ಇಸ್ರೇಲ್ ಅಂದಾಕ್ಷಣ ಇವತ್ತು ಕಂಡು ಬರುತ್ತಿರೋ ರಣಭೀಕರ ಯುದ್ಧದ, ವಿರೋಧಿಗಳ ಚೆಂಡಾಡುವ ಭಯಂಕರ ಶೌರ್ಯದ, ಪ್ಯಾಲೆಸ್ತೀನಿಯರ ಅದ್ರಲ್ಲೂ ಹಮಾಸ್ ಉಗ್ರರ ಮಟ್ಟ ಹಾಕುತ್ತಿರೋ ದೃಶ್ಯಗಳ ನೆನಪಾಗುತ್ತೆ. ಆದ್ರೆ ಈ ದೃಶ್ಯಗಳ ಮರೆಯಲ್ಲಿ ಮರೆತು ಹೋದ ಮಹಾ ಶೌರ್ಯದ ಗಾಥೆಯೊಂದಿದೆ. ಕನ್ನಡಿಗರು ಅರಿಯಲೇ ಬೇಕಾದ ಅತ್ಯಧ್ಬುತ ಸಾಹಸದ ವಾಸ್ತವವೊಂದು ಅಡಕವಾಗಿದೆ. ಇಸ್ರೇಲ್​ ನೆಲದಲ್ಲಿ ವೈರಿಗಳ ಚೆಂಡಾಡಿದ ಕನ್ನಡಿಗರ ಪರಾಕ್ರಮದ ವೀರಗಾಥೆಯ ನೆನಪಿದೆ. ಎಲ್ಲಿಯ ಇಸ್ರೇಲ್? ಎಲ್ಲಿಯ ಕರ್ನಾಟಕ? ಏನೀ ಸಂಬಂಧ?

ಹೌದು.. ಎದುರಾಳಿ ಪಲ್ಲವರೇ ಆಗಿರಲಿ.. ಇಲ್ಲ ಬಹಮನಿ ಸುಲ್ತಾನರೇ ಆಗಿರಲಿ.. ಅಷ್ಟೇ ಏಕೆ.. ಅತ್ಯಾಧುನಿಕ ಶಸ್ತ್ರಾಸ್ತ್ರ ಹೊಂದಿರೋ ಜರ್ಮನ್ನರು, ಆಟೋಮನ್ ಎಂಪೈರ್​ನ ಟರ್ಕಿಶ್​​​ ಸೈನಿಕರೇ ಆಗಲಿ ಇಟ್ಟ ಹೆಜ್ಜೆಯ ಹಿಂದಿಟ್ಟವರಲ್ಲ ಕನ್ನಡಿಗರು. ಕನ್ನಡಿಗರ ನಿರ್ಧಾರವೆಂದ್ರೆ ಬಿಲ್ಲಿಗೆ ಹೂಡಿದ ರಾಮನ ಬಾಣದಂತೆ. ಶ್ರೀಕೃಷ್ಣನ ಬೆರಳಲಾಡುವ ಸುದರ್ಶನ ಚಕ್ರದಂತೆ. ಸಾಮಾನ್ಯ ಕುದುರೆಯನ್ನೂ ವಾಯು ವೇಗದಲ್ಲಿ ಓಡಿಸೋದೂ ಗೊತ್ತು, ಬಲಾತೀಬಲ ವೈರಿಗಳ ರುಂಡ ಚೆಂಡಾಡೋದು ಕನ್ನಡಿಗರಿಗೆ ಗೊತ್ತು. ಹೀಗಂತ ನಮಗೆ ನಾವೇ ಹೇಳಿಕೊಳ್ಳುತ್ತಿಲ್ಲ. ಇದನ್ನ ಸ್ವತಃ ಇಸ್ರೇಲ್ ದೇಶವೇ ಹೇಳಿಕೊಳ್ಳುತ್ತೆ. ಇಂದಿಗೂ ಮೈಸೂರು ವೀರ ಸೇನಾನಿಗಳ ಶೌರ್ಯಕ್ಕೆ ತಲೆ ಬಾಗುತ್ತೆ. ಅಷ್ಟೇ ಏಕೆ.. ಇಂದು ಇಸ್ರೇಲ್ ಇಷ್ಟು ಬಲಿಷ್ಠ ದೇಶವಾಗಿದೆ ಅಂದ್ರೆ ಅದರ ಹಿಂದೆ ಭಾರತೀಯ ಯೋಧರ ಅದ್ರಲ್ಲೂ ಕನ್ನಡಿಗರ ತ್ಯಾಗ ಬಲಿದಾನವೂ ಇದೆ. ಪ್ರಜ್ವಲಿಸುವ ಪರಂಜ್ಯೋತಿಯಂಥ ಶೌರ್ಯವೂ ಇದೆ.

