ಹಾಸನ: ಅಧಿದೇವತೆ ಹಾಸನಾಂಬೆ ವರ್ಷಕ್ಕೊಮ್ಮೆ ಮಾತ್ರ ಪವಾಡಗಳ ಮೂಲಕ ದರ್ಶನ ನೀಡ್ತಾಳೆ. ಈ ವರ್ಷವೂ ಹಾಸನಾಂಬೆ 9 ದಿನ ದರ್ಶನ ಕೊಟ್ಟಿದ್ಲು. ಇನ್ನೇನು ನಾಳೆ ಮತ್ತೆ ತಾಯಿಯ ಗರ್ಭಗುಡಿಯ ಬಾಗಿಲು ಮುಚ್ಚಲಾಗುತ್ತೆ. ಈ ಬಾರಿ ದರ್ಶನ ಪಡೆಯೋಕೆ ಅಭಿಮಾನಿಗಳು ನಾ ಮುಂದು, ತಾ ಮುಂದು ಅಂತಾ ಬರ್ತಿದ್ದು, ಅಹೋರಾತ್ರಿವರೆಗೂ ದೇವಿಯನ್ನ ನೋಡಿ ಪುನೀತರಾಗುತ್ತಿದ್ದಾರೆ.
ಇಂದು ಅಂದ್ರೆ ನವೆಂಬರ್ 6ಕ್ಕೆ ಜಾತ್ರೆಗೆ ತೆರೆ ಬೀಳಲಿದ್ದು ಮಧ್ಯಾಹ್ನ 12.30ಕ್ಕೆ ಶಾಸ್ತ್ರೋಕ್ತವಾಗಿ ದೇವಿಯ ಗರ್ಭಗುಡಿ ಬಾಗಿಲು ಮುಚ್ಚಲಾಗುತ್ತೆ. ಸಾರ್ವಜನಿಕ ದರ್ಶನಕ್ಕೆ ಕಡೇ ದಿನವಾದ ಇಂದು ಭಕ್ತರ ದಂಡೇ ಹರಿದು ಬಂದಿತ್ತು. ಭಕ್ತರನ್ನು ನಿಯಂತ್ರಿಸೋಕೆ ಪೊಲೀಸರು ಹರಸಾಹಸ ಪಟ್ರು. ಅಲ್ಲದೇ, ಭಕ್ತರ ಜೊತೆಗೆ ಶ್ರವಣಬೆಳಗೊಳ ಶಾಸಕ ಬಾಲಕೃಷ್ಣ ಕೂಡಾ ತಾಯಿಯ ದರ್ಶನ ಪಡೆದಿದ್ದು, ನನಗೆ ಸಂತಸ ತಂದಿದೆ ಅಂದ್ರು.
ಇಂದು ಬೆಳಗಿನ ಜಾವ 5 ಗಂಟೆವರೆಗೆ ಭಕ್ತರ ದರ್ಶನಕ್ಕೆ ಅವಕಾಶ ಕೊಡಲಾಗಿದೆ. ಇನ್ನು ನಿನ್ನೆ ರಾತ್ರಿ 10 ಗಂಟೆಯಿಂದ ಸಿದ್ಧೇಶ್ವರಸ್ವಾಮಿ ಚಂದ್ರಮಂಡಲ ರಥೋತ್ಸವ ನಡೆಯಲಿದೆ. ಇಂದು ಮಧ್ಯಾಹ್ನ ದೇವಿಯ ವಿಶ್ವರೂಪ ದರ್ಶನದ ನಂತರ 12.30ರ ಸುಮಾರಿಗೆ ದೇವಿಯ ಗರ್ಭಗುಡಿ ಬಾಗಿಲು ಶಾಸ್ತ್ರೋಕ್ತವಾಗಿ ಮುಚ್ಚೋ ಮೂಲಕ ಈ ವರ್ಷದ ಜಾತ್ರೆಗೂ ತೆರೆ ಬೀಳುತ್ತೆ. ಗರ್ಭಗುಡಿ ಮುಚ್ಚೋ ಮುನ್ನ ದೀಪ ಹಚ್ಚಿ, ಹೂವಿನ ಅಲಂಕಾರ ಮಾಡಿ, ನೈವೇದ್ಯ ಇಡಲಾಗುತ್ತೆ. ಮುಂದಿನ ವರ್ಷದ ತನಕ ಇವೆಲ್ಲಾ ಹೀಗೆ ಇರಲಿದ್ದು, ಇದು ತಾಯಿಯ ಪವಾಡ ಅನ್ನೋದು ಭಕ್ತರ ನಂಬಿಕೆ.
ಇಷ್ಟು ದಿನ ಭಕ್ತರಿಂದ ತುಂಬಿ ತುಳುಕುತ್ತಿದ್ದ ದೇವಾಲಯ ನಾಳೆಯಿದ ಬಣಗುಡಲಿದೆ. ಹಾಸನಾಂಬೆಯ ಸನ್ನಿಧಿಯಲ್ಲಿ ನಿರಂತರ ಉರಿಯೋ ದೀಪದಲ್ಲಿ ಬೆಳಗೋ ತಾಯಿಯನ್ನ ಕಣ್ತುಂಬಿಕೊಳ್ಬೇಕು ಅಂದ್ರೆ ಮುಂದಿನ ವರ್ಷದವರೆಗೂ ಕಾಯ್ಲೇಬೇಕು.