ಇರುಮುಡಿ ಹೊತ್ತು ಚಿತ್ರದುರ್ಗಕ್ಕೆ ಆಗಮಿಸುತ್ತಿರುವ ಮಾಲಾಧಾರಿಗಳು; ಅಯ್ಯಪ್ಪಸ್ವಾಮಿ ದೇಗುಲದಲ್ಲಿ ಭಕ್ತರ ದಂಡು | Devotees coming to chitradurga ayyappa swamy temple due to coronavirus


ಇರುಮುಡಿ ಹೊತ್ತು ಚಿತ್ರದುರ್ಗಕ್ಕೆ ಆಗಮಿಸುತ್ತಿರುವ ಮಾಲಾಧಾರಿಗಳು; ಅಯ್ಯಪ್ಪಸ್ವಾಮಿ ದೇಗುಲದಲ್ಲಿ ಭಕ್ತರ ದಂಡು

ಅಯ್ಯಪ್ಪಸ್ವಾಮಿ ದೇಗುಲ

ಚಿತ್ರದುರ್ಗ: ವರ್ಷಾಂತ್ಯದ ವೇಳೆ ಅನೇಕರು ಮಾಲೆ ಧರಿಸಿ ಶಬರಿಮಲೆಗೆ ತೆರಳುವುದು ನೋಡಿರುತ್ತೇವೆ. ಆದರೆ ಇತ್ತೀಚೆಗೆ ಒಂದು ಕಡೆ ಕೊವಿಡ್ ಭೀತಿ ಮತ್ತೊಂದು ಕಡೆ ಅತಿವೃಷ್ಠಿ ಪರಿಣಾಮ ಅಯ್ಯಪ್ಪಸ್ವಾಮಿ ( ayyappa swamy)  ಭಕ್ತರು ಅನ್ಯ ಮಾರ್ಗ ಕಂಡುಕೊಳ್ಳುವಂತಾಗಿದೆ. ಹೀಗಾಗಿಯೇ ಕೋಟೆನಾಡಿನ ಸುಕ್ಷೇತ್ರದತ್ತ ಅಯ್ಯಪ್ಪಸ್ವಾಮಿ ಭಕ್ತರು (Devotees) ಹೆಜ್ಜೆ ಹಾಕುತ್ತಿದ್ದಾರೆ. ಇರುಮುಡಿ ಹೊತ್ತು ಮಾಲಾಧಾರಿಗಳು ಕೋಟೆನಾಡಿಗೆ ಆಗಮಿಸುತ್ತಿದ್ದಾರೆ. ಚಿತ್ರದುರ್ಗ ನಗರದ ಮೆದೇಹಳ್ಳಿ ರಸ್ತೆಯಲ್ಲಿರುವ ಅಯ್ಯಪ್ಪಸ್ವಾಮಿ ದೇಗುಲದಲ್ಲಿ ಶಬರಿಮಲೆ ಮಾದರಿಯಲ್ಲಿಯೇ 18 ಮೆಟ್ಟಿಲುಗಳನ್ನು ಭಕ್ತರು ಏರಿ ದೇವರ ಆಶೀರ್ವಾದ ಪಡೆಯುತ್ತಿದ್ದಾರೆ.

ಕಳೆದ ಎರಡು ವರ್ಷಗಳಿಂದ ಶಬರಿಮಲೆಗೆ ತೆರಳುವ ಭಕ್ತರಿಗೆ ಕೊವಿಡ್‌ ಭೀತಿ ಕಾಡುತ್ತಿದೆ. ಈಸಲ ಅತಿವೃಷ್ಠಿ ಭೀತಿ ಹೆಚ್ಚಾಗಿದ್ದು, ಅಯ್ಯಪ್ಪಸ್ವಾಮಿ ಭಕ್ತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಾಗಿ, ಚಿತ್ರದುರ್ಗದಲ್ಲಿರುವ ಅಯ್ಯಪ್ಪಸ್ವಾಮಿ ದೇಗುಲದಲ್ಲೇ ಶಾಸ್ತ್ರೋಕ್ತವಾಗಿ ಪಡಿ ಏರಿ ಅಯ್ಯಪ್ಪನ ದರ್ಶನ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಹೀಗಾಗಿ, ಕಳೆದ ವರ್ಷ ಐದು ಸಾವಿರ ಭಕ್ತರು ಇಲ್ಲಿಯೇ ದರ್ಶನ ಪಡೆದಿದ್ದರು. ಈ ವರ್ಷವೂ ನಿತ್ಯ ಬೇರೆ ಬೇರೆ ಭಾಗದಿಂದ ಬರುವ ಮಾಲಾಧಾರಿ ಭಕ್ತರು ಇಲ್ಲಿಯೇ ದರ್ಶನ ಪಡೆದು ತೆರಳುತ್ತಿದ್ದಾರೆ ಎಂದು ಅಯ್ಯಪ್ಪಸ್ವಾಮಿ‌ಸೇವಾ ಟ್ರಸ್ಟ್ ಅಧ್ಯಕ್ಷ ಶರಣ್ ರಾಜ್ ತಿಳಿಸಿದ್ದಾರೆ.

