ಇಸ್ಲಾಂಗೆ ಅತ್ಯಗತ್ಯವಾಗಿ ಬೇಕಿರುವುದು ಕೇವಲ 5 ಅಂಶಗಳು, ಹಿಜಾಬ್ ಅದರಲ್ಲಿ ಸೇರಿಲ್ಲ: ಕೇರಳ ರಾಜ್ಯಪಾಲ | Kerala Governor Arif Mohammad Khan on Essential Things In Islam Says Hijab Not Among necessary


ಇಸ್ಲಾಂಗೆ ಅತ್ಯಗತ್ಯವಾಗಿ ಬೇಕಿರುವುದು ಕೇವಲ 5 ಅಂಶಗಳು, ಹಿಜಾಬ್ ಅದರಲ್ಲಿ ಸೇರಿಲ್ಲ: ಕೇರಳ ರಾಜ್ಯಪಾಲ

ಕೇರಳ ರಾಜ್ಯಪಾಲ ಮೊಹಮದ್ ಆರಿಫ್ ಖಾನ್

ದೆಹಲಿ: ದೇಶದಲ್ಲಿ ಪ್ರಸ್ತುತ ಕಾಣಿಸಿಕೊಂಡಿರುವ ಹಿಜಾಬ್ ಚರ್ಚೆಯು ಒಂದು ವಿವಾದವೇ ಅಲ್ಲ. ಅದು ಮುಸ್ಲಿಂ ಮಹಿಳೆಯರನ್ನು ಶಿಕ್ಷಣದಿಂದ ದೂರ ಇರಿಸುವ ಸಂಚು ಎಂದು ಕೇರಳ ರಾಜ್ಯಪಾಲ ಆರಿಫ್ ಮೊಹಮದ್ ಖಾನ್ ಹೇಳಿದ್ದಾರೆ. ಪುರುಷರು ಜ್ಞಾನ ಪಡೆಯಬೇಕು ಎನ್ನುವುದೇ ಇಸ್ಲಾಂನ ಮೂಲ ಉದ್ದೇಶ ಎಂದು ಹೇಳಿದರು. ಹಿಜಾಬ್​ ಧರಿಸಲು ಮುಸ್ಲಿಂ ಯುವತಿಯರಿಗೆ ಸಂವಿಧಾನದ 25ನೇ ವಿಧಿಯ ಬೆಂಬಲ ಬೇಕು ಎನ್ನುವ ವಾದವನ್ನೂ ಆರಿಫ್ ಮೊಹಮದ್ ಖಾನ್ ಪ್ರಸ್ತಾಪಿಸಿದರು. ಸಂವಿಧಾನದ 25ನೇ ವಿಧಿಯ ಬೆಂಬಲ ಬೇಕು ಎಂದಾದರೆ ಅದು ಧರ್ಮದ ಅತ್ಯಗತ್ಯ, ಅವಿಭಾಗ್ಯ ಮತ್ತು ಮೂಲ ನಂಬಿಕೆ, ಆಚರಣೆಯ ಭಾಗವಾಗಿರಬೇಕು ಎಂಬ ಸುಪ್ರೀಂಕೋರ್ಟ್​ ತೀರ್ಪನ್ನು ಪ್ರಸ್ತಾಪಿಸಿದರು.

ಕರ್ನಾಟಕದ ಉಡುಪಿಯಲ್ಲಿ ಕಳೆದ ತಿಂಗಳು ಆರು ವಿದ್ಯಾರ್ಥಿನಿಯರು ಪ್ರತಿಭಟನೆ ನಡೆಸಿದ ನಂತರ ಹಿಜಾಬ್ ವಿಚಾರ ದೇಶವ್ಯಾಪಿ ಗಮನ ಸೆಳೆಯಿತು. ಈ ಬೆಳವಣಿಗೆ ಪ್ರಶ್ನಿಸಿ ಕೆಲ ಹಿಂದೂ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಕಾಲೇಜಿಗೆ ಬಂದರು. ಈ ವಿವಾದ ದೊಡ್ಡಮಟ್ಟದಲ್ಲಿ ಬೆಳೆದು ರಾಜ್ಯವ್ಯಾಪಿ ಹಲವು ಕಾಲೇಜುಗಳಲ್ಲಿ ಪ್ರತಿಧ್ವನಿಸಿತು. ವಿವಿಧ ನಗರಗಳಲ್ಲಿ ಸಂಘರ್ಷ ಹೆಚ್ಚಾದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು. ಪ್ರಸ್ತುತ ಕರ್ನಾಟಕದ ಹೈಕೋರ್ಟ್​ನಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿದೆ.