4 ಸಾವಿರ ವರ್ಷಗಳ ಇತಿಹಾಸ, 2 ಸಾವಿರ ವರ್ಷಗಳ ಸಂಘರ್ಷ
ಕ್ಷಣ ಕ್ಷಣಕ್ಕೂ ಹೆಚ್ಚುತ್ತಿರುವ ರಕ್ತಪಾತ
ಇಸ್ರೇಲ್-ಪ್ಯಾಲೆಸ್ತೀನ್ ಇದು ಮುಗಿಯದ ಕದನ

ಇಸ್ರೇಲ್-ಪ್ಯಾಲೇಸ್ತೇನ್ ಅನ್ನೋ ಎರಡು ಪುಟ್ಟ ದೇಶಗಳ ನಡುವಿನ ಕದನ ಈಗ ಮತ್ತೊಮ್ಮೆ ಮಗ್ಗಲು ಬದಲಿಸಿದೆ. ಯಹೂದಿ, ಮುಸ್ಲಿಂ, ಕ್ರಿಶ್ಚಿಯನ್​​ ಮೂರೂ ಧರ್ಮದ ಪವಿತ್ರ ಸ್ಥಳಗಳನ್ನು ಹೊಂದಿರೋ ಜೇರುಸೆಲಂನ ಮಸೀದಿಯಲ್ಲಿ ಶುರುವಾದ ಕದನ ಇಂದು ಇಸ್ರೇಲ್​ ಮೇಲೆ ಹಮಾಸ್​ ಉಗ್ರರು ಸಾವಿರಾರು ರಾಕೆಟ್​ಗಳ ಸುರಿಮಳೆ ಸುರಿಸುವ ಹಂತವನ್ನೂ ದಾಟಲು ಕಾರಣವಾಗಿದೆ. ಪ್ಯಾಲೆಸ್ತೇನ್ ಅನ್ನೋ ದೇಶ ಇಸ್ರೇಲ್​ನ ಎರಡು ಭಾಗದಲ್ಲಿದೆ. ಒಂದು ಭಾಗದ ಸುತ್ತ ಇಸ್ರೇಲ್​ ಇದ್ದು ಕೊಂಚ ದೊಡ್ಡದಾಗಿರೋ ಈ ಭಾಗದಲ್ಲಿ ನಾಗರಿಕ ಸರ್ಕಾರವಿದೆ. ಇಲ್ಲಿ ಜನರೂ ಇಸ್ರೇಲ್ ಅಂದ್ರೆ ಕೆಂಡಕಾರುತ್ತಾರೆ. ಆದ್ರೂ.. ಶಸ್ತ್ರಾಸ್ತ್ರಗಳಿಂದ ಅವರು ದಾಳಿ ನಡೆಸಲ್ಲ. ಬದಲಿಗೆ ಕಲ್ಲು, ಚಾಕು ಮುಂತಾದವುಗಳನ್ನು ಕೆಲವೊಮ್ಮೆ ಬಳಸುತ್ತಾರೆ. ಅದೇ ಇಸ್ರೇಲ್​ನ ಇನ್ನೊಂದು ಭಾಗದಲ್ಲಿ ಪ್ಯಾಲಿಸ್ತೇನ್​​ನ ಗಾಜಾ ಪ್ರದೇಶ ಇದೆ.. ಅಲ್ಲಿ ಹಮಾಸ್ ಅನ್ನೋ ಉಗ್ರ ಸಂಘಟನೆ ಪಾರುಪತ್ಯವಿದ್ದು ಅವರು ಇಸ್ರೇಲ್​ನ ಗುರಿಯಾಗಿಸಿಕೊಂಡು ರಾಕೆಟ್​ನ ಸುರಿಮಳೆಯನ್ನೇ ಸುರಿಸುತ್ತಿರ್ತಾರೆ. ಈ ಬಾರಿ ಕೂಡ ತಮ್ಮ ಚಾಳಿಯನ್ನ ಅವರ ಮುಂದುವರೆಸಿದ್ದಾರೆ.

ಹಮಾಸ್ ಉಗ್ರರು ಎಷ್ಟೇ ರಾಕೆಟ್ ದಾಳಿ ನಡೆಸಿದ್ರೂ ತಂತ್ರಜ್ಞಾನದಲ್ಲಿ ಅತ್ಯಂತ ಉನ್ನತ ಮಟ್ಟದ ಸಾಧನೆ ಮಾಡಿರೋ ಇಸ್ರೇಲ್​​ ತನ್ನ ಐರನ್​ ಡೋಮ್ ಅನ್ನೋ ಕಾನ್ಸೆಪ್ಟ್​ ಮೂಲಕ ತನ್ನ ದೇಶವನ್ನ ಮತ್ತು ದೇಶವಾಸಿಗಳ ರಕ್ಷಣೆ ಮಾಡುತ್ತೆ. ಇನ್ನೊಂದೆಡೆ ಇಸ್ರೇಲ್​ ಹಮಾಸ್ ಉಗ್ರಸಂಘಟನೆ​ ಸಾರ್ವಜನಕ ವಲಯದಲ್ಲಿ ಹೊಂದಿರುವ ಅಡುಗುದಾಣಗಳನ್ನ ತನ್ನ ಪ್ರಿಸಿಷನ್ ಗೈಡೆಡ್​ ಮಿಸೈಲ್​ಗಳ ಮೂಲಕ ಉಡಾಯಿಸುಬಿಡುತ್ತೆ. ಹಮಾಸ್ ಮೂರು ಲಕ್ಷ ರೂಪಾಯಿ ಬೆಲೆ ಬಾಳೋ ರಾಕೆಟ್ ಉಡಾಯಿಸಿದ್ರೆ. ಇಸ್ರೇಲ್ 30 ಲಕ್ಷದಿಂದ 3 ಕೋಟಿ ಮೌಲ್ಯದ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಬಳಸಿ ಅವರ ರುಂಡ ಚೆಂಡಾಡಿಬಿಡುತ್ತೆ.

