ಬೆಂಗಳೂರು: ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಕುರಿತಂತೆ ನಡೆಯುತ್ತಿರುವ ಚರ್ಚೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬಿಜೆಪಿ ನಾಯಕರು ಪವರ್​​ ಬೆಗ್ಗರ್​​ಗಳು ಎಂದು ಕಿಡಿಕಾರಿದ್ದಾರೆ.

ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಡಿ.ಕೆ. ಶಿವಕುಮಾರ್​ ಅವರು.. ಬಿಜೆಪಿ ಪಾರ್ಟಿಯವರು ಏನು ಬೇಕಾದರೂ ಮಾಡಿಕೊಳ್ಳಲಿ. ಇವರೆಲ್ಲ ಪವರ್ ಬೆಗ್ಗರ್​​ಗಳು. ಪವರ್ ಬೆಗ್ಗರ್​​ಗಳ ಬಗ್ಗೆ ಮಾತಾಡಿ ಟೈಂ ವೇಸ್ಟ್ ಮಾಡೋದು ಬೇಡ. ವಿಜಯೇಂದ್ರ ಡೆಲ್ಲಿಗೆ ಬೇಕಾದರೂ ಹೋಗಲಿ ಎಲ್ಲಿಗೆ ಬೇಕಾದರೂ ಹೋಗಲಿ. ಮೂರು ಸರ್ಕಾರ ಅಂತಾದರೂ ಹೇಳಿಕೊಳ್ಳಲಿ, ಏನಾದರೂ ಹೇಳಿಕೊಳ್ಳಲಿ. ಅವರಿಗೆ ಶಕ್ತಿ ಕೊಟ್ಟಿದ್ದು ಯಡಿಯೂರಪ್ಪ, ಈಗ ಅನುಭವಿಸಲಿ, ಹಿಂದೆ ನಾವೂ ಕೂಡ ಅನುಭವಿಸಿದ್ದೇವೆ. ನಮಗೆ ಈಗ ಕೋವಿಡ್​​ನಿಂದ ಬಡವರ ಜೀವ ಉಳಿಸೋದು ಮುಖ್ಯ ಎಂದರು.

ಇದೇ ವೇಳೆ ಕೊರೊನಾ ಸಾವಿನ ಬಗ್ಗೆ ಸುಳ್ಳು ಅಂಕಿ ಅಂಶದ ವಿಚಾರವಾಗಿ ಸುಧಾಕರ್ ಹೇಳಿಕೆಗೆ ತಿರುಗೇಟು ನೀಡಿದ ಅವರು, ಸುಧಾಕರಣ್ಣ ನೀನು ಮೊದಲು ಔಷಧಿ ಕೊಡಿಸೋದು ನೋಡು. ಕಂದಾಯ ಇಲಾಖೆ ಇದೆ, ಕಾರ್ಪೊರೇಷನ್ ಇದೆ, ಪಂಚಾಯತ್ ಇದೆ, ಅಲ್ಲಿನ ಅಧಿಕಾರಿಗಳು ಡೆತ್ ಆಡಿಟ್ ಮಾಡಲಿ. ನೀನು ಡೆತ್ ಆಡಿಟ್ ಮಾಡೋದು ಬೇಡ, ನೀನು ಮೊದಲು ವ್ಯಾಕ್ಸಿನೇಷನ್‌ ಕೊಡಿಸೋದು ನೋಡು, ನಿನ್ನ ಕೈಯಲ್ಲಿ ಡೆತ್ ಆಡಿಟ್ ಮಾಡಿಸೋಕೆ ಆಗಲ್ಲ. ರಾಜಸ್ಥಾನ ಸಿಎಂ ಡೆತ್ ಆಡಿಟ್ ಮಾಡಿಸೋದಾಗಿ ಘೋಷಣೆ ಮಾಡಿದ್ದಾರೆ. ಇಲ್ಲೂ ಕೂಡ ಡೆತ್ ಆಡಿಟ್ ಮಾಡೋದಾಗಿ ಘೋಷಣೆ ಮಾಡಲಿ ಎಂದರು.

ದೇವೇಗೌಡರು ಪ್ರಧಾನಿಯಾಗಿ 25 ವರ್ಷ ಹಿನ್ನೆಲೆ ಶುಭ ಕೋರಿ, ದೆಹಲಿಯಲ್ಲಿ ದಕ್ಷಿಣದವರು ರಾಜಕಾರಣ ಮಾಡಲಾಗಲ್ಲ. ಅಂತದ್ದರಲ್ಲಿ ಇವರು ಪ್ರಧಾನಿಯಾಗಿದ್ದರು. ರಾಜ್ಯದ ದುಃಖ ದುಮ್ಮಾನಗಳಿಗೆ ಧ್ವನಿಯಾಗಿದ್ದರು. ಅವರ ಉತ್ಸಾಹವನ್ನ ನಾನು ಸ್ವಾಗತಿಸುತ್ತೇನೆ ಎಂದರು.

The post ‘ಇವರೆಲ್ಲ ಪವರ್ ಬೆಗ್ಗರ್​​ಗಳು’: ಬಿಜೆಪಿ ನಾಯಕರ ವಿರುದ್ಧ ಡಿಕೆಎಸ್​ ಕೆಂಡಾಮಂಡಲ appeared first on News First Kannada.

Source: newsfirstlive.com

Source link