ರಾಜ್ಯದಲ್ಲಿ ಏಪ್ರಿಲ್​ ತಿಂಗಳಿನಲ್ಲಿ ಲಾಕ್​ಡೌನ್​ ಹೇರಿದ ದಿನದಿಂದಲೂ ನಟ ಉಪೇಂದ್ರ ತಮ್ಮ ಕೈಯಾರೆ ಅದೆಷ್ಟೋ ಜನರಿಗೆ, ಬಡವರಿಗೆ, ಕಷ್ಟದಲ್ಲಿರುವವರಿಗೆ, ಚಿತ್ರರಂಗದ ಕಲಾವಿದರಿಗೆ ದಿನಸಿ ನೀಡಿ ತರಕಾರಿಗಳನ್ನ ಮನೆ ಬಾಗಿಲಿಗೆ ಕಳುಹಿಸಿ ಸಹಾಯ ಮಾಡಿದ್ದಾರೆ. ಇನ್ನು ರೈತರಿಂದ ತಾವೇ ಬೆಳೆಗಳನ್ನ ದುಡ್ಡು ಕೊಟ್ಟು ಖರೀದಿಸಿ, ಅದನ್ನ ಅಗತ್ಯವಿರುವವರ ಮನೆಗಳಿಗೆ ಉಚಿತವಾಗಿಯೇ ತಲುಪಿಸಿದ್ದಾರೆ. ಉಪ್ಪಿ ಅವರ ಈ ಕಾರ್ಯಕ್ಕೆ ಮೆಚ್ಚಿದ ಅದೆಷ್ಟೋ ಜನ ರೈತರು, ಜನ ಸಾಮಾನ್ಯರು, ಉಚಿತವಾಗಿಯೇ ಹಣ್ಣು-ತರಕಾರಿ, ದಿನಸಿ, ಧನ ಸಹಾಯವನ್ನೂ ಮಾಡಿದ್ದಾರೆ.

ಇದೀಗ ಇದೆಲ್ಲದಕ್ಕೂ ಬ್ರೇಕ್​ ಹಾಕಲು ನಟ ಉಪೇಂದ್ರ ಅವರ ಉಪ್ಪಿ ಫೌಂಡೇಶನ್​ ನಿರ್ಧರಿಸಿದೆ. ಇನ್ಮುಂದೆ ಯಾವುದೇ ದಾನವನ್ನ ಉಪ್ಪಿ ಫೌಂಡೇಶನ್​ ಸ್ವೀಕರಿಸೋದಿಲ್ಲ ಅಂತ ಅಧಿಕೃತವಾಗಿ ಟ್ವೀಟ್​ ಮೂಲಕ ತಿಳಿಸಿದೆ. ಸ್ವತಃ ನಟ ಉಪೇಂದ್ರ ಈ ಟ್ವೀಟ್​ ಮಾಡಿದ್ದು, ಎಲ್ಲರಿಗೂ ಕೈ ಜೋಡಿಸಿ ಧನ್ಯವಾದಗಳನ್ನ ತಿಳಿಸಿದ್ದಾರೆ. ‘ಕೊಡುವ ಇಚ್ಛೆ ಇರೋರು ನಿಮ್ಮ ಸುತ್ತ ಮುತ್ತ ಕಷ್ಟದಲ್ಲಿ ಇರುವವರಿಗೆ ಕೊಡಿ’ ಅಂತ ಉಪೇಂದ್ರ ಮನವಿ ಮಾಡಿದ್ದಾರೆ.

‘ಇಲ್ಲಿಯವರೆಗೂ ನಾವು ಯಾರನ್ನೂ ಏನೂ ಕೇಳದಿದ್ದರೂ ತುಂಬಾ ಹೃದಯವಂತರು ನಮ್ಮ ಮೂಲಕ ವಿತರಣೆಯಾಗಲೆಂದು ದಿನಸಿ, ಹಣ್ಣು-ತರಕಾರಿಗಳು ಮುಂತಾದವುಗಳನ್ನ ಕೊಟ್ಟಿದ್ದಾರೆ. ಹಾಗೂ ನಮ್ಮ ಉಪ್ಪಿ ಫೌಂಡೇಶನ್​​ ಚಾರಿಟೇಬಲ್​ ಟ್ರಸ್ಟ್​​ಗೆ ಧನ ಸಹಾಯವನ್ನೂ ಮಾಡಿದ್ದಾರೆ. ಅವುಗಳೆಲ್ಲವನ್ನು ಸೂಕ್ತವಾಗಿ ಬೇರೆ ಬೇರೆ ಕಡೆ ಸಂಕಷ್ಟದಲ್ಲಿರುವವರಿಗೆ ವಿತರಿಸಲಾಗಿದೆ, ಇನ್ನೂ ವಿತರಿಸಲಾಗುತ್ತಿದೆ. ಸಹೃದಯತೆ ಮೆರೆದಂತಹ ತಮ್ಮೆಲ್ಲರಿಗೂ ಅನಂತಾನಂತ ಧನ್ಯವಾದಗಳು..