ಹಾಗೆ ನೋಡಿದ್ರೆ ಇದು ಇಂದು-ನಿನ್ನಿನ ಕಲಹವಲ್ಲ. ನಾಲ್ಕು ಸಾವಿರ ವರ್ಷಗಳ ಇತಿಹಾಸ ಹೊಂದಿರೋ ಜೇರುಸೆಲಂಗಾಗಿ ಕಳೆದ 2 ಸಾವಿರ ವರ್ಷಗಳಿಂದ ಯಹೂದಿ-ಕ್ರಿಶ್ಚಿಯನ್ಸ್​ ಮತ್ತು ನಂತರದ ವರ್ಷಗಳಲ್ಲಿ ಯಹೂದಿ-ಮುಸ್ಲಿಮರ ನಡುವೆ ಕಲಹೆ ನಡೆಯುತ್ತಲೇ ಇದೆ. ಆದ್ರೂ ಇಂದು ಇಸ್ರೇಲಿಗರು ಇಷ್ಟು ಪವರ್​ ಫುಲ್ ಆಗೋಕೆ, ಅವರ ಅಸ್ತಿತ್ವ ಇನ್ನೂ ಉಳಿಯೋಕೆ  ಭಾರತೀಯರ ಕೊಡುಗೆ ಅಪಾರ. ಅದ್ರಲ್ಲೂ ಕನ್ನಡಿಗರು ಮೆರೆದ ಅಪ್ರತಿಮ ಶೌರ್ಯ-ಸಾಹಸವೂ ಕಾರಣ.

ಇಸ್ರೇಲ್ ಯಹೂದಿಗಳ ರಾಷ್ಟ್ರ.. ಹಾಗೆ ನೋಡಿದ್ರೆ 1948ಕ್ಕಿಂತ ಪೂರ್ವದಲ್ಲಿ ಇಸ್ರೇಲ್ ಅನ್ನೋ ದೇಶವೇ ಇರಲಿಲ್ಲ. ಯಹೂದಿಗಳು ವಿಶ್ವದ ಮೂಲೆ ಮೂಲೆಯಲ್ಲಿ ಚದುರಿ ಹೊಗಿದ್ದರು. ಸಾಕಷ್ಟು ಯಹೂದಿಗಳು ಭಾರತದಲ್ಲೂ ತಮ್ಮ ಬದುಕು ಕಂಡು ಕೊಂಡಿದ್ದರು. ಹೀಗಿದ್ದಾಗ.. ಆ ರಾಷ್ಟ್ರಕ್ಕೆ ಭಾರತೀಯರ ಕೊಡುಗೆ ಏನು? ಅದ್ರಲ್ಲೂ ಕನ್ನಡಿಗರು ಹೇಗೆ ಸಹಾಯ ಮಾಡಿದ್ರು? ಕನ್ನಡಿಗರು ಇಸ್ರೇಲ್​ಗೆ ಯಾವಾಗ ಹೋಗಿ ಯುದ್ಧ ಮಾಡಿದ್ರು? ಅಂತಾ ನಮಗೆ ನಾವೇ ಪ್ರಶ್ನೆ ಕೇಳಿಕೊಳ್ತಿದ್ದೀವಿ ಅಂದ್ರೆ ಖಂಡಿತವಾಗಿಯೂ ಅಪ್ರತಿಮ ವೀರರಾದ ನಾವು ಕನ್ನಡಿಗರು, ನಮ್ಮ ಇತಿಹಾಸವನ್ನೇ ಅರಿಯದವರಾ? ಅನ್ನೋ ಪ್ರಶ್ನೆ ಮೂಡುತ್ತೆ.

ಹೌದು.. ಇಂದು ಬಹುತೇಕ ಕನ್ನಡಿಗರಿಗೆ ನಮ್ಮ ಇತಿಹಾಸವೇ ನಮಗೆ ಗೊತ್ತಿಲ್ಲ.. ಇಸ್ರೇಲ್​ಗೆ ಕನ್ನಡಿಗರು ಹೇಗೆ ಸಹಾಯ ಮಾಡಿದ್ರು? ಅಂತಾ ನೋಡೋದಕ್ಕಿಂತ ಮುನ್ನ ಇಸ್ರೇಲ್​ ಇತಿಹಾಸವನ್ನ ಪುಟ್ಟದಾಗಿ ಅರಿಯಬೇಕು.

ಸರಿ ಸುಮಾರಾಗಿ 4 ಸಾವಿರ ವರ್ಷಗಳ ಯಹೂದಿಗಳ ಇತಿಹಾಸ ಮುಳ್ಳಿನ ಹಾಸಿಗೆ. ಕೆಂಡದ ಮೇಲಿನ ನಡಿಗೆ. ನಿರಂತರ ಹೋರಾಟದ ಸಾಹಸಗಾಥೆ. ಬೆನ್ನು ಬಿಡದ ಸಾವು-ನೋವು-ಹತ್ಯಾಕಾಂಡದ ದುರಂತ ಕತೆ. ಇತಿಹಾಸದುದ್ದಕ್ಕೂ ನಿರಂತರವಾಗಿ ಧಾರ್ಮಿಕ, ಐತಿಹಾಸಿಕ, ಸಾಮಾಜಿಕ, ಆರ್ಥಿಕ ಕಾರಣದಿಂದಾಗಿ ಯಹೂದಿಗಳ ಮೇಲೆ ದಬ್ಬಾಳಿಕೆ ನಡೆಯುತ್ತಲೇ ಬಂದಿದೆ. ಅದ್ರಲ್ಲೂ ಅತ್ಯಂತ ದುರಂತದ ಕಥೆ ಎಂದರೆ ಹಿಟ್ಲರ್​ನ ಆಳ್ವಿಕೆ ವೇಳೆ ಸುಮಾರು 60 ಲಕ್ಷ ಯಹೂದಿಗಳನ್ನು ವಿಷಾನಿಲ ಕೋಣೆಗೆ ನೂಕಿ ಹತ್ಯೆ ಕೂಡ ಮಾಡಲಾಗಿತ್ತು. ಅವರ ನೆಲೆಯಿಂದಲೇ ಅವರನ್ನ ಓಡಿಸಲಾಗಿತ್ತು. ಮಾತ್ರವಲ್ಲ ವಿಶ್ವದಲ್ಲಿ ಅವರು ಯಾವುದೇ ಮೂಲೆಯಲ್ಲಿದ್ದರೂ ಅವರ ಮೇಲೆ ದಬ್ಬಾಳಿಕೆ ನಡೆಯುತ್ತಲೇ ಇತ್ತು. ಇಂದಿಗೂ ಕೆಲ ದೇಶಗಳಲ್ಲಿ ನಡೆಯುತ್ತಲೇ ಇದೆ. ಹೀಗಿದ್ದಾಗಿಯೂ ಯಹೂದಿಗಳ ಪಾಲಿಗೆ ಸ್ವರ್ಗವಾಗಿದ್ದು, ಸಹಬಾಳ್ವೆಗೆ ಅವಕಾಶ ನೀಡಿದ್ದ ಏಕೈಕ ದೇಶ ಅಂದ್ರೆ ಅದು ಭಾರತ.