ಕಳೆದ ಎರಡು ವರ್ಷಗಳಿಂದ ಕೇರಳದ ಶಬರಿಮಲೆಗೆ ತೆರಳುವ ಭಕ್ತರ ಸಂಖ್ಯೆ ಕ್ಷೀಣಿಸುತ್ತಿದೆ. ಕೊವಿಡ್ ಪರಿಣಾಮ ಹೊರರಾಜ್ಯದಿಂದ ತೆರಳಿದ ಭಕ್ತರಿಗೆ ವಿವಿಧ ನಿಯಮ ಹೇರಲಾಗಿದೆ. ಪರೀಕ್ಷೆಗೊಳಪಟ್ಟಾಗ ಪಾಸಿಟಿವ್ ಬಂದರೆ ಸುಮಾರು ದಿನಗಳ ಕಾಲ ಗುಂಪಿನಲ್ಲಿದ್ದ ಎಲ್ಲರೂ ಅಲ್ಲೇ ಇರಬೇಕಾಗುತ್ತದೆ. ಈ ಬಾರಿ ಅತಿವೃಷ್ಠಿ ಭೀತಿ‌‌ ಸಹ ಎದುರಾಗಿದೆ. ಹೀಗಾಗಿ,‌ ಚಿತ್ರದುರ್ಗದ ಅಯ್ಯಪ್ಪಸ್ವಾಮಿ ದೇಗುಲದಲ್ಲೇ ದರ್ಶನ ಪಡೆದು ಹಿಂದಿರುಗುತ್ತಿದ್ದೇವೆ. ನೇರವಾಗಿ ಅಯ್ಯಪ್ಪನ ದರ್ಶನ ಪಡೆದು ಪೂಜಿಸುವ ಅವಕಾಶ ಲಭಿಸಿದ್ದು ಸಾರ್ಥಕ ಭಾವ ಮೂಡಿಸಿದೆ ಎಂದು ಗುರುಸ್ವಾಮಿ ಲೊಕೇಶ ತಿಳಿಸಿದ್ದಾರೆ.

ಒಟ್ಟಾರೆಯಾಗಿ ಕೇರಳದ ಶಬರಿಮಲೆಗೆ ತೆರಳಬೇಕಿದ್ದ ಮಾಲಾಧಾರಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಕೋಟೆನಾಡಿನತ್ತ ಚಿತ್ತ ಹರಿಸುತ್ತಿದ್ದಾರೆ. ಕೊವಿಡ್‌ ಮತ್ತು ಅತಿವೃಷ್ಠಿ ಭೀತಿಯಿಂದ ಅಯ್ಯಪ್ಪಸ್ವಾಮಿ ಭಕ್ತರು ಶಬರಿಮಲೆ ಮಾದರಿಯ ಕೋಟೆನಾಡಿನ ಅಯ್ಯಪ್ಪಸ್ವಾಮಿ ದೇಗುಲ‌ ದರ್ಶನ ಪಡೆದು ಕೃತಾರ್ಥರಾಗುತ್ತಿದ್ದಾರೆ.

ವರದಿ: ಬಸವರಾಜ ಮುದನೂರ್

ಇದನ್ನೂ ಓದಿ:

ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲದ ಪ್ರಧಾನ ಅರ್ಚಕರಾಗಿ ಪರಮೇಶ್ವರನ್ ನಂಬೂದಿರಿ ನೇಮಕ

29 ವರ್ಷಗಳಿಂದ ಕಾಲ್ನಡಿಗೆಯಲ್ಲಿಯೇ ಶಬರಿಮಲೆಗೆ ತೆರಳಿ ಅಯ್ಯಪ್ಪನ ದರ್ಶನ ಮಾಡುತ್ತಿರುವ ಭಕ್ತ

TV9 Kannada


Leave a Reply

Your email address will not be published. Required fields are marked *