ಅದೆಷ್ಟೋ ಜನ ನಟ-ನಟಿಯರು ಚಿತ್ರರಂಗಕ್ಕೆ ಪದಾರ್ಪಣೆ ಮಾಡುವ ಮೊದಲೇ ತಮ್ಮ ಜೀವನದ ರೋಲ್​ ಮಾಡೆಲ್​​ ಯಾರು ಅಂತ ನಿರ್ಧಾರ ಮಾಡಿರ್ತಾರೆ. ಅದರಂತೆಯೇ ಕೆಲಸವನ್ನೂ ಮಾಡಿ ಒಂದು ಹಂತಕ್ಕೆ ತಲುಪುವ ಪ್ರಯತ್ನದಲ್ಲಿರ್ತಾರೆ. ಆದ್ರೆ ನಟ ಹರೀಶ್​ ರಾಯ್​ ಕನ್ನಡ ಚಿತ್ರರಂಗಕ್ಕೆ ಬಂದು 26 ವರ್ಷಗಳು ಕಳೆದ ಮೇಲೆ ಒಂದು ಅದ್ಭುತ ವಿಚಾರವನ್ನ ಬಿಚ್ಚಿಟ್ಟಿದ್ದಾರೆ. ಇತ್ತೀಚೆಗೆ ತಾವು ಕೆಲಸ ಮಾಡಿದ ಕೆಜಿಎಫ್​ ಸಿನಿಮಾದ ಮೂವರು ತಮ್ಮ ಜೀವನದ ದೊಡ್ಡ ಶಕ್ತಿ ಅಂತ ಹೇಳ್ತಿದ್ದಾರೆ.

ಹೌದು.. ಕೆಜಿಎಫ್​ ಅಂದಾಕ್ಷಣ ನೆನಪಾಗೋದೇ ರಾಕಿಂಗ್​ ಸ್ಟಾರ್​ ಯಶ್​, ಸ್ಟಾರ್​ ನಿರ್ದೇಶಕ ಪ್ರಶಾಂತ್​ ನೀಲ್​ ಹಾಗೂ ಹೊಂಬಾಳೆ ಫಿಲಂಸ್​. ಹರೀಶ್​ ರಾಯ್​ ಮಾತಾಡಿರೋದು ಈ ತ್ರಿವಳಿಗಳ ಬಗ್ಗೆನೇ. ಯೆಸ್​.. ಹರೀಶ್​ ರಾಯ್​ ಚಿತ್ರರಂಗಕ್ಕೆ ಬಂದು 26 ವರ್ಷಗಳೇ ಆದ್ರೂ, ಸರಿ ಸುಮಾರು ಕಳೆದ 10-12 ವರ್ಷಗಳಿಂದ ಇಂಡಸ್ಟ್ರಿಯಲ್ಲಿರುವ ಈ ಮೂವರ ಒಳ್ಳೆಯ ಮನಸ್ಸಿಗೆ, ಮಾನವೀಯತೆಗೆ ಫಿದಾ ಆಗಿದ್ದಾರೆ. ತಮ್ಮ ಕಷ್ಟಗಳ ಬಗ್ಗೆ ತಾವು ಹೇಳಿಲ್ಲ ಅಂದ್ರೂನೂ, ಅದನ್ನ ತಿಳಿದುಕೊಂಡಿರುವ ಪ್ರಶಾಂತ್​ ನೀಲ್​ ಹಾಗೂ ಯಶ್​ ಬಗ್ಗೆ ನಟ ಹರೀಶ್​ ರಾಯ್​ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಇವೆಲ್ಲಾ ವಿಚಾರಗಳನ್ನ ಹರೀಶ್​ ರಾಯ್​, ಪ್ರಶಾಂತ್​ ನೀಲ್​ ಹುಟ್ಟುಹಬ್ಬವಾದ ನಿನ್ನೆ ರಿವೀಲ್​ ಮಾಡಿದ್ದಾರೆ.