ಇಸ್ಲಾಂ ಧರ್ಮವು ಐದು ವಿಚಾರಗಳನ್ನು ಕಡ್ಡಾಯ ಎಂದು ಹೇಳಿದೆ ಎನ್ನುತ್ತಾರೆ ಆರಿಫ್ ಖಾನ್. ಅವೆಂದರೆ ಕಲಿಮಾ, ಪ್ರಾರ್ಥನೆ, ರಂಜಾನ್ ಉಪವಾಸ, ದಾನ ಮತ್ತು ಹಜ್. ಈ ಪಟ್ಟಿಗೆ ಹೊಸದಾಗಿ ಯಾವುದನ್ನೂ ಸೇರಿಸುವುದು ಅಥವಾ ಇದರಿಂದ ಯಾವುದನ್ನಾದರೂ ತೆಗೆಯುವುದು ಸರಿಯಲ್ಲ ಎನ್ನುತ್ತಾರೆ ಅವರು. ‘ಹಿಜಾಬ್ ಅನ್ನು ಇಸ್ಲಾಂನ ಮೂಲ ಅಗತ್ಯ ಎಂದು ಹೇಳಲು ಆಗುವುದಿಲ್ಲ. ಧರ್ಮದ ಅವಿಭಾಜ್ಯ ಅಂಗ ಎನಿಸಿರುವ ಸಂಗತಿಗಳಿಗೆ ಮಾತ್ರ ಸಂವಿಧಾನದ 25ನೇ ವಿಧಿಯ ರಕ್ಷಣೆ ದೊರೆಯುತ್ತದೆ. ಹಿಜಾಬ್ ಅದರಲ್ಲಿ ಸೇರುವುದಿಲ್ಲ’ ಎಂದು ಖಾನ್ ಹೇಳಿದರು.

ಶಿಕ್ಷಣ ಸಂಸ್ಥೆಗಳಲ್ಲಿ ಹೆಣ್ಣುಮಕ್ಕಳಿಗೆ ಹಿಜಾಬ್​ ಧರಿಸಲೇಬೇಕು ಎಂಬ ವಾದವು ಮೂಢನಂಬಿಕೆಯಿಂದ ಮುಂದಕ್ಕೆ ಬಂದಿದೆ ಎಂದರು. ಇಸ್ಲಾಂನ ಪವಿತ್ರ ಗ್ರಂಥ ಕುರಾನ್​ನ ಮೊದಲ ಪದವೇ ‘ಓದು’ ಎನ್ನುವುದಾಗಿದೆ. ಪ್ರಾಣಿಗಳ ಬಗ್ಗೆ, ನಕ್ಷತ್ರಗಳ ಬಗ್ಗೆ ಮತ್ತು ಬಾಹ್ಯಾಕಾಶದ ಬಗ್ಗೆ ತಿಳಿದುಕೊಳ್ಳಿ. ಜ್ಞಾನಕ್ಕಾಗಿ ಚೀನಾಕ್ಕೆ ಬೇಕಾದರೂ ಹೋಗಿ ಎನ್ನುತ್ತದೆ ಕುರಾನ್. ಜ್ಞಾನ, ಆಲೋಚನೆ ಮತ್ತು ಮನನದ ಔಚಿತ್ಯವನ್ನು ಕುರಾನ್ 700ಕ್ಕೂ ಹೆಚ್ಚು ಪದಗಳಲ್ಲಿ ಕುರಾನ್ ವಿವರಿಸಿದೆ ಎಂದರು. ಧರ್ಮವು ಜ್ಞಾನವನ್ನು ವಿಸ್ತರಿಸಲು ಸದಾ ನೆರವಾಗುತ್ತದೆ ಎಂದು ಹೇಳಿದರು.

ಕರ್ನಾಟಕದಲ್ಲಿ ನಡೆಯುತ್ತಿರುವ ವಿವಾದದ ಬಗ್ಗೆ ಪ್ರಸ್ತಾಪಿಸಿರುವ ಅವರು, ಇದು ಮುಸ್ಲಿಂ ಹೆಣ್ಣುಮಕ್ಕಳನ್ನು ವ್ಯವಸ್ಥಿತವಾಗಿ ದೂರ ಇಡುವ ಪ್ರಯತ್ನ ಎಂದು ದೂರಿದರು. ತ್ರಿವಳಿ ತಲಾಖ್ ನಿಷೇಧದ ನಂತರ ಮುಸ್ಲಿಂ ಮಹಿಳೆಯರಿಗೆ ತುಸು ಸ್ವಾತಂತ್ರ್ಯದ ಅನುಭವ ಆಗುತ್ತಿತ್ತು. ಅವರು ವಿದ್ಯಾಭ್ಯಾಸ ಮತ್ತು ಉದ್ಯೋಗದ ಕಡೆಗೆ ಗಮನ ಕೊಡುತ್ತಿದ್ದರು. ಇವೆಲ್ಲದರಿಂದ ಮುಸ್ಲಿಂ ಮಹಿಳೆಯರನ್ನು ದೂರ ಇಡಲೆಂದೇ ಹಿಜಾಬ್ ವಿವಾದ ಆರಂಭಿಸಲಾಗಿದೆ ಎಂದು ವಿಶ್ಲೇಷಿಸಿದರು.

TV9 Kannada


Leave a Reply

Your email address will not be published. Required fields are marked *