ಒಂದು ಕಡೆ ಕೊರೊನಾ, ಮತ್ತೊಂದು ಕಡೆ ಪ್ರವಾಹ, ಮಗೊಂದು ಕಡೆ ಇಲಿಗಳ ಕಾಟ. ಹೀಗೆ ಪದೇ ಪದೇ ಒಂದಿಲ್ಲೊಂದು ಸಮಸ್ಯೆಗಳಿಗೆ ತುತ್ತಾಗುತ್ತಿರುವ ಶ್ರೀಮಂತ ರಾಷ್ಟ್ರ ಆಸ್ಟ್ರೇಲಿಯಾಗೆ ಇದೀಗ ಮತ್ತೊಂದು ಸವಾಲು ಎದುರಾಗಿದೆ. ಈ ಬಾರಿ ಆಸ್ಟ್ರೇಲಿಯಾಗೆ ಸವಾಲು ಎದುರಾಗಿದ್ದು ಮಾನವನಿಂದಲ್ಲ ಬದಲಾಗಿ ಜೇಡರ ಹುಳಗಳಿಂದ.

ಹವಾಮಾನ ವೈಪರಿತ್ಯದ ತೂಗುಗತ್ತಿ ಬಡ ರಾಷ್ಟ್ರ ಮಾತ್ರವಲ್ಲ ಶ್ರೀಮಂತ ದೇಶಗಳ ಮೇಲೂ ನೇತಾಡುತ್ತಲ್ಲೇ ಇರುತ್ತವೆ. ಅದರಲ್ಲೂ ಶ್ರೀಮಂತ ರಾಷ್ಟ್ರ ಆಸ್ಟ್ರೇಲಿಯಾ ಕೂಡ ಪ್ರಾಕೃತಿಕ ಮುನಿಸಿಗೆ ತುತ್ತಾಗುತ್ತಲ್ಲೇ ಇರುತ್ತದೆ. ಕಳೆದ ವರ್ಷ ಇಡೀ ಆಸ್ಟ್ರೇಲಿಯಾ ಭೀಕರ ಕಾಡ್ಗಿಚ್ಚಿಗೆ ತುತ್ತಾಗಿತ್ತು. ಎಕರೆಗಟ್ಟಲೇ ಪ್ರದೇಶಗಳು ಸುಟ್ಟು ಕರಕಲಾಗಿತ್ತು. ಲಕ್ಷಾಂತರ ಮೂಕ ಪ್ರಾಣಿಗಳು ಅಗ್ನಿಯ ಅಬ್ಬರಕ್ಕೆ ಸಿಲುಕಿ ಪ್ರಾಣ ಕಳೆದುಕೊಂಡಿದ್ದವು.

ಇದರ ಮಧ್ಯೆ ಆಸ್ಟ್ರೇಲಿಯಾದ ಕೆಲವು ನಗರಗಳಲ್ಲಿ ಆಲಿಕಲ್ಲು ಮಳೆ, ಪ್ರವಾಹ ಹಾಗೂ ದಟ್ಟವಾದ ಧೂಳಿನ ಚಂಡಮಾರುತ ಅಪ್ಪಳಿಸಿತ್ತು. ಹೀಗೆ ಒಂದಿಲ್ಲೊಂದು ಸಮಸ್ಯೆಗಳ ಸುಳಿಗೆ ಸಿಲುಕುತ್ತಿರುವ ಆಸ್ಟ್ರೇಲಿಯಾ ಮತ್ತೆ ಮತ್ತೆ ಪುಟಿದು ನಿಲ್ತಿತ್ತು. ಆದ್ರೆ ಆಸ್ಟ್ರೇಲಿಯಾಗೆ ಕೊರೊನಾದಂತೆಯೇ ದೊಡ್ಡ ಹೊಡೆತ ಕೊಟ್ಟಿದ್ದು ಕಳೆದ ತಿಂಗಳು ಉಂಟಾದ ಭೀಕರ ಪ್ರವಾಹ.