‘ಪ್ರಶಾಂತ್​ ನೀಲ್​ ಸರ್​, ನಿಮ್ಮ ಬಗ್ಗೆ ಬಹಳಷ್ಟು ಮಾತನಾಡ್ಬೇಕು ಅನ್ನೋದು ನನ್ನ ತುಂಬಾ ದಿನಗಳ ಆಸೆ. ಆದ್ರೆ ನಿಮ್ಮ ಬಗ್ಗೆ ಮಾತನಾಡೋಕೆ ಒಂದು ಗಂಟೆಗೂ ಅಧಿಕ ಸಮಯ ಬೇಕು. ಕೆಜಿಎಫ್​ ಸಿನಿಮಾದ ಡಬ್ಬಿಂಗ್​ ಸಮಯದಲ್ಲಿ ನನಗೆ ಹುಷಾರಿಲ್ಲದೇ ನಾನು ಊರಲ್ಲಿದ್ದಾಗ, ನೀವು ಕಾಲ್​ ಮಾಡಿ ಯಾಕೆ ಏನಾಯ್ತು ಅಂತ ವಿಚಾರಿಸಿದ್ರಿ. ಡಬ್ಬಿಂಗ್​ ಪೋಸ್ಟ್​​  ಪೋನ್​ ಮಾಡ್ತೀನಿ ಪರವಾಗಿಲ್ಲ ಅಂತ ನೀವು ಹೇಳಿದಾಗ, ನಾನು ನೀವು ಏನು ಅನ್ನೊದನ್ನ ತಿಳಿದುಕೊಂಡೆ. ಶೂಟಿಂಗ್​ನಲ್ಲಿ ಅಷ್ಟು ಕೋಪಿಷ್ಠರಾಗಿರುವ ನೀವು, ಸಾಫ್ಟ್​​ ವ್ಯಕ್ತಿತ್ವವುಳ್ಳವರು ಅಂತ ಅರಿತಾಗ ಬಹಳ ಖುಷಿ ಪಟ್ಟೆ.

ಅದೆಲ್ಲಾ ಆದ ಮೇಲೆ ಒಂದು ದಿನ ಹೋಗಿ ಡಬ್ಬಿಂಗ್​ ಮುಗಿಸಿಕೊಟ್ಟೆ. ಇದಾದ ಮೇಲೆ ಇತ್ತೀಚೆಗೆ ನಿರ್ದೇಶಕ ಡಾ.ಸೂರಿ (ಲಕ್ಕಿ ಸಿನಿಮಾದ ನಿರ್ದೇಶಕ) ನನಗೆ ಕರೆ ಮಾಡಿ ಪ್ರಶಾಂತ್​ ನೀಲ್​ ನಿಮಗೆ ಕಾಲ್​ ಮಾಡೋಕೆ ಹೇಳಿದ್ರು ಅಂದ್ರು. ಯಾಕೆ ಅಂತ ಗಾಬರಿಯಾಗಿ ಕೇಳಿದಾಗ, ತಪ್ಪು ತಿಳ್ಕೋಬೇಡಿ ಸರ್​, ನಿಮ್ಮ ಫೈನಾಶಿಯಲ್​ ಕಂಡೀಷನ್​ ಹೇಳಿದೆ. ನಿಮ್ಮ ಅಕೌಂಟ್​ ನಂಬರ್​ ಕಳ್ಸಿ. ದುಡ್ಡು ಹಾಕ್ತೀವಿ ಅಂದ್ರು. ಯಾವ ರೀತಿ ನನಗೆ ಪ್ರಶಾಂತ್​ ನೀಲ್​ ಸರ್​ಗೆ ಧನ್ಯವಾದ ಹೇಳ್ಬೇಕು ಅಂತ ಅರ್ಥ ಆಗ್ಲಿಲ್ಲ. ನೀವೇ ಫೋನ್​ ಮಾಡಿದಾಗಲೂ ನನಗೆ ನೋವಾಗುತ್ತೆ ಅನ್ನೋ ಕಾರಣಕ್ಕೆ ನೀವು ದುಡ್ಡಿನ ವಿಚಯ ನನ್ನ ಹತ್ರ ಮಾತಾಡಿಲ್ಲ. ಕೊರೊನಾ ಟೈಮ್​ನಲ್ಲಿ ಎಲ್ಲರಿಗೂ ಭಯ ಇದ್ದ ಹಾಗೇ ನನಗೂ ಇತ್ತು. ಆದ್ರೆ ಅದೇನೇ ಆದರೂ ನೀವು ಮೂರು ಜನ ನನ್ನ ಜೀವನದಲ್ಲಿ ದೊಡ್ಡ ಶಕ್ತಿಯಾಗಿ ಇರ್ತೀರ ಅನ್ನೋ ನಂಬಿಕೆ, ಧೈರ್ಯ ಬಂದಿದೆ ನನಗೆ. ಅವರೇ ಪ್ರಶಾಂತ್​ ನೀಲ್​, ಯಶ್​ ಹಾಗೂ ನಿರ್ಮಾಪಕ ವಿಜಯ್​ ಕಿರಗಂದೂರು.’

ಹರೀಶ್​ ರಾಯ್​, ಸ್ಯಾಂಡಲ್​ವುಡ್​ ನಟ.

