ಬೆಂಗಳೂರು: ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆ ಉಂಟಾಗಿ 24 ರೋಗಿಗಳು ಸಾವನ್ನಪ್ಪಿದ ಹಿನ್ನೆಲೆ ಇಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್​ ಚಾಮರಾಜನಗರಕ್ಕೆ ತೆರಳುತ್ತಿದ್ದಾರೆ.

ಹೊರಡುವ ಮುನ್ನೆ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಿವಕುಮಾರ್, ಇಡೀ ದೇಶದಲ್ಲೇ ದೊಡ್ಡ ಅವಮಾನ ಆಗ್ತಿದೆ, ಜನರ ಕಷ್ಟದಲ್ಲಿ ನಾವು ಜೊತೆಗಿರಬೇಕು. ಹೇಗಾಯ್ತು..? ಏನಾಯ್ತು..? ಎಂಬ ವಾಸ್ತವಾಂಶ ತಿಳಿಸಬೇಕು ಎಂದರು. ನಿನ್ನೆ ಆರೇಳು ದೇಹಗಳ ಶವಸಂಸ್ಕಾರ ಪೊಲೀಸರೇ ಮಾಡಿದ್ದಾರೆ, ಉಳಿದದ್ದು ಊರಿಗೆ ಕಳಿಸಿದ್ದಾರೆ, ಜನರ ಆಕ್ರಂದನ ಮುಗಿಲು ಮುಟ್ಟಿದೆ. 24 ಈಗ ಕಾಣ್ತಿರೋ ನಂಬರ್, ರಾಜ್ಯದಲ್ಲಿ ಇನ್ನೂ ಹೆಚ್ಚಿನ ಸಾವಾಗಿದೆ. ಅದೆಲ್ಲಾ ಮಾಹಿತಿ ತರಿಸ್ತಿದ್ದೀವಿ, ಈಗಲೇ ಹೇಳಿದರೆ ಜನ ಗಾಬರಿ ಆಗ್ತಾರೆ. ಗಾಬರಿಯಲ್ಲಿ ನನ್ನ ಸ್ನೇಹಿತರು ಒಬ್ಬರು ಸತ್ತಿದ್ದಾರೆ ಎಂದು ತಿಳಿಸಿದ್ರು.

ಇದೇ ವೇಳೆ ಸರ್ಕಾರದ ವಿರುದ್ಧ ಹರಿಹಾಯ್ದ ಡಿಕೆಎಸ್​, ಇವರಿಗೆ ಸರ್ಕಾರ ನಡೆಸೋಕೆ ಆಗಲ್ಲ, ಎಲ್ರೂ ಬಿಟ್ಟು ಹೋಗಲಿ, ಎಲ್ಲರೂ ರಾಜೀನಾಮೆ ಕೊಡಲಿ, ಸರ್ಕಾರವೇ ರಾಜೀನಾಮೆ ಕೊಡಲಿ. ರಾಜ್ಯಪಾಲರ ಆಡಳಿತ ಬರಲಿ, ಅವರೇ ನಡೆಸ್ತಾರೆ ಎಂದು ಹೇಳಿದ್ರು.

ಒಬ್ಬ ಮಂತ್ರಿಯಾದರೂ ಸತ್ತವರ ಕುಟುಂಬಸ್ಥರ ಜೊತೆಗೆ ಮಾತನಾಡಿದ್ದಾರಾ? ಈ ಸರ್ಕಾರದಲ್ಲಿರೋ ಮಂತ್ರಿಗಳೆಲ್ಲ ಜಿಲ್ಲೆಗಳಿಗೆ ಹೋಗಿದ್ದಾರಾ? ಸರ್ಕಾರದ ಮೇಲೆ ನಂಬಿಕೆ ಇಲ್ಲ ಅಂತಾನೇ ನಾವು ನಿನ್ನೆ ಮುಖ್ಯ ಕಾರ್ಯದರ್ಶಿಗಳನ್ನ ಮೀಟ್ ಆಗಿದ್ದು. ರಾಜೀನಾಮೆ ಕೊಟ್ಟು ಎಲ್ಲರೂ ಹೋಗಲಿ ಎಂದು ಡಿಕೆಶಿವಕುಮಾರ್  ಗುಡುಗಿದ್ರು.

ರಾಜರಾಜೇಶ್ವರಿ ಆಸ್ಪತ್ರೆಗೆ ಹಾಗೂ ಆರ್.ಟಿ.‌ ನಗರದ ಆಸ್ಪತ್ರೆಗೆ ನಿನ್ನೆ ರಾತ್ರಿ ಆಕ್ಸಿಜನ್ ಬಂದಿದೆ. ರಾಜಕೀಯ ಮುಖ್ಯ ಅಲ್ಲ, ಪ್ರತಿಯೊಬ್ಬರನ್ನ ಉಳಿಸೋದು ಮುಖ್ಯ. ಕುಟುಂಬಕ್ಕೆ ಧೈರ್ಯ ಕೊಡಬೇಕು. ಹಿಂದೆ ಎಲ್ಲಾ 60 ವರ್ಷ, 65 ವರ್ಷ ಅಂತಿದ್ರು, ಈಗ 20, 21, 22 ವರ್ಷದ ಯುವಕರು, ಮದುವೆಯಾದ ನೆಕ್ಸ್ಟ್ ಡೇ ಸತ್ತಂತಹ ಯುವಕರ ಬಗ್ಗೆ ತೋರಿಸಿದ್ದೀರಿ. ನಮ್ಮ ಕುಟುಂಬದಲ್ಲೇ ಎರಡು ಮದುವೆ ಇತ್ತು. ನನ್ನ ಚಿಕ್ಕಪ್ಪ, ತಮ್ಮನ ಮಗಳ ಮದುವೆ ಹಾಗೂ ನನ್ನ ಭಾವಮೈದನ ಮದುವೆ ಎರಡೂ ಮುಂದೂಡಿದ್ದೇವೆ. ಜಾಗ್ರತೆಯಿಂದ ಮಾತ್ರ ಜೀವ ಉಳಿಸೋಕೆ ಸಾಧ್ಯ, ನಾವೆಲ್ಲ ಸೇರಿ ಕೆಲಸ ಮಾಡೋಣ ಎಂದರು.

The post ‘ಇವರಿಗೆ ಸರ್ಕಾರ ನಡೆಸೋಕೆ ಆಗಲ್ಲ, ಎಲ್ಲರೂ ರಾಜೀನಾಮೆ ಕೊಡಲಿ’ -ಡಿಕೆ ಶಿವಕುಮಾರ್ appeared first on News First Kannada.

Source: newsfirstlive.com

Source link