ಸುಮಾರು 2 ಸಾವಿರ ವರ್ಷಗಳಿಂದಲೂ ಭಾರತಕ್ಕೆ ವಲಸೆ ಬಂದ ಯಹೂದಿಗಳಿಗೆ ಇಲ್ಲಿನ ವಿವಿಧ ಪ್ರಾಂತ್ಯಗಳ ರಾಜರು ಗೌರವ ನೀಡಿದ್ದಲ್ಲದೇ ಬದುಕುವ ವಾತಾವರಣವನ್ನೂ ನಿರ್ಮಿಸಿಕೊಟ್ಟಿದ್ದರು. ಅದರ ಕೃತಜ್ಞತಾಭಾವ ಇಂದಿಗೂ ಇಸ್ರೇಲಿಗರ ನರ-ನಾಡಿಗಳನ್ನು ಆವರಿಸಿಕೊಂಡಿದೆ. ಇಷ್ಟು ಮಾತ್ರವಲ್ಲ ಇಂದಿನ ಇಸ್ರೇಲ್​​, ಅಂದಿನ ಅಟೊಮನ್ ಎಂಪೈರ್​ ಮೇಲೆ ಕೂಡ ದಾಳಿ ಮಾಡಿದ್ದರು ಭಾರತೀಯ ಸೈನಿಕರು. ಕನ್ನಡಿಗರ ಹೆಮ್ಮೆಯ ಮೈಸೂರು ಮತ್ತು ಜೋಧಪುರ ಹಾಗೂ ಹೈದರಾಬಾದ್​ನ ರಾಜರ ಸೈನಿಕರು ಇಸ್ರೇಲ್​ ಎಂದೂ ಮರೆಯದ ಕೊಡುಗೆ ನೀಡಿದ್ರು. ಅದ್ರಲ್ಲೂ ಇಂದಿನ ಇಸ್ರೇಲ್​​ನ 3 ನೇ ಬೃಹತ್ ನಗರವನ್ನ ಉಳಿಸಿಕೊಟ್ಟಿದ್ದು ಯಾರು ಗೊತ್ತಾ? ಅವರೇ ಕನ್ನಡಿಗರು..!

ಕನ್ನಡಿಗರೇ ಇದನ್ನು ನೀವು ಕೇಳಲೇಬೇಕು. ಕನ್ನಡಿಗರೇ ವೀರ ಕನ್ನಡಿಗರ ಸಾಹಸ ಗಾಥೆಯನ್ನು ನೀವು ಅರಿಯಲೇ ಬೇಕು. ಇತಿಹಾಸ ಅರಿಯದವ ಇತಿಹಾಸ ಸೃಷ್ಟಿಸೋಕೆ ಸಾಧ್ಯವಿಲ್ಲ ಅಂತಾರೆ. ಆದ್ರೆ ಇತಿಹಾಸದಲ್ಲೇ ಸಾಕಷ್ಟು ಇತಿಹಾಸ ಸೃಷ್ಟಿಸಿದ್ದ ಕನ್ನಡಿಗರ ಬಗ್ಗೆ ಇಂದಿನ ಕನ್ನಡಿಗರಾದ ನಾವು ಅರಿಯದಿದ್ರೆ ಹೇಗೆ? ಇಂದಿಗೂ ಇಸ್ರೇಲ್​ನ ಭೂಮಿಯಲ್ಲಿ ಭಾರತೀಯ ಸೈನಿಕರಿಗೆ, ಅದ್ರಲ್ಲೂ ಮೈಸೂರಿನ ಸೈನಿಕರಿಗೆ ಅಲ್ಲಿನ ಪ್ರಧಾನಿಯೂ ತಲೆ ಬಾಗಿ ಯಾಕೆ ನಮಸ್ಕರಿಸ್ತಾರೆ? ಅನ್ನೋದು ತಿಳಿದರೆ ರೋಮಾಂಚನವಾಗದೇ ಇರದು.