ಇನ್ನು ಮುಂದೆ ತಾವುಗಳು ಯಾರಿಗಾದರೂ ಸಹಾಯ ಮಾಡಬೇಕೆಂದರೆ ನಿಮ್ಮ ಸುತ್ತಮುತ್ತ ಸಂಕಷ್ಟದಲ್ಲಿ ಇರುವವರನ್ನ ಗುರುತಿಸಿ ನೀವೇ ನೇರವಾಗಿ ಸಹಾಯ ಮಾಡಿ. ನಾವು ಉಪ್ಪಿ ಫೌಂಡೇಶನ್​​​ಗೆ ಹಣ ಮತ್ತು ಯಾವುದೇ ಕೊಡುಗೆಗಳನ್ನ ಮುಂದೆ ಸ್ವೀಕರಿಸುವುದನ್ನು ನಿಲ್ಲಿಸುತ್ತಿದ್ದೇವೆ. ಇಲ್ಲಿಯವರೆಗೂ ಉಪ್ಪಿ ಫೌಂಡೇಶನ್​​ಗೆ ಉಪೇಂದ್ರರವರ ಹಣ, ನಿಮ್ಮೆಲ್ಲರಿಂದ ಬಂದಂತಹ ಹಣ, ಅದರ ಖರ್ಚು ಮತ್ತು ಎಲ್ಲಾ ಅಕೌಂಟ್ಸ್​​​ ಸ್ಟೇಟ್ಮೆಂಟ್ಸ್​​ ಮಾಹಿತಿಗಳನ್ನ ಸದ್ಯದಲ್ಲೇ ಬಹಿರಂಗ ಪಡಿಸುತ್ತೇವೆ. ಮತ್ತೊಮ್ಮೆ ಧನ್ಯವಾದಗಳು.’

ಉಪ್ಪಿ ಫೌಂಡೇಶನ್​

ಉಪೇಂದ್ರ ಅವರಾಗಲೀ, ಉಪ್ಪಿ ಫೌಂಡೇಶನ್​ನ ಸದಸ್ಯರಾಗಲೀ ಯಾವತ್ತೂ ದಾನ ಪಡೆಯೋದಾಗಿ ಹೇಳಿ ಯಾವುದೇ ಸೂಚನೆ ನೀಡಿಲ್ಲ. ಉಪ್ಪಿ ಅವರು ಜನರಿಗೆ ಮಾಡ್ತಿರುವ ನಿಸ್ವಾರ್ಥ ಸೇವೆ ನೋಡಿ ಅದೆಷ್ಟೋ ಜನ ತಾವಾಗಿಯೇ ಮುಂದೆ ಬಂದು ದಾನ ನೀಡಿದ್ದಾರೆ. ಆದ್ರೆ ಅದ್ಯಾಕೆ ಈಗ ದಿಢೀರ್​ ಅಂತ ಉಪೇಂದ್ರ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಅನ್ನೋದು ಯಾರಿಗೂ ಸ್ಪಷ್ಟವಾಗ್ತಿಲ್ಲ. ಇತ್ತೀಚೆಗಷ್ಟೆ ನಟ ಚೇತನ್​ ಅಹಿಂಸಾ ಉಪೇಂದ್ರ ಮೇಲೆ ಮಾಡಿದ ಆರೋಪಗಳಿಂದ ಈ ನಿರ್ಧಾರ ತೆಗೆದುಕೊಂಡಿದ್ದಾರಾ? ಅನ್ನೋ ಪ್ರಶ್ನೆ ಒಂದ್ಕಡೆಯಾದ್ರೆ, ಮತ್ತೊಂದು ಕಡೆ ಜನರಿಗೆ ಕಷ್ಟವಾಗಬಾರದು ಅನ್ನೋ ಕಾರಣಕ್ಕೆ ಈ ನಿರ್ಧಾರ ತೆಗೆದುಕೊಂಡಿದ್ದಾರಾ ಅನ್ನೋದು ಮುಂದಷ್ಟೇ ತಿಳಿಯಬೇಕು.

The post ಇನ್ಮುಂದೆ ಯಾವುದೇ ದಾನ ಸ್ವೀಕರಿಸಲ್ಲ; ಉಪ್ಪಿ ಫೌಂಡೇಶನ್​​ನಿಂದ ದಿಢೀರ್​​ ನಿರ್ಧಾರ appeared first on News First Kannada.

Source: newsfirstlive.com

Source link