ಇನ್ಸ್​ಪೆಕ್ಟರ್​ ನಂದೀಶ್​ ಸಾವು ಪ್ರಕರಣ: ಆರೋಪ-ಪ್ರತ್ಯಾರೋಪದ ಬಗ್ಗೆ ಪೊಲೀಸ್ ಮಹಾನಿರ್ದೇಶಕರು ಹೇಳಿದ್ದೇನು? – Inspector Nandeesh death case DG IGP Praveen Sood reacts to the allegations and counter-allegations


ಇನ್ಸ್​ಪೆಕ್ಟರ್ ನಂದೀಶ್ ಸಾವು ಪ್ರಕರಣ ಸಂಬಂಧ ಆರೋಪ ಪ್ರತ್ಯಾರೋಪಗಳು ಕೇಳಿಬರುತ್ತಿದ್ದು, ಈ ಬಗ್ಗೆ ರಾಜ್ಯ ಪೊಲೀಸ್ ಮಹಾನಿರ್ದೇಶಕರು ಪ್ರತಿಕ್ರಿಯೆ ನೀಡಿದ್ದಾರೆ. ಚರ್ಚೆಯನ್ನು ನಾವು ತಡೆಯಲು ಹೋಗಲ್ಲವೆಂದು ಹೇಳಿದ್ದಾರೆ.

ಇನ್ಸ್​ಪೆಕ್ಟರ್​ ನಂದೀಶ್​ ಸಾವು ಪ್ರಕರಣ: ಆರೋಪ-ಪ್ರತ್ಯಾರೋಪದ ಬಗ್ಗೆ ಪೊಲೀಸ್ ಮಹಾನಿರ್ದೇಶಕರು ಹೇಳಿದ್ದೇನು?

ಇನ್ಸ್​ಪೆಕ್ಟರ್​ ನಂದೀಶ್ ಸಾವು ಪ್ರಕರಣ:​ ಪೊಲೀಸ್ ಮಹಾನಿರ್ದೇಶಕರ ಪ್ರತಿಕ್ರಿಯೆ

ಬೆಂಗಳೂರು: ಅಮಾನತುಗೊಂಡಿದ್ದ ಕೆ.ಆರ್.ಪುರಂ ಠಾಣೆ ಇನ್ಸ್​ಪೆಕ್ಟರ್​ ನಂದೀಶ್​ ಸಾವು ವಿಚಾರ ಸಂಬಂಧ ಆರೋಪ ಪ್ರತ್ಯಾರೋಪಗಳು ಕೇಳಿಬರುತ್ತಿವೆ. ಈ ಬಗ್ಗೆ ನಗರದಲ್ಲಿ ಪ್ರತಿಕ್ರಿಯೆ ನೀಡಿದ ಪೊಲೀಸ್ ಮಹಾನಿರ್ದೇಶಕ (ಡಿಜಿ ಮತ್ತು ಐಜಿಪಿ) ಪ್ರವೀಣ್ ಸೂದ್, ಪೋಸ್ಟಿಂಗ್​ಗೆ ಹಣ ಪಡೆಯುತ್ತಿರುವ ಬಗ್ಗೆ ಚರ್ಚೆಯಾಗುತ್ತಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮುಕ್ತವಾಗಿ ಚರ್ಚೆ ನಡೆಯಬೇಕು, ಚರ್ಚೆಯನ್ನು ನಾವು ತಡೆಯಲು ಹೋಗುವುದಿಲ್ಲ. ಆರೋಪ, ಪ್ರತ್ಯಾರೋಪದ ಬಗ್ಗೆ ನಾವು ಹೇಳುವ ಅವಶ್ಯಕತೆಯಿಲ್ಲ. ಸತ್ಯಾಂಶ ಎಲ್ಲರಿಗೂ ಗೊತ್ತಿದೆ, ಆ ರೀತಿ ಯಾವುದೂ ಆಗಿಲ್ಲ ಎಂದರು.

ಇನ್ನು ನಂದೀಶ್ ಸಾವು ಪ್ರಕರಣ ಸಂಬಂಧ ಹೇಳಿಕೆ ನೀಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೆ.ಆರ್.ಪುರಂ ಠಾಣೆ ಇನ್ಸ್​ಪೆಕ್ಟರ್​ ನಂದೀಶ್​ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ ಡಿಜಿ ಮತ್ತು ಐಜಿಪಿ ಪ್ರವೀಣ್​​ ಸೂದ್ ಅವರು​ ನನ್ನನ್ನು ಭೇಟಿಯಾಗಿದ್ದರು. ಈ ಬಗ್ಗೆ ಮಾಹಿತಿ ಪಡೆದು ವರದಿ ನೀಡುವಂತೆ ಸೂಚಿಸುತ್ತೇನೆ ಎಂದರು.