ಇಂದಿನ ಇಸ್ರೇಲ್ ಹಿಂದಿದೆ ಕನ್ನಡಿಗರ ರಕ್ತ ತರ್ಪಣ
ಊಹಿಸಲೂ ಆಗದ ಭಾರತೀಯರ ಪರಾಕ್ರಮ
ಇತಿಹಾಸವೇ ಹೌಹಾರುವಂಥ ಸಾಧನೆ ಮಾಡಿತ್ತು ಅಶ್ವಪಡೆ

ಇದು ನಿಜ.. ಇತಿಹಾಸವೇ ಸಾರಿ ಸಾರಿ ಹೇಳೋ ಸಾಹಸ ಗಾಥೆ ಇದು. ಇಂದಿಗೂ ಇಸ್ರೇಲ್​​ನ ಪ್ರತಿಯೊಬ್ಬ ಮಕ್ಕಳಗೂ ಶಾಲೆಯಲ್ಲಿ ಓದುವ ಮೈಸೂರು ಅಶ್ವ ಪಡೆಯ ಅಶ್ವಮೇಧ ಯಾಗವಿದು. ಹೌದು. ಇದು ಇತಿಹಾಸದ ಧೂಳಿನಲ್ಲಿ ಬಚ್ಚಿಡಲಾದ ನಿಗಿ ನಿಗಿ ಕೆಂಡ. ಬ್ರಿಟಿಷರ ಹೇಡಿತನ ಮುಚ್ಚಿಡಲು ಮಾಡಿದ ಹುನ್ನಾರದಲ್ಲಿ ಅವಿತು ಹೋಗಿರುವ ಅಪ್ರತಿಮ ವಜ್ರದ ಹೊಳಪಿದು. ಕಣ್ಣಿಗೆ ಕಪ್ಪು ಬಟ್ಟೆ ಕಟ್ಟಿ ಬಚ್ಚಿಡಲು ಯತ್ನಿಸಿದ ಸೂರ್ಯನ ಬೆಳಕಿದು. ಅದು ಒಂದನೇ ವಿಶ್ವ ಮಹಾಯುದ್ಧ ನಡೆಯುತ್ತಿದ್ದ ಸಂದರ್ಭ. ಬಹುತೇಕ ಮಧ್ಯಪ್ರಾಚ್ಯವನ್ನು ಟರ್ಕಿಯ ಅಟೋಮನ್ ಎಂಪೈರ್ ಆಳುತ್ತಿದ್ದ ಸಮಯ. ಇಂದಿನ ಇಸ್ರೇಲ್​ನ ಮೂರನೇ ಮಹಾನಗರವಾಗಿರೋ ಹೈಫಾ ಅನ್ನು ಜರ್ಮನಿಯರಿಗೆ ಅಟೋಮನ್ ಎಂಪೈರ್ ಒಪ್ಪಿಸಲು ಯತ್ನಿಸುತ್ತಿದ್ದ ಸಂದರ್ಭ. ಬರೋಬ್ಬರಿ 400 ವರ್ಷಗಳ ಅಟೋಮನ್ ಆಳ್ವಿಕೆ ಹಿನ್ನೆಲೆಯಲ್ಲಿ ಹೈಫಾ ನಗರ ಟರ್ಕಿಯನ್ನರಿಗೆ ಭದ್ರಕೋಟೆ ಆಗಿತ್ತು. ಕೇವಲ ಇತಿಹಾಸದ ಕಾರಣದಿಂದ ಮಾತ್ರವಲ್ಲ ಅಂದಿನ ಸಮಯಕ್ಕೆ ಹೋಲಿಸಿದಾಗ ಅವರು ಹೈಫಾ ನಗರವನ್ನ ಅತ್ಯಾಧುನಿಕ ಶತ್ರಾಸ್ತ್ರ, ಮಷೀನ್ ಗನ್ಸ್​, ದೊಡ್ಡ ಆರ್ಟಿಲ್ಲರಿ ಗನ್​ಗಳನ್ನು ಕೂಡ ಹೊಂದಿ ಅಭೇದ್ಯ ಕೋಟೆಯನ್ನ ಮಾಡಿಬಿಟ್ಟಿದ್ದರು. ಅವರಿಗೆ ಸರಿಯಾಗಿ ಸಾಥ್ ನೀಡಿದ್ದ ಜರ್ಮನ್​ ಸೈನಿಕರು ಕೂಡ ಸಾವಿರಕ್ಕೂ ಅಧಿಕ ಸೈನಿಕರನ್ನು ಅಲ್ಲಿ ನಿಯೋಜಿಸಿತ್ತು. ಅಷ್ಟೇ ಅಲ್ಲ.. ಅವರ ಬಳಿಯೂ ಬ್ರಿಟಿಷ್​ ಸೈನಿಕರೇ ಬೆಚ್ಚಿ ಬೀಳಿಸುವಂಥ ಮದ್ದು ಗುಂಡುಗಳು, ಶಸ್ತ್ರಾಸ್ತ್ರಗಳು ಕೂಡ ಇದ್ದವು. ಅಂಥ ಭದ್ರಕೋಟೆಯೇ ಕನ್ನಡಿಗರ ಕೆಂಗಣ್ಣಿಗೆ ಸಿಲುಕಿ ಬೂದಿಯಾಗಬಲ್ಲದು ಅಂತಾ ಯಾರೂ ಊಹಿಸಿರಲಿಲ್ಲ.

