ಚು ಹೆಚ್ಚು ವ್ಯಾಕ್ಸಿನ್ ನೀಡೋಕೆ ಸೂಚನೆ ನೀಡಲಾಗಿದೆ. ಮನೆ ಮನೆಗೂ ಕ್ಯಾಂಪ್ ಹಾಕಿ ಲಸಿಕೆ ನೀಡುವ ಗುರಿ ಹೊಂದಲಾಗಿದೆ.

ಕಲ್ಯಾಣ ಮಂಟಪಗಳ ಮೇಲೆ ನಿಗಾ ವಹಿಸಲು ಮಾರ್ಷಲ್​ ನೇಮಕ..
ಮದುವೆಗಳು ಸರ್ಕಾರದ ಗೈಡ್ ಲೈನ್ಸ್ ಪ್ರಕಾರವೇ ನಡೆಯಬೇಕು. ಮದುವೆಗೆ ಅನುಮತಿಯನ್ನ ಆಯಾ ವಲಯ ಜಂಟಿ ಆಯುಕ್ತರ ಅನುಮತಿ ಪಡೆಯಬೇಕು. ಮದುವೆಗೆ ಯಾರೆಲ್ಲಾ ಬರುತ್ತಾರೆ ಅವರ ಮಾಹಿತಿ ಕಡ್ಡಾಯವಾಗಿ ನೀಡಬೇಕು. ಮಾಹಿತಿ ನೀಡಿದವರನ್ನ ಬಿಟ್ಟು ಉಳಿದವರು ಇರುವಂತಿಲ್ಲ. ಎಲ್ಲಾ ಕಲ್ಯಾಣ ಮಂಟಪಗಳ ಮಾನಿಟರ್ ಮಾಡಲು ಮಾರ್ಷಲ್ಸ್ ನೇಮಕ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ನಗರದಲ್ಲಿ 32 ಲಕ್ಷ ಮಂದಿ ಮಕ್ಕಳು..
ಡೆಲ್ಟಾ+ ವೈರಸ್ ತಡೆಗೆ ಕೇಂದ್ರ ಸರ್ಕಾರದ ಸೂಚನೆಗಳ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಹೊರ ರಾಜ್ಯದಿಂದ ನಗರಕ್ಕೆ ಬರುವವರ ಮೇಲೆ ನಿಗಾ ಇಡಲಾಗಿದೆ. ವಿಮಾನ ನಿಲ್ದಾಣ, ಬಸ್ ನಿಲ್ದಾಣಗಳಲ್ಲಿ ಹೆಚ್ಚಿನ ಸಿಬ್ಬಂದಿ ನಿಯೋಜಿಸಲಾಗಿದೆ. ಹೆಚ್ಚೆಚ್ಚು ಟೆಸ್ಟ್ ಮಾಡುವ ಪ್ರಕ್ರಿಯೆಗೆ ಈಗಾಗಲೇ ಚಾಲನೆ ನೀಡಲಾಗಿದೆ. ಹೊರ ರಾಜ್ಯದಿಂದ ಬಂದವರು ಎಲ್ಲಿ ಉಳಿದುಕೊಳ್ಳುತ್ತಾರೆ. ಅವರು ಎಲ್ಲಿ ಕೆಲಸ ಮಾಡುತ್ತಿದ್ದಾರೆ ಅನ್ನೋದನ್ನೂ ಮಾನಿಟರ್ ಮಾಡಲಾಗುತ್ತದೆ.

ಸದ್ಯ ನಗರದಲ್ಲಿ 32 ಲಕ್ಷ ಮಕ್ಕಳಿದ್ದಾರೆ ಎಂಬ ಮಾಹಿತಿ ಇದೆ. ಮೂರನೇ ಅಲೆ ತಡೆಗೆ ಅಗತ್ಯ ಕ್ರಮ ಕೈಗೊಳ್ಳಲಾಗ್ತಿದೆ. ಡಾ. ದೇವಿಶೆಟ್ಟಿ ಕೊಟ್ಟ ವರದಿಯಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.

The post ಇನ್ಮುಂದೆ ಪ್ರತಿ ಮನೆಗೂ ಬರಲಿದೆ ವ್ಯಾಕ್ಸಿನ್- ‘ಲಸಿಕೆ ಕ್ರಾಂತಿ’ಗೆ ಮುಂದಾದ ಬಿಬಿಎಂಪಿ appeared first on News First Kannada.

Source: newsfirstlive.com

Source link