ಕಳೆದು ತಿಂಗಳು ಆಸೀಸ್ ನೆಲದಲ್ಲಿ ಉಂಟಾದ ಭೀಕರ ಪ್ರವಾಹ ಇಡೀ ಆಸ್ಟ್ರೇಲಿಯಾವನ್ನೇ ಹೈರಣಾಗಿಸಿತು. 100 ವರ್ಷಗಳ ಬಳಿಕ ಉಂಟಾದ ದೊಡ್ಡ ಪ್ರವಾಹಕ್ಕೆ ಇಡೀ ಆಸ್ಟ್ರೇಲಿಯಾವೇ ಬೆಚ್ಚಿ ಬಿದ್ದಿತ್ತು. ಅತೀ ಹೆಚ್ಚು ಜನ ಸಂಖ್ಯೆ ಇರುವ ನ್ಯೂ ಸೌಥ್ ವೇಲ್ಸ್​​ನ ಹಲವಾರು ಸ್ಥಳಗಳು ಸಂಪೂರ್ಣ ಜಲಾವೃತಗೊಂಡಿದ್ದವು. ಸುಂದರ ನಗರಗಳು ಭೀಕರ ಪ್ರವಾಹಕ್ಕೆ ಮುಳುಗಡೆಯಾಗಿದ್ದವು.

ತುಂಬಿ ಹರಿದ ನದಿಗಳು, ಜಲಾವೃತಗೊಂಡ ರಸ್ತೆ, ಸೇತುವೆಗಳು, ಕೊಚ್ಚಿ ಹೋದ ಮನೆಗಳು, ಕಾರುಗಳು, ಇಂತಹ ದೃಶ್ಯ ಪ್ರವಾಹದ ಸಂದರ್ಭದಲ್ಲಿ ಆಸ್ಟ್ರೇಲಿಯಾದ ಸೌತ್ ವೇಲ್ಸ್ ನಲ್ಲಿ ಸಾಮಾನ್ಯ ಎಂಬಂತಾಗಿತ್ತು. ಪ್ರವಾಹದ ಪರಾಕ್ರಮಕ್ಕೆ ನೂರಾರು ಸಾವಿರಾರು ಜನರು ಮನೆ, ಮಠಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದರು.

ಆಸ್ಟ್ರೇಲಿಯಾದಲ್ಲಿ ಉಂಟಾದ ಈ ಭೀಕರ ಪ್ರವಾಹ ಮಾನವನ್ನು ಮಾತ್ರವಲ್ಲ ಮೂಕ ಪ್ರಾಣಿಗಳು, ಸಣ್ಣ ಸಣ್ಣ ಜೀವಿಗಳಿಗೂ ಸಂಕಷ್ಟ ತಂದಿಟ್ಟಿತ್ತು. ಈ ಭೀಕರ ಪ್ರವಾಹದಿಂದ ಮನುಷ್ಯರು ಮಾತ್ರವಲ್ಲದೇ ಸಾವಿರಾರು ಸಣ್ಣ ಸಣ್ಣ ಜೀವಿಗಳು ತಮ್ಮ ಗೂಡು, ಆವಾಸಸ್ಥಾನಗಳನ್ನು ಕಳೆದುಕೊಂಡಿವೆ. ಹೀಗಾಗಿ, ಪ್ರವಾಹದಿಂದ ಪಾರಾಗಲು ಮತ್ತು ಸುರಕ್ಷಿತ ಪ್ರದೇಶದಲ್ಲಿ ಇರಲು ಈ ಸಣ್ಣ ಜೀವಿಗಳು ಮತ್ತು ಜೇಡರ ಹುಳುಗಳು ಎತ್ತರ ಪ್ರದೇಶಗಳತ್ತ ಸಾಗಿವೆ.