ನಮ್ಮ ಶಾಲಾ ಕಾಲೇಜುಗಳಲ್ಲಿ ಕಲಿಯುವ ಇತಿಹಾಸ ಹೆಚ್ಚಾಗಿ ಸೋಲಿನ ಸರಮಾಲೆಯ ನೆನಪು. ನಮ್ಮಲ್ಲಿ ನಮಗೇ ಕೀಳರಿಮೆ ಉಂಟುಮಾಡುವಂಥದ್ದು ಅನ್ನೋ ಆರೋಪ ಕೇಳಿ ಬರ್ತಿರುತ್ತೆ. ಬಹುಶಃ ಇದು ಇಂಥ ವಿಷಯಗಳ ಬಗ್ಗೆ ಅಧ್ಯಯನ ಮಾಡಿದಾಗ ಸತ್ಯ ಅನಿಸುತ್ತೆ. ಯಾಕಂದ್ರೆ ಯಾವುದೇ ದೇಶ ಅಥವಾ ನಾಡಾದ್ರೂ ಇಸ್ರೇಲ್​ನಲ್ಲಿ ಭಾರತೀಯರು, ಕನ್ನಡಿಗರು ಮೆರೆದ ಶೌರ್ಯವನ್ನ ಸಾರಿ ಸಾರಿ ಹೇಳುತ್ತವೆ. ಆದ್ರೆ ನಮ್ಮಲ್ಲಿ ಮಾತ್ರ ಐ ಆ್ಯಮ್ ಸಾರಿ ಅನ್ನೋ ಹಾಗೆ ಆಗಿರೋದು ಸುಳ್ಳಲ್ಲ.

ಎಲ್ಲಿಯ ಹೈಫಾ ನಗರ? ಎಲ್ಲಿಯ ಕನ್ನಡಿಗರ ಸೇನೆ?
ನಿಜಕ್ಕೂ ಅಲ್ಲಿಗೆ ಕನ್ನಡಿಗರು ಯಾಕೆ ಹೋಗಿದ್ರು?

ಅದಿರಲಿ. ಇಂಥ ವೇಳೆ ಸಹಜವಾಗಿ ಎಲ್ಲಿಯ ಆಟೋಮನ್ ಎಂಪೈರ್​ನಲ್ಲಿರುವ ಹೈಫಾ ನಗರ? ಎಲ್ಲಿಯ ಕನ್ನಡಿಗರು? ಅಲ್ಲಿಗೆ ಯಾಕೆ ಮತ್ತೆ ಹೇಗೆ ಕನ್ನಡಿಗರು ಹೋಗಿದ್ರು ಅನ್ನೋ ಪ್ರಶ್ನೆ ಸಹಜವಾಗಿ ಮೂಡುವಂಥದ್ದು. ಆ ಪ್ರಶ್ನೆಗೆ ಉತ್ತರ ಇಲ್ಲಿದೆ..

ಹೈಫಾ ಮತ್ತು ಎಕರ್ ಎಂಬ ಎರಡು ನಗರಗಳು ಬ್ರಿಟಿಷ್​​ ಸೂರ್ಯಮುಳುಗದ ಸಾಮ್ರಾಜ್ಯವಾಗಿದ್ದಗಲೂ ಅತ್ಯಂತ ಮಹತ್ವದ ನಗರಗಳಾಗಿದ್ದವು. ಅದ್ರಲ್ಲೂ ಒಂದೆಡೆ ಕಡಲು, ಇನ್ನೊಂದೆಡೆ ಮೌಂಟ್ ಕಾರ್ಮೆಲ್​ನಂಥ ಪರ್ವತ ಮತ್ತು ಕಿಶನ್ ಹೆಸರಿನ ನದಿಯಿಂದ ಆವರಿಸಿದ ಅತ್ಯಂತ ಮಹತ್ವದ ನಗರ. ಆಯಟ್ಟಿನ ಪ್ರದೇಶದಲ್ಲಿದ್ದ ಈ ನಗರವನ್ನು ಅಟೋಮನ್ ಎಂಪೈರ್ ಜರ್ಮನಿಗೆ ನೀಡುವ ಉದ್ದೇಶ ಹೊಂದಿತ್ತು. ಆದ್ರೆ ಬ್ರಿಟಿಷ್ ಹಾಗೂ ಅಮೆರಿಕಾ ಮಿತ್ರ ಪಡೆಗಳಿಗೂ ಅದು ಅತ್ಯಂತ ಅವಶ್ಯಕವಾಗಿ ಬೇಕಾಗಿದ್ದ ನಗರವಾಗಿತ್ತು. ಇಂಥ ವೇಳೆ ಆ ನಗರ ವಶಪಡಿಸಿಕೊಳ್ಳಲು ಬ್ರಿಟಿಷರು ಯೋಜನೆ ರೂಪಿಸುತ್ತಾರೆ.

ಇಂಥ ವೇಳೆ ಒಂದು ಕಡೆ ಬ್ರಿಟಿಷರ ದಳ. ಇನ್ನೊಂದು ಕಡೆ ಮೈಸೂರು, ಜೋಧಪುರ ರಾಜರುಗಳ ಅಶ್ವದಳ ಮತ್ತು ಹೈದರಾಬಾದ್​​ನ ಸೈನಿಕರು ಸೇರಿದಂತೆ ಭಾರತೀಯ ಸೈನಿಕರ ಪಡೆಗಳು ಹೋರಾಟಕ್ಕೆ ಸನ್ನದ್ಧವಾಗಿರುತ್ತೆ. ಆದ್ರೆ, ಯಾವಾಗ ಅಪಾರ ಶಸ್ತ್ರಾಸ್ತ್ರ ಹೊಂದಿರೋ ಟರ್ಕಿ ಹಾಗೂ ಜರ್ಮನಿಯ 1500 ಕ್ಕೂ ಹೆಚ್ಚು ಸೈನಿಕರು ಇರೋದು ತಿಳಿಯುತ್ತಲೇ ಬ್ರಿಟಿಷ್ ಸೇನೆ ಅಲ್ಲಿಂದ ಹಿಂದಡಿ ಇಡಲು ನಿರ್ಧರಿಸುತ್ತೆ. ಯುದ್ಧಕ್ಕೂ ಮುನ್ನವೇ ಶಸ್ತ್ರ ತ್ಯಾಗ ಮಾಡಿ ಹೇಡಿ ಅನ್ನೋ ಪಟ್ಟಕ್ಕೇ ಏರುತ್ತೆ. ಬ್ರಿಟಿಷ್ ಸೇನೆ ಹಿಂದಡಿ ಇಟ್ಟರೂ ಭಾರತೀಯ ಸೈನಿಕರು ಮಾತ್ರ ಇಟ್ಟ ಹೆಜ್ಜೆ ಹಿಂದಿಡಲ್ಲ. ಅದ್ರಲ್ಲೂ ಜೋಧ್​ಪುರ ಹಾಗೂ ಮೈಸೂರಿನ ಅಶ್ವಾರೂಢ ಸೈನಿಕರು ಸತ್ತರೆ ವೀರಗತಿ.. ಗೆದ್ದರೆ ಹೆಮ್ಮೆ ಅಂತಾ ನಿರ್ಧರಿಸಿ ಹೈಫಾ ನಗರದ ಮೇಲೆ ದಾಳಿ ಮಾಡಲು ನಿರ್ಧರಿಸಿ ಅಲ್ಲೇ ಉಳಿಯುತ್ತಾರೆ..