ಸಾವು ಬಗ್ಗೆ ನಿನ್ನೆ ಹೇಳಿಕೆ ನೀಡಿದ್ದ ಗೃಹಸಚಿವ ಆರಗ ಜ್ಞಾನೇಂದ್ರ ಅವರು ನಂದೀಶ್ ಅವರನ್ನು ಅಮಾನತು ಮಾಡಿರುವುದನ್ನು ಸಮರ್ಥಿಸಿಕೊಂಡರು. ಪಿಐ ನಂದೀಶ್​ ಹೃದಯಾಘಾತದಿಂದ ನಿಧನರಾಗಿದ್ದಾರೆಂದು ಮಾಹಿತಿ ಇದೆ. ಈಗ ಯಾವ್ಯಾವುದಕ್ಕೋ ಲಿಂಕ್​ ಮಾಡಿ ಮಾತಾಡುವುದು ಸರಿಯಲ್ಲ. ಕ್ಯಾಬರೆ, ಇಸ್ಪೀಟ್​ ಕ್ಲಬ್, ಕ್ಯಾಸಿನೋ ಬಂದಾಗಬೇಕೆಂದು ಸೂಚನೆ ನೀಡಲಾಗಿತ್ತು. ಕೆಲವು ಠಾಣಾ ವ್ಯಾಪ್ತಿಯಲ್ಲಿ ಮತ್ತೆ ಓಪನ್​ ಮಾಡುವ ಕೆಲಸ ನಡೆದಿತ್ತು. ಈ ಬಗ್ಗೆ ನಗರ ಪೊಲೀಸ್ ಆಯುಕ್ತರು ಸುತ್ತೋಲೆ ಹೊರಡಿಸಿದ್ದರು. ಅಕ್ರಮ ನಡೆಯುತ್ತಿದ್ದರೆ ಸ್ಥಳೀಯ ಅಧಿಕಾರಿ ಹೊಣೆಮಾಡುವಂತೆ ಹೇಳಿದ್ದೆ. ಕಟ್ಟುನಿಟ್ಟಿನ ಸೂಚನೆ ನೀಡಿದ್ದರೂ ಅಲ್ಲಿ ರೇವ್ ಪಾರ್ಟಿ ನಡೆಯುತ್ತಿತ್ತು. ಪಾರ್ಟಿಯಲ್ಲಿ ಸೂಡಾನ್​ ದೇಶದ 20 ಪ್ರಜೆಗಳು ಭಾಗವಹಿಸಿದ್ದರು. ಸಿಸಿಬಿ ದಾಳಿ ನಡೆಸಿದ್ದ ಹಿನ್ನೆಲೆಯಲ್ಲಿ ಆಯುಕ್ತರು,​ ನಂದೀಶ್ ಅವರನ್ನು​ ಅಮಾನತು ಮಾಡಿ ನನಗೆ ಮಾಹಿತಿ ನೀಡಿದ್ದರು ಎಂದು ಸ್ಪಷ್ಟಪಡಿಸಿದ್ದರು.

ಏನಿದು ಪ್ರಕರಣ?

ನಂದೀಶ್‌ ಮೈಸೂರಿನ ಹುಣಸೂರು ಮೂಲದವರಾಗಿದ್ದು, ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ 2019 ರಿಂದ 2020ರವರೆಗೆ ಕಾರ್ಯ ನಿರ್ವಹಿಸಿದ್ದರು. ಬಳಿಕ ಕೆಆರ್​ ಪುರಂ ಠಾಣೆಯ ಇನ್ಸ್​​ಪೆಕ್ಟರ್ ಆಗಿ ಸೇವೆ ಸಲ್ಲಿಸುತ್ತಿದ್ದ ನಂದೀಶ್, ಕಳೆದ ವಾರವಷ್ಟೇ ಸಸ್ಪೆಂಡ್​ ಆಗಿದ್ದರು. ಏರಿಯಾದಲ್ಲಿ ಅವಧಿ ಮೀರಿ ಪಬ್​ ನಡೆಸಲು ಅವಕಾಶ ನೀಡಿದ್ದಕ್ಕೆ ಅಮಾನತು ಮಾಡಿ ಕಮಿಷನರ್ ಪ್ರತಾಪ್ ರೆಡ್ಡಿ ಆದೇಶಿಸಿದ್ದರು.

ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

TV9 Kannada


Leave a Reply

Your email address will not be published.