ಇಲಿಗಳ ಕಾಟದ ಬೆನ್ನಲ್ಲೇ ಆಸೀಸ್ ಗೆ ಹುಳಗಳ ಕಾಟ
ಆಸೀಸ್ ನೆಲದಲ್ಲಿ ದರ್ಬಾರ್ ನಡೆಸುತ್ತಿದೆ ಜೇಡರ ಹುಳ
ಮೂಕವಿಸ್ಮತರನ್ನಾಗಿಸುತ್ತೆ ಈ ಬೃಹತ್ ಜೇಡರ ಬಲೆಗಳು

ಕಳೆದ ತಿಂಗಳಷ್ಟೇ ಆಸ್ಟ್ರೇಲಿಯಾದ ಕೆಲ ರಾಜ್ಯಗಳಲ್ಲಿ ಬೃಹತ್ ಇಲಿಗಳ ಸೇನೆ ದಾಳಿ ಮಾಡಿತ್ತು. ಸರಿಸುಮಾರು 5 ಸಾವಿರ ಕೋಟಿಯಷ್ಟು ಕೃಷಿ ಉತ್ಪನ್ನಗಳನ್ನು ಈ ಇಲಿಗಳು ದಾಳಿ ಮಾಡಿ ನಾಶ ಮಾಡಿದ್ದವು. ಇದ್ರಿಂದ ಸಾಕಷ್ಟು ಜನರು ತೊಂದರೆಗೆ ಸಿಲುಕಿದ್ರು. ಇದಾದ ಕೆಲವೇ ವಾರಗಳ ಅಂತರದಲ್ಲಿ ಇದೀಗ ಕಾಂಗರುಗಳ ನಾಡಲ್ಲಿ ಬೃಹತ್ ಸಂಖ್ಯೆಯಲ್ಲಿ ಜೇಡರ ಹುಳಗಳು ಕಾಣಿಸಿಕೊಂಡಿವೆ.

ಅಮೆರಿಕದ ಕೆಲ ತಜ್ಞರು ಆಸ್ಟ್ರೇಲಿಯಾದಲ್ಲಿ ಪ್ರವಾಹವಾದ ಸ್ಥಳಕ್ಕೆ ಅಧ್ಯಯನ ಮಾಡಲು ಹೋದಾಗ ಜೇಡರ ಹುಳುಗಳ ದೃಶ್ಯಗಳು ಕಣ್ಣಿಗೆ ಬಿದ್ದಿವೆ. ಮರಗಳು ಹಾಗೂ ಬೇಲಿಗಳ ನಡುವೆ ಜೇಡರ ಹುಳಗಳು ವಿಸ್ಮಯಕಾರಿ ಎಂಬಂತೆ ಬಲೆಗಳನ್ನು ನಿರ್ಮಿಸಿವೆ. ಸಾವಿರಾರು ಸಂಖ್ಯೆಯಲ್ಲಿ ಇಲ್ಲಿ ಜೇಡರ ಹುಳಗಳು ಕಂಡು ಬಂದಿದ್ದು, ಇವುಗಳಿಂದ ಮಾನವನಿಗೆ ಅಪಾಯ ಕಡಿಮೆ ಎಂದು ಅಧ್ಯಯನಕಾರರು ತಿಳಿಸಿದ್ದಾರೆ.

