ನವದೆಹಲಿ: ಮತ್ತೆ ವಿಶ್ವಕ್ಕೆ ಮ್ಯೂಟೆಂಟ್ ಕೊರೊನಾ ಆತಂಕ ಶುರುವಾಗಿದ್ದು, ಇದೀಗ ಇಸ್ರೇಲ್ನಲ್ಲೂ ಹೊಸ ರೂಪಾಂತರಿ ಕೊರೊನಾ ವೈರಸ್ ಪತ್ತೆಯಾಗಿದೆ ಅಂತಾ ವರದಿಯಾಗಿದೆ. ಆಫ್ರಿಕಾದ ಮಾಲ್ವಿಯಿಂದ ಬಂದಿದ್ದ ವ್ಯಕ್ತಿಯೊಬ್ಬರಲ್ಲಿ ರೂಪಾಂತರಿ ವೈರಸ್ ಪತ್ತೆಯಾಗಿದೆ ಎಂದು ಇಸ್ರೇಲ್ ಆರೋಗ್ಯ ಸಚಿವಾಲಯ ತಿಳಿಸಿದೆ.
ಈ ಹಿನ್ನೆಲೆಯಲ್ಲಿ ಅವರೊಂದಿಗೆ ಬಂದ ಎಲ್ಲಾ ಶಂಕಿತ ಪ್ರಯಾಣಿಕರನ್ನ ಪ್ರತ್ಯೇಕವಾಗಿ ಇಡಲಾಗಿದೆ. ಜೊತೆಗೆ ಸೋಂಕು ತಗುಲಿರುವ ವ್ಯಕ್ತಿ ಹಾಗೂ ಆತನ ಜೊತೆಯಿದ್ದ ಇಬ್ಬರು ಶಂಕಿತರಿಗೂ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅಲ್ಲಿನ ಆರೋಗ್ಯ ಇಲಾಖೆ ತಿಳಿಸಿದೆ.
ದಕ್ಷಿಣ ಆಫ್ರಿಕಾದ ವಿಜ್ಞಾನಿಗಳು ಹೊಸ ಕೋವಿಡ್ ರೂಪಾಂತರವನ್ನು ಪತ್ತೆ ಮಾಡಿದ್ದಾರೆ. ಇದು ಈಗಷ್ಟೇ ಕೋವಿಡ್ ಹೊಡೆತದಿಂದ ಚೇತರಿಸಿಕೊಳ್ತಿರೋ ವಿಶ್ವಕ್ಕೆ ಮತ್ತೊಂದು ಶಾಕ್ ಎದುರಾದಂತಾಗಿದೆ. ಈ ರೂಪಾಂತರಿ ಬಗ್ಗೆ ಇಡೀ ವಿಶ್ವವೇ ಭಾರೀ ಎಚ್ಚರಿಕಾ ಕ್ರಮಗಳನ್ನು ಅನುಸರಿಸೋಕೆ ಮುಂದಾಗಿವೆ. ಅದರಂತೆ ಭಾರತವೂ ಕೂಡ ಬೋಟ್ಸ್ವಾನಾ, ದಕ್ಷಿಣ ಆಫ್ರಿಕಾ ಮತ್ತು ಹಾಂಗ್ ಕಾಂಗ್ನಿಂದ ಬರುವ ಅಂತಾರಾಷ್ಟ್ರೀಯ ಪ್ರಯಾಣಿಕರ ಬಗ್ಗೆ ಹೆಚ್ಚಿನ ಜಾಗರೂಕತೆ ವಹಿಸಲು ಎಚ್ಚರಿಕೆ ನೀಡಿದೆ. ಈ ಬಗ್ಗೆ ಕೇಂದ್ರ ಸರ್ಕಾರ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಎಚ್ಚರಿಕೆ ಪತ್ರ ನೀಡಿದೆ.
ಬೋಟ್ಸ್ವಾನಾ, ದಕ್ಷಿಣ ಆಫ್ರಿಕಾ, ಹಾಂಗ್ ಕಾಂಗ್ನಲ್ಲಿ ರೂಪಾಂತರಿ ಪತ್ತೆಯಾಗಿದೆ. ಕೊರೊನಾ ಹೊಸ ರೂಪಾಂತರ ತಳಿ B.1.1529 ದೃಢಪಟ್ಟಿದೆ. ಈ ಹಿನ್ನೆಲೆ ಆ ದೇಶಗಳಿಂದ ಭಾರತಕ್ಕೆ ಆಗಮಿಸುವ ಪ್ರಯಾಣಿಕರ ಮೇಲೆ ಕಣ್ಣು ಇಡಲು ಸೂಚಿಸಲಾಗಿದೆ. ಅಲ್ಲದೆ ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಕಠಿಣ ತಪಾಸಣೆ ಕಡ್ಡಾಯಗೊಳಿಸಲಾಗಿದೆ. ಪ್ರಯಾಣಿಕರ ಸಂಪರ್ಕಗಳನ್ನು ಸಹ ನಿಕಟವಾಗಿ ಟ್ರ್ಯಾಕ್ ಮಾಡಲು ಸೂಚಿಸಲಾಗಿದೆ. ಈ ಬಗ್ಗೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಎಚ್ಚರಿಕೆ ನೀಡಲಾಗಿದ್ದು, ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಪತ್ರ ರವಾನೆ ಮಾಡಿದ್ದಾರೆ.
ಇದನ್ನೂ ಓದಿ: ಮತ್ತೊಂದು ರೂಪದಲ್ಲಿ ಎಂಟ್ರಿ ಕೊಟ್ಟ ಹೆಮ್ಮಾರಿ ಕೊರೊನಾ
The post ಇಸ್ರೇಲ್ನಲ್ಲೂ ಭಯಾನಕ ರೂಪಾಂತರಿ ವೈರಸ್ ಪತ್ತೆ; ಭಾರತದಲ್ಲಿ ಹೈ-ಅಲರ್ಟ್ appeared first on News First Kannada.