ನಟ ಹರೀಶ್​ ರಾಯ್​ ಈ ಮಾತುಗಳನ್ನ ಹೇಳೋದಕ್ಕೂ ಒಂದು ಕಾರಣ ನೀಡಿದ್ದಾರೆ. ತಾವು ಕೆಜಿಎಫ್​ ಸಿನಿಮಾದ ಪೇಮೆಂಟ್​ ಬಗ್ಗೆ ಕೇಳಿದಾಗ ನಡೆದಂತ ಒಂದು ಘಟನೆಯನ್ನ ವಿಸ್ತಾರವಾಗಿ ವಿವರಿಸಿದ್ದಾರೆ. ಈ ಘಟನೆಯನ್ನ ಹೇಳುತ್ತಾ ಪ್ರಶಾಂತ್​ ನೀಲ್​, ಯಶ್​ ಹಾಗೂ ನಿರ್ಮಾಪಕ ವಿಜಯ್​ ಕಿರಗಂದೂರು ಬಗ್ಗೆ ‘ನೀವು ಕೇವಲ ಒಳ್ಳೆಯ ಸಿನಿಮಾ ಮಾಡುವ ವ್ಯಕ್ತಿಗಳಲ್ಲ, ಒಳ್ಳೆಯ ಮನಸ್ಸಿರುವ ವ್ಯಕ್ತಿಗಳು’ ಅಂದಿದ್ದಾರೆ.

‘ಕೆಜಿಎಫ್​ ಪೇಮೆಂಟ್​ ಕೇಳಿದಾಗ ಅಲ್ಲಿ ವಿಜಯ್​ ಕಿರಗಂದೂರು ಅವರ ಬಳಿ ಕೇಳ್ಬೇಕು ಅಂದ್ರು. ಆಮೇಲೆ ನನಗೆ ಬೋನಸ್​​ ಹಣವಾಗಿ ಹೆಚ್ಚು ಪೇಮೆಂಟ್​ ಹಾಕೋದಕ್ಕೆ ನಿರ್ಮಾಪಕರು ತಿಳಿಸಿದ್ದಾರೆ ಅನ್ನೋದು ಸ್ಪಷ್ಟವಾಯ್ತು. ಹೆಚ್ಚಿನ ಪೇಮೆಂಟ್​ ಕೋಡೋದಕ್ಕೆ ನಾನೇನೂ ಹೀರೋ ಅಲ್ಲ. ಕನ್ನಡ ಚಿತ್ರರಂಗದಲ್ಲಿ 25-26 ವರ್ಷಗಳಿಂದ ಇದ್ದೇನೆ. ಆದ್ರೆ ಈ ರೀತಿ ಯಾವತ್ತೂ ಆಗಿಲ್ಲ. ಅವರು ಹಾಕಿದ ಅಮೌಂಟ್​ ನೋಡಿ ನನಗೆ ಶಾಕ್​ ಆಯ್ತು. ಸರಿಯಾಗಿದ್ಯಾ ಅಂತ ಮತ್ತೆ ಚೆಕ್​ ಮಾಡಿದಾಗ, ನೀವು ಮಾಡಿರೋ ಕೆಲಸಕ್ಕೆ, ನಿಮ್ಮ ಬಗ್ಗೆ ಪ್ರಶಾಂತ್​ ನೀಲ್​ ಹಾಗೂ ಯಶ್​ ಅವರು ಹೇಳಿದ ಮಾತಿಗೆ ನಿರ್ಮಾಪಕರು ಈ ಹಣವನ್ನ ನಿಮಗೆ ಹಾಕೋಕೆ ಹೇಳಿದ್ದಾರೆ ಅಂದ್ರು. ನಿಮ್ಮೆಲ್ಲರಿಗೂ ನಾನು ಯಾವತ್ತೂ ಚಿರಋಣಿಯಾಗಿರ್ತೀನಿ. ನೀವು ಕೇವಲ ಒಳ್ಳೆಯ ಸಿನಿಮಾ ಮಾಡುವ ವ್ಯಕ್ತಿಗಳಲ್ಲ, ಒಳ್ಳೆಯ ಮನಸ್ಸಿರುವ ವ್ಯಕ್ತಿಗಳು. ಯಶ್​ ಅವರ ಜೊತೆ ಇದ್ದವರಿಗೆ ಯಾವತ್ತೂ ಸೋಲಿಲ್ಲ ಅಂತ ನಾನು ಮೊದಲೇ ಹೇಳಿದ್ದೆ ಅನ್ನೋದು ನಟ ಹರೀಶ್​ ರಾಯ್ ಹೆಮ್ಮೆಯ ಮಾತು.

The post ಇವರೇ ನೋಡಿ ನನ್ನ ಜೀವನದ ಬಹು ದೊಡ್ಡ ಶಕ್ತಿಗಳು- ನಟ ಹರೀಶ್​ ರಾಯ್​ appeared first on News First Kannada.

Source: newsfirstlive.com

Source link