ತಮ್ಮದೇ ಗೋಪುರ ಕಟ್ಟಿಕೊಂಡ ಜೇಡರ ಹುಳಗಳು
ಜೇಡರ ಹುಳಗಳ ಪ್ರಯಾಣವೇ ಒಂದು ವಿಚಿತ್ರ ಮಾತ್ರವಲ್ಲದೆ ವಿಸ್ಮಯ ಕೂಡ. ಆ ಸುಂದರ ದೃಶ್ಯವನ್ನು ಕಣ್ತುಂಬಿಕೊಳ್ಳುವುದೇ ಚೆಂದ. ಆ ಸಣ್ಣ ಸಣ್ಣ ಹುಳಗಳು ಇಡುವ ಪುಟ್ಟ ಪುಟ್ಟ ಹೆಜ್ಜೆಗಳು ನಿಜಕ್ಕೂ ನೋಡುಗರನ್ನು ಮೂಕ ವಿಸ್ಮಿತರನ್ನಾಗಿಸುತ್ತೆ ನಿಜ. ಆದ್ರೆ ಅತಿಯಾದ್ರೆ ಅಮೃತ ಕೂಡ ವಿಷ ಅಲ್ವಾ..? ಬೃಹತ್ ಸಂಖ್ಯೆಯ ಜೇಡರ ಹುಳಗಳಲ್ಲ ಒಟ್ಟಾಗಿ ಗೋಪುರದಂತಹ ಬಲೆಗಳನ್ನು ನಿರ್ಮಿಸಿದೆ.

ಬೃಹತ್ ಸಂಖ್ಯೆಯಲ್ಲಿ ಹುಳಗಳು ಕಾಣಿಸಿಕೊಳ್ಳಲು ಕಾರಣವೇನು?
ಆಸ್ಟ್ರೇಲಿಯಾದಲ್ಲಿ ಈ ರೀತಿಯಾಗಿ ಜೇಡರ ಹುಳಗಳು ಕಾಣಿಸಿಕೊಂಡಿರುವುದು ಇದೇ ಮೊದ್ಲೇನಲ್ಲ. ಈ ಹಿಂದೆ ಕೂಡ ಪ್ರವಾಹ ಬಂದ ಕೆಲವೇ ದಿನಗಳಲ್ಲಿ ಈ ರೀತಿ ದೃಶ್ಯ ಇಲ್ಲಿ ಸಾಮಾನ್ಯವಾಗಿತ್ತು. ಆದ್ರೆ ಇದೇ ಮೊದಲ ಬಾರಿಗೆ ಬೃಹತ್ ಸಂಖ್ಯೆಯಲ್ಲಿ ಕಾಣಿಸಿಕೊಂಡಿದೆ.

ಬೃಹತ್ ಸಂಖ್ಯೆಯಲ್ಲಿ ಜೇಡರ ಹುಳಗಳು ಕಾಣಿಸಿಕೊಂಡಿರುವುದನ್ನ ವಿಸ್ಮಯ ಅನ್ನಬೇಕೋ ಅಥವಾ ಅಪಾಯಕಾರಿ ಅಂದ್ಕೊಳ್ಳಬೇಕೋ ಎಂದು ಜನರು ಗೊಂದಲಿರುವುದಂತು ಸತ್ಯ. ಯಾಕಂದ್ರೆ ಹೊರ ಭಾಗದಲ್ಲಿ ಮಾತ್ರವಲ್ಲದೇ ಮನೆಯ ಒಳಗಡೆ ಕೂಡ ನೂರಾರು ಜೇಡರ ಹುಳಗಳು ಕಾಣಿಸಿಕೊಂಡಿದ್ದು, ಜನರಲ್ಲಿ ಆತಂಕ ಮನೆ ಮಾಡಿದೆ. ಈ ಹುಳಗಳು ಚಿಕ್ಕ ಪುಟ್ಟ ಮಕ್ಕಳಿಗೆ ಕಚ್ಚಿದ್ರೆ ಇದ್ರಿಂದ ಆರೋಗ್ಯದ ಸಮಸ್ಯೆ ಎದುರಾಗಲಿದೆ . ಇದೇ ಭಯ ಇದೀಗ ಹಲವರಲ್ಲಿ ಕಾಡುತ್ತಿದೆ.