ಪ್ರಾರಂಭದಲ್ಲೇ ಗುಂಡೇಟಿನಿಂದ ಮೇಜರ್ ಸಾವು
ನಗರವನ್ನೇ ವಶಪಡಿಸಿಕೊಂಡ ಮೈಸೂರು ಯೋಧರು

ಬ್ರಿಟಿಷ್ ಸೇನೆ ಹಿಂಜರಿದರೂ ಭಾರತೀಯ ಸೈನಿಕರು ಮುಂದಡಿ ಇಟ್ಟು ಬಿಡ್ತಾರೆ. ಹಾಗೆ ನೋಡಿದ್ರೆ ಜರ್ಮನ್-ಟರ್ಕಿ ಸೈನಿಕರು ಆಧುನಿಕ ಶಸ್ತ್ರ ಹೊಂದಿದ್ದರೂ, ಭಾರತೀಯ ಸೈನಿಕರು ಮಾತ್ರ ಕತ್ತಿ, ಈಟಿಯೊಂದಿಗೇ ಯುದ್ಧಕ್ಕೇ ಮುಂದಾಗ್ತಾರೆ. ಇದನ್ನು ನೋಡಿ ಬಂಡೆಗೆ ತಲೆ ಒಡೆದುಕೊಳ್ಳಲು ಹೋರಟಿರೋ ಮೂರ್ಖರು ಅಂತಾನೇ ಬ್ರಿಟಿಷರು ನಕ್ಕಿರ್ತಾರೆ. ಆದ್ರೆ ಅವರಿಗೇನು ಗೊತ್ತು ಹುಲಿಯ ಹಾಲಿನ ಮೇವನ್ನೇ ಉಂಡು ಕನ್ನಡಿಗರ ಸಾಹಸ ಎಂಥದ್ದು ಅಂತಾ.

ಸೆಪ್ಟಂಬರ್ 23, 1918
ಈ ದಿನದ ಆರಂಭದಲ್ಲಿ ತಾವೊಂದು ಇತಿಹಾಸ ಬರೆಯುತ್ತಿದ್ದೇವೆ ಅಂತಾ ಭಾರತೀಯ ಸೈನಿಕರು ಅಂದುಕೊಂಡಿರಲಿಲ್ಲ ಅನಿಸುತ್ತೆ. ಹೌದು ಯಾಕಂದ್ರೆ ಆ ದಿನ ಕಿಶನ್ ನದಿ ಕಡೆಯಿಂದ ಜೋಧಪುರದ ಅಶ್ವಾರೂಢ ಸೈನಿಕರು ದಾಳಿ ಮಾಡಿ ಮೌಂಟ್ ಕಾರ್ಮೆಲ್ ಮೇಲಿದ್ದ ಟರ್ಕಿ ಸೈನಿಕರ ಮೇಲೆ ಮುಗಿ ಬೀಳ್ತಾರೆ. ಆದ್ರೆ ಈ ವೇಳೆ ವೈರಿಗಳಿಂದ ಬಂದ ಗುಂಡು ಜೋಧಪುರ ರೆಜಿಮೆಂಟ್​ನ ಮೇಜರ್​ ದಲ್​ಪತ್ ಸಿಂಗ್ ಅವರಿಗೆ ಬೀಳುತ್ತೆ. ಅವರು ಸ್ಥಳದಲ್ಲೇ ವೀರ ಮರಣವನ್ನಪ್ಪುತ್ತಾರೆ. ಬಳಿಕ ಭಾರತೀಯ ಸೈನಿಕರು ವೀರಭ್ರನಂತೆ ಅಕ್ಷರಶಃ ಆಗಿ ಬಿಡ್ತಾರೆ. ಒಂದು ಕಡೆಯಿಂದ ಜೋಧಪುರ ಸೈನಿಕರು ಟರ್ಕಿ-ಜರ್ಮನ್ ಸೈನಿಕರ ಹುಟ್ಟಡಗಿಸಲು ಆರಂಭಿಸಿದ್ರೆ. ಮೌಂಟ್​ ಕಾರ್ಮೆಲ್ ಪರ್ವತದ ಇನ್ನೊಂದು ತುದಿಯಿಂದ ಬರೋ ಮೈಸೂರು ಸೈನಿಕರು ಜೋಧಪುರ ರೆಜಿಮೆಂಟ್ ಸೈನಿಕರನ್ನೂ ಉಳಿಸುತ್ತಾರೆ.