ಭೀಕರ ಪ್ರವಾಹಕ್ಕೆ ತತ್ತರಿಸಿದ ಆಸ್ಟ್ರೇಲಿಯಾಗೆ ಈ ಸಣ್ಣ ಸಣ್ಣ ಜೀವಿಗಳು ಆಶ್ರಯ ಹುಡುಕುತ್ತಾ ಹೊರಟಿವೆ. ದೊಡ್ಡ ಪ್ರಮಾಣದಲ್ಲಿ ಜೇಡರ ಹುಳಗಳು ಕಂಡು ಬಂದಿರುವುದರಿಂದ ಜನರಂತು ಬೆಚ್ಚಿ ಬಿದ್ದಿರುವುದು ಸುಳ್ಳಲ್ಲ. ಯಾಕಂದ್ರೆ ಈ ಹಿಂದೆ ಭಾರತದಲ್ಲೂ ಜೇಡರ ಹುಳ ಕಚ್ಚಿದ ಪರಿಣಾಮವಾಗಿ ನರವೈಫಲ್ಯ ಎದುರಾಗಿರುವುದು ವರದಿಯಾಗಿತ್ತು. ಆದ್ದರಿಂದ ಇದೀಗ ಆಸ್ಟ್ರೇಲಿಯಾದ ಜನರು ಜೇಡರಗಳ ವಿರುದ್ಧ ಕೂಡ ತಮ್ಮದೇ ಶೈಲಿಯಲ್ಲಿ ಸಮರ ಸಾರಬೇಕಾಗಿದೆ.

ಪ್ರಕೃತಿ ಮುನಿದರೆ ಅದನ್ನು ತಡೆಯುವ ಶಕ್ತಿ ಯಾರಿಗೂ ಇಲ್ಲ. ಅದು ಚಂಡಮಾರುತನೇ ಆಗಿರಲಿ, ಭೂಕಂಪ ಆಗಿರಲಿ, ಇಲ್ಲಾ ಜ್ವಾಲಮುಖಿನೇ ಆಗಿರ್ಲಿ. ಮುನಿದ ಪ್ರಕೃತಿಯ ಕೋಪತಾಪದ ಪರಿಣಾಮಗಳ ಬಗ್ಗೆ ಬಹುತೇಕ ಎಲ್ಲರಿಗೂ ಗೊತ್ತಿದೆ. ಪ್ರಾಕೃತಿಕ ವಿಕೋಪದ ನಂತರ ಕಾಣಿಸಿಕೊಳ್ಳುವ ಚಿಕ್ಕ ಪುಟ್ಟ ಜೀವಿಗಳು ಕೂಡ ಮಾನವನ ಆರೋಗ್ಯದ ಮೇಲೆ ಪರಿಣಾಮ ಬೀಳುತ್ತಿರುವುದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.

ಈ ಬೃಹತ್ ಸಂಖ್ಯೆಯೂ ಜೇಡರ ಹುಳಗಳು ಕಚ್ಚಲ್ಲ ನಿಜ. ಹಾಗೆಂದ ಮಾತ್ರಕ್ಕೆ ನಿರ್ಲಕ್ಷ್ಯ ವಹಿಸುವಂತಿಲ್ಲ. ಯಾಕಂದ್ರೆ ಬೃಹತ್ ಸಂಖ್ಯೆಯಲ್ಲಿ ಜೇಡರ ಹುಳಗಳು ಕಾಣಿಸಿಕೊಂಡಿರುವುದು ಮುಂದೆ ಇನ್ಯಾವುದೋ ರೋಗದ ಹುಟ್ಟಿಗೂ ಕಾರಣವಾಗಬಹುದು. ಯಾವುದಕ್ಕೂ ಎಚ್ಚರದಿಂದಿರುವುದು ಒಳ್ಳೆಯದು.

 

The post ಇಲಿಗಳ ಕಾಟದ ನಡುವೆ ಆಸೀಸ್​ಗೆ ಜೇಡರ ಹುಳಗಳ ಹಾವಳಿ..ಬೃಹತ್ ಸಂಖ್ಯೆಯಲ್ಲಿ ಕಾಣಿಸಿಕೊಂಡಿದ್ದೇಕೆ? appeared first on News First Kannada.

Source: newsfirstlive.com

Source link