ಮತ್ತೊಂದು ಕಡೆ ಇಡೀ ಹೈಫಾ ನಗರವನ್ನೇ ವಶ ಪಡಿಸಿಕೊಂಡು ಬಿಡ್ತಾರೆ. ಇಷ್ಟೆಲ್ಲ ಕೇವಲ 2 ಗಂಟೆಗಳಲ್ಲಿ ನಡೆದು ಹೋಗಿಬಿಡುತ್ತೆ. ಕೇವಲ 2 ಗಂಟೆಯಲ್ಲಿ ಮೈಸೂರಿನ ಅಶ್ವಾರೂಢ ಸೈನಿಕರು 400 ವರ್ಷಗಳ ಆಟೋಮನ್ ಆಳ್ವಿಕೆಯನ್ನು ಕೊನೆಗೊಳಿಸಿಬಿಡ್ತಾರೆ. ಈ ಯುದ್ಧದಲ್ಲಿ 8 ಭಾರತೀಯರು ವೀರ ಮರಣವನ್ನಪ್ಪುತ್ತಾರೆ. 34 ಜನ ಗಾಯಗೊಂಡಿರ್ತಾರೆ. ಇನ್ನೊಂದು ಕಡೆ ವೈರಿ ಪಡೆಯ ನೂರಾರು ಸೈನಿಕರು ಸಾವನ್ನಪ್ಪುತ್ತಾರೆ. ಮಾತ್ರವಲ್ಲ 1350 ಜರ್ಮನಿಯ ಸೈನಿಕರನ್ನ, 35 ಟರ್ಕಿ ಆಫೀಸರ್​ಗಳನ್ನ, ಆರ್ಟಿಲರಿ ಗನ್ಸ್​ಗಳನ್ನು ಭಾರತೀಯರು ವಶ ಪಡಿಸಿಕೊಳ್ತಾರೆ. ಈ ಯುದ್ಧ ಇಂದಿಗೂ ವಿಶ್ವ ಇತಿಹಾಸ ವಿಶೇಷ ಯುದ್ಧ ಅಂತ ಪರಿಗಣಿತಾಗುತ್ತೆ. ಇದೇ ಹಿನ್ನೆಲೆಯಲ್ಲಿ ಇಸ್ರೇಲ್​ನ ಹೈಫಾದಲ್ಲಿ ಭಾರತೀಯ ಯೋಧರ ಸ್ಮಾರಕಗಳನ್ನು ಮಾಡಲಾಗಿದೆ. ಅವರ ಸಾಹಸ ಗಾಥೆಯನ್ನು ಅಲ್ಲಿನ ಪಠ್ಯಪುಸ್ತಕಗಳ ಮೂಲಕ ಕಲಿಸಲಾಗುತ್ತೆ. ಅಷ್ಟೇ ಅಲ್ಲ ಮೈಸೂರು, ಜೋಧ್​ಪುರ್ ಹಾಗೂ ಹೈದರಾಬಾದ್ ರೆಜಿಮೆಂಟ್​ಗಳ ಗೌರವಾರ್ಥವಾಗಿ ತೀನ್​ ಮೂರ್ತಿ ಸ್ಮಾರಕ ಮಾಡಲಾಗಿದೆ. ತೀನ್ ಮೂರ್ತಿ ಮಾರ್ಗ ಕೂಡ ಹೆಸರಿಸಲಾಗಿದೆ. ಇಲ್ಲಿಗೆ ಇಸ್ರೇಲ್ ಪ್ರಧಾನಿಯೂ ಭೇಟಿ ನೀಡಿದ್ದಾರೆ. ಜೊತೆಗೆ ಹೈಫಾ ಸ್ಮಾರಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಕೂಡ ಭೇಟಿ ನೀಡಿ ಗೌರವ ಸಲ್ಲಿಸಿದ್ದಾರೆ.

ನೋಡಿದ್ರಲ್ಲ, ಕನ್ನಡಿಗರೆಂದರೆ ಸಾಮನ್ಯರಲ್ಲ.. ಭಾರತೀಯರೆಂದರೆ ಏಕೆ ವಿಶ್ವವು ಇಂದಿಗೂ ನತಮಸ್ತಕವಾಗುತ್ತೆ ಅಂತ. ಭಾರತೀಯರು ಮನಸ್ಸು ಮಾಡಿದ್ರೆ, ಅದ್ರಲ್ಲೂ ಕನ್ನಡಿಗರು ನಿರ್ಧರಿಸಿದರೆ ಯಾವುದೂ ಅಸಾಧ್ಯವಲ್ಲ. ಕದಂಬರ ಕುಡಿಗಳು, ಹನುಮನ ತವರೂರಿನವರ ಪೌರಷ ಅರಿತ ಇಸ್ರೇಲ್ ಇಂದಿಗೂ ಕನ್ನಡಿಗರ ಪೌರಷ ಸ್ಮರಿಸುತ್ತಿರೋದು ಸುಳ್ಳಲ್ಲ.

ವಿಶೇಷ ವರದಿ: ರಾಘವೇಂದ್ರ ಗುಡಿ, ಡಿಜಿಟಲ್ ಡೆಸ್ಕ್

The post ಇಸ್ರೇಲ್​ ನೆಲದಲ್ಲಿ ವೈರಿಗಳ ಚೆಂಡಾಡಿದ ಕನ್ನಡಿಗರ ಪರಾಕ್ರಮದ ವೀರಗಾಥೆ appeared first on News First Kannada.

Source: newsfirstlive.com

Source link